ಬುಧವಾರ, ಡಿಸೆಂಬರ್ 8, 2021
25 °C
ಹಾನಗಲ್ ಉಪ ಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಸವಾಲು

ಒಂದೇ ವೇದಿಕೆಯಲ್ಲಿ ಸತ್ಯ ಗೊತ್ತಾಗಲಿ: ಸಿಎಂಗೆ ಸಿದ್ದರಾಮಯ್ಯ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಕ್ಕಿಆಲೂರ: ‘ಮಿಸ್ಟರ್ ಬಸವರಾಜ್ ಬೊಮ್ಮಾಯಿ ಒಂದೇ ವೇದಿಕೆಗೆ ನೀವೂ ಬನ್ನಿ, ನಾನೂ ಬರುತ್ತೇನೆ. ಹಾನಗಲ್ ಕ್ಷೇತ್ರದಲ್ಲಿ ನನ್ನ ಸರ್ಕಾರ ಇದ್ದಾಗ ಎಷ್ಟು ಕೆಲಸ ಆಗಿವೆ? ಎಷ್ಟು ಅನುದಾನ ಕೊಟ್ಟಿದ್ದೇನೆ ಎನ್ನುವುದನ್ನೆಲ್ಲಾ ಹೇಳುತ್ತೇನೆ. ನಿಮ್ಮ ಕೊಡುಗೆ ಏನು ಎನ್ನುವುದನ್ನು ನೀವೂ ಹೇಳಿ. ಜನರಿಗೆ ಸತ್ಯ ಗೊತ್ತಾಗಲಿ’ ಎಂದು ಶಾಸಕ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ನರೇಗಲ್, ಆಡೂರು, ಅಕ್ಕಿಆಲೂರು ಮತ್ತು ಹಿರೂರು ಗ್ರಾಮಗಳಲ್ಲಿ ಶುಕ್ರವಾರ ನಡೆದ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು.

‘ನಾನು ಹಾನಗಲ್ ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಟ್ಟಿದ್ದೇನೆ ಎನ್ನುವುದನ್ನು ಇಲ್ಲಿನ ಜನರೇ ಹೇಳುತ್ತಾರೆ. 2018 ರಲ್ಲಿ ಉಂಟಾದ ಪ್ರವಾಹದಿಂದ ಕಂಚಿನೆಗಳೂರು ಗ್ರಾಮದ ಒಡ್ಡು ಒಡೆದು 3 ವರ್ಷ ಕಳೆದರೂ ಸರಿಪಡಿಸಲು ನಿಮ್ಮಿಂದ ಆಗಿಲ್ವಲ್ರೀ, ಸುಳ್ಳು ಹೇಳೋಕೆ ನಾಚಿಕೆ ಆಗಲ್ವಾ’ ಎಂದು ಪ್ರಶ್ನಿಸಿದರು.

‘ಲಾಭದಲ್ಲಿದ್ದ ಸಂಗೂರು ಶುಗರ್ ಫ್ಯಾಕ್ಟರಿ ನಷ್ಟದ ಹಾದಿಗೆ ಹೋಗಿದ್ದು ಏಕೆ? ಎನ್ನುವುದನ್ನು ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ ಹೇಳಬೇಕು.  ಫ್ಯಾಕ್ಟರಿ ಅಷ್ಟೆ ಅಲ್ಲದೇ ಗೌರಾಪುರ ಗುಡ್ಡವನ್ನೂ ಸಹ ನುಂಗಿ ನೀರು ಕುಡಿದ ಶಿವರಾಜ್ ಸಜ್ಜನರ್ ಸಜ್ಜನ ಅಲ್ಲ; ದುರ್ಜನ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಇಂಥವರು ಗೆದ್ದರೆ ಅನುದಾನ ಸದ್ಭಳಕೆಯಾಗಲು ಸಾಧ್ಯವೇ? ಕ್ಷೇತ್ರ ಅಭಿವೃದ್ಧಿ ಹೊಂದುವುದು ಸಾಧ್ಯವೇ? ಇಂಥ ನುಂಗಣ್ಣರಿಂದ ಕ್ಷೇತ್ರ ಉಳಿಯುತ್ತಾ’ ಎಂದು ಪ್ರಶ್ನಿಸಿದರು.

‘ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟೋದು ಎಷ್ಟು ಸತ್ಯವೋ ಹಾನಗಲ್ ಉಪ ಚುನಾವಣೆಯಲ್ಲಿ ಶ್ರೀನಿವಾಸ್ ಮಾನೆ ಗೆಲ್ಲೋದು ಅಷ್ಟೇ ಸತ್ಯ’ ಎಂದು ಸಿದ್ದರಾಮಯ್ಯ ಹೇಳಿದರು.

ದಾಖಲೆ ಪ್ರದರ್ಶಿಸಿದ ಸಿಎಂ

ಹಾನಗಲ್: ಹಾನಗಲ್ ಕ್ಷೇತ್ರದಲ್ಲಿ ಬಡವರಿಗೆ ಸೂರು ಒದಗಿಸಿಕೊಡಲು 7,500 ಮನೆಗಳನ್ನು ಮಂಜೂರು ಮಾಡಿ ಆದೇಶಿಸಲಾಗಿದೆ ಎಂದು ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ದಾಖಲೆಗಳನ್ನು ವೇದಿಕೆಯಿಂದಲೇ ಪ್ರದರ್ಶಿಸಿದರು.

ತಾಲ್ಲೂಕಿನ ಬೆಳಗಾಲಪೇಟೆ ಗ್ರಾಮದಲ್ಲಿ ಶುಕ್ರವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನಾವು ಬರೀ ಮಾತನಾಡುವವರಲ್ಲ. ಕೆಲಸ ಮಾಡಿ ತೋರಿಸುವವರು’ ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು.

‘ತಮ್ಮ ಅವಧಿಯ ಕೊನೆಯ ಹಂತದಲ್ಲಿ ಸಿದ್ದರಾಮಯ್ಯ 15 ಲಕ್ಷ ಮನೆಗಳನ್ನು ಘೋಷಣೆ ಮಾಡಿದ್ದರು. ಆದರೆ ಅನುದಾನ ಇಡಲಿಲ್ಲ. ಘೋಷಿಸಿದ ಯೋಜನೆಯನ್ನು ಪೂರ್ಣಗೊಳಿಸಿದ್ದರೆ, ಅದು ಸಾಧನೆಯಾಗುತ್ತಿತ್ತು’ ಎಂದು ಕುಟುಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು