ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪೂರ ಆರೋಗ್ಯ ಕೇಂದ್ರವೀಗ ಕುರಿ ದೊಡ್ಡಿ!

ಉದ್ಘಾಟನೆ ಬಳಿಕ ಮುಚ್ಚಿದ ಬಾಗಿಲು ಇನ್ನೂ ತೆರೆದಿಲ್ಲ * ಅಕ್ಕ–ಪಕ್ಕದ ಗ್ರಾಮಗಳಲ್ಲೂ ಅದೇ ಸ್ಥಿತಿ
Last Updated 6 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಹಾವೇರಿ: ಬಡವರಿಗೆ ಉಚಿತ ವೈದ್ಯಕೀಯ ಸೇವೆ ನೀಡಲೆಂದು ಹಾವೇರಿಯ ಕನಕಪೂರದಲ್ಲಿ ಆರು ವರ್ಷಗಳ ಹಿಂದೆ ‘ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ಉಪಕೇಂದ್ರ’ ನಿರ್ಮಿಸಲಾಗಿದೆ. ಆದರೆ, ಉದ್ಘಾಟನೆ ಬಳಿಕ ಮುಚ್ಚಿದ ಆ ಕೇಂದ್ರದ ಬಾಗಿಲು ಈವರೆಗೂ ತೆರೆದೇ ಇಲ್ಲ!

ಆ ಕೇಂದ್ರದ ಆವರಣವೀಗ ಕುರಿ ದೊಡ್ಡಿಯಾಗಿದ್ದು, ಅದರ ಅಕ್ಕ–ಪಕ್ಕ ರೈತರು ತಿಪ್ಪೆಯ ರಾಶಿ ಸುರಿಯುತ್ತಿದ್ದಾರೆ. ಕಿಟಕಿ ಗಾಜುಗಳೆಲ್ಲ ಒಡೆದಿದ್ದು, ಕಬ್ಬಿಣದ ಬಾಗಿಲುಗಳೂ ತುಕ್ಕು ಹಿಡಿದಿವೆ. ಕಿಟಕಿಯಿಂದ ಒಳಗೆ ಇಣುಕಿದರೆ ಮದ್ಯದ ಬಾಟಲಿಗಳು, ಕೊಳೆತ ನಾರುತ್ತಿರುವ ತರಹೇವಾರಿ ಪೊಟ್ಟಣಗಳೇ ಕಾಣಿಸುತ್ತವೆ. ಕಾಯಿಲೆಗಳನ್ನು ಗುಣಪಡಿಸಬೇಕಾಗಿದ್ದ ಆರೋಗ್ಯ ಕೇಂದ್ರ, ರೋಗ–ರುಜನಿ ಸೃಷ್ಟಿಸುವ ತಾಣವಾಗಿ ಬದಲಾಗಿದೆ. ಇದರಿಂದಾಗಿ ಸ್ಥಳೀಯ ರೋಗಿಗಳು 4 ಕಿ.ಮೀ ದೂರದ ಜಿಲ್ಲಾಸ್ಪತ್ರೆಗೇ ಹೋಗುವುದು ಅನಿವಾರ್ಯವಾಗಿದೆ.

ಕನಕಪೂರ ಕೇಂದ್ರದ ಸ್ಥಿತಿ ಮಾತ್ರ ಹೀಗಿಲ್ಲ.ಹಾವೇರಿ, ಅಗಡಿ, ದೇವಗಿರಿ, ದೇವಿಹೊಸೂರು, ಮೇವುಂಡಿ, ಹಂದಿಗನೂರು, ಹಾವನೂರ, ಹೊಸರಿತ್ತಿ, ಕಬ್ಬೂರು, ಕರ್ಜಗಿ, ಕಾಟೇನಹಳ್ಳಿ, ಕುರುಬಗೊಂಡ ಹಾಗೂ ನಾಗೇಂದ್ರನಮಟ್ಟಿಯ ಆರೋಗ್ಯ ಕೇಂದ್ರಗಳೂನಿರ್ವಹಣೆ ಇಲ್ಲದೆ ಶೋಚನೀಯ ಹಂತ ತಲುಪಿವೆ. ಉಪಕೇಂದ್ರದ ಕಟ್ಟಡಗಳೆಲ್ಲ ಪಾಳು ಬಿದ್ದಿವೆ. ಈ ಕಾರಣಗಳಿಂದ ಜಿಲ್ಲಾಸ್ಪತ್ರೆ ಹಾಗೂ ಸರ್ಕಾರಿ ಮಕ್ಕಳ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ.

‘ನಮ್ಮೂರಿಗೆ ಸರಿಯಾಗಿ ಬಸ್ ಸೌಕರ್ಯವಿಲ್ಲ. ಆಸ್ಪತ್ರೆಗೆ ಹೋಗಬೇಕೆಂದರೆ ಯಾರದ್ದೋ ಬೈಕ್‌ನಲ್ಲಿ ಡ್ರಾಪ್‌ ಕೇಳಬೇಕು. ಇಲ್ಲವೇ, ಹೆಚ್ಚಿನ ಹಣ ಕೊಟ್ಟು ಆಟೊದಲ್ಲಿ ಹೋಗಬೇಕು. ಈ ಕಾರಣಗಳಿಂದ ಜ್ವರ, ಕೆಮ್ಮಿನಂತಹ ಕಾಯಿಲೆಗಳಿಗೆ ಜನ ಚಿಕಿತ್ಸೆ ಪಡೆಯುವುದನ್ನೇ ಬಿಟ್ಟಿದ್ದಾರೆ. ನಿಯಂತ್ರಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ಬಂದಾಗ ಮಾತ್ರ ಜಿಲ್ಲಾಸ್ಪತ್ರೆಗಳ ಕಡೆಗೆ ಹೋಗುತ್ತಿದ್ದಾರೆ’ ಎಂದು ವಿವರಿಸುತ್ತಾರೆ ಕನಕಪೂರದಅಜ್ಜಪ್ಪ ತಳವಾರ.

‘ಊರಲ್ಲೆಲ್ಲ ಮಳೆ ನೀರು ನಿಂತು ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಅಂಟು ಕಾಯಿಲೆಗಳಿಂದ ಜನ ನರಳುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರದಿಂದ ಕೋಟಿ ಕೋಟಿ ಹಣ ಘೋಷಣೆಯಾಗುತ್ತದೆ. ಆದರೆ, ಸಣ್ಣಪುಟ್ಟ ಸಮಸ್ಯೆಗಳೇ ಬಗೆಹರಿಯುತ್ತಿಲ್ಲ. ದಯಮಾಡಿ, ಗ್ರಾಮದ ಆರೋಗ್ಯ ಕೇಂದ್ರವನ್ನು ಆರಂಭಿಸಿ, ಅನುಕೂಲ ಮಾಡಿಕೊಡಿ’ ಎಂಬುದು ಗ್ರಾಮಸ್ಥರ ಒಕ್ಕೊರಲ ಮನವಿ.

ದಾದಿಯರ ಉಪಕೇಂದ್ರ ಬಂದ್:

ಕನಕಪೂರದಿಂದ ಒಂದೂವರೆ ಕಿ.ಮೀ ದೂರದಲ್ಲಿರುವ ಚಿಕ್ಕಲಿಂಗದಹಳ್ಳಿಯ ದಾದಿಯರ ಉಪಕೇಂದ್ರ ಬಂದ್ ಆಗಿ ಏಳೂವರೆ ವರ್ಷ ಕಳೆದಿದೆ. ‌

‘ಊರಿನವರೇ ಏಳೆಂಟು ಸಲ ಕಟ್ಟಡ ಸ್ವಚ್ಛಗೊಳಿಸಿದರೂ, ವೈದ್ಯರನ್ನು ಹಾಗೂ ನರ್ಸ್‌ಗಳನ್ನು ನೇಮಿಸದ ಕಾರಣ ಉಪಕೇಂದ್ರದ ಜಾಗವೆಲ್ಲ ಒತ್ತುವರಿ ಆಗುತ್ತಿದೆ. ಈ ಬಗ್ಗೆ ಎಷ್ಟೇ ದೂರಿದರೂ ಯಾವೊಬ್ಬ ಅಧಿಕಾರಿಯೂ ಬಂದು ಪರಿಶೀಲನೆ ಮಾಡಿಲ್ಲ. ಒತ್ತುವರಿಯನ್ನೂ ತೆರವುಗೊಳಿಸಿಲ್ಲ’‍ ಎಂಬುದು ಚಿಕ್ಕಲಿಂಗದಹಳ್ಳಿ ಗ್ರಾಮಸ್ಥರ ಆರೋಪ.‌

‘ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಿರುವಷ್ಟು ವೈದ್ಯರಿಲ್ಲ. ಕಾಯಂ ಸಿಬ್ಬಂದಿಯೂ ಇಲ್ಲ. ಕೆಲವು ಕಡೆಗಳಲ್ಲಿ ಒಬ್ಬ ವೈದ್ಯಾಧಿಕಾರಿಗೆ ಎರಡೆರಡು, ಕೇಂದ್ರಗಳನ್ನು ನಿಭಾಯಿಸುವ ಸ್ಥಿತಿ ಇದೆ. ಇದರಿಂದ ಕಟ್ಟಡಗಳು ಬಂದ್ ಆಗಿವೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ರಾಜೇಂದ್ರ ದೊಡ್ಮನಿ.

36 ಕೇಂದ್ರಗಳಿಗೆ ವೈದ್ಯರಿಲ್ಲ!

ಜಿಲ್ಲೆಗೆ ಸರ್ಕಾರ 183 ವೈದ್ಯಾಧಿಕಾರಿ ಹುದ್ದೆಗಳನ್ನು ಮಂಜೂರು ಮಾಡಿದ್ದರೆ, ಭರ್ತಿ ಆಗಿರುವುದು 95 ಮಾತ್ರ. ಇನ್ನೂ 88 ಹುದ್ದೆಗಳು ಖಾಲಿ ಉಳಿದಿವೆ. 69 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ, 36 ಕೇಂದ್ರಗಳಲ್ಲಿ ವೈದ್ಯರೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT