ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸತ್ತ ವ್ಯಕ್ತಿ’ ಹೆಸರಿನಲ್ಲಿ ಕೋರ್ಟ್‌ಗೆ ದಾವೆ !

ರಾಜಿ ಡಿಕ್ರಿ ಪಡೆದು ಜಮೀನು ಅಕ್ರಮ ಮಾರಾಟ ಆರೋಪ: ಠಾಣೆ ಮೆಟ್ಟಿಲೇರಿದ ವೃದ್ಧೆ -ನಾಲ್ವರ ವಿರುದ್ಧ ಎಫ್‌ಐಆರ್
Published 25 ಆಗಸ್ಟ್ 2024, 4:24 IST
Last Updated 25 ಆಗಸ್ಟ್ 2024, 4:24 IST
ಅಕ್ಷರ ಗಾತ್ರ

ಹಾವೇರಿ: ‘ಸವಣೂರು ತಾಲ್ಲೂಕಿನ ಹೂವಿನಶಿಗ್ಲಿ ಗ್ರಾಮದಲ್ಲಿರುವ 2 ಎಕರೆ 16 ಗುಂಟೆ ಜಮೀನು ಅಕ್ರಮ ಮಾರಾಟ’ ಸಂಬಂಧ ಸವಣೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಸತ್ತ ವ್ಯಕ್ತಿಯ ಹೆಸರಿನಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಆರೋಪಿಗಳು, ರಾಜಿ ಡಿಕ್ರಿ ಪಡೆದುಕೊಂಡು ಜಮೀನು ನೋಂದಣಿ ಮಾಡಿಸಿಕೊಂಡಿದ್ದಾರೆ’ ಎಂಬ ಆರೋಪ ವ್ಯಕ್ತವಾಗಿದೆ.

ಗ್ರಾಮದ ಸರ್ವೇ ನಂಬರ್ 161/2ರಲ್ಲಿ 2 ಎಕರೆ 16 ಗುಂಟೆ ಜಮೀನು ಇದ್ದು, ಇದರ ಮಾಲೀಕರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯ ಹಾಗೂ ಉಪ ನೋಂದಣಾಧಿಕಾರಿ ಅವರನ್ನೂ ವಂಚನೆ ಮಾಡಿರುವ ಅನುಮಾನವಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸವಣೂರು ಠಾಣೆ ಪೊಲೀಸರು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

‘ಹಾವೇರಿ ತಾಲ್ಲೂಕಿನ ಹರವಿ ಗ್ರಾಮದ 68 ವರ್ಷದ ವೃದ್ಧೆ ಸಾವಕ್ಕ ತಳವಾರ ಅವರು ದೂರು ನೀಡಿದ್ದಾರೆ. ಹೂವಿನ ಶಿಗ್ಲಿಯ ರಾಮಪ್ಪ ಬಸಪ್ಪ ಕನಕಮ್ಮನವರ ಉರುಫ್ ತಳವಾರ , ಪುಟ್ಟವ್ವ ಯಲ್ಲಪ್ಪ ಕನಕಮ್ಮನವರ, ಗಿರೀಶ ಯಲ್ಲಪ್ಪ ಕನಕಮ್ಮನವರ ಉರುಫ್ ತಳವಾರ ಹಾಗೂ ಪ್ರಕಾಶ ಗುಡದಪ್ಪ ನೀರಲಗಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಸವಣೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಇದೊಂದು ಅಪರೂಪದ ಪ್ರಕರಣ. ಜೊತೆಗೆ, ನ್ಯಾಯಾಲಯದಲ್ಲೂ ಖಾಸಗಿ ಮೊಕದ್ದಮೆ ದಾಖಲಾಗಿದೆ. ಪ್ರಕರಣದ ಎಲ್ಲ ದಾಖಲೆಗಳ ಪರಿಶೀಲನೆ ನಡೆಸಬೇಕಿದೆ. ಬಳಿಕವೇ, ಜಮೀನು ಮಾರಾಟ ಹೇಗಾಯಿತು? ಯಾರಿಗೆಲ್ಲ ವಂಚನೆಯಾಗಿದೆ ? ಎಂಬುದು ತಿಳಿಯಬೇಕಿದೆ’ ಎಂದು ಹೇಳಿದ್ದಾರೆ.

ಮದುವೆಯಾಗದ ಸಹೋದರರ ಜಮೀನು: ‘ದೂರುದಾರ ಸಾವಕ್ಕ ಅವರ ತಂದೆಯಾಗಿದ್ದ ಫಕ್ಕೀರಪ್ಪರಿಗೆ ಸಹೋದರ ಹನುಮಂತಪ್ಪ ಇದ್ದರು. ಫಕ್ಕೀರಪ್ಪ ಅವರಿಗೆ ಸಾವಕ್ಕ ಒಬ್ಬರೇ ಮಗಳು. ಹನುಮಂತಪ್ಪ ಅವರಿಗೆ ಯಲ್ಲಪ್ಪ ಹಾಗೂ ರಾಮಣ್ಣ ಇಬ್ಬರು ಮಕ್ಕಳು. ಇಬ್ಬರೂ ಸಹೋದರರು ಮದುವೆಯಾಗಿರಲಿಲ್ಲ. ಇದರ ನಡುವೆಯೇ ಕೆಲ ವರ್ಷಗಳ ಹಿಂದೆಯೇ ಹನುಮಂತಪ್ಪ ಕುಟುಂಬದ ಎಲ್ಲರೂ ತೀರಿಕೊಂಡಿದ್ದಾರೆ’ ಎಂಬ ಮಾಹಿತಿ ದೂರಿನಲ್ಲಿದೆ.

‘ಹನುಮಂತಪ್ಪ ಅವರಿಗೆ ಯಾರೂ ಇಲ್ಲದಿದ್ದರಿಂದ, ಸಂಬಂಧಿ ಸಾವಕ್ಕ ಅವರೇ ವಾರಸುದಾರರಾಗಿದ್ದರು. ಇವರಿಗೆ 2 ಎಕರೆ 16 ಗುಂಟೆ ಜಮೀನು ಬಂದಿತ್ತು’ ಎಂಬ ಸಂಗತಿ ದೂರಿನಲ್ಲಿದೆ.

ಸುಳ್ಳು ದಾಖಲೆ ಬಳಸಿ ದಾವೆ: ‘ಹನುಮಂತಪ್ಪ ಅವರ ಮಗ ರಾಮಣ್ಣ ಹಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಅವರಿಗೆ ಸೇರಿದ್ದ ಜಮೀನು ತಮ್ಮದಾಗಿಸಿಕೊಂಡು ಮಾರಾಟ ಮಾಡಿ ಹಣ ಗಳಿಸಲು ಆರೋಪಿಗಳು ಸಂಚು ರೂಪಿಸಿದ್ದರು’ ಎಂಬ ಮಾಹಿತಿಯನ್ನು ದೂರಿನಲ್ಲಿ ಬರೆಯಲಾಗಿದೆ.

‘ಮೊದಲ ಆರೋಪಿ ರಾಮಪ್ಪ ಕನಕಮ್ಮನವರ, ‘ನಾನು ಅಸಲಿ ರಾಮಣ್ಣ’ ಎಂಬುದಾಗಿ ಸುಳ್ಳು ವಂಶಾವಳಿಯನ್ನು ಸೃಷ್ಟಿಸಿ ಸವಣೂರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ‘ನಾನು ರಾಮಣ್ಣನ ಪತ್ನಿ’ ಎಂಬುದಾಗಿ ಎರಡನೇ ಆರೋಪಿ ಪುಟ್ಟವ್ವ ತಿಳಿಸಿದ್ದರು. ಜೊತೆಗೆ, ‘ನಾನು ರಾಮಣ್ಣನ ಮಗ’ ಎಂಬುದಾಗಿ ಇನ್ನೊಬ್ಬ ಆರೋಪಿ ಗಿರೀಶ ಹೇಳಿಕೊಂಡಿದ್ದ.’

‘ಜಮೀನು ಹಾಗೂ ಇತರೆ ಸಂಗತಿಗಳಿಗೆ ತಕ್ಕಂತೆ ದಾಖಲೆಗಳನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿ ದಾಖಲೆಗಳ ಪರಿಶೀಲಿಸಿದ್ದ ನ್ಯಾಯಾಲಯ, ರಾಜಿ ಡಿಕ್ರಿ ನೀಡಿತ್ತು. ಅದನ್ನೇ ಬಳಸಿಕೊಂಡು ಆರೋಪಿಗಳು, ಪಹಣಿ ಪತ್ರದಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದರು’ ಎಂಬ ಮಾಹಿತಿ ವೃದ್ಧೆಯ ದೂರಿನಲ್ಲಿದೆ.

ಮಾರಾಟದಿಂದ ಪತ್ತೆ: ‘ಮೃತ ರಾಮಣ್ಣ ಅವರ ಕುಟುಂಬಕ್ಕೆ ಸೇರಿದ್ದ ಹೂವಿನ ಶಿಗ್ಲಿ ಗ್ರಾಮದ 2 ಎಕರೆ 16 ಗುಂಟೆ ಜಮೀನನ್ನು ಆರೋಪಿ ಪ್ರಕಾಶ ನೀರಲಗಿ ಅವರಿಗೆ ಮಾರಾಟ ಮಾಡಲಾಗಿದೆ’ ಎಂಬ ಸಂಗತಿ ದೂರಿನಲ್ಲಿದೆ.

‘ನ್ಯಾಯಾಲಯದ ರಾಜಿ ಡಿಕ್ರಿ, ಪಹಣಿ ಪತ್ರ ಹಾಗೂ ಇತರೆ ದಾಖಲೆಗಳನ್ನು ಬಳಸಿಕೊಂಡು ಉಪ ನೋಂದಣಾಧಿಕಾರಿ ಕಚೇರಿ ಮೂಲಕ ಪ್ರಕಾಶ ಅವರಿಗೆ ಜಮೀನು ಮಾರಲಾಗಿದೆ. ಮೂವರು ಆರೋಪಿಗಳು, ತಾವೇ ಮಾಲೀಕರೆಂದು ಹೇಳಿಕೊಂಡು ಜಮೀನು ಮಾರಾಟ ಮಾಡಿ ಖರೀದಿ ಪತ್ರವನ್ನೂ ಮಾಡಿಸಿದ್ದಾರೆ. ಈ ಮಾರಾಟದ ಸಂಗತಿ ಇತ್ತೀಚೆಗೆ ದೂರುದಾರ ವೃದ್ಧೆಗೆ ಗೊತ್ತಾಗಿದೆ’ ಎಂಬ ಮಾಹಿತಿಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಬಗ್ಗೆ ಪ್ರತಿಕ್ರಿಯೆ ಪಡೆಯಲು ರಾಮಪ್ಪ ಬಸಪ್ಪ ಕನಕಮ್ಮನವರ ಉರುಫ್ ತಳವಾರ ಹಾಗೂ ಇತರರು ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT