ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ | ಕದರಮಂಡಲಗಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ಶ್ರಮ

Published 19 ನವೆಂಬರ್ 2023, 4:53 IST
Last Updated 19 ನವೆಂಬರ್ 2023, 4:53 IST
ಅಕ್ಷರ ಗಾತ್ರ

ಬ್ಯಾಡಗಿ: ಯುವಕರು ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ತಾಲ್ಲೂಕಿನ ಸುಕ್ಷೇತ್ರ ಕದರಮಂಡಲಗಿ ಗ್ರಾಮದಲ್ಲಿ ₹ 1ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕಟ್ಟಡವೇ ಸಾಕ್ಷಿಯಾಗಿದೆ.

ದೇಶದ ಉದ್ದಗಲಕ್ಕೂ ಹರಿದು ಹಂಚಿ ಹೋಗಿದ್ದ ಹಳೆಯ ವಿದ್ಯಾರ್ಥಿಗಳು ಕೋವಿಡ್‌ ಸಂದರ್ಭದಲ್ಲಿ ಗ್ರಾಮಕ್ಕೆ ವಾಪಸ್‌ ಆಗಿದ್ದ ಅವರು ತಾವು ಕಲಿತ ಶಾಲೆಯ ಕಟ್ಟಡ ಶಿಥಿಗೊಂಡಿರುವುದನ್ನು ಕಣ್ಣಾರೆ ಕಂಡಿದ್ದಾರೆ. ಅಂದೇ ಸಂಕಲ್ಪ ಮಾಡಿಕೊಂಡಿದ್ದ ಅವರು ‘ಹಳೆಯ ವಿದ್ಯಾರ್ಥಿಗಳ ಸಂಘ‘ವನ್ನು ಹುಟ್ಟು ಹಾಕಿದರು.

ಈ ಶಾಲೆಯಲ್ಲಿ ಕಲಿತು ವಿದೇಶದಲ್ಲಿ ನೆಲೆಸಿರುವ, ಆರ್‌ಟಿಒ, ಕೆಎಸ್‌ಆರ್‌ಟಿಸಿ, ಶಿಕ್ಷಣ, ಪೊಲೀಸ್‌ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಕೆಲಸ ಮಾಡುವ ಹಾಗೂ ಬೀಜೋತ್ಪಾದಕ ಕಂಪನಿಗಳನ್ನು ಸ್ಥಾಪಿಸಿಕೊಂಡ 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಗುಂಪು ರಚಿಸಿಕೊಂಡು ನೆರವು ಪಡೆದುಕೊಳ್ಳಲಾಗಿದೆ.

ರವೀಂದ್ರ ಪಟ್ಟಣಶೆಟ್ಟಿ ಹಾಗೂ ಹನುಮಂತಪ್ಪ ಅಜ್ಜಮ್ಮನವರ ತಲಾ ಒಂದೊಂದು ವರ್ಗ ಕೋಣೆ ನಿರ್ಮಾಣದ ವೆಚ್ಚದ ವಾಗ್ದಾದ ಇಂದು ಆರು ಕೊಠಡಿಗಳ ನಿರ್ಮಾಣದತ್ತ ಸಾಗಿದೆ. ಗ್ರೀನ್‌ ಬೋರ್ಡ್‌ ಹಾಗೂ ಕಂಪ್ಯೂಟರ್‌ ವ್ಯವಸ್ಥೆಯೊಂದಿಗೆ ಖಾಸಗಿ ಶಾಲೆ ಮೀರಿಸುವ ಸೌಲಭ್ಯಕ್ಕೆ ನೆರವು ಹರಿದು ಬಂದಿದೆ.

ನ.27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆ ವಹಿಸುವರು. ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿ ಸಮ್ಮುಖ ವಹಿಸುವರು ಎಂದು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕನ್ನಪ್ಪ ಛತ್ರದ ಮಾಹಿತಿ ನೀಡಿದರು.

‘ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚನ್ನಬಸಯ್ಯ ಸಾಲಿಮಠ, ಶಂಕರಗೌಡ ಹೊಸಗೌಡ್ರು, ರಮೇಶ ಶಿರಗೂರ, ಮಾಲತೇಶ ಬಡಿಗೇರ, ನಾಗರಾಜ್ ಬಗಾಡೆ, ದಿವಂಗತ ರವೀಂದ್ರ.ಕೆ.ಪಟ್ಟಣಶೆಟ್ಟಿ, ಪ್ರಕಾಶ ಹುಳಬುತ್ತಿ, ಪ್ರಕಾಶ ಪಟ್ಟಣಶೆಟ್ಟಿ ಅವರ ಸಹಕಾರದೊಂದಿಗೆ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ದೇಣಿಗೆ ಸಂಗ್ರಹಿಸುವ ಕೆಲಸಕ್ಕೆ ಮುಂದಾದೆವು. ಸಾಮಾಜಿಕ ಜಾಲತಾಣದ ಮೂಲಕ ಶಾಲೆಯ ದುಃಸ್ಥಿತಿ ಬಗ್ಗೆ ಹಂಚಿಕೊಂಡಿದ್ದೆವು’ ಎಂದು ಹಳೆಯ ವಿದ್ಯಾರ್ಥಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷ ಶಿವರಾಜ ಉಜನಿ ಮಾಹಿತಿ ನೀಡಿದರು.

ಹಳೆಯ ವಿದ್ಯಾರ್ಥಿಗಳು ಸಂಘ ಕಟ್ಟಿಕೊಂಡು ಶಾಲೆಯ ಅಭಿವೃದ್ಧಿಗೆ ಶ್ರಮಿಸಿರುವುದು ಮತ್ತೊಬ್ಬರಿಗೆ ಮಾದರಿಯಾಗಿದೆ. ಶಾಲೆಯ ಮೇಲಿನ ಪ್ರೀತಿ ಮೆಚ್ಚುವಂತಹದು.
ಬಸವರಾಜ ಶಿವಣ್ಣನವರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT