ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ನಿವಾರಣೆ; ಸಮೃದ್ಧ ಮಳೆಗೆ ಭಕ್ತರ ಪ್ರಾರ್ಥನೆ

ಬಸವೇಶ್ವರರ ಜಯಂತಿ: ಸಂಭ್ರಮದ ವೀರಭದ್ರೇಶ್ವರ ಗುಗ್ಗಳ ಮಹೋತ್ಸವ
Published 10 ಮೇ 2024, 15:13 IST
Last Updated 10 ಮೇ 2024, 15:13 IST
ಅಕ್ಷರ ಗಾತ್ರ

ತುಮ್ಮಿನಕಟ್ಟಿ: ವಿಶ್ವಗುರು ಶ್ರೀ ಬಸವೇಶ್ವರರ ಜಯಂತಿ ಅಂಗವಾಗಿ ಗ್ರಾಮದಲ್ಲಿ ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ಈಶ್ವರ ದೇವರ ಉತ್ಸವ ಮೂರ್ತಿ, ಬಸವೇಶ್ವರರ ರಥೋತ್ಸವ, ವೀರಭದ್ರೇಶ್ವರ ಶರಭಿ ಗುಗ್ಗಳ ಮಹೋತ್ಸವ ಹಾಗೂ ಪುರವಂತಿಕೆಯ ವಿಶೇಷ ಕಾರ್ಯಕ್ರಮ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಆರಂಭದಲ್ಲಿ ಈಶ್ವರ, ನವಗ್ರಹಗಳು, ವೀರಭದ್ರ ದೇವರ ಮೂರ್ತಿ ಸೇರಿದಂತೆ ಬಸವೇಶ್ವರರ ಭಾವಚಿತ್ರಕ್ಕೆ ಸುಗಂಧ, ಪುಷ್ಪಗಳಿಂದ ಶೃಂಗರಿಸಲಾಗಿತ್ತು. ಗಂಟೆ, ವಾದ್ಯ ಮೇಳಗಳೊಂದಿಗೆ ಅಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿಶೇಷ ಪೂಜೆ ಕೈಂಕರ್ಯಗಳು ನೆರವೇರಿದವು.

ಪುರವಂತರ ನೇತೃತ್ವದಲ್ಲಿ ಸದ್ಭಕ್ತರು ದೇವಸ್ಥಾನದ ಆವರಣದಲ್ಲಿ ಗ್ರಾಮದ ಶಾಂತಿ, ನೆಮ್ಮದಿ, ಸಮೃದ್ಧಿಗಾಗಿ ಹಾಗೂ ಬರದ ಸಂಕಷ್ಟ ನಿವಾರಣೆಗೆ ಭಕ್ತಿ ಸಂಕಲ್ಪದೊಂದಿಗೆ ರಚಿಸಲಾದ ರುದ್ರದೇವರ ‘ಅಗ್ನಿಕುಂಡ’ ಹಾಯುವುದರೊಂದಿಗೆ ಭಕ್ತಿಯ ಪರಾಕಾಷ್ಠೆ ಮೆರೆದರು.

ಸಮಾಳ, ಮಂಗಳ ವಾದ್ಯ ಮೇಳಗಳೊಂದಿಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಪುರವಂತರ ತಂಡದವರು ಧರ್ಮ, ಸಂಸ್ಕೃತಿ, ಶರಣರ ಪರಂಪರೆ, ದೇವರಮಹಿಮೆ ಹಾಗೂ ಧಾರ್ಮಿಕ ಭಾವನೆಯಿಂದ ಕೂಡಿದ ವಿಶೇಷ ಒಡಪು ಹೇಳುತ್ತಾ ನೆರೆದಿದ್ದ ನೂರಾರು ಭಕ್ತರ ಹೃನ್ಮನ ಗೆಲ್ಲುವ ಮೂಲಕ ಜ್ಞಾನಾಮೃತ ಉಣಬಡಿಸಿದರು.

ಈಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಬೀದಿ, ಬೆಲ್ಲದಪೇಟೆ, ಹೊನ್ನಾಳಿ ರಸ್ತೆ ಸೇರಿದಂತೆ ಸಂತೆಪೇಟೆ ಮುಖಾಂತರ ರಟ್ಟೀಹಳ್ಳಿ ರಸ್ತೆ ಮಾರ್ಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ವೀರಭದ್ರೇಶ್ವರನ ಗೆದ್ದುಗೆ ಇರುವ ದೇವಸ್ಥಾನದ ಮಹಾಮಂಟಪ ತಲುಪಿತು.

ಈಶ್ವರ ದೇವರ ಉತ್ಸವ ಮೂರ್ತಿ ಹಾಗೂ ವಿಶ್ವಗುರು ಬಸವೇಶ್ವರರ ಭಾವಚಿತ್ರ ಇರುವ ರಥ ಹಾಗೂ ವೀರಭದ್ರೇಶ್ವರ ಸ್ವಾಮಿ ಗುಗ್ಗಳ ಆಗಮಿಸುತ್ತಿದ್ದಂತೆ ಪುರುಷರು ಮನೆಯ ಅಂಗಳಕ್ಕೆ ನೀರು ಹಾಕಿದರೆ, ಮಹಿಳೆಯರು ಮನೆಯ ಅಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕಿ ಸ್ವಾಗತಿಸಿದರು. ವೀರಭದ್ರೇಶ್ವರ ದೇವರ ಗುಗ್ಗಳಕ್ಕೆ ಗ್ರಾಮದ ಭಕ್ತರು ಹಣ್ಣು, ಕಾಯಿ, ಎಣ್ಣೆ ಹಾಗೂ ಹಾರವನ್ನು ನೀಡುವ ಮೂಲಕ ತಮ್ಮ ಸೇವೆಯನ್ನು ಸಲ್ಲಿಸಿದರು.

ಮಕ್ಕಳು ಸಂಭ್ರಮ ಸಡಗರದಿಂದ ಪಾಲ್ಗೊಂಡಿದ್ದರು. ಪ್ರಸ್ತುತ ಹಬ್ಬದ ವಾತಾವರಣದಿಂದ ಮನೆ, ಮಂದಿರ, ಬೀದಿಗಳು ಮಾವಿನ ತಳಿರು ತೋರಣ, ಬಾಳೆಕುಂದ್ರಿಗಳಿಂದ ಶೃಂಗಾರಗೊಂಡು ಕಂಗೊಳಿಸಿದವು. ದೇವಸ್ಥಾನ ಕಮಿಟಿಯವರಿಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ದೇವಸ್ಥಾನ ಸೇವಾ ಕಮಿಟಿ ಅಧ್ಯಕ್ಷ ಮುರುಗೇಶಪ್ಪ ಅಜ್ಜಂಪುರ, ಯುವ ಮುಖಂಡ ಪ್ರಶಾಂತ ಹೊಸಮನಿ, ಶಿಕ್ಷಕ ಹಾಲೇಶಪ್ಪ ನಂಜಪ್ಪನವರ, ವೀರಭದ್ರಪ್ಪ ಗೌಡನಕಟ್ಟಿ, ವೀರೇಶ್ ಶಿಡ್ಲಳ್ಳಿ, ಸತೀಶ ಉಪ್ಪಿನ, ಬಸವರಾಜ ರಂಗೂನವರ, ಪರಮೇಶ್ ಕಿಳ್ಳೇರ, ಶಿವರಾಯಪ್ಪ ಮರಿಸ್ವಾಮಿ, ಗುಡ್ಡಪ್ಪ ಉಪ್ಪಿನ, ಚಂದ್ರಶೇಖರ ಉಪ್ಪಿನ, ದೇವಸ್ಥಾನ ಕಮಿಟಿ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

ಈಶ್ವರ ದೇವರ ಉತ್ಸವ ಮೂರ್ತಿ ಬಸವೇಶ್ವರರ ಭಾವಚಿತ್ರ ಇರುವ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತ ಸಮೂಹ
ಈಶ್ವರ ದೇವರ ಉತ್ಸವ ಮೂರ್ತಿ ಬಸವೇಶ್ವರರ ಭಾವಚಿತ್ರ ಇರುವ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತ ಸಮೂಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT