ಹಾವೇರಿಗೆ ಹೆಣ್ಣು ಕೊಟ್ಟ ಗಾಂಧಿ!

7
ಮಹಾತ್ಮ ಗಾಂಧಿ ಜೊತೆ ಅನನ್ಯ ಸಂಬಂಧ ಹೊಂದಿದ ಹಾವೇರಿ

ಹಾವೇರಿಗೆ ಹೆಣ್ಣು ಕೊಟ್ಟ ಗಾಂಧಿ!

Published:
Updated:
Deccan Herald

ಹಾವೇರಿ: ಮಹಾತ್ಮ ಗಾಂಧಿ ಹಾಗೂ ಹಾವೇರಿಗೆ ತತ್ವ ಸಿದ್ಧಾಂತಗಳ ಜೊತೆಗೆ ಅನನ್ಯವಾದ ಕೌಟುಂಬಿಕ ಸಂಬಂಧವೂ ಬೆಸೆದುಕೊಂಡಿದೆ. ಗಾಂಧಿ–ಕಸ್ತೂರಬಾ ದಂಪತಿ, ತಮ್ಮ ಮುದ್ದಿನ ದತ್ತು ಪುತ್ರಿ ವೀರಮ್ಮಳನ್ನು ಇಲ್ಲಿನ ಸಂಗೂರಿನ ಕರಿಯಪ್ಪ ಯರ್ರೇಶೀಮೆ ಅವರಿಗೆ ವಿವಾಹ ಮಾಡಿಕೊಟ್ಟಿದ್ದರು.

ರಕ್ತ ಸಂಬಂಧಗಳಲ್ಲಿ ಗಾಂಧೀಜಿಗೆ ಅನೇಕ ಅಳಿಯಂದಿರು ಇದ್ದರೂ, ಅವರ ಮುದ್ದಿನ ದತ್ತು ಪುತ್ರಿಯನ್ನು ಇಲ್ಲಿಗೆ ಕೊಟ್ಟಿದ್ದರು. ಹೀಗಾಗಿ ಎಲ್ಲರೂ ಅವರನ್ನು ‘ರಾಷ್ಟ್ರಪಿತ’ ಎಂದರೆ, ‘ಮಾವ’ ಎನ್ನುವ ಹಕ್ಕು ಹಾವೇರಿಗೆ ಒಲಿದು ಬಂದಿದೆ!

ಶಿರಸಿಯ ದಲಿತ ಕುಟುಂಬದಲ್ಲಿ ಜನಿಸಿದ್ದ ವೀರಮ್ಮ (26 ಮೇ 1924 ರಿಂದ 12 ಮೇ 1992), ಐದು ವರ್ಷದ ಬಾಲಕಿಯಿದ್ದಾಗ ಗಾಂಧಿ ದಂಪತಿ ಕರೆದೊಯ್ದಿದ್ದು, ಸಾಬರಮತಿ ಆಶ್ರಮದಲ್ಲಿ ಬೆಳೆದಿದ್ದರು. ಆಶ್ರಮಕ್ಕೆ ಬರುತ್ತಿದ್ದ ನೆಹರೂ ಪುತ್ರಿ ಇಂದಿರಾ (ಮಾಜಿ ಪ್ರಧಾನಿ) ಸೇರಿದಂತೆ ಅನೇಕ ಸಮಕಾಲೀನರ ಒಡನಾಟವು ಅವರಿಗಿತ್ತು.

ಇತ್ತ ಗಾಂಧಿ ಪ್ರಭಾವದಿಂದ ಹೋರಾಟಕ್ಕೆ ಧುಮುಕ್ಕಿದ್ದ, ‘ಹರಿಜನ ಸೇವಕ ಸಂಘ’ದಲ್ಲಿ ಶ್ರಮಿಸುತ್ತಿದ್ದ ಸಂಗೂರ ಕರಿಯಪ್ಪ (1 ನವೆಂಬರ್ 1910ರಿಂದ 20 ಜುಲೈ1981) ಅವರನ್ನು ಕರೆಸಿಕೊಂಡ ಗಾಂಧಿ ದಂಪತಿ, ಮದುವೆ ಕುರಿತು ಪ್ರಸ್ತಾಪಿಸಿದ್ದರು.  ಅವರ ಇಚ್ಛೆಯಂತೆ ಕರಿಯಪ್ಪ 1940ರಲ್ಲಿ ವೀರಮ್ಮರನ್ನು ವಿವಾಹವಾಗಿದ್ದರು. ಆ ಬಳಿಕ ಸಂಗೂರಿಗೆ ಬಂದು ನೆಲೆಸಿದ್ದರು. ಕರಿಯಪ್ಪನವರು ಹೋರಾಟದಲ್ಲಿ ಒಂದು ಕೈ ಕಳೆದುಕೊಂಡರು. ಸೆರೆವಾಸವೂ ಅನುಭವಿಸಿದ್ದರು. ಈ ಕುರಿತು ಪುತ್ರಿಯರಾದ ಚಿಕ್ಕಮ್ಮಾ ಯರ್ರೇಶೀಮೆ ಹಾಗೂ ಯಶೋಧಾ ಯರ್ರೇಶೀಮೆ ನೆನಪಿಸಿಕೊಳ್ಳುತ್ತಾರೆ.

ಅಪೂರ್ವ ಸಂಗಮ

1934ರ ಮಾರ್ಚ್‌ 1ರ ಸಂಜೆ ಮಹಾತ್ಮ ಗಾಂಧಿ ಹಾವೇರಿಗೆ ಭೇಟಿ ನೀಡಿದ್ದರು. ಅಂದು ಸಂಜೆ ಇಲ್ಲಿನ ಹೊಂಡದ ಮಠದಲ್ಲಿ ಚಿತ್ರದುರ್ಗ ಮುರುಘರಾಜೇಂದ್ರ ಮಠದ 17ನೇ ಪೀಠಾಧಿಪತಿ ಜಯದೇವ ಮುರುಘರಾಜೇಂದ್ರ ಶರಣರ ಜೊತೆ ಮಾತುಕತೆ ನಡೆಸಿದ್ದರು.
ಆಗ, ‘ದೇಶದ ಪ್ರಗತಿಗೆ ಅಸ್ಪೃಶ್ಯತೆ ಒಂದು ಶಾಪ. ಈ ಬಗ್ಗೆ ಸಮಾಜದಲ್ಲಿ ಸರಿಯಾಗಿ ಅರಿವು ಮೂಡಿಸಬೇಕಾಗಿದೆ’ ಎಂದು ಗಾಂಧೀಜಿ ಪ್ರಸ್ತಾಪಿಸಿದ್ದರು. ಅದಕ್ಕೆ ಸ್ವಾಮೀಜಿ, ‘ತಾವು ಕೈಗೊಂಡ ಈ ಯೋಜನೆಯು ತುಂಬಾ ಶ್ಲಾಘನೀಯ. 800 ವರ್ಷಗಳ ಹಿಂದೆಯೇ ಬಸವಾದಿ ಶರಣರು ಈ ತಾರತಮ್ಯ ಭಾವನೆಯನ್ನು ಬೇರು ಸಹಿತ ಕೀಳಲು ಕ್ರಿಯಾತ್ಮಕವಾಗಿ ಪ್ರಯತ್ನಿಸಿದ್ದಾರೆ. ಅದನ್ನು ಮುಂದುವರಿಸುವುದು ಸೂಕ್ತವೆಂದು ಕಾಣುತ್ತದೆ’ ಎಂದು ಪ್ರತಿಕ್ರಿಯಿಸಿದ್ದರು.
ಇದರಿಂದ ಸಂತಸಗೊಂಡ ಗಾಂಧೀಜಿ, ‘12ನೇ ಶತಮಾನದಲ್ಲಿ ಬಸವಣ್ಣನವರು ಅಸ್ಪೃಶ್ಯತಾ ನಿವಾರಣೆಗೆ ಪ್ರಯತ್ನಿಸಿದ ವಿಷಯ ತಿಳಿದು ಸಂತೋಷವಾಯಿತು’ ಎಂದು ಹೇಳಿದ್ದರು.

ಈ ಬಗ್ಗೆ ‘ಶ್ರೀ ಜಯದೇವ ಲೀಲೆ’ಯ ಹದಿನೆಂಟನೆಯ ಸಂಧಿಯಲ್ಲೂ ಉಲ್ಲೇಖವಿದೆ ಎಂದು ಹೊಸಮಠದ ಚರಮೂರ್ತಿ ಬಸವಶಾಂತಲಿಂಗ ಸ್ವಾಮೀಜಿ ವಿವರಿಸಿದರು.

ಹಾವೇರಿ ಪ್ರವಾಸ

ಅಂದು, ಮಧ್ಯಾಹ್ನ ಶಿರಸಿಯಿಂದ ಮೋಟಾರು ಕಾರಿನಲ್ಲಿ ಹೊರಟ ಗಾಂಧೀಜಿ, ಅಕ್ಕಿಆಲೂರ ಮೂಲಕ ಬಂದಿದ್ದರು. ಹಾನಗಲ್‌ (ಕ್ರಾಸ್), ಅಕ್ಕಿಆಲೂರ, ದೇವಿಹೊಸೂರಿನಲ್ಲಿ ಸ್ವಾಗತಿಸಿದ ಜನರು, ‘ಹರಿಜನೋದ್ಧಾರ ನಿಧಿ’ಗೆ ಹಣ ನೀಡಿದ್ದರು. ಸಂಜೆ ಹಾವೇರಿಯಲ್ಲಿ ಶರಣರ ಭೇಟಿಯಾಗಿತ್ತು. ಶರಣರೂ ₹ 100 ನೀಡಿದ್ದರು. 

ಅಲ್ಲಿಂದ ನಗರದ ಮುನ್ಸಿಪಲ್‌ ಹೈಸ್ಕೂಲ್‌ಗೆ ಬಂದ ಗಾಂಧೀಜಿ, ‘ಹರಿಜನರಿಗೆ ಮುನ್ಸಿಪಲ್‌ ಹೈಸ್ಕೂಲ್‌ ರಾತ್ರಿ ಶಾಲೆ ತೆರೆದಿದೆ’ ಎಂದು ಘೋಷಿಸಿದ್ದರು. ಬಳಿಕ ಮುನ್ಸಿಪಲ್‌ ಧರ್ಮಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಅನಂತರ ಮೋಟೆಬೆನ್ನೂರು, ಬ್ಯಾಡಗಿಗೆ ಹೋಗಿ ಸಭೆ ನಡೆಸಿದ್ದರು. ಹಾವೇರಿಗೆ ವಾಪಸ್‌ ಬಂದು ಸ್ವಾತಂತ್ರ್ಯ ಹೋರಾಟಗಾರರ ಸಭೆ ನಡೆಸಿ, ಇಲ್ಲಿಯೇ ತಂಗಿದ್ದರು. ಮರುದಿನ ರಾಣೆಬೆನ್ನೂರು ರೈಲು ನಿಲ್ದಾಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು ಎಂದು ಸಂಶೋಧಕರು ತಿಳಿಸುತ್ತಾರೆ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !