ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಟ್ಟೀಹಳ್ಳಿ | ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಬೋಧಕರ ಕೊರತೆ: ಕಲಿಕೆಗೆ ಕುತ್ತು!

ರಟ್ಟೀಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೂಲಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳ ಪರದಾಟ
Last Updated 4 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಇಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ನಾಲ್ಕು ವಿಷಯಗಳಿಗೆ ಕಾಯಂ ಬೋಧಕರ ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.

ವಿಜ್ಞಾನ ವಿಭಾಗದ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಿತ ವಿಷಯಗಳು 2019–20ರಲ್ಲಿಕಾಲೇಜಿಗೆ ಮಂಜೂರಾತಿಯಾಗಿದ್ದರೂ, ಹುದ್ದೆಗಳು ಇದುವರೆಗೂ ಮಂಜೂರಾತಿಯೇ ಆಗಿಲ್ಲ. ಇದರಿಂದ ಅತಿಥಿ ಉಪನ್ಯಾಸಕರ ನೇಮಕಾತಿಗೂ ತಾಂತ್ರಿಕ ತೊಂದರೆಯಾಗಿದೆ.

ಹಿರೇಕೆರೂರು, ರಾಣೆಬೆನ್ನೂರು, ಆಡೂರು ಕಾಲೇಜುಗಳಿಂದ ನಿಯೋಜನೆಗೊಂಡ ಬೋಧಕರು ವಾರಕ್ಕೆ ಎರಡು ದಿನ ರಟ್ಟೀಹಳ್ಳಿ ಕಾಲೇಜಿಗೆ ಬಂದು ಪಾಠ ಮಾಡುತ್ತಿದ್ದಾರೆ. ಇದರಿಂದ ಸಿಲಬಸ್‌ಗಳು ಸಕಾಲದಲ್ಲಿ ಪೂರ್ಣಗೊಳ್ಳುವುದಿಲ್ಲ. ಕಾಯಂ ಬೋಧಕರಿಲ್ಲದೇ ಇರುವುದರಿಂದ ಕಲಿಕೆಗೆ ತುಂಬಾ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ದೂರುತ್ತಾರೆ.

ಕಲಾ ವಿಭಾಗದ ಶಿಕ್ಷಣ ವಿಷಯ ಮತ್ತು ವಾಣಿಜ್ಯ ವಿಭಾಗದಲ್ಲಿ ಎರಡು ಹುದ್ದೆಗಳು ಖಾಲಿ ಇದ್ದು, ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ.ಎರಡು ಬೋಧಕೇತರ ಹುದ್ದೆಗಳಿಗೂ ಕಾಯಂ ಸಿಬ್ಬಂದಿ ಇಲ್ಲದಂತಾಗಿದೆ.

ಸ್ವಂತ ಕಟ್ಟಡಕ್ಕೆ ಸ್ಥಳಾಂತರ:ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಟ್ಟೀಹಳ್ಳಿಯಲ್ಲಿ 2007ರಲ್ಲಿ ಸರ್ಕಾರಿ ಪಿ.ಯು. ಕಾಲೇಜು ಆರಂಭವಾಯಿತು. ಮೊದಲು ಮಾಸೂರು ರಸ್ತೆಯಲ್ಲಿರುವ ತೋಟಗಾರಿಕೆ ಕಚೇರಿಯಲ್ಲಿ ಆರಂಭಗೊಂಡ ಕಾಲೇಜು, 2010-11ನೇ ಸಾಲಿನಲ್ಲಿ ತಾವರಗಿ ರಸ್ತೆಯ ಬೀಜೋತ್ಪಾದನೆ ಕೇಂದ್ರದ ಹತ್ತಿರ ಇರುವ ಸರ್ಕಾರಿ ಜಾಗದಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.

ಮೊದಲು ಕಲಾ ವಿಭಾಗ ಮಾತ್ರ ಅಸ್ತಿತ್ವದಲ್ಲಿತ್ತು. ನಂತರ ವಿದ್ಯಾರ್ಥಿಗಳ, ಪಾಲಕರ, ಶಿಕ್ಷಣ ಪ್ರೇಮಿಗಳ ಒತ್ತಾಸೆಯ ಮೇರೆಗೆ 2016-17ರಲ್ಲಿ ವಾಣಿಜ್ಯ ವಿಭಾಗ ಆರಂಭಗೊಂಡಿತು. 2018-19ರಲ್ಲಿ ವಿಜ್ಞಾನ ವಿಭಾಗದ ಅವಶ್ಯವಿರುವುದನ್ನು ಮನಗಂಡು ಸಚಿವ ಬಿ.ಸಿ.ಪಾಟೀಲ ಅವರ ಅವಿರತ ಪ್ರಯತ್ನದಿಂದಾಗಿ ಸರ್ಕಾರದಿಂದ ₹1 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಿ ವಿಜ್ಞಾನ ವಿಭಾಗ ಪ್ರಾರಂಭಗೊಂಡಿತು.

ಕಾಲೇಜಿನಲ್ಲಿ ಪ್ರಸ್ತುತ ಕಲಾ ವಿಭಾಗದಲ್ಲಿ 163 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 61 ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ 73 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಖಾಸಗಿ ಕಾಲೇಜಿನತ್ತ ಚಿತ್ತ:ರಟ್ಟೀಹಳ್ಳಿ ತಾಲ್ಲೂಕಿನಲ್ಲಿಯೇ ಏಕೈಕ ವಿಜ್ಞಾನ ಕಾಲೇಜು ಇದಾಗಿದ್ದು, ಸಿಬ್ಬಂದಿ ಕೊರತೆಯಿರುವುದರಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಹೆಚ್ಚು-ಹೆಚ್ಚು ಶುಲ್ಕ ನೀಡಿ ಪಕ್ಕದ ಹಿರೇಕೆರೂರು, ರಾಣೆಬೆನ್ನೂರು, ಶಿಕಾರಿಪುರ, ಖಾಸಗಿ ಕಾಲೇಜಿಗೆ ದಾಖಲಾಗುತ್ತಿರುವುದು ಕಂಡುಬರುತ್ತಿದೆ.

‘ಇಲ್ಲಿಗೆ ಬರುವ ನಿಯೋಜಿತ ಉಪನ್ಯಾಸಕರು ಉತ್ತಮವಾಗಿ ಪಾಠಬೋಧನೆ ಮಾಡುತ್ತಾರೆ. ಆದರೆ ವಾರದಲ್ಲಿ ಎರಡು ದಿನ ಮಾತ್ರ ಪಾಠ ಪ್ರವಚನಕ್ಕೆ ಬರುತ್ತಾರೆ. ಇದರಿಂದಾಗಿ ನಮ್ಮ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ. ಕಾರಣ ನಮ್ಮ ಕಾಲೇಜಿಗೆ ಪೂರ್ಣಕಾಲಿಕ ಉಪನ್ಯಾಸಕರನ್ನು ನೀಡಬೇಕು’ ಎನ್ನುತ್ತಾಳೆ ಇಲ್ಲಿನ ವಿಜ್ಞಾನ ವಿಭಾಗ ದ್ವಿತೀಯ ವರ್ಷದ ವಿದ್ಯಾರ್ಥಿನಿ ಮೇಘನಾ ಎಂ.ಕೆ.

ಕಾಂಪೌಂಡ್‌ ಕೊರತೆ: ಕಿಡಿಗೇಡಿಗಳ ಹಾವಳಿ
ಕಾಲೇಜಿಗೆ ಕಾಂಪೌಂಡ್‌ ಇಲ್ಲದ ಕಾರಣ ರಾತ್ರಿ ವೇಳೆಯಲ್ಲಿ ಪುಂಡು ಪೋಕರಿಗಳು ಬಂದು ಮದ್ಯಸೇವಿಸಿ ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ. ಕಾಲೇಜು ಕಟ್ಟಡಕ್ಕೆ ಸೂಕ್ತ ರಕ್ಷಣೆಯಿಲ್ಲದೆ ಕಿಟಕಿಯ ಗಾಜುಗಳನ್ನು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ.

ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅಗತ್ಯವಾದ ಪ್ರಯೋಗಾಲಯಗಳ ಸೌಲಭ್ಯಗಳಿಲ್ಲ. ಗ್ರಂಥಾಲಯದಲ್ಲಿ ವಿಷಯವಾರು ಸಾಕಷ್ಟು ಗ್ರಂಥಗಳ ಕೊರತೆಯಿದೆ. ಪ್ರತ್ಯೇಕ ಹೆಚ್ಚುವರಿ ಶೌಚಾಲಯಗಳ ಅವಶ್ಯಕತೆಯಿದೆ. ಆಟದ ಮೈದಾನವಿಲ್ಲ. ಆಟೋಪಕರಣಗಳಿಲ್ಲ ಎಂದು ವಿದ್ಯಾರ್ಥಿಗಳು ಸಾಲು–ಸಾಲು ಸಮಸ್ಯೆಗಳನ್ನು ತೋಡಿಕೊಂಡರು.

*
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಅಲ್ಲಿ ಪೂರ್ಣಕಾಲಿಕ ಅಥವಾ ಅತಿಥಿ ಉಪನ್ಯಾಸಕರ ಹುದ್ದೆಗೆ ಕ್ರಮ ಕೈಗೊಳ್ಳಲಾಗುವುದು.
– ಡಾ.ಉಮೇಶಪ್ಪ ಎಚ್.,ಡಿಡಿಪಿಯು, ಹಾವೇರಿ

*
ವಿಜ್ಞಾನ ವಿಭಾಗಕ್ಕೆ ಉಪನ್ಯಾಸಕರ ಕೊರತೆ ಇದೆ. ಉಪನ್ಯಾಸಕರ ಕೊರತೆ ನೀಗಿಸುವುದಾಗಿ ಸಚಿವ ಬಿ.ಸಿ.ಪಾಟೀಲ ಭರವಸೆ ನೀಡಿದ್ದಾರೆ.
– ಮಾಲತೇಶ ಗಂಗೋಳ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT