ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿಲ್ಲೆಗೆ ಡಿಸಿಸಿ ಬ್ಯಾಂಕ್‌, ಹಾಲು ಒಕ್ಕೂಟ: ಎಸ್‌.ಟಿ.ಸೋಮಶೇಖರ್‌

ಉಗ್ರಾಣದ ಶಂಕುಸ್ಥಾಪನೆ ನೆರವೇರಿಸಿ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಭರವಸೆ
Last Updated 13 ಆಗಸ್ಟ್ 2021, 15:42 IST
ಅಕ್ಷರ ಗಾತ್ರ

ರಟ್ಟೀಹಳ್ಳಿ (ಹಾವೇರಿ): ‘ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಮತ್ತು ಹಾಲು ಒಕ್ಕೂಟ ಸೌಲಭ್ಯ ಕಲ್ಪಿಸಬೇಕು ಎಂಬುದು ಬಹುದಿನದ ಬೇಡಿಕೆಯಾಗಿದೆ. ಆ.15ರ ನಂತರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ನಬಾರ್ಡ್‌ನೊಂದಿಗೆ ಒಪ್ಪಂದ ಮಾಡಿಕೊಂಡು, ಶೀಘ್ರ ಕಾರ್ಯಗತಗೊಳಿಸಲಾಗುವುದು’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಭರವಸೆ ನೀಡಿದರು.

ರಟ್ಟೀಹಳ್ಳಿ ಪಟ್ಟಣದಲ್ಲಿ ಹಿರೇಕೆರೂರು ತಾಲ್ಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಉಗ್ರಾಣದ ಶಂಕುಸ್ಥಾಪನೆ’ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದಾದ್ಯಂತ 30 ಲಕ್ಷ ರೈತರಿಗೆ ಅನುಕೂಲ ಕಲ್ಪಿಸಲು ₹20,810 ಕೋಟಿ ಸಾಲ ನೀಡಲು ಯೋಜನೆ ರೂಪಿಸಲಾಗಿದೆ. ಡಿಸಿಸಿ ಬ್ಯಾಂಕುಗಳಲ್ಲಿ ಹೊಸ ಸಾಲ ಕೊಡುತ್ತಿಲ್ಲ ಎಂದು ಹಿಂದೆ ದೂರುಗಳು ಬರುತ್ತಿದ್ದವು. ಈಗ ದೂರುಗಳು ಕಡಿಮೆಯಾಗಿವೆ. ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಅಲ್ಪಾವಧಿ, ದೀರ್ಘಾವದಿ ಸಾಲ ಕೊಡುತ್ತಿದ್ದೇವೆ. 21 ಡಿಸಿಸಿ ಬ್ಯಾಂಕಗಳು ಲಾಭದಲ್ಲಿವೆ. ಏಕರೂಪದ ಸಾಫ್ಟ್‌ವೇರ್‌ ತರಲು ಯೋಜನೆ ಮಾಡುತ್ತಿದ್ದೇವೆ ಎಂದರು.

‘ಸಹಕಾರಿ ಸಂಘದ ಸದಸ್ಯರಲ್ಲಿ ಸಹಕಾರವಿದ್ದರೆ ಮಾತ್ರ ಸಂಘಗಳು ಬೃಹದಾಕಾರವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹಿರೇಕೆರೂರು ತಾಲ್ಲೂಕು ವ್ಯವಸಾಯ ಉತ್ಪನ್ನ ಸಹಕಾರ ಸಂಘವು ಯಾವುದೇ ಸಾಲ ಮಾಡದೇ ಸಂಘವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಸಹಕಾರಿ ರತ್ನ ಪ್ರಶಸ್ತಿ ವಿಜೇತ ಎಸ್.ಎಸ್.ಪಾಟೀಲರು ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿ.ಸಿ. ಪಾಟೀಲರ ಕೋರಿಕೆ ಮೇರೆಗೆ ಹಿರೇಕೆರೂರು ಪಟ್ಟಣದಲ್ಲಿ ಕಾರ್ಮಿಕ ಭವನ ಕಟ್ಟಡಕ್ಕೆ ಸಹಕಾರ ಇಲಾಖೆಯಿಂದ ಒಂದು ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಅವರು ಹೆಚ್ಚು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಕೃಷಿ ಇಲಾಖೆಯಲ್ಲೂ ಉತ್ತಮ ಯೋಜನೆ ಜಾರಿಗೊಳಿಸಿದ್ದಾರೆ. ಹಾವೇರಿಯವರೇ ಮುಖ್ಯಮಂತ್ರಿಯಾಗಿರುವ ಕಾರಣ ಜಿಲ್ಲೆಗೆ ಇನ್ನೂ ಹೆಚ್ಚಿನ ಅನುದಾನ ಹರಿದು ಬರಲಿದೆ ಎಂದು ಹೇಳಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಹಿರೇಕೆರೂರ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ, ಕೆ.ಸಿ.ಸಿ. ಬ್ಯಾಂಕ್‌ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ಹಿರಿಯ ಸಹಕಾರಿ ಧುರೀಣ ಕೆ.ಎಸ್. ಸಣ್ಣಗೌಡ್ರ, ಮುಖಂಡರಾದ ಆರ್.ಎನ್. ಗಂಗೋಳ, ಎಸ್.ಬಿ. ಗೂಳಪ್ಪನವರ, ಗಣೇಶ ವರ್ಣೇಕರ, ದೇವರಾಜ ನಾಗಣ್ಣನವರ, ಶಂಕರಗೌಡ ಚನ್ನಗೌಡ್ರ, ಶಿವರಾಜ ಗೂಳಪ್ಪನವರ, ವೀರನಗೌಡ ಮಕರಿ, ಹಾಲನಗೌಡ ಮುದಿಗೌಡ್ರ, ರಾಘವೇಂದ್ರ ಹರವಿಶೆಟ್ಟರ, ಆನಂದಪ್ಪ ಹಾದಿಮನಿ ಇದ್ದರು.

ದುರ್ಗಾದೇವಿ ದೇವಸ್ಥಾನಕ್ಕೆ ಚಾಲನೆ

ರಟ್ಟೀಹಳ್ಳಿ ತಾಲ್ಲೂಕು ಸುಕ್ಷೇತ್ರ ಬುಳ್ಳಾಪುರ ಗ್ರಾಮದಲ್ಲಿ ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ದುರ್ಗಾದೇವಿ ನೂತನ ದೇವಾಲಯವನ್ನು ಶುಕ್ರವಾರ ಉದ್ಘಾಟನೆ ಮಾಡಲಾಯಿತು.

ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಮಾತನಾಡಿ, ದೇವಾಲಯ ನಿರ್ಮಾಣಕ್ಕೆ ₹50 ಲಕ್ಷ ದೇಣಿಗೆ ನೀಡಿದ್ದೇನೆ. ಜತೆಗೆ ₹50 ಲಕ್ಷವನ್ನು ನೀರಾವರಿ ನಿಗಮದಿಂದ ಕೊಡಿಸಿದ್ದೇನೆ. ಗ್ರಾಮಸ್ಥರು ದೇಣಿಗೆ ಸಂಗ್ರಹಿಸಿ ಸುಂದರ ದೇವಾಲಯವನ್ನು ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮಾತನಾಡಿ,ರಟ್ಟೀಹಳ್ಳಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಒಳಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಅನುಮೋದನೆ ನೀಡಲಾಗಿದೆ.ಕೃಷಿ ಸಚಿವ ಬಿ.ಸಿ. ಪಾಟೀಲರ ಮನವಿ ಮೇರೆಗೆ ₹100 ಕೋಟಿ ವೆಚ್ಚದಲ್ಲಿ ಶೀಘ್ರದಲ್ಲಿ ಈ ಯೋಜನೆ ಕಾರ್ಯಗತಗೊಳಿಸುತ್ತೇವೆ ಎಂದರು.

* ರಟ್ಟೀಹಳ್ಳಿಯಲ್ಲಿ ಎಲ್ಲ ಸರ್ಕಾರಿ ಕಚೇರಿಗಳು ಒಂದೇ ಕಡೆ ಇರುವಂತೆ 29 ಎಕರೆಯಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡುತ್ತೇವೆ

– ಬಿ.ಸಿ.ಪಾಟೀಲ, ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT