ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾತರೇ ಕಷ್ಟಗಳಿಗೆ ಎದೆಗುಂದಬೇಡಿ: ನಟ ದರ್ಶನ್‌

ಸಚಿವ ಬಿ.ಸಿ. ಪಾಟೀಲ ಅವರ ರೈತರೊಂದಿಗೆ ಒಂದು ದಿನ
Last Updated 14 ನವೆಂಬರ್ 2021, 13:24 IST
ಅಕ್ಷರ ಗಾತ್ರ

ಚಿನ್ನಮುಳಗುಂದ (ಹಂಸಭಾವಿ): ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ರೈತರು ಆರ್ಥಿಕವಾಗಿ ಸಬಲರಾಗಲು ಪ್ರಯತ್ನಿಸಬೇಕು ಎಂದು ನಟ ದರ್ಶನ್ ಹೇಳಿದರು.

ಇಲ್ಲಿಗೆ ಚಿನ್ನಮುಳಗುಂದ ಗ್ರಾಮದಲ್ಲಿ ಭಾನುವಾರ ಕೃಷಿ ಸಚಿವ ಬಿ.ಸಿ.ಪಾಟೀಲ ಅವರ 66ನೇ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರೈತರ ಬದುಕು ಇಂದು ಅನಾವೃಷ್ಟಿ, ಅತಿವೃಷ್ಟಿ ಹಾಗೂ ಬೆಲೆ ಏರಿಳಿತಗಳಿಗೆ ಸಿಲುಕಿ ದುಸ್ತರವಾಗಿದೆ. ಹೀಗಾಗಿ ರೈತರು ಆತ್ಮಹತ್ಯೆಯಂತ ಕೆಟ್ಟ ನಿರ್ಧಾರಗಳನ್ನುತಗೆದುಕೊಳ್ಳುತಿದ್ದಾರೆ. ಇಂತಹ ನಿರ್ಧಾರಗಳನ್ನು ಬಿಟ್ಟು ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಬೆಳೆಗಳನ್ನು ಬೆಳೆದರೆ ನಷ್ಟಗಳಿಂದ ಹೊರಬರಬಹುದು. ರೈತರು ಕಷ್ಟಗಳಿಗೆ ಹೆದರದೆ ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸುವ ಗಟ್ಟಿತನವನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ ಕೃಷಿ ಸಚಿವನಾದ ಮೇಲೆ ಮೊದಲ ಬಾರಿ ನನ್ನ ತಾಲ್ಲೂಕಿನಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ. ಜೊತೆಗೆ ಕೃಷಿ ಇಲಾಖೆಯ ರಾಯಬಾರಿಯಾಗಿ ನಟ ದರ್ಶನ್ ಭಾಗಿಯಾಗಿರುವುದು ರೈತರಿಗೆ ಸ್ಪೂರ್ತಿ ತಂದಿದೆ. ರೈತರು ಕೃಷಿಯಲ್ಲಿ ಸಮಗ್ರ ಕೃಷಿ ನೀತಿ ಅನುಸರಿಸಿ, ಕೃಷಿಯೊಂದಿಗೆ ಉಪಕಸಬುಗಳನ್ನು ಸಹ ಅಳವಡಿಸಿಕೊಳ್ಳಿ ಎಂದು ಹೇಳಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ದರ್ಶನ್ ನಟನೆಯ ಜೊತೆಗೆ ಕೃಷಿಯಲ್ಲಿ ರೈತರಿಗೆ ಮಾರ್ಗದರ್ಶಕರಾಗಿ ಮುನ್ನುಗ್ಗುತ್ತಿರುವುದು ಹೆಮ್ಮೆಯ ವಿಷಯ. ಅವರು ಇಂದು ರೈತರೊಂದಿಗೆ ಒಂದು ದಿನ ಕಾರ್ಯಕ್ರಮದ ಅಂಗವಾಗಿ ಆಗಮಿಸಿರುವುದು ತಾಲ್ಲೂಕಿನ ರೈತರು ಮತ್ತು ಯುವಕರ ಸಂತಸ ಇಮ್ಮಡಿಯಾಗಿದೆ ಎಂದರು.

ದರ್ಶನ್ ಬರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನೂರಾರು ಮಹಿಳೆಯರು ಕುಂಭಹೊತ್ತು ಮೆರವಣಿಗೆ ಮಾಡಿದರು. ವೀರಗಾಸೆ, ಡೊಳ್ಳು ಕುಣಿತ, ಎತ್ತಿನ ಬಂಡಿ ಹಾಗೂ ವಿವಿಧ ವಾದ್ಯ ಮೇಳಗಳು ಮೆರವಣಿಗೆಯ ಮೂಲಕ ಅದ್ಧೂರಿ ಸ್ವಾಗತ ಮಾಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ದರ್ಶನ್ ಅಭಿಮಾನಿಗಳು ಡಿ ಬಾಸ್, ಡಿ ಬಾಸ್ ಎಂದು ಕೂಗುವ ಮೂಲಕ ನೆಚ್ಚಿನ ನಟನ ಮೇಲಿರುವ ಅಭಿಮಾನ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಸನ್ಮಾನ ಮಾಡಲಾಯಿತು. ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಜೇನು ಸಾಕಾಣಿಕೆ ಕುರಿತು ಪ್ರಾತ್ಯಕ್ಷಿಕೆ, ಪುರುಷರಿಗೆ ಹಾಲು ಕರೆಯುವ ಸ್ಪರ್ಧೆ, ಮಹಿಳೆಯರಿಗೆ ಮಜ್ಜಿಗೆ ಕಡೆಯುವ ಮತ್ತು ಹಿಟ್ಟು ಬೀಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಯುವ ನಾಯಕಿ ಸೃಷ್ಠಿ ಪಾಟೀಲ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಎನ್.ಎಂ. ಈಟೇರ, ಸುಮಿತ್ರಾ ಪಾಟೀಲ. ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಮಹೇಶ ಗುಬ್ಬಿ, ಸುನೀತಾ ಕೊಡ್ಲೇರ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಗುರುಶಾಂತ ಯತ್ತಿನಹಳ್ಳಿ, ಸದಸ್ಯ ಮಹೇಂದ್ರ ಬಡಳ್ಳಿ, ಗ್ರಾಪಂ ಅಧ್ಯಕ್ಷೆ ವಿನೋದಾ ಕೂರೇರ, ಉಪಾಧ್ಯಕ್ಷೆ ಗೌರಮ್ಮ ತೆಂಬದ, ಸದಸ್ಯರಾದ ಸಂಜೀವಯ್ಯ ಕಬ್ಬಿಣಕಂತಿಮಠ, ಮುತ್ತಪ್ಪ ಜಿಲಾಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT