ಸೋಮವಾರ, ಸೆಪ್ಟೆಂಬರ್ 27, 2021
25 °C
ಸಂಪರ್ಕ ರಸ್ತೆಯಿಲ್ಲದೆ ವಾಹನ ಸವಾರರ ಪರದಾಟ; 20 ಹಳ್ಳಿಗೆ ಸಂಪ‍ರ್ಕ ರಸ್ತೆಗೆ ಸಂಕಷ್ಟ; ಶೀಘ್ರ ಸರಿಪಡಿಸಲು ಒತ್ತಾಯ

ಹಳೇಬೀಡು: ಮುಗಿಯದ ದ್ವಾರಸಮುದ್ರ ಕೆರೆ ಏರಿ ದುರಸ್ತಿ

ಎಚ್.ಎಸ್.ಅನಿಲ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ಮಳೆಗಾಲ ಆರಂಭವಾ ದರೂ ಐತಿಹಾಸಿಕ ದ್ವಾರಸಮುದ್ರ ಕೆರೆ ಏರಿ ದುರಸ್ತಿ ಕಾರ್ಯ ಮುಗಿಯದ ಕಾರಣ ಬದಲಿ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಂದಗತಿಯಲ್ಲಿ ಕೆಲಸ ನಡೆಯುತ್ತಿರುವುದರಿಂದ ಕೆರೆಗೆ ಮಳೆ ನೀರು ಹಾಗೂ ಯಗಚಿ ಜಲಾಶಯದ ನೀರು ತುಂಬಿಸಲು ಸಾಧ್ಯವಾಗುವುದಿಲ್ಲ ಎಂಬ ಆತಂಕ ದ್ವಾರಸಮುದ್ರ ಅಚ್ಚುಕಟ್ಟು ಪ್ರದೇಶದ ರೈತರದ್ದು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೆರೆ ಏರಿ ಪ್ರಮುಖ ಭಾಗಗಳು ಕುಸಿದು ಆತಂಕ ಸೃಷ್ಟಿಯಾಗಿತ್ತು. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗಿತ್ತಲ್ಲದೆ, ಜಮೀನುಗಳು ಜಲಾವೃತವಾಗಿ ಬೆಳೆನಾಶಕ್ಕೂ ಕಾರಣವಾಗಿತ್ತು.

ಕೆರೆ ಏರಿ ದುರಸ್ತಿಗೆ ₹3.30 ಕೋಟಿ ಹಣವನ್ನು ಸರ್ಕಾರ ಬಿಡುಗಡೆ ಮಾಡುವುದರ ಮೂಲಕ ಕಾಮಗಾರಿಗೆ ಹಸಿರು ನಿಶಾನೆ ತೋರಿಸಲಾಗಿತ್ತು. ಮೂರು ತಿಂಗಳು ಗಡುವು ನೀಡಲಾಗಿತ್ತು. ಗಡುವು ಅಂತ್ಯಗೊಂಡರೂ ಕಾಮಗಾರಿ ಮುಗಿಯವ ಲಕ್ಷಣಗಳು ಕಂಡು ಬರುತ್ತಿಲ್ಲ.ಹಾಸನ ಜಿಲ್ಲಾ ಕೇಂದ್ರ ಸಂಪರ್ಕಿಸುವ ಪ್ರಮುಖ ಹೆದ್ದಾರಿ. ಅಡಗೂರು, ಸಾಲಗಾಮೆ ಮತ್ತಿತರ ಪ್ರಮುಖ ಗ್ರಾಮಗಳ ರೈತರು ಮತ್ತು ಗ್ರಾಹಕರು ಕೃಷಿ ಉತ್ಪನ್ನಗಳನ್ನು ಕೊಳ್ಳಲು ಅಥವಾ ಮಾರಾಟ ಮಾಡಲು ಈ ಮಾರ್ಗದಲ್ಲಿ ಸಾಗಬೇಕು.

ಸಾರಿಗೆ ವಾಹನಗಳು ಮಲ್ಲಾಪುರ, ಕ್ಯಾತನಕೆರೆ ಗ್ರಾಮದ ಮೂಲಕ ಅಡಗೂರು ತಲುಪುತ್ತಿವೆ. ಗೋಣಿ ಸೋಮನಹಳ್ಳಿ , ತಟ್ಟೆಹಳ್ಳಿ ಮತ್ತಿತರ ಏಳೆಂಟು ಗ್ರಾಮದ ಜನರು ಯಾವುದೇ ಸಂಪರ್ಕ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ.

ಹಳೇಬೀಡು ಸುತ್ತ ಬೆಳೆಯುವ ತರಕಾರಿಯನ್ನು ಹಾಸನ, ಬೆಂಗಳೂರು ಮುಂತಾದ ಕಡೆಗೆ ಸಾಗಿಸಲು ರೈತರಿಗೆ ಕೆರೆ ಏರಿ ಸುಲಭವಾಗಿದೆ.

ಏರಿ ಮೂಲಕ ಸಂಪರ್ಕ ಕಲ್ಪಿಸುವ 20 ಹಳ್ಳಿಗಳಿಗೆ ಸೂಕ್ತವಾದ ರಸ್ತೆ ಇಲ್ಲದಂತಾಗಿದೆ. ಕುಂಟಮ್ಮ ಸೇತುವೆಯಿಂದ ದ್ವಾರಸಮುದ್ರ ಕೆರೆಯ ಗಂಗೂರು ರಸ್ತೆ ತಿರುವಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಳೆಗಾಲದಲ್ಲಿ ಕೆಸರುಮಯವಾಗುತ್ತದೆ. ಬಿಸಿಲಿನಲ್ಲಿ ರಸ್ತೆ ದೂಳಿನಿಂದ ಕೂಡಿರುತ್ತದೆ. ಗುಂಡಿಗಳಿಂದ ತುಂಬಿ ಹೋಗಿದೆ. ಈ ರಸ್ತೆಯಲ್ಲಿ ಲಘು ವಾಹನಗಳು ಮಾತ್ರವಲ್ಲದೆ ಲಾರಿ ಹಾಗೂ ಟಿಪ್ಪರ್ ಗಳು ಸಂಚರಿಸುತ್ತಿವೆ.

ರಸ್ತೆ ಕಿರಿದಾದ ಕಾರಣ ಆಗಾಗ್ಗೆ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್‌ ಆಗುತ್ತದೆ. ವಾಹನಗಳು ಏರಿ ಪಕ್ಕದ ಮತ್ತೊಂದು ರಸ್ತೆಯಲ್ಲಿ ಸಂಚರಿಸುತ್ತಿವೆ. ಇಳಿಜಾರಿನಲ್ಲಿ ವಾಹನಗಳು ನಿಯಂತ್ರಣ ತಪ್ಪಿ ಸವಾರರು ಬಿದ್ದಿರುವ ಉದಾಹರಣೆ ಇದೆ. ಏರಿ ದುರಸ್ತಿ ಕೆಲಸದ ಚುರುಕುಗೊಳ್ಳದ ಕಾರಣ ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚಾಗುತ್ತಿವೆ.

‘ಅಡಗೂರು ಮಾರ್ಗದಲ್ಲಿ ಹಾಸನಕ್ಕೆ ಸಂಪರ್ಕ ಕಲ್ಲಿಸುವ ಮಲ್ಲಾಪುರ-ಅಡಗೂರು ರಸ್ತೆಯಲ್ಲಿ ಸೇತುವೆ ಕುಸಿದಿದೆ. ಸೇತುವೆ ಪಕ್ಕದ ತಾತ್ಕಲಿಕ ರಸ್ತೆ ಸುರಕ್ಷಿತವಾಗಿಲ್ಲ. ಕಾಗೇದಹಳ್ಳದಲ್ಲಿ ಮಳೆ ನೀರು ಭಾರೀ ಪ್ರಮಾಣದಲ್ಲಿ ನುಗ್ಗಿದರೆ ಬದಲಿ ರಸ್ತೆ ಮುಳುಗಡೆಯಾಗುತ್ತದೆ. ಕೆರೆ ಏರಿ ಕೆಲಸ ಮುಗಿದರೆ ಮಾತ್ರ ಸುರಕ್ಷಿತ ಪ್ರಯಾಣ ಸಾಧ್ಯ’ ಎನ್ನುತ್ತಾರೆ ಆಟೊ ರಿಕ್ಷಾ ಚಾಲಕರು.

ಕಳೆದ ವರ್ಷ ಹಳ್ಳದಲ್ಲಿ ಮಳೆ ನೀರು ಹರಿದಿದ್ದಲ್ಲದೆ, ಯಗಚಿ ಏತನೀರಾವರಿ ಯೋಜನೆಯಿಂದ ನೀರು ಹರಿಸಿದ್ದರಿಂದ ದ್ವಾರಸಮುದ್ರ ಕೆರೆ 14 ವರ್ಷದ ನಂತರ ಭರ್ತಿಯಾಗಿ ಕೋಡಿಯಲ್ಲಿ ನೀರು ಹರಿದಿತ್ತು. ಸ್ವಲ್ಪ ದಿನದಲ್ಲಿ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿತು. ಸುರಕ್ಷತೆಗಾಗಿ ಕೋಡಿ ಒಡೆದು ಕೆರೆ ನೀರು ಹೊರ ಬಿಡಲಾಯಿತು.

ಕೆರೆಗೆ ನೀರು ಬಂದಿದ್ದರಿಂದ ಜನರಲ್ಲಿ ಕಂಡು ಬಂದ ಸಂಭ್ರಮ, ಕೆಲವೇ ದಿನಗಳಲ್ಲಿ ನಿರಾಸೆ ಮೂಡಿಸಿತು. ಮಳೆಗಾಲದ ವೇಳೆಗೆ ಏರಿ ಕಾಮಗಾರಿ ಮುಗಿಯುತ್ತದೆ. ಮಳೆ ನೀರಿನ ಜೊತೆ ಯಗಚಿ ಏತ ನೀರಾವರಿಯಿಂದ ನೀರು ಹರಿಸಿದರೆ ಮತ್ತೆ ಕೆರೆ ಭರ್ತಿಯಾಗುತ್ತದೆ.  ಅಂತರ್ಜಲ ಮತ್ತೆ ವೃದ್ದಿಸುತ್ತದೆ ಎಂಬ ರೈತರು ಕನಸು ನನಸಾಗಬೇಕಿದೆ.

ಒಂದು ದಿನವೂ ಕಾಮಗಾರಿ ನಿಲ್ಲಿಸಿಲ್ಲ
ದ್ವಾರಸಮುದ್ರ ಕೆರೆ ಏರಿ ದುರಸ್ತಿ ಕಾಮಗಾರಿ ಶೇಕಾಡ 90 ರಷ್ಟು ಮುಗಿದಿದೆ. ಉಳಿದ ಶೇಕಡಾ 10ರಷ್ಟು ಕೆಲಸ ಮುಗಿಸಲು ಒಂದು ವಾರದಿಂದ ಮಳೆ ಬಿಡುವು ನೀಡುತ್ತಿಲ್ಲ. ಏಪ್ರಿಲ್ 9 ರಿಂದ ಕೆಲಸ ಆರಂಭವಾಗಿದೆ. ಒಂದು ದಿನವೂ ಕೆಲಸ ನಿಲ್ಲಿಸಿಲ್ಲ. ಬಂದೋಬಸ್ತ್ ನಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಆಗಾಗ ಉನ್ನತ ಅಧಿಕಾರಿಗಳು ಸಹ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಎಂಜಿನಿಯರ್ ಸಂತೋಷ್ ತಿಳಿಸಿದರು.

* ಯಾರು ಏನಂತಾರೆ
ಕೆರೆ ಅಭಿವೃದ್ಧಿಗೆ ಒತ್ತು

ದ್ವಾರಸಮುದ್ರ ಕೆರೆಯ ಅಭಿವೃದ್ಧಿ ಹಾಗೂ ಸುರಕ್ಷತೆಗೆ ಗಮನ ಹರಿಸಿದ್ದೇವೆ. ನಿತ್ಯ ಕಾಮಗಾರಿ ವೀಕ್ಷಣೆ ಮಾಡುತ್ತಿದ್ದೇವೆ. ಏರಿ ವಿಸ್ತರಣೆ ಮಾಡಿಸಿ, ವಿಭಜಕ ಹಾಕಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಏರಿ ಬಂದೋಬಸ್ತ್ ಮಾಡಿಸಿ ಕೆರೆಯ ಅಂದ ಚೆಂದವನ್ನು ಸಹ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.
-ಕೆ.ಎಸ್.ಲಿಂಗೇಶ್, ಶಾಸಕ, ಬೇಲೂರು

ಪ್ರವಾಸಿಗರಿಗೆ ಕಿರಿಕಿರಿ ತಪ್ಪಿಸಿ
ಹುಲಿಕಲ್ಲೇಶ್ವರ ಬೆಟ್ಟಕ್ಕೆ ತೆರಳುವ ಯಾತ್ರಾರ್ಥಿಗಳು ಹಾಗೂ ಕೊಂಡಜ್ಜಿಯ ವರದರಾಜ ಸ್ವಾಮಿ ದೇವಾಲಯ ವೀಕ್ಷಿಸುವ ಪ್ರವಾಸಿಗರು ದ್ವಾರಸಮುದ್ರ ಕೆರೆ ಏರಿಯ ಮೇಲೆ ಪ್ರಯಾಣ ಮಾಡಬೇಕು. ಪ್ರವಾಸಿಗರಿಗೆ ಕಿರಿಕಿರಿ ಆಗುತ್ತಿದೆ. ಸ್ಥಳೀಯರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಚುರುಕಿನಿಂದ ಏರಿ ಕೆಲಸ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು.
-ಎಚ್.ಎಲ್.ಮೋಹನ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ

ಬಸ್ ಇಲ್ಲದೆ ತೊಂದರೆ
ಕೆರೆ ಏರಿ ದುರಸ್ತಿ ಕಾಮಗಾರಿ ಆರಂಭವಾದ ನಂತರ ಹಲವು ಗ್ರಾಮಗಳಿಗೆ ಬಸ್ ಇಲ್ಲದಂತಾಗಿದೆ. ಆಸ್ಪತ್ರೆ ಮೊದಲಾದ ತುರ್ತು ಕೆಲಸಗಳಿಗೆ ತೊಂದರೆಯಾಗುತ್ತಿದೆ. ಕೃಷಿ ಉತ್ಪನ್ನಗಳನ್ನು ಹಳೇಬೀಡಿಗೆ ಸಾಗಿಸಲು ಕಷ್ಟವಾಗುತ್ತಿದೆ. ಬದಲಿ ರಸ್ತೆಗಳಲ್ಲಿ ಸರಕು ಸಾಗಾಣೆ ವಾಹನಗಳು ಬರಲು ಹಿಂದೇಟು ಹಾಕುತ್ತಿವೆ. ಏರಿ ಸಮಸ್ಯೆಯಿಂದ ವರ್ತಕರು ಕೃಷಿ ಉತ್ಪನ್ನವನ್ನು ಸ್ಥಳೀಯವಾಗಿ ಖರೀದಿಸುವುದಕ್ಕೂ ಬರುತ್ತಿಲ್ಲ.
-ರಮೇಶ, ರೈತ, ರಾಜಗೆರೆ.

ಬದಲಿ ರಸ್ತೆಯಲ್ಲಿ ಚಾಲನೆ ಕಷ್ಟ
ದ್ವಾರಸಮುದ್ರ ಕೆರೆ ಏರಿ ಸಂಪರ್ಕಿಸುವ ಹಳ್ಳಿಗಳಿಗೆ ಹೋಗಲು ಹೆಚ್ಚು ದೂರ ಕ್ರಮಿಸಬೇಕಿದೆ. ಪ್ರಯಾಣಿಕರು ಹೆಚ್ಚುವರಿ ಬಾಡಿಗೆ ಕೊಡಲು ನಿರಾಕರಿಸುತ್ತಾರೆ. ಡಿಸೇಲ್ ಬೆಲೆ ಸಹ ದುಬಾರಿಯಾಗಿದೆ. ಬದಲಿ ರಸ್ತೆಯಲ್ಲಿ ಆಟೋ ಓಡಿಸುವುದು ಕಷ್ಟವಾಗುತ್ತಿದೆ.
-ಧರ್ಮ, ಆಟೊ ಚಾಲಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.