ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಣೆಬೆನ್ನೂರು: ರೈತನಿಗೆ ಆದಾಯ ತಂದ ತೈವಾನ್‌ ತಳಿ ಪೇರಲು

ರಾಣೆಬೆನ್ನೂರು ತಾಲ್ಲೂಕು ಸುಣಕಲ್ಲಬಿದರಿ ಗ್ರಾಮದ ಮಂಜಪ್ಪ ರೈತನ ಸಾಧನೆ
ಮುಕ್ತೇಶ ಪಿ. ಕೂರಗುಂದಮಠ
Published 14 ಜೂನ್ 2024, 6:32 IST
Last Updated 14 ಜೂನ್ 2024, 6:32 IST
ಅಕ್ಷರ ಗಾತ್ರ

ರಾಣೆಬೆನ್ನೂರು: ತಾಲ್ಲೂಕಿನ ಸುಣಕಲ್ಲಬಿದರಿ ಗ್ರಾಮದ ರೈತ ಮಂಜಪ್ಪ ಸಿದ್ದಪ್ಪ ಸಿರಿಗೇರಿ ಅವರು ಸಾಂಪ್ರದಾಯಿಕ ಬೆಳೆಗಳಿಂದ ನಷ್ಟ ಅನುಭವಿಸಿ, ಇದೀಗ ತೋಟಗಾರಿಕೆ ಕೃಷಿಯತ್ತ ಮುಖ ಮಾಡಿ ಯಶಸ್ಸು ಕಾಣುತ್ತಿದ್ದಾರೆ.

ಪೇರಲ ಬೆಳೆದು ಅಧಿಕ ಲಾಭ ಪಡೆಯಬಹುದು ಎಂದು ತೋಟಗಾರಿಕೆ ಅಧಿಕಾರಿಗಳು ನೀಡಿದ್ದ ಸಲಹೆ ಅನುಸರಿಸಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ಕಳೆದ ಒಂದು ವರ್ಷದ ಹಿಂದೆ ತೈವಾನ್‌ ಮಾದರಿಯ 515 ಪೇರಲ ಸಸಿಗಳನ್ನು ₹1 ಲಕ್ಷ ಹಣ ಖರ್ಚು ಮಾಡಿ 8 /8 ಅಂತರದಲ್ಲಿ ನರೇಗಾ ಯೋಜನೆಯಡಿ ನಾಟಿ ಮಾಡಿದ್ದಾರೆ.

2023-24ನೇ ಸಾಲಿನ ನರೇಗಾ ಯೋಜನೆಯಡಿ ತೈವಾನ್ ಮಾದರಿಯ ಪೇರಲವನ್ನು ಸಮೃದ್ಧವಾಗಿ ಬೆಳೆದಿದ್ದಾರೆ. ಆರಂಭದಲ್ಲಿ ಒಂದು ಎಕರೆ ಜಮೀನಿನಲ್ಲಿ ಸಮಗ್ರ ಬೇಸಾಯ ಮಾಡಿದ್ದಾರೆ. ಬೆಳ್ಳುಳ್ಳಿ, ಪೇರಲ, ಅಡಕೆ, ತೆಂಗಿನ ಗಿಡ ಹಚ್ಚಿದ್ದಾರೆ. ವಿಯಜಪುರದಿಂದ 515 ಪೇರಲ ಸಸಿಗಳನ್ನು ತಂದು ನೆಟ್ಟಿದ್ದಾರೆ. 10 ಸಸಿಗಳು ಹಾಳಾಗಿವೆ. 8 ಅಡಿ ಅಗಲ ಮತ್ತು ಉದ್ದದ ಅಂತರದಲ್ಲಿ ಪೇರಲ ಸಸಿಗಳನ್ನು ಒಂದು ವರ್ಷದ ಹಿಂದೆ ಹಾಕಿದ್ದಾರೆ. ಒಂದು ವರ್ಷದ ಹಿಂದೆ ನೆಟ್ಟಿದ್ದ ಪೇರಲ ಇದೀಗ ಹಣ್ಣು ಬಿಡಲಾರಂಭಿಸಿದೆ.

ದಿನಕ್ಕೆ 20ರಿಂದ 30 ಕೆಜಿ ಹಣ್ಣು ಮಾರಾಟಕ್ಕೆ ಹೋಗುತ್ತಿದೆ. ರಸ್ತೆ ಪಕ್ಕದಲ್ಲಿಯೇ ಜಮೀನು ಇರುವ ಕಾರಣ ಪೇರಲ ಖರೀದಿಸಲು ಜನ ಜಮೀನಿಗೆ ಬರುತ್ತಿದ್ದಾರೆ. ಪ‍್ರತಿದಿನ ₹1 ಸಾವಿರದಿಂದ ₹1.5 ಸಾವಿರವರೆಗೂ ಹಣ ಗಳಿಸುತ್ತಿದ್ದಾರೆ. ‘ಒಂದು ಎಕರೆಯಿಂದ ಎರಡೇ ವರ್ಷದಲ್ಲಿ ಇಷ್ಟೊಂದು ಆದಾಯ ಪಡೆದಿರುವುದು ಇದೇ ಮೊದಲು. ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಹರಪನಹಳ್ಳಿ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆ.
ವರ್ಷದಲ್ಲಿ ಎರಡು ಬಾರಿ ಫಲ ನೀಡುತ್ತಿದ್ದು ಈಗಾಗಲೇ 60 ಬಾಕ್ಸ್ ಪೇರಲವನ್ನು ಮಾರಾಟ ಮಾಡಲಾಗಿದೆ’ ಎಂದು ರೈತ ಮಂಜಪ್ಪ ಶಿರಿಗೇರಿ ಹಾಗೂ ಆತನ ಪತ್ನಿ ಲಲಿತವ್ವ ಅವರು ಪ್ರಜಾವಾಣಿಗೆ ತಿಳಿಸಿದರು.

‘ಪ್ರತಿ ಬಾಕ್ಸಿಗೆ ₹500 ರೂಪಾಯಿಯಂತೆ ಹೊಲದಲ್ಲಿ ಬಂದು ಮಾರಾಟಗಾರರು ತೆಗೆದುಕೊಂಡು ಹೋಗುತ್ತಾರೆ. ಈಗಾಗಲೇ ₹30 ಸಾವಿರ ಆದಾಯ ಬಂದಿದೆ. ಒಂದು ಬೆಳೆಗೆ ಖರ್ಚು ತೆಗೆದು ₹60ರಿಂದ ₹70 ಸಾವಿರ ಆದಾಯ ಗಳಿಸಲು ಸಾಧ್ಯ. ವರ್ಷಕ್ಕೆ ಎರಡು ಬೆಳೆ ಪೇರಲ ಬಂದರೆ ₹1 ಲಕ್ಷದವರೆಗೆ ಆದಾಯ ಬರುತ್ತದೆ’ ಎಂದರು.

‘ಪೇರಲ ಬೆಳೆ ಸಾಧಾರಣ ಮಣ್ಣು ಹಾಗೂ ಕಡಿಮೆ ನೀರಿನಲ್ಲಿಯೂ ಅತ್ಯಂತ ಸಮೃದ್ಧ ಇಳುವರಿ ಕೊಡಬಲ್ಲದು.  ತೈವಾನ್​ ಪಿಂಕ್ ಪೇರಲ ಹಣ್ಣು ವಿವಿಧ ಕಾಯಿಲೆಗಳಿಗೆ ರಾಮಬಾಣವಾಗಿದೆ. ಬಿಪಿ ಶುಗರ್‌ ರೋಗಕ್ಕೆ ರಾಮಬಾಣ ಇದು. ತಿನ್ನಲು ರುಚಿಕರವಾಗಿದ್ದು, ಸಾವಯುವ ಗೊಬ್ಬರ ಬಳಸಿದ್ದರಿಂದ ಹಣ್ಣುಗಳ ರುಚಿ ಸ್ವಾದಿಷ್ಟವಾಗಿದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿಯ ನರೇಗಾ ಯೋಜನೆಯ ಸಂಯೋಜಕ ದಿಂಗಾಲೇಶ್ವರ ಅಂಗೂರ ಅವರು.

ರೈತರು ಪೇರಲ ಬೆಳೆದು ಉತ್ತಮ ಆದಾಯ ಪಡೆಯಬಹುದು. ಇದಕ್ಕಾಗಿ ಇಲಾಖೆಯಲ್ಲಿ ಅನೇಕ ರೈತ ಪರ ಯೋಜನೆಗಳಿದ್ದು ಸದ್ಬಳಕೆ ಮಾಡಿಕೊಳ್ಳಬೇಕು

-ನೂರಾಹ್ಮದ ಹಲಗೇರಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು

ರೋಗ ಮುಕ್ತ ಪೇರಲ

ಒಂದು ಎಕರೆ ವಿಸ್ತೀರ್ಣಕ್ಕೆ ಬೇಕಾದ ₹5 ಸಾವಿರ ಹಣ ಖರ್ಚು ಮಾಡಿ ಸೋಲಾರ್ ಖರೀದಿಸಿದ್ದಾರೆ. ರಾತ್ರಿಯ ಸಮಯದಲ್ಲಿ ಕಾಯಿ ಕೊರೆಯುವ ಹುಳುನಿಯಂತ್ರಣ ಮಾಡಲು ಪತಂಗ ಆಕರ್ಷಣೀಯ ಬುಟ್ಟಿಯನ್ನು ಅಳವಡಿಸಲಾಗಿದೆ. ಪೇರಲದ ಹಣ್ಣುಗಳು ಯಾವುದೇ ಚುಕ್ಕೆ ಅಥವಾ ಕಾಯಿ ಕೊರಕ ರೋಗದ ಬಾಧೆಯಿಂದ ಪೇರಲ ಗಿಡ ಮತ್ತು ಹಣ್ಣುಗಳು ಮುಕ್ತವಾಗಿವೆ. ಗಿಡಗಳಿಗೆ ಒಂದೂವರೆ ವರ್ಷದವರೆಗೂ ಉತ್ತಮ ನೀರು ಪೋಷಕಾಂಶಗಳ ನಿರ್ವಹಣೆ ಮಾಡಬೇಕು. ಒಂದುವರೆ ವರ್ಷಕ್ಕೆ ಉತ್ತಮ ಗುಣಮಟ್ಟದ ಇಳುವರಿ ದೊರೆಯುತ್ತದೆ. ಒಂದು ಬಾರಿ ಖರ್ಚು ಮಾಡಿ ತೈವಾನ್​ ಪಿಂಕ್ ಸಸಿ ನೆಟ್ಟರೆ 8 ವರ್ಷಗಳ ಕಾಲ ಹಣ್ಣುಗಳು ಬರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT