ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ: ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಿ

ಬ್ಯಾಂಕ್‌ ಸಿಬ್ಬಂದಿಗೆ ಸಂಸದ ಶಿವಕುಮಾರ ಉದಾಸಿ ಸೂಚನೆ
Last Updated 11 ಜನವರಿ 2021, 16:38 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲೆಯ ಪ್ರತಿ ಬ್ಯಾಂಕ್‍ಗಳಲ್ಲೂ ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು. ಬ್ಯಾಂಕಿಗೆ ಬರುವ ಗ್ರಾಹಕರಿಗೆ ಮಾಹಿತಿ ತಿಳಿಸಲು ಭಾಷೆ ಮುಖ್ಯವಾಗಿದೆ. ಜಿಲ್ಲೆಯ ಬ್ಯಾಂಕಿಗೆ ನಿಯೋಜನೆಗೊಳ್ಳುವ ಪ್ರತಿಯೊಬ್ಬರೂ ವ್ಯವಹಾರಕ್ಕೆ ಬೇಕಾದ ಕನ್ನಡ ಸಾಮಾನ್ಯ ಜ್ಞಾನ ಕಲಿಯುವುದು ಅವಶ್ಯವಾಗಿದೆ’ ಎಂದು ಸಂಸದ ಶಿವಕುಮಾರ ಉದಾಸಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕನ್ನಡ ತಿಳಿದವರನ್ನು ಮಾತ್ರ ಜಿಲ್ಲೆಯ ಬ್ಯಾಂಕ್‍ಗಳಿಗೆ ನಿಯೋಜಿಸಬೇಕು’ ಎಂದು ಸೂಚಿಸಿದರು.

‘ವೈಯಕ್ತಿಕ ಆರ್ಥಿಕ ಸಬಲತೆ ಕುರಿತು ಗ್ರಾಹಕರಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವ್ಯವಹಾರಕ್ಕೆ ಬೇಕಾದ ಕನಿಷ್ಠ ಭಾಷಾ ಜ್ಞಾನ ಹೊಂದಬೇಕು. ಮತ್ತೂರ, ಹಿರೇಹುಲ್ಲಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬ್ಯಾಂಕ್ ಶಾಖೆ ತೆರೆಯಲು ಬೇಡಿಕೆ ಇದೆ. ಬೇಡಿಕೆ ಇರುವ ಗ್ರಾಮಗಳಲ್ಲಿ ಕೂಡಲೇ ಬ್ಯಾಂಕ್ ಶಾಖೆಗಳನ್ನು ಆರಂಭಿಸಬೇಕು’ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ಕೃಷಿ ಪ್ರದಾನ ಜಿಲ್ಲೆಯಾಗಿರುವುದರಿಂದ ಸಾಲ ನೀಡಿಕೆಯಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ವಿವಿಧ ಯೋಜನೆಗಳ ಸಾಲದ ಮಾಹಿತಿ ಹಾಗೂ ಪ್ರೋತ್ಸಾಹಧನ ಕುರಿತು ತಿಳಿವಳಿಕೆ ನೀಡಬೇಕು. ಬೆಳೆ ಸಾಲ ನೀಡುವಾಗ ಪ್ರಸಕ್ತ ಜಮೀನಿನ ದರದ ಆಧಾರದಲ್ಲಿ ತಾಳೆ ಮಾಡಿ ಸಾಲ ನೀಡಬೇಕು. ಸಾಲ ನೀಡುವಾಗ ಯೋಗ್ಯರನ್ನು ಆಯ್ಕೆಮಾಡಿ, ಯಾವುದೇ ಒತ್ತಡಕ್ಕೆ ಒಳಗಾಗದೇ ಅರ್ಹರಿಗೆ ಸಾಲ ನೀಡಬೇಕು ಎಂದು ಹೇಳಿದರು.

ಶಾಸಕ ನೆಹರು ಓಲೇಕಾರ ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ರೈತರು ಬ್ಯಾಂಕಿಗೆ ತೆರಳಿದಾಗ ಮಾತುಕತೆಗೆ ತೊಂದರೆಯಾಗುತ್ತಿದೆ. ಹಾಗಾಗಿ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಿದರೆ ಬ್ಯಾಂಕಿನ ಹಾಗೂ ಗ್ರಾಹಕರ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯ’ ಎಂದರು.

ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ‘ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬ್ಯಾಂಕ್ ಶಾಖೆ ಆರಂಭಕ್ಕೆ ಬೇಡಿಕೆ ಇದ್ದು, ಕೂಡಲೇ ಬ್ಯಾಂಕ್ ಶಾಖೆ ಆರಂಭಿಸುವ ಕಾರ್ಯವಾಗಬೇಕು’ ಎಂದರು.

ಲೀಡ್ ಬ್ಯಾಂಕ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಅವರು ವಿವಿಧ ವಲಯಗಳಲ್ಲಿ ನೀಡಲಾದ ಸಾಲ ಸೇರಿದಂತೆ ಇತರೆ ಮಾಹಿತಿ ನೀಡಿದರು. ಸಭೆಯಲ್ಲಿ ನಬಾರ್ಡನ ಮಹದೇವ ಕೀರ್ತಿ, ಬ್ಯಾಂಕ್ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT