ಬುಧವಾರ, ಜೂನ್ 29, 2022
24 °C
ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ: ಹಣ ಕೊಡದಿದ್ದರೆ ದಾಳಿ ನಡೆಸುತ್ತೇವೆಂದು ‘ಬ್ಲ್ಯಾಕ್‌ಮೇಲ್‌’

ಹಾವೇರಿ ಜಿಲ್ಲೆಯಲ್ಲಿ ನಕಲಿ ಎಸಿಬಿ ಅಧಿಕಾರಿಗಳ ಹಾವಳಿ: ‘ಬ್ಲ್ಯಾಕ್‌ಮೇಲ್‌’!

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯಲ್ಲಿ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಿದ್ದರೆ, ಮತ್ತೊಂದು ಕಡೆ ಎಸಿಬಿ ಅಧಿಕಾರಿಗಳ ಸೋಗಿನಲ್ಲಿ ಖದೀಮರು ಸರ್ಕಾರಿ ನೌಕರರಿಗೆ ಬೆದರಿಕೆ ಹಾಕಿ, ಹಣ ವಸೂಲಿ ಮಾಡುವ ದಂಧೆ ನಡೆಸುತ್ತಿದ್ದಾರೆ. 

ಜಿಲ್ಲೆಯಲ್ಲಿ ನಕಲಿ ಎಸಿಬಿ ಅಧಿಕಾರಿಗಳ ಹಾವಳಿ ಹೆಚ್ಚಾಗಿದ್ದು, ಹಣ ಕೊಡದಿದ್ದರೆ ದಾಳಿ (Raid) ಮಾಡುತ್ತೇವೆ ಎಂದು ಬೆದರಿಸಿ, ಹಣ ದೋಚುತ್ತಿರುವ ಪ್ರಕರಣಗಳು ಸದ್ದಿಲ್ಲದೇ ನಡೆಯುತ್ತಿವೆ. 

‘ನಾನು ಎಸಿಬಿ ಡಿವೈಎಸ್ಪಿ. ನಿಮ್ಮ ಕಚೇರಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ನೀವು ಹಣ ಕೊಡದಿದ್ದರೆ ನಮ್ಮ ತಂಡ ನಿಮ್ಮ ಕಚೇರಿ ಮೇಲೆ ದಾಳಿ ನಡೆಸುತ್ತದೆ’ ಎಂದು ಖದೀಮರು ಧಮಕಿ ಹಾಕುತ್ತಿರುವುದು ಸರ್ಕಾರಿ ಅಧಿಕಾರಿಗಳಿಗಷ್ಟೇ ಅಲ್ಲ, ‘ಭ್ರಷ್ಟಾಚಾರ ನಿಗ್ರಹ ದಳದ’ ಸಿಬ್ಬಂದಿಗೂ ದೊಡ್ಡ ತಲೆನೋವಾಗಿದೆ. 

ಜಿಲ್ಲಾಡಳಿತ ಭವನದಲ್ಲಿರುವ ಡಿಡಿಪಿಐ ಕಚೇರಿ ಮೇಲೆ ಏಪ್ರಿಲ್‌ 11ರಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಾದ ನಂತರ ಶಿಕ್ಷಣ ಇಲಾಖೆ ಕಚೇರಿಗಳನ್ನು ಗುರಿಯಾಗಿಸಿಕೊಂಡಿರುವ ಖದೀಮರು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ‘ಬ್ಲ್ಯಾಕ್‌ಮೇಲ್‌’ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. 

ಶಿಗ್ಗಾವಿ ಬಿಇಒ ಕಚೇರಿಗೆ ಕರೆ ಮಾಡಿ, ಇನ್ನು ಎರಡು ಮೂರು ದಿನಗಳಲ್ಲಿ ನಿಮ್ಮ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಲು ಪ್ಲ್ಯಾನ್‌ ರೂಪಿಸಲಾಗಿದೆ. ನೀವು ಹಣ ಕೊಡದಿದ್ದರೆ, ನಮ್ಮ ತಂಡ ದಾಳಿ ನಡೆಸುವುದು ನಿಶ್ಚಿತ ಎಂದು ದುಷ್ಕರ್ಮಿಗಳು ಹೆದರಿಸಿದ್ದರು. ಇದೇ ರೀತಿ ರಾಣೆಬೆನ್ನೂರಿನ ಕಮರ್ಷಿಯಲ್‌ ಟ್ಯಾಕ್ಸ್‌ ಕಚೇರಿ ಮತ್ತು ಆರ್‌ಟಿಒ ಕಚೇರಿಗೂ ಕರೆ ಮಾಡಿದ್ದರು ಎನ್ನಲಾಗುತ್ತಿದೆ.

‘ನಕಲಿ ಎಸಿಬಿ ಅಧಿಕಾರಿಗಳಿಗೆ ಹಾಗೂ ಕೆಲವು ಸಂಘಟನೆಗಳ ಪದಾಧಿಕಾರಿಗಳಿಗೆ ಭ್ರಷ್ಟ ಸರ್ಕಾರಿ ನೌಕರರು ಹೆದರಿ, ಹಣ ಕೊಟ್ಟು ಸಾಗ ಹಾಕುತ್ತಾರೆ. ತೊಂದರೆ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂದು ಯಾರೊಬ್ಬರೂ ಪೊಲೀಸರಿಗೆ ದೂರು ಕೊಡುವುದಿಲ್ಲ. ನೌಕರರ ಅಸಹಾಯಕತೆ ಮತ್ತು ದೌರ್ಬಲ್ಯಗಳನ್ನು ಬಂಡವಾಳ ಮಾಡಿಕೊಂಡ ಖದೀಮರು ನಿರ್ಭೀತಿಯಿಂದ ಹಣ ದೋಚುತ್ತಿದ್ದಾರೆ’ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಯೊಬ್ಬರು. 

‘ಸರ್ಕಾರಿ ನಿಯಮ ಮತ್ತು ಕಾನೂನು ಪ್ರಕಾರ ಕೆಲಸ ನಿರ್ವಹಿಸಲು ನಮ್ಮ ನೌಕರರಿಗೆ ಸಲಹೆ ನೀಡಿದ್ದೇವೆ. ಸರ್ಕಾರಿ ನೌಕರರನ್ನು ಬೆದರಿಸಿ, ಹಣ ಮಾಡುವುದನ್ನೇ ಕಸುಬನ್ನಾಗಿಸಿಕೊಂಡಿರುವ ಖದೀಮರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಮೃತಗೌಡ ಪಾಟೀಲ ಮನವಿ ಮಾಡಿದ್ದಾರೆ.

ನಕಲಿ ಎಸಿಬಿ ಅಧಿಕಾರಿ ಬಂಧನ!

2021ರ ನವೆಂಬರ್‌ನಲ್ಲಿ ರಾಣೆಬೆನ್ನೂರಿನ ನಗರಸಭೆಯ ಪೌರಾಯುಕ್ತರನ್ನು ಭೇಟಿ ಮಾಡಿ, ತಾನು ಎಸಿಬಿ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು, ಹಣದ ಆಮಿಷವೊಡ್ಡಿದ್ದ ‘ನಕಲಿ ಎಸಿಬಿ ಅಧಿಕಾರಿ’ ಬೆಂಗಳೂರಿನ ವೆಂಕಟಸ್ವಾಮಿ ಬಡಾವಣೆಯ ಹಲಸೂರಿನ ನಿವಾಸಿ ಜಾನ್‌ ಮ್ಯಾಥೀವ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. 

‘ಎಸಿಬಿ ಅಧಿಕಾರಿಗಳು ದಾಳಿ ಮಾಡುವ ಪಟ್ಟಿಯಲ್ಲಿ ಇರುವ ನಗರಸಭೆಯ ಎಂಜಿನಿಯರ್‌ ಹೆಸರನ್ನು ತೆಗೆಸುತ್ತೇನೆ, ನನಗೆ ಹಣ ನೀಡಿದರೆ ಮೇಲಧಿಕಾರಿಗಳಿಗೆ ಹೇಳಿ ಹೆಸರನ್ನು ಪಟ್ಟಿಯಿಂದ ತೆಗೆಸುತ್ತೇನೆ’ ಎಂದು ಆಮಿಷ ಒಡ್ಡಿದ್ದ ಬಗ್ಗೆ ರಾಣೆಬೆನ್ನೂರಿನ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

‘ನಕಲಿ ಅಧಿಕಾರಿಗಳ ಮುಖವಾಡ ಕಳಚಿ’

ಸರ್ಕಾರಿ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲಿನ ಸರ್ಕಾರಿ ನೌಕರರಿಗೆ ನಮ್ಮ ಸಿಬ್ಬಂದಿ ‘ಗುರುತಿನ ಚೀಟಿ’ ಹಾಗೂ ನ್ಯಾಯಾಲಯದ ‘ಸರ್ಚ್‌ ವಾರಂಟ್‌’ ತೋರಿಸುತ್ತಾರೆ. ನ್ಯಾಯಾಲಯದ ಅನುಮತಿ ಪಡೆಯದೇ ನಾವು ಯಾವುದೇ ಕಚೇರಿ ಮೇಲೆ ದಾಳಿ ನಡೆಸುವುದಿಲ್ಲ ಎಂದು ಎಸಿಬಿ ಡಿವೈಎಸ್ಪಿ ಗೋಪಿ ಬಿ.ಆರ್‌. ‘ಪ್ರಜಾವಾಣಿ’ಗೆ ತಿಳಿಸಿದರು. 

ಎಸಿಬಿ ಅಧಿಕಾರಿಗಳ ಸೋಗಿನಲ್ಲಿ ಬರುವ ನಕಲಿ ಅಧಿಕಾರಿಗಳ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಬಹುದು. ಜತೆಗೆ ನನಗೆ ಕರೆ ಮಾಡಿ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಬಹುದು. ಇಷ್ಟೇ ಅಲ್ಲದೆ, ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳಿದರೆ, ನೌಕರರು ಅಕ್ರಮ ಆಸ್ತಿ ಹೊಂದಿದ್ದರೆ, ಅಗತ್ಯ ದಾಖಲೆಗಳೊಂದಿಗೆ ಎಸಿಬಿಗೆ ಸಾರ್ವಜನಿಕರು ದೂರು ನೀಡಬಹುದು. ದೂರು ನೀಡಿದವರ ಹೆಸರನ್ನು ಗೋಪ್ಯವಾಗಿಡುತ್ತೇವೆ ಎನ್ನುತ್ತಾರೆ. (ದೂ:08375–235533 ಅಥವಾ 94808 06229)

***

ಪ್ರಾಮಾಣಿಕ ನೌಕರರು ಹೆದರುವ ಅಗತ್ಯವಿಲ್ಲ. ಬೆದರಿಕೆ, ಹಣದ ಆಮಿಷವೊಡ್ಡುವವರ ವಿರುದ್ಧ ಜಿಲ್ಲಾ ಪೊಲೀಸ್‌ ಕಚೇರಿಗೆ ದೂರು ಸಲ್ಲಿಸಬಹುದು
– ಹನುಮಂತರಾಯ, ಎಸ್ಪಿ, ಹಾವೇರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು