ಹಾವೇರಿ: ಇಲ್ಲಿಯ ವರದಾಹಳ್ಳಿಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಸುಕಿನಲ್ಲಿ ಬಸ್ಸೊಂದು ಉರುಳಿಬಿದ್ದು ಅಪಘಾತ ಸಂಭವಿಸಿದ್ದು, 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
‘ಖಾಸಗಿ ಕಂಪನಿಯ ಬಸ್, ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಗೋವಾಗೆ ಹೊರಟಿತ್ತು. ಚಾಲಕ, ನಿರ್ಲಕ್ಷ್ಯ ಹಾಗೂ ಅತೀವೇಗದಲ್ಲಿ ಬಸ್ ಚಲಾಯಿಸಿದ್ದ. ಇದರಿಂದಾಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಸ್ ಉರುಳಿಬಿದ್ದಿದೆ. ಬಸ್‌ನಲ್ಲಿದ್ದ 15 ಪ್ರಯಾಣಿಕರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕೆಲ ಪ್ರಯಾಣಿಕರು ತೀವ್ರ ಗಾಯಗೊಂಡಿದ್ದಾರೆ. ಉಳಿದವರಿಗೆ ಸಣ್ಣ–ಪುಟ್ಟ ಗಾಯಗಳಾಗಿವೆ. ಪ್ರಾಣಕ್ಕೆ ಅಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ’ ಎಂದು ತಿಳಿಸಿದರು.
‘ನಸುಕಿನ ಜಾವದಲ್ಲಿ ಚಾಲಕ, ನಿದ್ದೆಯ ಮಂಪರಿನಲ್ಲಿದ್ದ. ರಾಷ್ಟ್ರೀಯ ಹೆದ್ದಾರಿಯಲ್ಲಿ ಎತ್ತರದ ರಸ್ತೆಯಲ್ಲಿ ಹೊರಟಿದ್ದ ಬಸ್, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ನಂತರ, ಪಕ್ಕದಲ್ಲಿದ್ದ ಸರ್ವೀಸ್ ರಸ್ತೆಗೆ ಉರುಳಿಬಿದ್ದಿತ್ತು. ಇದರಿಂದಾಗಿ ಬಸ್ ಭಾಗಶಃ ಜಖಂಗೊಂಡಿದೆ. ಅಪಘಾತ ಕಂಡ ಸ್ಥಳೀಯರು, ಠಾಣೆ ಹಾಗೂ ಆಂಬುಲೆನ್ಸ್‌ಗೆ ಕರೆ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದರು. ಅಪಘಾತ ಸಂಬಂಧ ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದರು.