ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ₹2750 ದರ ನಿಗದಿಗೆ ಕಾರ್ಖಾನೆ ಒಪ್ಪಿಗೆ

ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ಸಭೆ: ₹50 ಹೆಚ್ಚುವರಿ ಪಾವತಿಗೆ ಕಬ್ಬು ಬೆಳೆಗಾರರ ಬೇಡಿಕೆ
Last Updated 12 ಅಕ್ಟೋಬರ್ 2020, 15:06 IST
ಅಕ್ಷರ ಗಾತ್ರ

ಹಾವೇರಿ: ‘ಕೇಂದ್ರ ಸರ್ಕಾರ ಇಳುವರಿ ಆಧರಿಸಿ ನಿಗದಿಪಡಿಸಿದ ದರದಂತೆ ಪ್ರತಿಟನ್‍ಗೆ ₹2750 ಪಾವತಿಸಬೇಕು. ಈ ದರದಲ್ಲಿ ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು’ ಎಂದು ಸಂಗೂರ ಸಕ್ಕರೆ ಕಾರ್ಖಾನೆಯ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಸೂಚನೆ ನೀಡಿದರು.

ಕಬ್ಬು ನುರಿಸುವ ಪ್ರಸಕ್ತ ಹಂಗಾಮಿಗೆ ರೈತರು ಪೂರೈಸುವ ಕಬ್ಬಿಗೆ ದರ ನಿಗದಿಪಡಿಸುವ ಕುರಿತಂತೆ ಸೋಮವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಮಧ್ಯಸ್ಥಿಕೆಯಲ್ಲಿ ಸಂಗೂರಿನ ಕಾರ್ಖಾನೆಯ ಸಭಾಂಗಣದಲ್ಲಿ ರೈತ ಮುಖಂಡರು ಹಾಗೂ ಕಾರ್ಖಾನೆ ಮಾಲೀಕರ ಸಭೆ ನಡೆಯಿತು.

ಕೇಂದ್ರ ಗ್ರಾಹಕರ ವ್ಯವಹಾರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಶೇ 10 ಇಳುವರಿಗೆ ಪ್ರತಿಟನ್‍ಗೆ 2,850 ಪ್ರಸಕ್ತ ಸಾಲಿನಲ್ಲಿ ನಿಗದಿಪಡಿಸಿದೆ. ಸಂಗೂರ ಕಾರ್ಖಾನೆಯ ಇಳುವರಿ ಶೇಕಡಾ 9.65 ಇರುವುದರಿಂದ ₹2,750 ರೂಪಾಯಿ ಪ್ರತಿಟನ್‍ಗೆ ಪಾವತಿಸಬೇಕಾಗುತ್ತದೆ. ಈ ದರದಲ್ಲಿ ಕಡಿತಗೊಳಿಸದಂತೆ ಸೂಚನೆ ನೀಡಿದ ಅವರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ರೈತರಿಗೆ ಕಡಿಮೆ ದರ ಪಾವತಿಸಲು ಜಿಲ್ಲಾಡಳಿತ ಒಪ್ಪುವುದಿಲ್ಲ ಎಂದು ತಿಳಿಸಿದರು.

ರೈತರ ಬೇಡಿಕೆ:

ರೈತ ಮುಖಂಡರ ಪರವಾಗಿ ವಿರೇಶ ಅವರು, ಸಭೆಗೆ ಬೇಡಿಕೆಗಳನ್ನು ಮಂಡಿಸಿ ಕಾರ್ಖಾನೆಗೆ ಪೂರೈಸುವ ಪ್ರತಿಟನ್ ಕಬ್ಬಿಗೆ ಸರ್ಕಾರಿ ದರಕ್ಕಿಂತ ಹೆಚ್ಚುವರಿಯಾಗಿ ಕನಿಷ್ಠ ₹150ರಿಂದ ₹250ರೂ ದರ ನಿಗದಿಪಡಿಸಬೇಕು. ಕಳೆದ ಹಂಗಾಮಿನ ಕಬ್ಬಿನ ಹಣ ಪಾವತಿಸಬೇಕು. ಇಳುವರಿ ಪರೀಕ್ಷೆ ಮಾಡುವ ಸಮಿತಿಗೆ ರೈತ ಪ್ರತಿನಿಧಿಗಳನ್ನು ಸೇರಿಸಬೇಕು, ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯೇ ಭರಿಸುವುದು ಒಳಗೊಂಡಂತೆ ಹತ್ತು ಬೇಡಿಕೆಗಳನ್ನು ಸಲ್ಲಿಸಿ ಈಡೇರಿಸುವಂತೆ ಮನವಿ ಮಾಡಿಕೊಂಡರು.

ಸಕ್ಕರೆ ದರ ಕುಸಿತ

ಆರಂಭದಲ್ಲಿ ಸರ್ಕಾರ ನಿಗದಿಪಡಿಸಿದ ದರ ಪಾವತಿಸಲು ನಿರಾಕರಿಸಿದ ಆಡಳಿತ ಮಂಡಳಿಯ ನಿರ್ದೇಶಕ ಬಸವರಾಜ ಅವರು ಮಾತನಾಡಿ, ಕಳೆದ ವರ್ಷ ಇಳುವರಿ ದರಕ್ಕಿಂತ ಹೆಚ್ಚು ದರ ನೀಡಿ ಕಬ್ಬು ಖರೀದಿಸಲಾಗಿದೆ, ಕೋವಿಡ್ ಹಿನ್ನೆಲೆಯಲ್ಲಿ ಸಕ್ಕರೆ ಮಾರಾಟವಾಗದೇ ದಾಸ್ತಾನು ಉಳಿದಿದೆ. ಇದೀಗ ಸಕ್ಕರೆಯ ದರ ಕುಸಿದಿದೆ. ವಿದ್ಯುತ್ ದರ ಹಾಗೂ ಮೋಲಾಸಿಸ್ ದರ ಕುಸಿದಿದೆ ಇದರಿಂದಾಗಿ ಕಾರ್ಖಾನೆಗೆ ₹8 ರಿಂದ ₹12 ಕೋಟಿ ನಷ್ಟವಾಗಿದೆ ಎಂದು ಸಮಸ್ಯೆ ತೋಡಿಕೊಂಡರು.

ಪಾವತಿಗೆ ಒಪ್ಪಿಗೆ

ಆಡಳಿತ ಮಂಡಳಿಯೊಂದಿಗೆ ದೂರವಾಣಿಯೊಂದಿಗೆ ಚರ್ಚಿಸಿ, ಸರ್ಕಾರ ನಿಗದಿಪಡಿಸಿದಂತೆ ₹2750 ರೂಪಾಯಿ ಪ್ರತಿಟನ್‍ಗೆ ಪಾವತಿಸಲಾಗುವುದು. ಹೆಚ್ಚುವರಿ ₹50 ಪಾವತಿಸುವ ಕುರಿತಂತೆ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಒಂದು ದಿನದಲ್ಲಿ ನಿರ್ಣಯ ತಿಳಿಸಲಾಗುವುದು. ಕಾಲಾವಕಾಶ ನೀಡಿ ಎಂದು ಕೋರಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ರಮೇಶ ದೇಸಾಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ತಹಶೀಲ್ದಾರ್ ಶಂಕರ, ಸಂಗೂರ ಕಾರ್ಖಾನೆಯ ಅಧ್ಯಕ್ಷ ದೇಶಪಾಂಡೆ, ಉಪಾಧ್ಯಕ್ಷ ಬಸವರಾಜ ನೆಗಳೂರ, ನಿರ್ದೇಶಕರಾದ ಕೆ.ಸಿ ಹಿರೇಮಠ, ರಾಮಣ್ಣ ನಾಗಪ್ಪ, ಕಬ್ಬು ಬೆಳೆಗಾರರ ಜಿಲ್ಲಾ ಸಂಘದ ಅಧ್ಯಕ್ಷರಾದ ರಾಜಶೇಖರ ಬೇಟಗೇರಿ, ಎಂ.ಪಿ ಕೆಂಗೊಂಡ, ಸಿದ್ದಪ್ಪ ಬಂಕಾಪುರ, ರೈತ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT