ಹಾವೇರಿ: ಏಲಕ್ಕಿ ಕಂಪಿನ ನಾಡು ಹಾವೇರಿಯಲ್ಲಿ ತಯಾರಿಸುವ ಏಲಕ್ಕಿ ಮಾಲೆಗಳಿಗೆ ರಾಜ್ಯ–ದೇಶ–ವಿದೇಶಗಳಲ್ಲಿ ಬೇಡಿಕೆಯಿದೆ. ಪ್ರಸ್ತುತ ದಿನಗಳಲ್ಲಿ ಗುಣಮಟ್ಟದ ಏಲಕ್ಕಿ ಇಳುವರಿ ಕುಸಿತಗೊಂಡಿದ್ದು, ಮಾಲೆಗಳ ಕೊರತೆ ಉಂಟಾಗಿದೆ.

ನಗರದಲ್ಲಿ ತಯಾರಿಸುವ ಏಲಕ್ಕಿಯ ವಿಶೇಷ ಮಾಲೆಗಳಿಗೆ ಉತ್ತಮ ಮಾರುಕಟ್ಟೆಯಿದೆ. ಅಂದ–ಚೆಂದ ಹಾಗೂ ಸುವಾಸನೆಯಿಂದಲೇ ಜನರ ಮೆಚ್ಚುಗೆ ಗಳಿಸುವ ಮಾಲೆಗಳಿಗೆ ಬೇಡಿಕೆಯೂ ಹೆಚ್ಚಿದೆ. ಆದರೆ, ಈಗ ನಿಗದಿಯಷ್ಟು ಏಲಕ್ಕಿ ಬೆಳೆ ಲಭ್ಯವಾಗದಿದ್ದರಿಂದ ಮಾಲೆಗಳ ತಯಾರಿಕೆಗೂ ಹಿನ್ನೆಡೆ ಉಂಟಾಗಿದೆ. ಅಸಲಿ ಏಲಕ್ಕಿ ಮಾಲೆಗಳ ಜಾಗದಲ್ಲಿ ಪ್ಲಾಸ್ಟಿಕ್ ಏಲಕ್ಕಿ ಮಾಲೆಗಳು ಮಾರುಕಟ್ಟೆ ಪ್ರವೇಶಿಸಿವೆ.

ಹಾವೇರಿಯ ಚಂದ್ರಪಟ್ಟಣ ರಸ್ತೆಯ ಪಟವೇಗಾರ ಸಮುದಾಯದ ಮೂರು ಕುಟುಂಬಗಳು ಹಲವು ದಶಕಗಳಿಂದ ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಿದ್ದಾರೆ. ಮಾಲೆಗಳ ತಯಾರಿಕೆಗಾಗಿ ಪಟವೇಗಾರ ಕುಟುಂಬಕ್ಕೆ ರಾಜ್ಯ ಸರ್ಕಾರದ ಪ್ರಶಸ್ತಿಗೂ ಸಂದಿದೆ. ಗ್ರಾಮದ ಸಣ್ಣ ಕಾರ್ಯಕ್ರಮ, ಜಾತ್ರೆಯಿಂದ ಹಿಡಿದು ವಿಧಾನಸೌಧ–ರಾಷ್ಟ್ರಪತಿ ಭವನದವರೆಗೂ ಏಲಕ್ಕಿ ಮಾಲೆಗಳು ತಲುಪಿವೆ.

ನಗರದಲ್ಲಿರುವ ಏಲಕ್ಕಿ ಮಾಲೆ ತಯಾರಕರು, 8 ಎಂಎಂ ಅಳತೆಯ ಏಲಕ್ಕಿಗಳನ್ನು ಮಾತ್ರ ಮಾಲೆ ತಯಾರಿಕೆ ಬಳಸುತ್ತಿದ್ದಾರೆ. ಸಕಲೇಶಪುರ, ಗುಡಿ ನಾಯಕನೂರಿನಲ್ಲಿ ಇಂಥ ಏಲಕ್ಕಿಗಳನ್ನು ಬೆಳೆಯಲಾಗುತ್ತದೆ. ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿಯೂ 8 ಎಂಎಂ ಅಳತೆಯ ಏಲಕ್ಕಿ ಸಿಗುತ್ತದೆ. ಆದರೆ, ಈಗ ಅಲ್ಲೆಲ್ಲ ಏಲಕ್ಕಿ ಬೆಳೆಯ ಇಳುವರಿ ಕುಂಠಿತಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಶೇ 60ರಿಂದ ಶೇ 70ರಷ್ಟು ಏಲಕ್ಕಿ ಕೊರತೆ ಕಂಡುಬಂದಿದೆ.

ಏಲಕ್ಕಿ ಕೊರತೆ ಇರುವುದರಿಂದ, ಲಭ್ಯವಿರುವ ಏಲಕ್ಕಿಯ ಬೆಲೆಯೂ ಹೆಚ್ಚಾಗಿದೆ. 2025ರ ಫೆಬ್ರುವರಿಯಲ್ಲಿ ಪ್ರತಿ ಕೆ.ಜಿ.ಗೆ ₹ 2,400 ದರವಿತ್ತು. ಈಗ ₹ 3,500ರಿಂದ ₹ 4,200ವರೆಗೂ ದರವಾಗಿದೆ. ಗುಣಮಟ್ಟದಲ್ಲಿ ರಾಜಿಯಾಗದ ಕುಟುಂಬದವರು, ಹೆಚ್ಚು ಹಣ ಕೊಟ್ಟಾದರೂ ಸೂಕ್ತ ಏಲಕ್ಕಿಯನ್ನು ತಂದು ಮಾಲೆ ಸಿದ್ಧಪಡಿಸುತ್ತಿದ್ದಾರೆ. ಆದರೆ, ಅವರ ಬೇಡಿಕೆಗೆ ತಕ್ಕಷ್ಟು ಏಲಕ್ಕಿ ದೊರೆಯುತ್ತಿಲ್ಲ.

ಏಲಕ್ಕಿ ಇಳುವರಿ ಕುಂಠಿತಗೊಂಡಿದ್ದರಿಂದ, ಪ್ಲಾಸ್ಟಿಕ್ ಮಾಲೆಗಳನ್ನು ಹೆಚ್ಚಾಗಿ ಮಾರುತ್ತಿದ್ದಾರೆ. ಏಲಕ್ಕಿ ಮಾಲೆಗಳ ಖರೀದಿಗಾಗಿ ಬೇಡಿಕೆ ಬಂದರೆ, ಮೊದಲಿಗೆ ಪ್ಲಾಸ್ಟಿಕ್ ಮಾಲೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡುತ್ತಾರೆ. ಅಂತಿಮವಾಗಿ ಏಲಕ್ಕಿ ಮಾಲೆಗಳೇ ಬೇಕು ಎಂದು ಗ್ರಾಹಕರು ಹಠ ಹಿಡಿದರೆ, ಅವರಿಗೆ ಮಾತ್ರ ಅಸಲಿ ಏಲಕ್ಕಿ ಮಾಲೆಗಳನ್ನು ಒದಗಿಸುತ್ತಿದ್ದಾರೆ.

2 ಎಳೆಯಿಂದ 21 ಎಳೆಯವರೆಗಿನ ಏಲಕ್ಕಿ ಮಾಲೆಗಳಿಗೆ ₹ 150ರಿಂದ ₹ 25,000ವರೆಗೆ ಬೆಲೆಯಿದೆ. ಏಲಕ್ಕಿ ದರ ಏರಿಕೆಯಾದರೂ ಮಾಲೆಗಳ ದರ ಮಾತ್ರ ಒಂದೇ ರೀತಿಯಲ್ಲಿದೆ. ಏಲಕ್ಕಿ ದರ ಇಳಿಕೆಯಾದರೆ ಮಾತ್ರ ನಮಗೆ ಲಾಭವೆಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

‘ನಮಗೆ ಪ್ರತಿ ತಿಂಗಳು ಒಂದು ಕ್ವಿಂಟಲ್ ಏಲಕ್ಕಿ ಬೇಕು. ಅದನ್ನು ಖರೀದಿಸಲು ಸಕಲೇಶಪುರ, ತಮಿಳುನಾಡು ಹಾಗೂ ಕೇರಳಕ್ಕೆ ಹೋಗಿ ಬರುತ್ತೇವೆ. ಆದರೆ, ಫೆಬ್ರುವರಿ ನಂತರ ನಮ್ಮ ಬೇಡಿಕೆಗೆ ತಕ್ಕಷ್ಟು ಏಲಕ್ಕಿ ಸಿಗುತ್ತಿಲ್ಲ. ಇದರಿಂದಾಗಿ ಮಾಲೆಗಳ ಸಂಖ್ಯೆಯೂ ಕಡಿಮೆಯಾಗಿದೆ. ಗ್ರಾಹಕರ ಬೇಡಿಕೆಗೆ ತಕ್ಕಷ್ಟು ಏಲಕ್ಕಿ ಮಾಲೆ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಮಾಲೆ ತಯಾರಕ ಹೈದರಲಿ ಪಟವೇಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಏಲಕ್ಕಿ ಖರೀದಿಗಾಗಿ ರೈತರು ಹಾಗೂ ವ್ಯಾಪಾರಿಗಳ ಬಳಿ ದುಂಬಾಲು ಬೀಳುತ್ತಿದ್ದೇವೆ. ಆದರೆ, ಗುಣಮಟ್ಟದ ಏಲಕ್ಕಿ ಸಿಗುತ್ತಿಲ್ಲ. ಕೇಳಿದಷ್ಟು ಹಣ ನೀಡಲು ಸಿದ್ಧರಿದ್ದರೂ ಏಲಕ್ಕಿ ಲಭ್ಯವಿಲ್ಲ’ ಎಂದು ಹೇಳಿದರು.

‘ನಮ್ಮ ಕುಟುಂಬದ 11 ಮಂದಿ ಹಾಗೂ ಇತರೆ 34 ಮಂದಿ ಏಲಕ್ಕಿ ಮಾಲೆ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದೇವೆ. 34 ಮಂದಿಯೂ ತಮ್ಮ ಮನೆಯಲ್ಲಿಯೇ ಕುಳಿತು ಏಲಕ್ಕಿ ಮಾಲೆಗಳನ್ನು ಸಿದ್ಧಪಡಿಸಿ ಕೊಡುತ್ತಿದ್ದಾರೆ. ನಾವು ಅದಕ್ಕೆ ಅಂತಿಮ ಸ್ಪರ್ಶ ನೀಡಿ ಗ್ರಾಹಕರಿಗೆ ಮಾರುತ್ತಿದ್ದೇವೆ. ಈಗ ಏಲಕ್ಕಿ ಕೊರತೆ ಇರುವುದರಿಂದ, ಹಲವರಿಗೆ ಕೆಲಸವೂ ಇಲ್ಲದಂತಾಗಿದೆ’ ಎಂದು ತಿಳಿಸಿದರು.

‘ಏಲಕ್ಕಿ ಮಾಲೆಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಬೇಡಿಕೆಗೆ ತಕ್ಕಷ್ಟು ಮಾಲೆಗಳನ್ನು ಸಿದ್ಧಪಡಿಸಲು ಆಗುತ್ತಿಲ್ಲ. ಏಲಕ್ಕಿ ಮಾಲೆಗಳು ಬೇಕು ಎಂದು ಬರುವ ಗ್ರಾಹಕರಿಗೆ ಪರ್ಯಾಯ ಮಾಲೆಗಳನ್ನು ನೀಡುತ್ತಿದ್ದೇವೆ. ಕೆಲವರು, ಪಟ್ಟು ಹಿಡಿದು ಏಲಕ್ಕಿ ಮಾಲೆ ಕೊಂಡೊಯ್ಯುತ್ತಾರೆ. ಲಭ್ಯವಿರುವ ಮಾಲೆಗಳನ್ನೇ ಪರಿಚಯಸ್ಥ ಗ್ರಾಹಕರಿಗೆ ನೀಡುತ್ತಿದ್ದೇವೆ’ ಎಂದು ಹೇಳಿದರು.

‘ಜಾತ್ರೆ, ಸಮಾವೇಶ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿಯೂ ಏಲಕ್ಕಿ ಮಾಲೆ ಬಳಸುತ್ತಾರೆ. ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟ್ರಪತಿಯವರೆಗೂ ಈ ಮಾಲೆ ತಲುಪಿದೆ. ಏಲಕ್ಕಿ ಜೊತೆಯಲ್ಲಿ ರೇಷ್ಮೆ ಉಂಡೆ, ಮುತ್ತು, ಪ್ಲಾಸ್ಟಿಕ್ ಪೈಪ್ ಮತ್ತು ಅಲಂಕಾರಿಕ ಸಾಮಗ್ರಿಗಳೂ ಇರುತ್ತವೆ’ ಎಂದು ತಿಳಿಸಿದರು.

ಏಲಕ್ಕಿ ಇಳುವರಿ ತೀರಾ ಕಡಿಮೆಯಾಗಿದೆ. 1 ಕ್ವಿಂಟಲ್ ಏಲಕ್ಕಿಗಾಗಿ ಬೇಡಿಕೆ ಸಲ್ಲಿಸಿದರೆ ಕೇವಲ 10 ಕೆ.ಜಿ.ಯಿಂದ 15 ಕೆ.ಜಿ. ಮಾತ್ರ ಸಿಗುತ್ತಿದೆ
ಹೈದರಲಿ ಪಟವೇಗಾರ ಏಲಕ್ಕಿ ಮಾಲೆ ತಯಾರಕ

‘ಮಾಲೆಗೆ ಬಾರದ ಸ್ಥಳೀಯ ಏಲಕ್ಕಿ’

‘ಉತ್ತರ ಕನ್ನಡ ಶಿವಮೊಗ್ಗ ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಏಲಕ್ಕಿ ಬೆಳೆಯುತ್ತಾರೆ. ಆದರೆ ಈ ಏಲಕ್ಕಿಗಳು ಸಣ್ಣದಾಗಿರುತ್ತವೆ. ಅದನ್ನು ಮಾಲೆ ಮಾಡಲು ಬರುವುದಿಲ್ಲ. ಮಾಲೆ ಮಾಡಲು 8 ಎಂಎಂ ಏಲಕ್ಕಿಯೇ ಬೇಕು’ ಎಂದು ಹೈದರಲಿ ಪಟವೇಗಾರ ಹೇಳಿದರು. ‘ಹಸಿರು ಏಲಕ್ಕಿಯನ್ನು ತಂದು ಸಂಸ್ಕರಣೆ ಮಾಡುತ್ತೇವೆ. ನಂತರ ಅದೇ ಏಲಕ್ಕಿ ಬಿಳಿ ಹಾಗೂ ಹಳದಿ ಬಣ್ಣಕ್ಕೆ ತಿರುತ್ತದೆ. ಅದನ್ನೇ ಮಾಲೆಗೆ ಬಳಸುತ್ತೇವೆ. ಈ ಮಾಲೆಗಳು ಸದಾ ಕಾಲ ಏಲಕ್ಕಿ ಸವಾಸನೆ ಬೀರುತ್ತವೆ. ಗಾಳಿಯಾಡುವ ಸ್ಥಳದಲ್ಲಿ ಇರಿಸಿದರೆ ವರ್ಷಪೂರ್ತಿ ಮಾಲೆ ಸುರಕ್ಷಿತವಾಗಿರುತ್ತದೆ. ಗಾಳಿಯಾಡದಂತೆ ಇಟ್ಟರೆ ಕೆಲ ತಿಂಗಳಿನಲ್ಲಿ ಹಾಳಾಗುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.