ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ: ವಿಘ್ನೇಶ್ವರ ಪ್ರತಿಷ್ಠಾಪನೆಗೆ ಕೊರೊನಾ ವಿಘ್ನ

ಆರ್ಥಿಕ ಸಂಕಷ್ಟದಲ್ಲಿ ಮೂರ್ತಿ ತಯಾರಕರು: ಕುನ್ನೂರ ಗಣೇಶ ಮೂರ್ತಿಗಳು ರಾಜ್ಯದಾದ್ಯಂತ ಪ್ರಸಿದ್ಧಿ
Last Updated 20 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಶಿಗ್ಗಾವಿ:ಸಾರ್ವಜನಿಕ ಸ್ಥಳಗಳಲ್ಲಿ ವಿಘ್ನೇಶ್ವರನ ಪ್ರತಿಷ್ಠಾಪನೆಗೂ ಈ ಬಾರಿ ಕೊರೊನಾ ವಿಘ್ನವಾಗಿದೆ. ಹೀಗಾಗಿ ಪ್ರತಿ ವರ್ಷ ಗಣೇಶನ ಮೂರ್ತಿ ತಯಾರಿಸುವ ಮೂಲಕ ಬದುಕು ಸಾಗಿಸುತ್ತಿರುವ ಗಣೇಶ ಮೂರ್ತಿ ತಯಾರಿಸುವ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಮೂರು ತಲೆಮಾರಿನಿಂದ ತಾಲ್ಲೂಕಿನ ಕುನ್ನೂರ ಗ್ರಾಮದ ಗಣೇಶ ಮೂರ್ತಿಗಳು ಇಡೀ ರಾಜ್ಯದಲ್ಲಿಯೇ ಖ್ಯಾತಿ ಪಡೆದಿದ್ದು, ಅಲ್ಲಿಂದ ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ತುಮಕೂರು, ಗದಗ ಸೇರಿದಂತೆ ಹೊರ ರಾಜ್ಯಗಳಿಗೂ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿತು.

ದೊಡ್ಡ ಗಣೇಶ, ಸಣ್ಣ ಗಣೇಶ ಮೂರ್ತಿಗಳನ್ನು ಬಹು ಆಕರ್ಷಕವಾಗಿ ಇಲ್ಲಿ ತಯಾರಿಸುವುದರಿಂದ ಪ್ರತಿ ವರ್ಷ ಉತ್ತಮ ಬೇಡಿಕೆ ಬರುತ್ತಿತ್ತು. ಆದರೆ ಕೊರೊನಾದ ಕರಿನೆರಳಿಗೆ ಸಿಲುಕಿ ಇಡೀ ಉದ್ಯೋಗವೇ ಅತಂತ್ರವಾಗಿದೆ.

ಜಿಲ್ಲಾಧಿಕಾರಿ ಅವರು ಕೋವಿಡ್‌ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬಾರದು. ಮನೆಗಳಲ್ಲೇ ಗಣೇಶನನ್ನು ಪ್ರತಿಷ್ಠಾಪಿಸಿ ಸರಳವಾಗಿ ಆಚರಣೆ ಮಾಡಬೇಕು ಎಂದು ಆದೇಶ ನೀಡಿರುವ ಹಿನ್ನೆಲೆಯಲ್ಲಿದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ಈ ಬಾರಿ ತಯಾರಿಸಲು ಸಾಧ್ಯವಾಗುತ್ತಿಲ್ಲ.

‘ಎರಡು ವರ್ಷಗಳಿಂದ ಕೊರೊನಾ ಸೋಂಕು ಮತ್ತು ಲಾಕ್‌ಡೌನ್‌ ಕಾರಣದಿಂದ ₹3ರಿಂದ ₹4 ಲಕ್ಷ ನಷ್ಟವಾಗಿದೆ. ಮನೆ ಬಳಕೆಗಾಗಿ ಸುಮಾರು ಎರಡು ಸಾವಿರ ಸಣ್ಣ ಗಣೇಶಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇವೆ’ ಎಂದು ತಾಲ್ಲೂಕಿನ ಕುನ್ನೂರ ಗ್ರಾಮದ ಗಣೇಶ ಮೂರ್ತಿ ಕಲಾವಿದ ಚಂದ್ರಕಾಂತ ಚಿತ್ರಗಾರ ಸಮಸ್ಯೆ ತೋಡಿಕೊಂಡರು.

‘ವರ್ಷವಿಡೀ ಕುಟುಂಬದ ಸದಸ್ಯರೆಲ್ಲ ದುಡಿದರೂ ಜೀವನ ನಿರ್ವಹಣೆಯೇ ಕಷ್ಟಕರವಾಗಿದೆ. ಕೋವಿಡ್‌ ಸಂಕಷ್ಟದ ಸ್ಥಿತಿಯಲ್ಲಿ ಸರ್ಕಾರ ಗಣೇಶ ಮೂರ್ತಿ ಕಲಾವಿದರಿಗೆ ಯಾವುದೇ ನೆರವು ನೀಡಿಲ್ಲ. ಸಾರ್ವಜನಿಕ ಸ್ಥಳದಲ್ಲಿ, ಹೊರಾಂಗಣದಲ್ಲಿ, ವೇದಿಕೆಗಳನ್ನು ನಿರ್ಮಿಸಿ ಪ್ರತಿಷ್ಠಾನೆ ಮಾಡದಂತೆ ಆದೇಶ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದುಗಣೇಶ ಮೂರ್ತಿ ಕಲಾವಿದರು ನೋವು ತೋಡಿಕೊಂಡರು.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಮೂರ್ತಿ ಕಲಾವಿದರು, ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಮತ್ತು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು. ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ ಹಾಗೂ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಶಾಂತಿ, ಸೌರ್ಹಾದತೆಯಿಂದ ಸರಳವಾಗಿ ಹಬ್ಬವನ್ನು ಆಚರಿಸಬೇಕು. ಸದ್ಯದಲ್ಲಿ ಗಣೇಶ ಮೂರ್ತಿ ಪ್ರತಿಷಾಪಿಸುವ ಎಲ್ಲ ಸಮಿತಿಗಳ ಪದಾಧಿಕಾರಿಗಳ ಸಭೆ ಕರೆದು ಸರ್ಕಾರದ ಮಾರ್ಗಸೂಚಿಗಳನ್ನು ತಿಳಿಸಲಾಗುತ್ತದೆ ಎಂದು ತಹಶೀಲ್ದಾರ್ ಮಂಜುನಾಥ ಮುನ್ನೋಳ್ಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT