ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ವಾಹನದಲ್ಲೇ ಅಂತಿಮ ಯಾತ್ರೆ!

ಸತ್ತ ಪ್ರಾಣಿ ಹೂಳಲು ಪ್ರತ್ಯೇಕ ಸ್ಥಳವಿಲ್ಲ: ಪ್ರಾಣಿಗಳಿಗೂ ಬೇಕು ಗೌರವದ ವಿದಾಯ
Last Updated 11 ಜನವರಿ 2021, 2:07 IST
ಅಕ್ಷರ ಗಾತ್ರ

ಹಾವೇರಿ: ಸತ್ತ ಪ್ರಾಣಿಗಳನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಜಿಲ್ಲೆಯಲ್ಲಿ ಪ್ರತ್ಯೇಕ ಸ್ಮಶಾನವಿಲ್ಲ. ಹೀಗಾಗಿ ಕಸದ ವಾಹನಗಳಲ್ಲಿ ಸಾಗಿಸಿ, ಘನತ್ಯಾಜ್ಯ ವಿಲೇವಾರಿ ಘಟಕದ ಆವರಣಗಳಲ್ಲೇ ಗುಂಡಿ ತೋಡಿ ಮುಚ್ಚುವ ವ್ಯವಸ್ಥೆ ಜಿಲ್ಲೆಯ ಎಲ್ಲೆಡೆ ಕಂಡು ಬರುತ್ತದೆ.

ಮುದ್ದಿನ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಸತ್ತಾಗ ಅವುಗಳನ್ನು ಅಂತ್ಯಸಂಸ್ಕಾರ ಮಾಡಲು ಜಾಗವಿಲ್ಲದೆ ನಗರ ವಾಸಿಗಳು ಪರದಾಡುತ್ತಾರೆ. ಅಲ್ಪಸ್ವಲ್ಪ ಜಮೀನು, ದೊಡ್ಡ ಕಾಂಪೌಂಡ್‌ ಉಳ್ಳವರು ಅಲ್ಲಿಯೇ ಸ್ಮಾರಕ ನಿರ್ಮಿಸುತ್ತಾರೆ. ಇಲ್ಲದವರು ಪಾಲಿಕೆ, ನಗರಸಭೆ, ಪುರಸಭೆಗೆ ಕರೆ ಮಾಡುತ್ತಾರೆ. ಅವರು ಬಂದು ಕಸದ ರಾಶಿಯಲ್ಲೇ ಅದನ್ನೂ ಹಾಕಿಕೊಂಡು ಹೋಗುತ್ತಾರೆ! ಮತ್ತೆ ಕಸ ವಿಲೇವಾರಿ ಸ್ಥಳದಲ್ಲೇ ಅವು ಕೊಳೆತು ರೋಗಗಳಿಗೆ ದಾರಿ ಮಾಡುವ ಸಾಧ್ಯತೆಯೂ ಇಲ್ಲದಿಲ್ಲ.

ಕೆಲವರು ಮೃತಪಟ್ಟ ಪ್ರಾಣಿಗಳನ್ನು ರಸ್ತೆ ಬದಿ, ಚರಂಡಿ, ಬೇಲಿ, ಹೊಲಗಳ ಬಳಿ ಎಸೆಯುವುದರಿಂದ ಪರಿಸರ ಕಲುಷಿತಗೊಳ್ಳುತ್ತದೆ. ದುರ್ವಾಸನೆಯಿಂದ ಸುತ್ತಮುತ್ತಲಿನ ನಿವಾಸಿಗಳು ನೆಮ್ಮದಿ ಕಳೆದುಕೊಳ್ಳುತ್ತಾರೆ.ನಾಯಿ, ಬೆಕ್ಕು, ಎಮ್ಮೆ, ಆಕಳು, ಹಂದಿ ಸೇರಿದಂತೆ ಸಾಕುಪ್ರಾಣಿಗಳ ಪಾಡು ಈ ರೀತಿ ಇದ್ದರೆ, ಸಾಕುವವರೇ ಇಲ್ಲದ ಬೀದಿ ನಾಯಿಗಳಿಗೆ ಹೀಗೆ ಮರುಗುವವರೂ ಇರುವುದಿಲ್ಲ.

ಕಂಗೆಟ್ಟ ಮಕ್ಕಳು

‘ಹಾವೇರಿ ನಗರದ ನಾಗೇಂದ್ರನಮಟ್ಟಿ– ಹೊಸನಗರ ರೈಲ್ವೆ ಕೆಳಸೇತುವೆ ಸುತ್ತ ಸತ್ತ ಕೋಳಿ, ಹಂದಿ, ನಾಯಿಗಳನ್ನು ತಂದು ಬಿಸಾಡುತ್ತಾರೆ. ಕೋಳಿ ಅಂಗಡಿಯವರು ಕೋಳಿ ಪುಕ್ಕ ಮತ್ತು ಇತರ ತ್ಯಾಜ್ಯಗಳನ್ನು ತಂದು ಎಸೆಯುವುದರಿಂದ ದುರ್ನಾತ ಬೀರುತ್ತಿದೆ. ಸಮೀಪದಲ್ಲೇ ಇರುವ ಉರ್ದು ಪ್ರೌಢಶಾಲೆಯ‌ ಮಕ್ಕಳು ಮತ್ತು ಶಿಕ್ಷಕರ ಪಾಡು ಹೇಳತೀರದು. ಅಲ್ಲಿ ಓಡಾಡುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಈ ಬಗ್ಗೆ ನಗರಸಭೆ ಸಿಬ್ಬಂದಿ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ನಿವಾಸಿಗಳು ಆಗ್ರಹಿಸುತ್ತಾರೆ.

ರೋಗದ ಭೀತಿ

ಹಿರೇಕೆರೂರ ಪಟ್ಟಣದಲ್ಲಿ ಅಥವಾ ಹಳ್ಳಿಗಳಲ್ಲಿ ಪ್ರಾಣಿಗಳು ಸಾವಿಗೀಡಾದರೆ ರಸ್ತೆ ಬದಿಯಲ್ಲಿ ಎಸೆಯುವುದು, ಹಾಳು ಬಿದ್ದಿರುವ ಗುಂಡಿಯಲ್ಲಿ ಎಸೆದು ಹೋಗುವುದು ಸಾಮಾನ್ಯವಾಗಿ ಕಾಣಬಹುದು. ಇದರಿಂದ ಪರಿಸರ ಮಾಲಿನ್ಯದ ಜತೆಗೆ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತದೆ.‌‌

‘ಪಟ್ಟಣದಲ್ಲಿ ಪ್ರಾಣಿಗಳು ಸಾವಿಗೀಡಾದರೆ ಪಟ್ಟಣ ಪಂಚಾಯ್ತಿ ಗಮನಕ್ಕೆ ತರಬೇಕು. ಅವುಗಳನ್ನು ಸೂಕ್ತ ರೀತಿ
ಯಲ್ಲಿ ವಿಲೇವಾರಿ ಮಾಡಲು ಪಟ್ಟಣ ಪಂಚಾಯ್ತಿ ಕ್ರಮ ಕೈಗೊಳ್ಳುತ್ತದೆ. ಬಸರೀ
ಹಳ್ಳಿ ಗ್ರಾಮದ ಸಮೀಪ ನಿರ್ಮಿಸಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪ್ರಾಣಿಗಳ ಮೃತದೇಹಗಳನ್ನು ಆಳವಾಗಿ ತಗ್ಗು ತೆಗೆದು ಫಿನೈಲ್‌ ಸೇರಿದಂತೆ ಅಗತ್ಯ ರಾಸಾಯನಿಕ ವಸ್ತುಗಳನ್ನು ಬಳಸಿ ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿ ಮಾಡುತ್ತೇವೆ’ ಎಂದು ಹಿರೇಕೆರೂರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ ತಿಳಿಸಿದರು.

ಪ್ರಾಣಿಗಳಿಗೆ ಅಂತ್ಯಸಂಸ್ಕಾರ

ಹಾನಗಲ್ ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ಸತ್ತು ಬೀಳುವ ಹಂದಿ, ನಾಯಿ, ಬೆಕ್ಕು ಕೆಲವೊಮ್ಮೆ ಬಿಡಾಡಿ ದನಗಳ ಮೃತದೇಹವನ್ನು ಪುರಸಭೆ ವತಿಯಿಂದ ವಿಲೇವಾರಿ ಮಾಡಲಾಗುತ್ತದೆ. ಪಟ್ಟಣ
ದಲ್ಲಿ ಸಾಕು ಪ್ರಾಣಿಗಳಿಗಾಗಿ ಸ್ಮಶಾನವಿಲ್ಲ. ಇಲ್ಲಿ ಪ್ರಾಣಿದಯಾ ಸಂಘ–ಸಂಸ್ಥೆಗಳೂ ಇಲ್ಲ. ಹಾಗಂತ ಮನೆಯಲ್ಲಿ ಸಾಕಿದ ಬೆಕ್ಕು, ನಾಯಿ ಸತ್ತಾಗ ಅವುಗಳನ್ನು ಎಲ್ಲೆಂದರಲ್ಲಿ ಬೀಸಾಕುವ ಪ್ರವೃತ್ತಿ ಇಲ್ಲ. ತಮ್ಮ ಮನೆ ಹಿತ್ತಲು, ಅಂಗಳದಲ್ಲಿ ಹೂತು ಸಂಸ್ಕಾರ ಮಾಡುವ ಪದ್ಧತಿ ಇದೆ.

ಬೀದಿ ನಾಯಿಗಳು, ಹಂದಿ, ಬಿಡಾಡಿ ದನಗಳು ಸತ್ತುಬಿದ್ದ ಬಗ್ಗೆ ನಿವಾಸಿಗಳಿಂದ ಬಂದ ಮಾಹಿತಿ ಮೇರೆಗೆ ಪುರಸಭೆ ಪೌರಕಾರ್ಮಿಕರು ಸ್ಥಳಕ್ಕೆ ಬಂದು ಕಸ ತುಂಬುವ ವಾಹನದಲ್ಲಿ ವಿಲೇವಾರಿ ಮಾಡುತ್ತಾರೆ. ಸತ್ತ ಹಂದಿಗಳ ವಿಲೇವಾರಿ ವೈಜ್ಞಾನಿಕವಾಗಿ ನಡೆಯುತ್ತಿಲ್ಲ ಎಂಬುದು ನಿವಾಸಿಗಳ ವಾದ.

‘10 ವರ್ಷದಿಂದ ಮುದ್ದು ಮಾಡಿ ಸಾಕಿದ್ದ ನಾಯಿ ಸತ್ತ ಬಳಿಕ ಮನೆ ಸಮೀಪದಲ್ಲೇ ಅಂತ್ಯಸಂಸ್ಕಾರ ಮಾಡಲಾಗಿದೆ. ನಾಯಿಗೆ ಲಕ್ಕಿ ಎಂದು ಹೆಸರಿಡಲಾಗಿತ್ತು. ಪ್ರತಿ ವರ್ಷ ಲಕ್ಕಿ ತಿಥಿ ಆಚರಿಸುತ್ತೇವೆ’ ಎಂದು ಇಲ್ಲಿನ ವಿವೇಕಾನಂದ ನಗರ ನಿವಾಸಿ ಮಧುಮತಿ ಪೂಜಾರ ತಿಳಿಸಿದರು.

ಮಾರ್ಗ ಸೂಚಿ ಅಗತ್ಯವಿದೆ

‘ಸವಣೂರ ಪಟ್ಟಣದಲ್ಲಿ ಯಾವುದೇ ಪ್ರಾಣಿಗಳು ಸತ್ತುಬಿದ್ದರೆ, ಪುರಸಭೆ ಸಿಬ್ಬಂದಿ ತೆಗೆದುಕೊಂಡು ಹೋಗಿ ಪಟ್ಟಣದ ಹೊರವಲಯದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಗುಂಡಿ ತೆಗೆದು ಹೂಳುವ ವ್ಯವಸ್ಥೆ ಮಾಡಲಾಗಿದೆ’ ಎಂದು ಮುಖ್ಯಾಧಿಕಾರಿ ಕೃಷ್ಣಾ ಕಟ್ಟಿಮನಿ ತಿಳಿಸಿದರು.

ಪ್ರಾಣಿಗಳು ಸತ್ತರೆ ಎಲ್ಲೆಂದರಲ್ಲಿ ಎಸೆಯುವುದು ಯಾವ ನ್ಯಾಯ. ಪ್ರಾಣಿಗಳು ಸತ್ತರೆ ನಿರ್ದಿಷ್ಟ ಸ್ಥಳದಲ್ಲಿ ಹೂಳಲು ಪ್ರತಿಯೊಂದು ಗ್ರಾಮ ಪಂಚಾಯ್ತಿ, ಪುರಸಭೆ, ನಗರಸಭೆಗಳು ಕ್ರಮ ಕೈಗೊಳ್ಳಬೇಕು. ಒಂದು ಮಾರ್ಗಸೂಚಿಯನ್ನು ಹೊರಡಿಸಬೇಕು ಎನ್ನುವುದು ಪ್ರಾಣಿಪ್ರಿಯರ ಅಹವಾಲಾಗಿದೆ.

ವಾಯುವಿಹಾರಿಗಳಿಗೆ ದುರ್ವಾಸನೆಯ ಕಿರಿಕಿರಿ

‘ಬ್ಯಾಡಗಿ ತಾಲ್ಲೂಕಿನಲ್ಲಿ ಸಾಕು ಪ್ರಾಣಿಗಳು ಸತ್ತಾಗ ಅವುಗಳ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ಬೆಟ್ಟದ ಮಲ್ಲೇಶ್ವರಬಡಾವಣೆಗೆ ಹೋಗುವ ರಸ್ತೆ, ರಟ್ಟಿಹಳ್ಳಿ ರಸ್ತೆ, ರಾಮಗೊಂಡನಹಳ್ಳಿ ರಸ್ತೆ ಬದಿಗೆ ಸತ್ತ ಪ್ರಾಣಿಗಳ ದೇಹವನ್ನು ಎಸೆಯಲಾಗುತ್ತದೆ. ಇದರಿಂದ ವಾಯುವಿಹಾರಕ್ಕೆ ತೆರಳುವವರು ಕಿರಿಕಿರಿ ಅನುಭವಿಸುವಂತಾಗಿದೆ’ ಎಂದು ಮಂಜುನಾಥ ಬೋವಿ ಆರೋಪಿಸಿದರು.

‘ಸಾಕು ಪ್ರಾಣಿಗಳು ಸತ್ತ ಬಗ್ಗೆ ಮಾಹಿತಿ ನೀಡಿದರೆ ಕಸದ ವಾಹನದಲ್ಲಿ ತಂದು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತೋಡಿರುವ ಗುಂಡಿಯಲ್ಲಿ ದಫನ್‌ ಮಾಡಲಾಗುತ್ತದೆ.ಕೆಲವರು ಮಾಹಿತಿ ನೀಡದೆ ರಸ್ತೆ ಬದಿಗೆ ಎಸೆಯುತ್ತಾರೆ’ ಎನ್ನುತ್ತಾರೆ ಬ್ಯಾಡಗಿ ಪುರಸಭೆಯ ಸ್ಯಾನಿಟರಿ ಅಧಿಕಾರಿಹರೀಶ.

ಪ್ರತ್ಯೇಕ ಸ್ಮಶಾನವಿಲ್ಲ...

ರಾಣೆಬೆನ್ನೂರು ನಗರಸಭೆ ವ್ಯಾಪ್ತಿಯಲ್ಲಿ ಸತ್ತ ಪ್ರಾಣಿಗಳನ್ನು ಹೂಳಲು ಪ್ರತ್ಯೇಕ ಶ್ಮಶಾನವಿಲ್ಲ. ನಗರದ ಹೊರವಲಯದ ಹುಲ್ಲತ್ತಿ ತಾಂಡಾದ ಬಳಿ 28 ಎಕರೆ ಘನತ್ಯಾಜ್ಯ ನಿರ್ವಹಣಾ ಘಟಕವಿದೆ. ಅಲ್ಲಿ ಆಳವಾಗಿ ಗುಂಡಿ ತೆಗೆದು ಮೃತ ಪ್ರಾಣಿಗಳನ್ನು ಹೂಳಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ರೈತರು ಸಾಕಿದ ಜಾನುವಾರುಗಳು ಸಿಡಿಲು, ಮಳೆ, ಗಾಳಿಯಿಂದ ಆಕಸ್ಮಿಕವಾಗಿ ಸಾವನ್ನಪ್ಪಿದಾಗ ರೈತರಿಂದ ದೂರುಗಳು ಬರುತ್ತವೆ. ಹೆದ್ದಾರಿ, ನಗರದ ಪ್ರಮುಖ ರಸ್ತೆ, ವಾರ್ಡ್‌ಗಳಲ್ಲಿ ವಾಹನ ಅಪಘಾತ ಅಥವಾ ರೋಗಕ್ಕೀಡಾಗಿ, ಇನ್ಯಾವುದೋ ಕಾರಣಕ್ಕೆ ಬೀದಿ ಆಕಳು, ಹೋರಿ, ಹಂದಿ, ನಾಯಿ, ಬೆಕ್ಕು ಸಾವನ್ನಪ್ಪಿದ ಬಗ್ಗೆ ನಗರಸಭೆ ಸಹಾಯವಾಣಿ 08373-266475 ದೂರವಾಣಿಗೆ ಅಥವಾ ಸಂಬಂಧಿಸಿದ ಅಧಿಕಾರಿಗಳಿಗೆ ದೂರುಗಳು ಬರುತ್ತವೆ.

ವಿಲೇವಾರಿ ಮಾಲೀಕರ ಹೊಣೆ!

‘ರಟ್ಟೀಹಳ್ಳಿ ಪಟ್ಟಣದಲ್ಲಿ ಸಾಕು ಪ್ರಾಣಿಗಳು ಸತ್ತರೆ ಅವುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಸಾಕು ಪ್ರಾಣಿಗಳ ಮಾಲೀಕರ ಹೊಣೆ’ ಎಂದು ಪಟ್ಟಣ ಪಂಚಾಯಿತಿ ನಿರ್ದೇಶನ ನೀಡಿದೆ. ಆದರೆ, ಕೆಲವು ಮಾಲೀಕರುಕಸದ ತೊಟ್ಟಿಯಲ್ಲಿ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳ ಮೃತ ದೇಹವನ್ನು ಎಸೆದಿರುವುದು ಕಂಡು ಬರುತ್ತದೆ.

ಅಪಘಾತದಲ್ಲಿ ರಸ್ತೆ ಬದಿಯಲ್ಲಿ ಸತ್ತು ಬಿದ್ದ ಪ್ರಾಣಿಗಳನ್ನು ಪೌರಕಾರ್ಮಿಕರಿಂದ ಪಟ್ಟಣದ ಊರ ಹೊರಗಿನ ಸರ್ಕಾರಿ ಬಯಲು ಪ್ರದೇಶದಲ್ಲಿ ಗುಂಡಿ ತೆಗೆದು ಮಣ್ಣು ಮುಚ್ಚುವ ಕೆಲಸ ನಡೆಯುತ್ತದೆ. ಹಂದಿಗಳು ಸತ್ತರೆ ಅವುಗಳ ಮಾಲೀಕರು ತೆಗೆದುಕೊಂಡು ಹೋಗುತ್ತಾರೆ.

‘ಸತ್ತ ಪ್ರಾಣಿಗಳನ್ನು ಹೂಳಲು ಸೂಕ್ತ ಜಾಗವನ್ನು ಗುರುತಿಸುವ ಕೆಲಸವನ್ನು ಶೀಘ್ರ ಮಾಡಲಾಗುವುದು’ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಉಮೇಶ ಗುಡ್ಡದ ತಿಳಿಸಿದರು.

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಕೆ.ಎಚ್.ನಾಯಕ, ಪ್ರಮೀಳಾ ಹುನಗುಂದ, ಮುಕ್ತೇಶ್ವರ ಪಿ. ಕೂರಗುಂದಮಠ, ಮಾರುತಿ ಪೇಟಕರ, ಗಣೇಶಗೌಡ ಎಂ. ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT