ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಅಪಘಾತ: ಏಳು ತಿಂಗಳಿನಲ್ಲಿ 192 ಸಾವು

ಹೆಲ್ಮೆಟ್‌ ರಹಿತ ಸವಾರಿ, ಜನರ ಪ್ರಾಣಕ್ಕೆ ಕುತ್ತು
Published 7 ಆಗಸ್ಟ್ 2024, 5:12 IST
Last Updated 7 ಆಗಸ್ಟ್ 2024, 5:12 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂಚಾರ ನಿಯಮ ಉಲ್ಲಂಘನೆಯಿಂದಾಗಿ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರನ್ನೇ ನಂಬಿಕೊಂಡಿರುವ ಕುಟುಂಬಗಳು ಜೀವನಪೂರ್ತಿ ಯಾತನೆ ಅನುಭವಿಸುತ್ತಿವೆ.

ಜಿಲ್ಲೆಯಲ್ಲಿ ಜನವರಿ 1ರಿಂದ ಜುಲೈ 31ರವರೆಗೆ 489 ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ 192 ಮಂದಿ ಮೃತಪಟ್ಟಿದ್ದು, 766 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಬೈಕ್‌ ಸವಾರರು ಹಾಗೂ ಹಿಂಬದಿ ಸವಾರರ ಸಂಖ್ಯೆ ಹೆಚ್ಚಿದೆ.

18 ವರ್ಷದಿಂದ 30 ವರ್ಷ ವಯಸ್ಸಿನೊಳಗಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ವ್ಯಕ್ತಿಗಳ ಪೈಕಿ, ಕೆಲವರು ಇಂದಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಶಾಶ್ವತ ಅಂಗವಿಕಲರಾಗಿದ್ದಾರೆ.

ಜಿಲ್ಲೆಯ ಠಾಣೆಗಳ ಪೈಕಿ ಹಲಗೇರಿ ಠಾಣೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ. ಇಲ್ಲಿ, 48 ಅಪಘಾತಗಳಲ್ಲಿ 24 ಮಂದಿ ಮೃತಪಟ್ಟಿದ್ದಾರೆ. ಹುಲಗೂರು ಠಾಣೆ ವ್ಯಾಪ್ತಿಯಲ್ಲಿ 7 ಅಪಘಾತ ಸಂಭವಿಸಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಇಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ.

ಕಳೆದ 2023ರ ಜನವರಿಯಿಂದ ಜುಲೈವರೆಗೆ 459 ಅಪಘಾತಗಳು ಸಂಭವಿಸಿದ್ದವು. 169 ಮಂದಿ ಮೃತಪಟ್ಟು, 770 ಮಂದಿ ಗಾಯಗೊಂಡಿದ್ದರು. ಆದರೆ, 2024ರಲ್ಲಿ ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.

ಹೆಲ್ಮೆಟ್ ರಹಿತ ಸವಾರಿ, ಅತಿ ವೇಗದ ಚಾಲನೆ, ಮದ್ಯ ಕುಡಿದು ಚಾಲನೆ ಸೇರಿದಂತೆ ಹಲವು ಸಂಚಾರ ನಿಯಮ ಉಲ್ಲಂಘನೆ ಕಾರಣದಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

‘ಅಪಘಾತದಲ್ಲಿ ಮೃತಪಟ್ಟವರ ಪೈಕಿ ಬೈಕ್‌ ಸವಾರರು ಹಾಗೂ ಹಿಂಬದಿ ಸವಾರರು ಹೆಚ್ಚಿದ್ದಾರೆ. ಹೆಲ್ಮೆಟ್‌ ಧರಿಸದಿರುವುದೇ ಇದಕ್ಕೆ ಪ್ರಮುಖ ಕಾರಣ. ಸವಾರ ಹಾಗೂ ಹಿಂಬದಿ ಸವಾರರು ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಹಲವರು ಹೆಲ್ಮೆಟ್ ಧರಿಸದಿರುವುದು ಕಂಡುಬರುತ್ತಿದೆ’ ಎಂದು ಜಿಲ್ಲಾ ಎಸ್‌ಪಿ ಅಂಶುಕುಮಾರ್ ಹೇಳಿದರು.

‘ಹೆಲ್ಮೆಟ್ ಧರಿಸದ ಸವಾರರು ಹಾಗೂ ಹಿಂಬದಿ ಸವಾರರಿಗೆ ವಿಶೇಷ ಕಾರ್ಯಾಚರಣೆ ಮೂಲಕ ದಂಡ ವಿಧಿಸಲಾಗುತ್ತಿದೆ. ಇದರಿಂದಲೂ ಹಲವರು ಎಚ್ಚೆತ್ತುಕೊಳ್ಳುತ್ತಿಲ್ಲ. ಸವಾರರ ನಿರ್ಲಕ್ಷ್ಯದಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು, ಪ್ರಾಣಗಳು ಹೋಗುತ್ತಿದೆ. ಇದರಿಂದ ಅವರ ಕುಟುಂಬದವರು ಜೀವನಪೂರ್ತಿ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ’ ಎಂದು ತಿಳಿಸಿದರು.

ಅತಿ ವೇಗದ ಚಾಲನೆಯಿಂದ 13 ಸಾವು

ಗುಂಡೇನಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೂನ್ 28ರಂದು ಲಾರಿ ಹಾಗೂ ಟೆಂಪೊ ಟ್ರಾವೆಲರ್ ನಡುವೆ ಸಂಭವಿಸಿದ್ದ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದರು. ಇದರ ತನಿಖೆ ಕೈಗೊಂಡ ಪೊಲೀಸರು ‘ಅತಿ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ’ ಎಂಬುದನ್ನು ಪತ್ತೆ ಮಾಡಿದ್ದಾರೆ. ಈ ಅಪಘಾತದಿಂದ ಎಚ್ಚೆತ್ತ ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಅತಿ ವೇಗದಲ್ಲಿ ಚಾಲನೆ ಮಾಡುವವರನ್ನು ವಿಶೇಷ ಕ್ಯಾಮೆರಾ ಮೂಲಕ ಪತ್ತೆ ಮಾಡುತ್ತಿರುವ ಪೊಲೀಸರು ದಂಡ ವಿಧಿಸುತ್ತಿದ್ದಾರೆ.

ಬೈಕ್ ಸವಾರರು ಹಾಗೂ ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಿಂದ ಅಪಘಾತಗಳ ಪ್ರಮಾಣ ತಗ್ಗಿಸಬಹುದು.
ಅಂಶುಕುಮಾರ್, ಜಿಲ್ಲಾ ಎಸ್‌ಪಿ
ಹಾವೇರಿ ಜಿಲ್ಲೆಯ ಗುಂಡೇನಹಳ್ಳಿ ಕ್ರಾಸ್‌ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಜಖಂಗೊಂಡಿದ್ದ ಲಾರಿ ಹಾಗೂ ಟೆಂಪೊ ಟ್ರಾವೆಲರ್
ಹಾವೇರಿ ಜಿಲ್ಲೆಯ ಗುಂಡೇನಹಳ್ಳಿ ಕ್ರಾಸ್‌ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಜಖಂಗೊಂಡಿದ್ದ ಲಾರಿ ಹಾಗೂ ಟೆಂಪೊ ಟ್ರಾವೆಲರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT