ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣ ಲಾಕ್‌ಡೌನ್‌ ಆದೇಶ ಜಾರಿಯಿದ್ದರೂ ಅದ್ಧೂರಿ ಬೀಳ್ಕೊಡುಗೆ ಸಮಾರಂಭ

ಹಾವೇರಿ: ಅಧಿಕಾರಿಗಳಿಂದಲೇ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ!
Last Updated 31 ಮೇ 2021, 13:47 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಸೋಮವಾರ ‘ಪೂರ್ಣ ಲಾಕ್‌ಡೌನ್‌’ ಆದೇಶ ಜಾರಿಯಲ್ಲಿದ್ದರೂ, ಜಿಲ್ಲಾ ಮಟ್ಟ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸುಮಾರು 150 ಮಂದಿ ‘ಬೀಳ್ಕೊಡುಗೆ ಸಮಾರಂಭ’ದಲ್ಲಿ ಪಾಲ್ಗೊಳ್ಳುವ ಮೂಲಕ ಕೋವಿಡ್‌ ನಿಯಮವನ್ನು ಉಲ್ಲಂಘಿಸಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಚ್‌.ಎ. ಜಮಖಾನೆ ಅವರು ಸೋಮವಾರ ಸೇವೆಯಿಂದ ನಿವೃತ್ತರಾದ ಅಂಗವಾಗಿ ನಗರದ ದೇವರಾಜ ಅರಸು ಮೆಟ್ರಿಕ್‌ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಅದ್ಧೂರಿಯಾಗಿ ಬೀಳ್ಕೊಡುಗೆ ಸಮಾರಂಭ ಆಚರಿಸಲಾಗಿದೆ.

ಅಧಿಕಾರಿಗಳು, ಶಿಕ್ಷಕರು, ವಸತಿ ಶಾಲೆಗಳ ಮುಖ್ಯಸ್ಥರು, ಹಾಸ್ಟೆಲ್‌ ಸಿಬ್ಬಂದಿ ಸೇರಿದಂತೆ ನೂರಾರು ಜನ ಪರಸ್ಪರ ಅಂತರ ಕಾಯ್ದುಕೊಳ್ಳದೆ ಒಂದೆಡೆ ಸೇರಿದ್ದರು. ನಿವೃತ್ತ ಅಧಿಕಾರಿಗೆ ಶಾಲು, ಹಾರ ಹಾಕಿ ಅಭಿನಂದಿಸಿದರು. ಅಧಿಕಾರಿಗಳು ಗಂಟೆಗಟ್ಟಲೆ ಭಾಷಣ ಮಾಡಿ, ಭರ್ಜರಿ ಭೋಜನ ಸವಿದರು. ಪರಿಚಯ ಇಲ್ಲದ ಯಾರೊಬ್ಬರೂ ಒಳಗೆ ಬಾರದಂತೆ ಕಣ್ಗಾವಲು ಇಡಲು ಹಾಸ್ಟೆಲ್‌ ಸಿಬ್ಬಂದಿಯನ್ನು ನಿಯೋಜಿಸಿ, ಕಾರ್ಯಕ್ರಮವನ್ನು ರಹಸ್ಯವಾಗಿ ನಡೆಸಿದರು.

ಜಿಲ್ಲಾಧಿಕಾರಿ ಆದೇಶದ ಪ್ರಕಾರ ಜಿಲ್ಲೆಯಲ್ಲಿ ಜೂನ್‌ 7ರವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ಮಾತ್ರ ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಸೇವೆ ಮತ್ತು ಖರೀದಿಗೆ ಅವಕಾಶವಿದೆ. ಉಳಿದ ದಿನಗಳಲ್ಲಿ ‘ಸಂಪೂರ್ಣ ಲಾಕ್‌ಡೌನ್‌’ ಘೋಷಿಸಲಾಗಿದೆ. ಹೀಗಿದ್ದರೂ, ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿ, ಸಮಾರಂಭ ನಡೆಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT