ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳೆಹಾನಿ: ಬೆಳೆವಿಮೆ ಪರಿಹಾರಕ್ಕೆ ರೈತರ ಒತ್ತಾಯ

Published : 12 ಆಗಸ್ಟ್ 2024, 14:38 IST
Last Updated : 12 ಆಗಸ್ಟ್ 2024, 14:38 IST
ಫಾಲೋ ಮಾಡಿ
Comments

ಸವಣೂರು: ಬೆಳೆಹಾನಿಗೆ ವಿಮೆ ಪರಿಹಾರಕ್ಕೆ ಆಗ್ರಹ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಮಾಲತೇಶ ಪೂಜಾರ ನೇತೃತ್ವದಲ್ಲಿ ಕಂದಾಯ ಇಲಾಖೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ಕೈಗೊಂಡ ತಹಶೀಲ್ದಾರ್‌ ಭರತರಾಜ್ ಕೆ.ಎನ್ ಅವರಿಗೆ ಮನವಿ ಸಲ್ಲಿಸಿದರು.

‘ನಿರಂತರ ಸುರಿದ ಮಳೆಯಿಂದ ತಾಲ್ಲೂಕಿನಾದ್ಯಂತ ಹತ್ತಿ, ಮಕ್ಕೆಜೋಳ, ಶೇಂಗಾ, ಸೊಯಾಬಿನ್ ಸೇರಿದಂತೆ ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾಳಾಗಿ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ರೈತರ ಬೆಳೆಗಳು ಹಾನಿಯಾಗಿದ್ದು ಎನ್.ಡಿ.ಆರ್.ಎಫ್ ನಿಯಮದಂತೆ ಸಮೀಕ್ಷೆ ಕೈಗೊಂಡು ಪರಿಹಾರವನ್ನು ರೈತರ ಖಾತೆಗಳಿಗೆ ತಕ್ಷಣ ಬಿಡುಗಡೆ ಮಾಡಬೇಕು. 2023-24ನೇ ಸಾಲಿನ ಬೆಳೆವಿಮಾ ಪರಿಹಾರದಲ್ಲಿ ತಾಲ್ಲೂಕಿನ ರೈತರಿಗೆ ಮಧ್ಯಂತರವಾಗಿ ₹3,200 (ಶೇ 25ರಷ್ಟು) ಹಣವನ್ನು ಬಿಡುಗಡೆ ಮಾಡಿತ್ತು. ಆದರೆ, ಉಳಿದ ಶೇ 75ರಷ್ಟು ವಿಮಾ ಪರಿಹಾರವನ್ನು ನೀಡಬೇಕಿದೆ. ಆದರೆ ಗ್ರಾಮ ಪಂಚಾಯ್ತಿ ಹಂತದಲ್ಲಿ ನಡೆದ ಬೆಳೆ ಸಮೀಕ್ಷೆಯಲ್ಲಿ ತಾರತಮ್ಯ ಮಾಡಿ ವಿಮಾ ಕಂಪನಿ ರೈತರಿಗೆ ಅನ್ಯಾಯ ಮಾಡಿದೆ’ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

‘ಪಂಚಾಯ್ತಿ ವ್ಯಾಪ್ತಿಯಲ್ಲಿ ಬಿಡುಗಡೆಗೊಂಡ ವಿಮಾ ಪರಿಹಾರವನ್ನು ತಕ್ಷಣ ನೀಡಬೇಕು. ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿದ ಸಾಲವನ್ನು ಮನ್ನಾ ಮಾಡಬೇಕು. ವರದಾ ನದಿಯಿಂದ ಪಟ್ಟಣದ ಮೋತಿ ತಲಾಬ ಸೇರಿದಂತೆ ವಿವಿಧ ಗ್ರಾಮಗಳ ಕೆರೆಗಳನ್ನು ತುಂಬಿಸಲು ಮುಂದಾಗಬೇಕು. ನೀರಾವರಿ ಕ್ಷೇತ್ರದ ಪರಿಹಾರವನ್ನು ನೀಡಬೇಕು. ಹೆಸ್ಕಾಂ ಇಲಾಖೆ ಮುಖಾಂತರ ರಾಜ್ಯ ಸರ್ಕಾರ ರೈತರ ಬೋರ್‌ವೆಲ್‌ಗಳಿಗೆ ಆಧಾರ್ ಜೋಡಣೆ ಮಾಡುತ್ತಿರುವುದನ್ನು ನಿಲ್ಲಿಸಿ ರೈತರ ನೆರವಿಗೆ ಮುಂದಾಗಬೇಕು. ಈ ಎಲ್ಲ ಬೇಡಿಕೆಗಳನ್ನು ಕೂಡಲೆ ಇತ್ಯರ್ಥಪಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದೆ ಹೋದಲ್ಲಿ ಉಗ್ರವಾದ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ ಪೂಜಾರ, ತಾಲ್ಲೂಕು ಘಟಕ ಅಧ್ಯಕ್ಷ ಚನ್ನಪ್ಪ ಮರಡೂರ, ನೂರಅಹ್ಮದ ಮುಲ್ಲಾ, ಅಬ್ದುಲ್‌ಖಾದರ ಬುಡಂದಿ, ಸಿದ್ದಣ್ಣ ಕೆಲಕೊಂಡ, ಸತೀಶ ದೇವಸೂರ, ಈರಪ್ಪ ಕುಂಬಾರ, ನೀಲನಗೌಡ ಹೊಸಮನಿ, ವಿನಾಯಕ ಉಪ್ಪನಾಳ, ಮಂಜು ಬಾರಕೇರ, ಶೇಖರಗೌಡ ಪಾಟೀಲ, ರಾಜು ಕುಳೇನೂರ, ಮಾಂತೇಶ ಅಂಗಡಿ, ನಾಗಪ್ಪ ಹಡಪದ, ಅಶೋಕ ಆಡೂರ, ಬಸಲಿಂಗಪ್ಪ ನರಗುಂದ ಸೇರಿದಂತೆ ತಾಲ್ಲೂಕಿನ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT