ಹಾವೇರಿ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳು ಒಂದೊಂದಾಗಿ ಆರಂಭವಾಗುತ್ತಿದ್ದು, ಗ್ರಾಮೀಣ ಪ್ರದೇಶದ ಮಹಿಳೆಯರ ಬದುಕಿಗೆ ಆಸರೆಯಾಗುತ್ತಿವೆ. ದೂರದ ಪ್ರದೇಶಗಳಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆಗೆ ಹೋಗಿ ಬರಲು ಪ್ರಯಾಣದ ಅನಿವಾರ್ಯತೆಯಿದ್ದು, ಈ ಪ್ರಯಾಣವೇ ಮಹಿಳೆಯರ ಜೀವಕ್ಕೆ ಕುತ್ತು ತರುತ್ತಿದೆ.

ರೈತಾಪಿ ನಾಡಾಗಿರುವ ಹಾವೇರಿ ಜಿಲ್ಲೆಯಲ್ಲಿ ಕೈಗಾರಿಕಾ ಚಟುವಟಿಕೆಗಳು ಅಷ್ಟಕ್ಕಷ್ಟೇ. ರಾಷ್ಟ್ರೀಯ ಹೆದ್ದಾರಿ ಸೇರಿ ಹಲವು ಸಂಪನ್ಮೂಲಗಳಿದ್ದರೂ ಕೈಗಾರಿಕಾ ವಲಯಗಳ ನಿರ್ಮಾಣದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಇದರ ನಡುವೆಯೇ ಅಲ್ಲಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳು ಆರಂಭವಾಗಿರುವುದರಿಂದ, ಹಲವು ಮಹಿಳೆಯರಿಗೆ ಕೆಲಸ ಸಿಕ್ಕಿದೆ. ಪ್ರತಿ ತಿಂಗಳು ಸಂಬಳ ಪಡೆಯುತ್ತಿರುವ ಬಹುತೇಕ ಮಹಿಳೆಯರು, ಕುಟುಂಬದ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಕೃಷಿ ಚಟುವಟಿಕೆಯಲ್ಲಿ ಆರ್ಥಿಕ ನಷ್ಟ ಅನುಭವಿಸುತ್ತಿರುವ ಬಹುತೇಕ ರೈತಾಪಿ ಕುಟುಂಬಗಳಿಗೆ, ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕುಟುಂಬದ ಮಹಿಳೆಯೇ ಆಸರೆಯಾಗಿದ್ದಾರೆ. ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ಮಕ್ಕಳ ಭವಿಷ್ಯ ರೂಪಿಸುವುದಕ್ಕಾಗಿ ಕಾರ್ಖಾನೆ ಕೆಲಸಕ್ಕೆ ಹೋಗಿಬರುತ್ತಿರುವ ಮಹಿಳೆಯರ ಪ್ರಯಾಣ ಅಸುರಕ್ಷಿತವಾಗಿರುವುದು ಆತಂಕಕಾರಿ ಸಂಗತಿ.

ಗಾರ್ಮೆಂಟ್ಸ್ ಕಾರ್ಖಾನೆಗಳು ಇರುವ ಪ್ರದೇಶಗಳಿಗೆ, ಕಾರ್ಖಾನೆಯ ಸಮಯಕ್ಕೆ ತಕ್ಕಂತೆ ಸಾರಿಗೆ ಸಂಸ್ಥೆಯ ಬಸ್ಗಳ ವ್ಯವಸ್ಥೆಯಿಲ್ಲ. ಇದೇ ಕಾರಣಕ್ಕೆ ಮಹಿಳೆಯರು, ಅನಿವಾರ್ಯವಾಗಿ ಅಸುರಕ್ಷಿತವಾದ ಟಂಟಂ, ಗೂಡ್ಸ್ ವಾಹನ ಹಾಗೂ ಪ್ಯಾಸೆಂಜರ್ ಆಟೊಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇಂಥ ವಾಹನಗಳ ಚಾಲಕರ ನಿರ್ಲಕ್ಷ್ಯ ಹಾಗೂ ಅಜಾಗರೂಕತೆ ಚಾಲನೆಯಿಂದ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ.

ಗಾರ್ಮೆಂಟ್ಸ್ ಕಾರ್ಖಾನೆ ಕೆಲಸ ಮುಗಿಸಿಕೊಂಡು ಅ.24ರಂದು ಸಂಜೆ ಮನೆಗೆ ಹೊರಟಿದ್ದ ವೇಳೆ ಆಟೊ ಉರುಳಿಬಿದ್ದು, ಕಾರ್ಖಾನೆ ಉದ್ಯೋಗಿಯಾಗಿದ್ದ ಸರೋಜಾ ಫಕ್ಕೀರಪ್ಪ ಕಾಮನಹಳ್ಳಿ (40) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಲಸ ಮುಗಿಸಿಕೊಂಡು ತಾಯಿ ಮನೆಗೆ ಬರುತ್ತಾಳೆಂದು ತಿಳಿದಿದ್ದ ಮಕ್ಕಳು ಅನಾಥರಾಗಿದ್ದಾರೆ. ಕುಟುಂಬ ನಿರ್ವಹಣೆಗೆ ಆಸರೆಯಾಗಿದ್ದ ಸರೋಜಾ ಅವರನ್ನು ಕಳೆದುಕೊಂಡು ಕುಟುಂಬಸ್ಥರು–ಸಂಬಂಧಿಕರು ಗೋಳಾಡುತ್ತಿದ್ದಾರೆ. ಸರೋಜಾ ಅವರ ಸಾವು, ಗಾರ್ಮೆಂಟ್ಸ್ ಕಾರ್ಖಾನೆಗಳ ಮಹಿಳಾ ಉದ್ಯೋಗಿಗಳ ಸುರಕ್ಷತೆಯನ್ನು ಪ್ರಶ್ನಿಸುವಂತಿದೆ.

ಶಿಗ್ಗಾವಿ ತಾಲ್ಲೂಕಿನ ಮುಗಳಿ ಗ್ರಾಮದ ಸರೋಜಾ ಹಾಗೂ ಸಹೋದ್ಯೋಗಿ ಮಹಿಳೆಯರು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬಂಕಾಪುರ ಬಳಿಯ ಗಾರ್ಮೆಂಟ್ಸ್ ಕಾರ್ಖಾನೆಯೊಂದಕ್ಕೆ ನಿತ್ಯವೂ ಬಂದು ಹೋಗುತ್ತಿದ್ದರು. ಅದಕ್ಕಾಗಿ ಅವರು ತಮ್ಮದೇ ಊರಿನ ಚಾಲಕ ಶಿವರಾಜ ಬಸಪ್ಪ ಯಲಿವಾಳ ಅವರ ಟಂಟಂ ಆಟೊವನ್ನು ನಂಬಿದ್ದರು. ಈಗ ಅದೇ ಆಟೊದಿಂದ ಅಪಘಾತ ಸಂಭವಿಸಿ, ಸರೋಜಾ ಮೃತಪಟ್ಟಿದ್ದಾರೆ. ನಾಲ್ವರು ಮಹಿಳೆಯರು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

24 ವರ್ಷದ ಚಾಲಕ ಶಿವರಾಜ್, ತನ್ನ ಟಂಟಂ ಆಟೊದ (ಕೆಎ 27 ಬಿ 2731) ಮುಂಭಾಗದಲ್ಲಿ ಹೂವಿನ ಮಾಲೆಗಳನ್ನು ಹಾಕಿ ಅಲಂಕಾರ ಮಾಡಿದ್ದ. ರಸ್ತೆ ಕಾಣದಷ್ಟು ಹೂವಿನ ಹಾರಗಳಿದ್ದವು. ಬಂಕಾಪುರ ವೃತ್ತದ ಕಡೆಯಿಂದ ಶಿಗ್ಗಾವಿ ಕಡೆಗೆ ಹೆದ್ದಾರಿಯಲ್ಲಿ ಟಂಟಂ ಹೊರಟಿತ್ತು. ಮಾರ್ಗಮಧ್ಯೆಯೇ ನಿರ್ಲಕ್ಷ್ಯದ ಚಾಲನೆ ಮಾಡಿದ್ದರಿಂದ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದ ಆಟೊ ಹೆದ್ದಾರಿಯಲ್ಲಿ ಉರುಳಿಬಿದ್ದಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದು ಸರೋಜಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವರಾಜ್ ಅವರ ಆಟೊದ ನೋಂದಣಿ ಸಂಖ್ಯೆ ಬಗ್ಗೆಯೇ ಅನುಮಾನ ವ್ಯಕ್ತವಾಗಿದೆ. ಬೇರೊಂದು ಆಟೊದ ನೋಂದಣಿ ಸಂಖ್ಯೆಯನ್ನು ಈತ ಬಳಸುತ್ತಿದ್ದ ಬಗ್ಗೆ ಸಂಶಯವಿದೆ. ಜೊತೆಗೆ, ಆಟೊದ ದಾಖಲೆಗಳಲ್ಲಿಯೂ ಗೊಂದಲ ಇರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಟಂಟಂ ಆಟೊ ಪ್ರಯಾಣಕ್ಕೆ ಯೋಗ್ಯವಿತ್ತಾ? ಅಥವಾ ಇಲ್ಲವೋ ? ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಅಪಘಾತ ಸಂಭವಿಸಿದ ಟಂಟಂ ಆಟೊ ರೀತಿಯಲ್ಲಿಯೇ ಹಲವು ಟಂಟಂ ಆಟೊಗಳು, ಗಾರ್ಮೆಂಟ್ಸ್ ಕಾರ್ಖಾನೆ ಉದ್ಯೋಗಿಗಳನ್ನು ಕರೆದೊಯ್ಯುತ್ತಿವೆ. ಶಿಗ್ಗಾವಿ ತಾಲ್ಲೂಕಿನ ಬಂಕಾಪುರ, ಖುರ್ಸಾಪುರ, ಮೋಟೆಬೆನ್ನೂರು, ರಾಣೆಬೆನ್ನೂರು, ಹಾವೇರಿ ಸೇರಿದಂತೆ ಹಲವು ಕಡೆಗಳಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳಿವೆ. ಕಾರ್ಖಾನೆ ಬಳಿ ಹಾಗೂ ಸಮೀಪದ ಪ್ರದೇಶಕ್ಕೂ ಸೂಕ್ತ ರೀತಿಯಲ್ಲಿ ಬಸ್ಗಳ ವ್ಯವಸ್ಥೆಯಿಲ್ಲ. ಹೀಗಾಗಿ, ಮಹಿಳೆಯರು ಟಂಟಂ ಆಟೊ ನೆಚ್ಚಿಕೊಂಡು ಕೆಲಸಕ್ಕೆ ಹೋಗಿಬರುತ್ತಿದ್ದಾರೆ. ಟಂಟಂ ಆಟೊಗಳು ಅಪಾಯಕಾರಿ ಎಂಬುದು ಗೊತ್ತಿದ್ದರೂ, ಉದ್ಯೋಗಕ್ಕಾಗಿ ಅನಿವಾರ್ಯವಾಗಿ ಪ್ರಯಾಣಿಸುತ್ತಿದ್ದಾರೆ. ಇಂಥ ಪ್ರಯಾಣವೇ ಮಹಿಳೆಯರ ಜೀವಕ್ಕೆ ಕುತ್ತು ತರುತ್ತಿದೆ.

ಬಡವರ ಮನೆಯ ಮಹಿಳೆಯರು: ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಬಹುತೇಕ ಮಹಿಳೆಯರು, ಬಡ ಕುಟುಂಬದವರು. ಬಡತನ, ಹೊಟ್ಟೆಪಾಡು, ಮಕ್ಕಳ ಶಿಕ್ಷಣ, ಜೀವನ ನಿರ್ವಹಣೆ ಸೇರಿದಂತೆ ಹಲವು ಕಾರಣಗಳಿಂದಾಗಿ ಅವರು ಗಾರ್ಮೆಂಟ್ಸ್ನಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಕೆಲಸ ಮಾಡುತ್ತಿದ್ದಾರೆ. ಈ ಮಹಿಳೆಯರು, ಗಾರ್ಮೆಂಟ್ಸ್ ಕಾರ್ಖಾನೆಗೆ ಹೋಗಿ ಬರುವವರೆಗೂ ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣಿಸುವ ಸ್ಥಿತಿಯಿದೆ.

‘ಪತಿ ಹಾಗೂ ಇಬ್ಬರು ಮಕ್ಕಳ ಕುಟುಂಬ ನನ್ನದು. ಪತಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಒಬ್ಬರ ದುಡಿಮೆಯಿಂದ ಮನೆ ನಡೆಯುವುದಿಲ್ಲ. ಹೀಗಾಗಿ, ನಾನು ಗಾರ್ಮೆಂಟ್ಸ್ ಕಾರ್ಖಾನೆ ಕೆಲಸಕ್ಕೆ ಹೋಗುತ್ತಿದ್ದೇನೆ. ಬಸ್ ಇಲ್ಲದಿದ್ದರಿಂದ, ಅನಿವಾರ್ಯವಾಗಿ ಟಂಟಂ ಮೂಲಕ ಪ್ರಯಾಣಿಸುತ್ತಿದ್ದೇನೆ’ ಎಂದು ಮುಗಳಿ ಗ್ರಾಮದ ಮಹಿಳೆಯೊಬ್ಬರು ತಿಳಿಸಿದರು.

‘ನಾನು ಸೇರಿದಂತೆ ಎಲ್ಲ ಮಹಿಳೆಯರು ಬಡವರು. ಊರಿನಲ್ಲಿ ಕೂಲಿ ಕೆಲಸಕ್ಕೆ ಹೋದರೆ, ನಾನಾ ಸಮಸ್ಯೆ. ಗಾರ್ಮೆಂಟ್ಸ್ ಕಾರ್ಖಾನೆ ಕೆಲಸ ಸೂಕ್ತವೆಂದು ಎಲ್ಲರೂ ಅದೇ ಕೆಲಸಕ್ಕೆ ಹೋಗಿ ಬರುತ್ತಿದ್ದೇವೆ. ಇದರಿಂದ ನಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತಿದೆ. ಆದರೆ, ಹೋಗಿಬರುವ ಸಂದರ್ಭದಲ್ಲಿ ಬಸ್ಸಿನ ಅನುಕೂಲವಿಲ್ಲ. ಅದೊಂದು ಸರಿಯಾದರೆ, ಧೈರ್ಯವಾಗಿ ಪ್ರಯಾಣ ಮಾಡುತ್ತೇವೆ’ ಎಂದು ಹೇಳಿದರು.

ಬಾಡಿಗೆ ಒಪ್ಪಂದದ ನಿಯಮ: ಕಾರ್ಖಾನೆ ಉದ್ಯೋಗಿ ಮಹಿಳೆಯರ ಪ್ರಯಾಣಕ್ಕೆಂದೇ ಚಾಲಕರು, ಟಂಟಂ ಆಟೊ ಹಾಗೂ ಗೂಡ್ಸ್ ವಾಹನಗಳನ್ನು ಮೀಸಲಿಟ್ಟಿದ್ದಾರೆ. ದಿನ ಹಾಗೂ ತಿಂಗಳ ಲೆಕ್ಕದಲ್ಲಿ ಬಾಡಿಗೆ ನೀಡುವ ಕರಾರಿನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವ ಚಾಲಕರು, ತಮ್ಮ ವಾಹನಗಳಲ್ಲಿ ಮಹಿಳೆಯರನ್ನು ಕರೆದೊಯ್ದು ವಾಪಸು ಕರೆತರುತ್ತಿದ್ದಾರೆ.

‘ಕೆಲಸದ ಸಮಯಕ್ಕೆ ಸರಿಯಾಗಿ ಟಂಟಂ ವಾಹನ ಬರುತ್ತದೆ’ ಎಂಬುದಷ್ಟೇ ಗಮನಿಸುತ್ತಿರುವ ಮಹಿಳೆಯರು, ವಾಹನದ ದಾಖಲೆ ಹಾಗೂ ಚಾಲಕರ ಪರವಾನಗಿಯನ್ನು ತಿಳಿದುಕೊಳ್ಳುತ್ತಿಲ್ಲ. ತಾವು ಪ್ರಯಾಣ ಮಾಡುತ್ತಿರುವ ವಾಹನ ಎಷ್ಟು ಸುರಕ್ಷತೆ ಎಂಬುದರ ಬಗ್ಗೆಯೂ ಗಮನ ಹರಿಸುತ್ತಿಲ್ಲ. ಇದರಿಂದಾಗಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿದ್ದು, ಮಹಿಳೆಯರು ಯಾತನೆ ಅನುಭವಿಸುವಂತಾಗಿದೆ.

‘ನಮ್ಮೂರಿನ ಆಟೊ ಚಾಲಕರ ಜೊತೆ ತಿಂಗಳ ಬಾಡಿಗೆ ಲೆಕ್ಕದಲ್ಲಿ ಕರಾರು ಮಾಡಿಕೊಂಡಿದ್ದೇವೆ. ಎಲ್ಲ ಮಹಿಳೆಯರು ಸೇರಿ ಒಂದೇ ಆಟೊದಲ್ಲಿ ಕಾರ್ಖಾನೆಗೆ ಹೋಗಿ ಬರುತ್ತೇವೆ. ತಿಂಗಳಿಗೆ ಇಂತಿಷ್ಟು ಹಣ ನೀಡುತ್ತೇವೆ. ಉಳಿದಂತೆ, ಆಟೊ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಸುರಕ್ಷತೆ ಬಗ್ಗೆ ಪ್ರಶ್ನಿಸಿದರೆ, ಬೇರೆ ವಾಹನ ನೋಡಿಕೊಳ್ಳುವಂತೆ ಚಾಲಕರು ಹೇಳುತ್ತಾರೆ. ಆಟೊ ಬಿಟ್ಟರೆ ನಮಗೆ ಬೇರೆ ಗತಿಯಿಲ್ಲ. ಬಸ್ ಸಹ ಸರಿಯಾದ ಸಮಯಕ್ಕೆ ಬರುವುದಿಲ್ಲ. ಹೀಗಾಗಿ, ಆಟೊ ಅನಿವಾರ್ಯ’ ಎಂದು ಚಳ್ಳಾಳ ಗ್ರಾಮದ ಮಹಿಳೆಯೊಬ್ಬರು ಹೇಳಿದರು.

ಗುಡ್ಡದಚನ್ನಾಪುರ ಗ್ರಾಮದ ಮಹಿಳೆಯೊಬ್ಬರು, ‘ನಮ್ಮೂರಿಗೆ ಇರುವುದು ಒಂದೇ ಬಸ್. ಅದನ್ನು ನೆಚ್ಚಿಕೊಂಡು ಕೆಲಸಕ್ಕೆ ಹೋಗಲು ಆಗುವುದಿಲ್ಲ. ಹೀಗಾಗಿ, ನಮ್ಮೂರಿನ ಚಾಲಕರೊಬ್ಬರ ಟಂಟಂನಲ್ಲಿ ಕಾರ್ಖಾನೆಗೆ ಹೋಗಿ ಬರುತ್ತಿದ್ದೇವೆ. ಕಾರ್ಖಾನೆ ಸಮಯಕ್ಕೆ ಒಂದು ಬಸ್ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ’ ಎಂದರು.

ಬೆಳಿಗ್ಗೆ–ಸಂಜೆ ಮಹಿಳೆಯರ ದಂಡು: ಭಾನುವಾರ ಹೊರತುಪಡಿಸಿ ನಿತ್ಯವೂ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಶಿಗ್ಗಾವಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯ ಉದ್ಯೋಗಿಗಳಾದ ಮಹಿಳೆಯರ ದಂಡು ಕಂಡುಬರುತ್ತದೆ. ಕಾರ್ಖಾನೆಯಿಂದ ಬಸ್ ನಿಲ್ದಾಣದವರೆಗೂ ನಡೆದುಕೊಂಡು ಹೋಗುವ ಮಹಿಳೆಯರಿದ್ದಾರೆ.

ಹಲವು ಮಹಿಳೆಯರು, ಕಾರ್ಖಾನೆ ಎದುರೇ ಟಂಟಂ ಆಟೊ ಏರಿ ತಮ್ಮೂರಿಗೆ ಪ್ರಯಾಣಿಸುತ್ತಾರೆ. ಮಹಿಳಾ ಪ್ರಯಾಣಿಕರು ಹೆಚ್ಚಿರುವುದು ಗೊತ್ತಿದ್ದರೂ ವಾಕರಸಾಸಂ (ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ಸ್ಥಳೀಯ ಡಿಪೊ ವ್ಯವಸ್ಥಾಪಕರು ಮಾತ್ರ, ಹೊಸ ಬಸ್ ಮಾರ್ಗದ ಬಗ್ಗೆ ಚಿಂತಿಸುತ್ತಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೂ ತರುತ್ತಿಲ್ಲ.

ಸವಣೂರು ಡಿಪೊ ಮೂಲಕ ಶಿಗ್ಗಾವಿ ತಾಲ್ಲೂಕಿನಲ್ಲಿ ಬಸ್ಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ. ಶಿಗ್ಗಾವಿಯ ಡಿಪೊ ಸಿದ್ಧವಾದರೂ ಉದ್ಘಾಟನೆಯಾಗಿಲ್ಲ. ಹೀಗಾಗಿ, ಬಸ್ಗಳ ಕೊರತೆ ಸಹ ಕಾಡುತ್ತಿದೆ.

ಬಂಕಾಪುರ ವೃತ್ತದಲ್ಲಿ ಗಾರ್ಮೆಂಟ್ಸ್ ಕಾರ್ಖಾನೆ ಮಹಿಳೆಯರು, ವಾಹನಗಳಿಗಾಗಿ ನಿತ್ಯವೂ ಕಾದು ನಿಲ್ಲುತ್ತಾರೆ. ಅವರನ್ನು ನೋಡುವ ಕೆಲ ಚಾಲಕರು, ಬಸ್ ನಿಲ್ಲಿಸದೇ ಮುಂದಕ್ಕೆ ಹೋಗುತ್ತಾರೆ. ಈ ವರ್ತನೆಯೂ ಮಹಿಳೆಯರಲ್ಲಿ ಬೇಸರ ಮೂಡಿಸಿದೆ. ಬಡತನವನ್ನು ಮೆಟ್ಟಿ ಸ್ವಂತ ದುಡಿಮೆ ಮಾಡುತ್ತಿರುವ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುವ ಸನ್ನಿವೇಶಗಳು ಆಗಾಗ ನಡೆಯುತ್ತಿವೆ.

ಕಾರ್ಖಾನೆ ಆಡಳಿತ ಮಂಡಳಿಯವರು, ಕಾರ್ಖಾನೆಯೊಳಗೆ ಮಾತ್ರ ಮಹಿಳೆಯರ ಸುರಕ್ಷತೆಗೆ ಒತ್ತು ನೀಡಿದ್ದಾರೆ. ಕಾರ್ಖಾನೆಯ ಹೊರಗೆ ಮಹಿಳೆಯರ ಪ್ರಯಾಣ ಹಾಗೂ ಸುರಕ್ಷತೆ ಬಗ್ಗೆ ಗಮನ ಹರಿಸುತ್ತಿಲ್ಲವೆಂಬ ಆರೋಪಗಳಿವೆ. ಜಿಲ್ಲೆಯ ಕಾರ್ಖಾನೆಗಳಲ್ಲಿರುವ ಉದ್ಯೋಗಿಗಳು ಸಂಘಟಿತರಾಗದಿರುವುದರಿಂದ, ಅವರ ಬೇಡಿಕೆಗಳ ಈಡೇರಿಕೆಗೆ ಸ್ಪಂದನೆ ಸಿಗುತ್ತಿಲ್ಲವೆಂಬ ನೋವು ಮಹಿಳೆಯರಲ್ಲಿದೆ.

ಕುಟುಂಬಕ್ಕೆ ನಾನೇ ಆಧಾರ. ಕೆಲಸದ ಜೊತೆ ಮಕ್ಕಳ ಜವಾಬ್ದಾರಿಯೂ ನಮ್ಮ ಮೇಲಿದೆ. ಕಾರ್ಖಾನೆಗೆ ಹೋಗಿಬರಲು ಸುರಕ್ಷಿತ ಪ್ರಯಾಣಕ್ಕೆ ಬಸ್ಸಿನ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ
ಮಂಜುಳಾ ಚಳ್ಯಾಳ ನಿವಾಸಿ

ಸರೋಜಾ ಮೃತಪಟ್ಟಿದ್ದು ನೋಡಿ ನಮಗೂ ಜೀವಭಯ ಶುರುವಾಗಿದೆ. ಹೊಟ್ಟೆಪಾಡಿಗೆ ಕೆಲಸ ಅನಿವಾರ್ಯವಾಗಿರುವುದರಿಂದ ಜೀವ ಕೈಯಲ್ಲಿ ಹಿಡಿದು ಟಂಟಂನಲ್ಲಿ ಪ್ರಯಾಣಿಸುತ್ತಿದ್ದೇವೆ
ಸರಳಾ ಗಾರ್ಮೆಂಟ್ಸ್ ಕಾರ್ಖಾನೆ ಉದ್ಯೋಗಿ

ಮಹಿಳಾ ಉದ್ಯೋಗಿಗಳ ಒತ್ತಾಯಗಳು

ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳೆಯರ ಪಟ್ಟಿ ಸಿದ್ಧಪಡಿಸಿ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಕಾರ್ಖಾನೆ ಸಮಯಕ್ಕೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಬೇಕು

ಕಾರ್ಖಾನೆಗಳು ಇರುವ ಪ್ರದೇಶಗಳಲ್ಲಿ ಸಾರಿಗೆ ಸಂಸ್ಥೆಯ ಎಲ್ಲ ಮಾರ್ಗದ ಬಸ್ಗಳನ್ನು ನಿಲ್ಲಿಸಲು ಆದೇಶ ಹೊರಡಿಸಬೇಕು

ಸದ್ಯ ಇರುವ ಟಂಟಂ ಆಟೊಗಳನ್ನು ಏಕಾಏಕಿ ಬಂದ್ ಮಾಡಿಸಿದರೆ ಪರಿಹಾರ ಸಿಗುವುದಿಲ್ಲ. ಬಸ್ ವ್ಯವಸ್ಥೆ ಮಾಡಿಸಿದ ನಂತರವೇ ಟಂಟಂ ಆಟೊ ಬಂದ್ ಮಾಡಿಸಬೇಕು

ಗಾರ್ಮೆಂಟ್ಸ್ ಕಾರ್ಖಾನೆ ಇರುವ ಪ್ರದೇಶದ ಸುತ್ತಮುತ್ತ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಘಟನೆಗಳು ಆಗಾಗ ನಡೆಯುತ್ತಿವೆ. ಹೀಗಾಗಿ ಪೊಲೀಸ್ ಗಸ್ತು ಹೆಚ್ಚಿಸಬೇಕು. ಕಾರ್ಖಾನೆ ಆರಂಭ ಹಾಗೂ ಮುಕ್ತಾಯದ ಸಮಯದಂದು ಹೆಚ್ಚಿನ ಪೊಲೀಸರು ಸ್ಥಳದಲ್ಲಿರಬೇಕು

ಸುರಕ್ಷಿತವಲ್ಲದ ವಾಹನ ಹಾಗೂ ಪರವಾನಗಿ ಇಲ್ಲದ ಚಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ವಾಹನ ಜಪ್ತಿ ಮಾಡಿ ವಾಹನದಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಪ್ರತ್ಯೇಕ ಸುರಕ್ಷಿತ ವಾಹನದ ವ್ಯವಸ್ಥೆ ಮಾಡಿಸಬೇಕು

ಕಾರ್ಖಾನೆ ಬಳಿ ಹಾಗೂ ಬಸ್ ನಿಲ್ಲುವ ಸ್ಥಳಗಳಲ್ಲಿ ಸುಸಜ್ಜಿತ ಸುರಕ್ಷಿತ ತಂಗುದಾಣ ನಿರ್ಮಿಸಬೇಕು.

‘ಕಿರುಕುಳ: ಪೊಲೀಸರ ಗಸ್ತು ಹೆಚ್ಚಿಸಬೇಕು’

ಗಾರ್ಮೆಂಟ್ಸ್ ಕಾರ್ಖಾನೆಗೆ ಹೋಗುವ ಹಾಗೂ ಬರುವ ರಸ್ತೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಘಟನೆಗಳು ಆಗಾಗ ನಡೆಯುತ್ತಿವೆ. ಮರ್ಯಾದೆಗೆ ಅಂಜಿ ಮಹಿಳೆಯರು ಠಾಣೆಗೆ ಮಾಹಿತಿ ನೀಡುತ್ತಿಲ್ಲ. ವಿಷಯ ಗೊತ್ತಾದರೆ ಮನೆಯವರು ಕೆಲಸ ಬಿಡಿಸುತ್ತಾರೆಂಬ ಭಯವೂ ಮಹಿಳೆಯರಲ್ಲಿದೆ. ಹೀಗಾಗಿ ಕಾರ್ಖಾನೆ ರಸ್ತೆಯಲ್ಲಿ ಪೊಲೀಸರ ಗಸ್ತು ಹೆಚ್ಚಿಸಬೇಕೆಂದು ಮಹಿಳೆಯರು ಒತ್ತಾಯಿಸುತ್ತಿದ್ದಾರೆ. ‘ಬಂಕಾಪುರ ವೃತ್ತದಿಂದ ಕಾರ್ಖಾನೆಯವರೆಗೂ ನಡೆದುಕೊಂಡು ಹೋಗುತ್ತೇವೆ. ಒಮ್ಮೊಮ್ಮೆ ಅಪರಿಚಿತರು ಬಂದು ವಿನಾಕಾರಣ ಮಾತನಾಡಿಸಿ ಕಿರುಕುಳ ನೀಡುತ್ತಾರೆ. ನಮ್ಮ ಪಾಡಿಗೆ ನಾವು ಹೊರಟಿದ್ದರೂ ಕಾಡಿಸುತ್ತಾರೆ. ಇಂಥವರ ವಿರುದ್ಧ ಕ್ರಮ ಕೈಗೊಂಡು ನಮಗೆ ರಕ್ಷಣೆ ನೀಡಬೇಕು’ ಎಂದು ಮಹಿಳಾ ಉದ್ಯೋಗಿಯೊಬ್ಬರು ಆಗ್ರಹಿಸಿದರು.

ಕಣ್ಮುಚ್ಚಿ ಕುಳಿತ ಆರ್ಟಿಒ–ಪೊಲೀಸರು

ಜಿಲ್ಲೆಯ ಶಿಗ್ಗಾವಿ ತಾಲ್ಲೂಕು ಸೇರಿದಂತೆ ಹಲವು ಕಡೆಗಳಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳಿವೆ. ಅಲ್ಲೆಲ್ಲ ಟಂಟಂ ಆಟೊ ಗೂಡ್ಸ್ ವಾಹನಗಳು ಮಹಿಳೆಯರನ್ನು ಹತ್ತಿಸಿಕೊಂಡು ಹೋಗುತ್ತಿವೆ. ಹಲವು ವಾಹನಗಳಿಗೆ ವಿಮೆಯಿಲ್ಲ. ಸದೃಢತೆ ಪ್ರಮಾಣ ಪತ್ರ (ಎಫ್.ಸಿ) ನವೀಕರಣವಾಗಿಲ್ಲ. ಕೆಲ ಚಾಲಕರಿಗೆ ಚಾಲನಾ ಪರವಾನಗಿ ಇಲ್ಲವೆಂಬ ಆರೋಪಗಳಿವೆ. ಇಷ್ಟೆಲ್ಲ ಇದ್ದರೂ ಆರ್ಟಿಒ ಹಾಗೂ ಪೊಲೀಸರು ಮಾತ್ರ ವಾಹನಗಳ ತಪಾಸಣೆ ಮಾಡುತ್ತಿಲ್ಲ. ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಮಾತ್ರ ಆರ್ಟಿಒ–ಪೊಲೀಸರು ಗಾರ್ಮೆಂಟ್ಸ್ ಕಾರ್ಖಾನೆ ಉದ್ಯೋಗಿಗಳಾದ ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಕಣ್ಮುಚ್ಚಿ ಕುಳಿತಿದ್ದಾರೆ. ಇವರ ನಿರ್ಲಕ್ಷ್ಯದಿಂದಲೇ ಅಸುರಕ್ಷಿತ ವಾಹನಗಳು ರಾಜಾರೋಷವಾಗಿ ರಸ್ತೆಯಲ್ಲಿ ಓಡಾಡುತ್ತಿವೆ ಎಂಬ ಆರೋಪಗಳು ಹೆಚ್ಚಾಗಿವೆ.

ಅಪರಾಧಗಳು ಹಾಗೂ ಅಪಘಾತಗಳು ನಡೆದಾಗ ಮಾತ್ರ ಪೊಲೀಸರು ಸ್ಥಳಕ್ಕೆ ಬಂದು ಹೋಗುತ್ತಾರೆ. ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕಾರ್ಖಾನೆ ಬಳಿ ಪೊಲೀಸರು ಸುಳಿಯುತ್ತಿಲ್ಲವೆಂಬ ದೂರುಗಳಿವೆ. ಕೆಲ ಪೊಲೀಸರು ಅಸುರಕ್ಷಿತ ವಾಹನಗಳನ್ನು ಅಡ್ಡಗಟ್ಟಿ ಹಣ ಪಡೆದು ಬಿಟ್ಟು ಕಳುಹಿಸುತ್ತಿರುವ ಆರೋಪಗಳೂ ಇವೆ. ಮಾಜಿ ಮುಖ್ಯಮಂತ್ರಿಯ ಕ್ಷೇತ್ರ ಎನಿಸಿಕೊಂಡಿರುವ ಶಿಗ್ಗಾವಿಯಲ್ಲಿಯೇ ಮಹಿಳೆಯರ ಜೀವಕ್ಕೆ ಕುತ್ತು ಬರುವ ಘಟನೆಗಳು ನಡೆಯುತ್ತಿದ್ದರೂ ಹಿರಿಯ ಅಧಿಕಾರಿಗಳು ಮೌನವಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

(ಪೂರಕ ಮಾಹಿತಿ: ಎಂ.ವಿ.ಗಾಡದ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.