ಬ್ಯಾಡಗಿ: ರೈತರ ಜ್ವಲಂತ ಸಮಸ್ಯೆಗಳಿಗಿಂತ, ಎರಡು ಮನೆಗಳ ಜಗಳ ಮುಖ್ಯವಾಗಿರುವುದು ದುರಂತ ಸಂಗತಿ. ದುಡಿದು ಬದುಕುವವರ ಬವಣೆ ಕುರಿತು ವರದಿ ಮಾಡಲು ದೃಶ್ಯ ಮಾಧ್ಯಮಗಳು ಮುಂದಾಗಬೇಕು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಹೇಳಿದರು.
ಪಟ್ಟಣದ ಬಿಇಎಸ್‌ಎಂ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಶುಕ್ರವಾರ ಆಯೋಜಿಸಿದ್ದ ಪತ್ರಕರ್ತರ ಜಿಲ್ಲಾ ಸಮ್ಮೇಳನ, ಜಿಲ್ಲಾ ಸಂಘದ ರಜತ ಮಹೋತ್ಸವ ಹಾಗೂ ತಾಲ್ಲೂಕು ಘಟಕದ ನೂತನ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಸಮಾಜಕ್ಕೆ ಉಪಯೋಗವಾಗುವ ವರದಿ ಪ್ರಸಾರ ಮಾಡದಿರುವುದು ದುರಂತದ ಸಂಗತಿ. ಪತ್ರಕರ್ತರಾದವರು ಸಮಾಜ ಮತ್ತು ಸರ್ಕಾರಕ್ಕೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕಾಗಿದೆ. ಜನರಲ್ಲಿ ಮೌಢ್ಯ ತುಂಬುವ ಕೆಲಸವಾಗಬಾರದು. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ದಿನಗಳಲ್ಲಿ ಪತ್ರಿಕೋದ್ಯಮ ದೇಶದ ಅಭಿವೃದ್ಧಿಗೆ ಬಹು ಮುಖ್ಯ ಕೊಡುಗೆ ನೀಡಿದೆ.ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಪತ್ರಕರ್ತರಾಗಿ ದೇಶಕ್ಕೆ ಹೊಸ ಬೆಳಕು ನೀಡಿದರು ಎಂದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ನಕಲಿ ಪತ್ರಕರ್ತರ ಹಾವಳಿ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದರು.
ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಪತ್ರಿಕೋದ್ಯಮಕ್ಕೆ ವಿಶೇಷ ಸ್ಥಾನಮಾನವಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಪತ್ರಿಕಾರಂಗದ ಕರ್ತವ್ಯವಾಗಿದೆ. ಸಾಮಾಜಿಕ ಪಿಡುಗಾಗಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕಲು ಪತ್ರಿಕೆಗಳು ಸಾಕಷ್ಟು ಶ್ರಮಿಸಿವೆ ಎಂದರು.
ಈ ವೇಳೆ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿದರು.
ಈಚೆಗೆ ನಿಧನರಾದ ಪತ್ರಕರ್ತ ವಸಂತ ನಾಡಿಗೇರ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ನಿಂಗಪ್ಪ ಚಾವಡಿ, ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಕುರವತ್ತೇರ, ಕಾರ್ಯದರ್ಶಿ ವಿರೇಶ ಮಡ್ಲೂರ, ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ಸದಸ್ಯ ಬಸವಣ್ಣೆಪ್ಪ ಛತ್ರದ, ಮುಖಂಡರಾದ ಶಿವಯೋಗಿ ಶಿರೂರ, ದಾನಪ್ಪ ಚೂರಿ, ಅಬ್ದುಲ್‌ಮುನಾಫ ಎರೇಶಿಮಿ, ಗಿರೀಶಸ್ವಾಮಿ ಇಂಡಿಮಠ, ಶಂಕರ ಬಾರ್ಕಿ, ಪ್ರಕಾಶ ಬನ್ನಿಹಟ್ಟಿ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಗಂಗಣ್ಣ ಎಲಿ, ಕಿರಣ ಗಡಿಗೋಳ, ಸಾಹಿತಿ ಸಂಕಮ್ಮ ಸಂಕಣ್ಣನವರ, ಶಿವಾನಂದ ಮಲ್ಲನಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.