ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು: ದಶಕಗಳೇ ಉರುಳಿದರೂ ಈಡೇರದ ಬೇಡಿಕೆಗಳು

ತುಂಗಭದ್ರಾ ನದಿ ತೀರದ ಕುಮಾರಪಟ್ಟಣ ಬಳಿ ಉತ್ತರ ಕರ್ನಾಟಕದ ಬೃಹತ್‌ ಹೆಬ್ಬಾಗಿಲು ನಿರ್ಮಿಸಲು ಒತ್ತಾಯ
Last Updated 18 ಏಪ್ರಿಲ್ 2023, 6:28 IST
ಅಕ್ಷರ ಗಾತ್ರ

ರಾಣೆಬೆನ್ನೂರು: ವಾಣಿಜ್ಯ ನಗರಿ ರಾಣೆಬೆನ್ನೂರು ಹಲವು ವಿಶೇಷತೆಗಳ ಹಿನ್ನೆಲೆ ಹೊಂದಿದೆ. ತುಂಗಭದ್ರಾ ನದಿ ತೀರದ ಕುಮಾರಪಟ್ಟಣ ಬಳಿ ಬೃಹತ್‌ ಉತ್ತರ ಕರ್ನಾಟಕದ ಹೆಬ್ಬಾಗಿಲು ನಿರ್ಮಿಸಬೇಕು ಎನ್ನುವ ಜನರ ಬೇಡಿಕೆ ಹಲವು ವರ್ಷ ಕಳೆದರೂ ಇನ್ನೂ ಈಡೇರಿಲ್ಲ.

ಸ್ವಂತ ಕಟ್ಟಡ ನಿರ್ಮಿಸಿ: ಉಪವಿಭಾಗಾಧಿಕಾರಿಗಳ ಕಚೇರಿ ನಗರದಲ್ಲಿ ಸ್ಥಾಪಿಸಬೇಕು. ಗುತ್ತಲ- ದೇವರಗುಡ್ಡ ರಸ್ತೆ, ಗುರು ಕೊಟ್ಟೂರೇಶ್ವರ ನಗರ ಹಾಗೂ ಮೇಡ್ಲೇರಿ ರಸ್ತೆಗೆ ಮೇಲ್ಸೇತುವೆ ನಿರ್ಮಾಣವಾಗಬೇಕು. ಇನ್ನು ಕೃಷ್ಣಮೃಗ ಅಭಯಾರಣ್ಯವನ್ನು ಅಭಿವೃದ್ಧಿ ಪಡಿಸಿ ಪ್ರವಾಸಿಗರನ್ನು ಸೆಳೆಯಬೇಕು. ಎಆರ್‌ಟಿಒ ಕಚೇರಿ, ಸಣ್ಣ ನೀರಾವರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತೂಕ ಮತ್ತು ಅಳತೆ ಇಲಾಖೆಗಳು ಮತ್ತು ವಸತಿ ನಿಲಯಗಳು, ಮೊರಾರ್ಜಿ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ಒದಗಿಸಬೇಕು. ತಾಲ್ಲೂಕು ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸಿ ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಚೆಕ್‌ ಡ್ಯಾಂ: ಎಪಿಎಂಸಿಯಲ್ಲಿ ಅತ್ಯಾಧುನಿಕ ಡ್ರೈಯರ್‌ ಇಲ್ಲದ ಕಾರಣ ರೈತರು ರಸ್ತೆಯ ಬದಿಯಲ್ಲಿ ಮೆಕ್ಕೆಜೋಳ ಒಣಗಿಸುತ್ತಾರೆ. ಇದರಿಂದ ಅನೇಕ ಅವಘಡಗಳು ಸಂಭವಿಸಿವೆ. ತಾಲ್ಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿಗೆ ಅಡ್ಡಲಾಗಿ ತುಮ್ಮಿನಕಟ್ಟಿ ಬಳಿ ಬೈರನ ಪಾದ, ಮುದೇನೂರ, ಬೇಲೂರು ಬಳಿ ಚೆಕ್‌ ಡ್ಯಾಂ ನಿರ್ಮಿಸಬೇಕು. ತಾಲ್ಲೂಕಿನಲ್ಲಿ ಹೆಚ್ಚು ರೈತ ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಸರ್ಕಾರ ರೈತರಿಗೆ ಸಹಕಾರ ನೀಡಿ ಅವರ ಬೆನ್ನಿಗೆ ನಿಲ್ಲಬೇಕು ಎಂಬುದು ರೈತರ ಬೇಡಿಕೆಯಾಗಿದೆ.

ಹೂಳು ತೆಗಿಸಿ: ಅಪ್ಪರ್‌ ತುಂಗಾ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ತ್ವರಿತವಾಗಿ ಪರಿಹಾರ ಕೊಡಬೇಕು. ತಾಲ್ಲೂಕಿನ ಅಸುಂಡಿ, ಹೊನ್ನತ್ತಿ, ಮೇಡ್ಲೇರಿ, ಐರಣಿ ಹಾಗೂ ಗುಡಗೂರ ಗ್ರಾಮಗಳ ದೊಡ್ಡ ಕೆರೆ ಹೂಳು ತೆಗಿಸಿ ನೀರು ತುಂಬಿಸಬೇಕು. ತರಕಾರಿ, ಹೂ ಬೆಳೆಗಳನ್ನು ರಕ್ಷಿಸಲು ಕೋಲ್ಡ್‌ ಸ್ಟೋರೆಜ್‌ ನಿರ್ಮಿಸಬೇಕು ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ ಅವರ ಆಗ್ರಹಿಸಿದರೆ, ಇಲ್ಲಿನ ವೀಳ್ಯದೆಲೆ ಖರಾಚಿಗೆ ರಫ್ತುತು ಆಗುತ್ತದೆ. ವೀಳ್ಯದೆಲೆ ಮಾರುಕಟ್ಟೆ ಅಭಿವೃದ್ಧಿ ಪಡಿಸಬೇಕು ಎಂದು ಎಲೆ ವ್ಯಾಪಾರಿ ಬಸವರಾಜ ರೊಡ್ಡನವರ ಹಾಗೂ ಮಹೇಶ ಕುದರಿಹಾಳ ಅವರ ಆಗ್ರಹವಾಗಿದೆ.

ಶಿಕ್ಷಣಕ್ಕೆ ಆದ್ಯತೆ ಕೊಡಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲು ಸ್ಪರ್ಧಾತ್ಮಕ ಕೇಂದ್ರ ಸ್ಥಾಪಿಸಬೇಕು. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗ ಮತ್ತು ಅವರ ಸಬಲೀಕರಣಕ್ಕಾಗಿ ಗಾರ್ಮೆಂಟ್ಸ್‌ ತೆರೆಯಬೇಕು. ನಗರದ ಮಂಡಕ್ಕಿ ಬಟ್ಟಿಗಳಿಗೆ ಬೇರೆ ಜಾಗ ಒದಗಿಸಬೇಕು. ಅನುಪಯುಕ್ತ ಮಾಂಸ ಸೇರಿದಂತೆ ಇತರೆ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಬೇಡಿಕೆಯಾಗಿದೆ.

ಪುರ್ನವಸತಿ ಕಲ್ಪಿಸಿ:

ಜಾನುವಾರು ಮಾರುಟ್ಟೆಯನ್ನು ಅಭಿವೃದ್ಧಿಗೊಳಿಸಿ, ರೈತರು, ವ್ಯಾಪಾರಸ್ಥರಿಗೆ ಮೂಲ ಸೌಲಭ್ಯ ಒದಗಿಸಬೇಕು. ನಗರದಲ್ಲಿ 500ಕ್ಕೂ ಹೆಚ್ಚು ಉದ್ಯಾನಗಳಿವೆ. ಎಲ್ಲ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಬೇಕು. ಪ್ರತಿ ಬಾರಿ ಮಳೆಗಾಲದಲ್ಲಿ ಕೊಟ್ಟೂರೇಶ್ವರನಗರದ ದೊಡ್ಡ ಕೆರೆ ಕೋಡಿ ಬಿದ್ದಾಗ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಸೂಕ್ತ ಪುನರ್ವಸತಿ ಕಲಿಸಬೇಕು. ವಿವಿಧ ಬಡಾವಣೆಗಳ ರಾಜ್‌ ಕಾಲುವೆ ಒತ್ತುವರಿ ತೆರವುಗೊಳಿಸಿ ಜನರ ಬದುಕನ್ನು ರಕ್ಷಿಸಿ ಎಂಬುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ.

***

ನಗರದಲ್ಲಿ ಜನಸಂದಣಿ ತಪ್ಪಿಸಲು ವಿಶಾಲವಾದ ಜಾಗದಲ್ಲಿ ಹೊಸ ಬಸ್‌ ನಿಲ್ದಾಣ ಮತ್ತು ಸುಗಮ ಸಂಚಾರಕ್ಕಾಗಿ ನಗರದ ಸುತ್ತಲೂ ರಿಂಗ್‌ ರಸ್ತೆ ನಿರ್ಮಿಸಬೇಕು
- ಡಾ.ಗಿರೀಶ ಕೆಂಚಪ್ಪನವರ, ಸಾಮಾಜಿಕ ಹೋರಾಟಗಾರ, ರಾಣೆಬೆನ್ನೂರು

***

ರಾಣೆಬೆನ್ನೂರು ನಗರ ಬೀಜೋತ್ಪಾದನೆಯಲ್ಲಿ ಅಗ್ರಸ್ಥಾನ ಪಡೆದಿದೆ. ಸರ್ಕಾರ ಇಲ್ಲಿ ಬೀಜೋತ್ಪಾದನೆ ಮಾಡುವ ಕಂಪನಿಗಳು ಬೇರೆಡೆಗೆ ಪಲಾಯನವಾಗದಂತೆ ಕ್ರಮ ಕೈಗೊಂಡು ಹೆಚ್ಚಿನ ಉದ್ಯೋಗ ಸೃಷ್ಟಿಸಬೇಕು
- ಜಿ.ಜಿ. ಹೊಟ್ಟಿಗೌಡ್ರ. ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ

***

ಹೆಳವನಕಟ್ಟಿ ಗಿರಿಯಮ್ಮ, ಪಾಟೀಲ ಪುಟ್ಟಪ್ಪನವರ ಸ್ಮಾರಕ ನಿರ್ಮಾಣದ ಜತೆಗೆ ಜೋಯಿಸರಹರಳಹಳ್ಳಿ, ಇಬ್ಬರು ಜಗದ್ಗುರುಗಳ ನೀಡಿದ ಮುದೇನೂರ ಗ್ರಾಮಗಳನ್ನು ಅಭಿವೃದ್ಧಿ ಪಡಿಸಬೇಕು
- ಡಾ.ಕೆ.ಎಚ್‌.ಮುಕ್ಕಣನವರ. ನಿವೃತ್ತ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT