ಮಂಗಳವಾರ, ಜನವರಿ 28, 2020
18 °C

ಜಾನುವಾರು ಸಾಕಾಣಿಕೆಯಿಂದ ಆರ್ಥಿಕ ಸದೃಢತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ರೈತರು ಕೃಷಿಯೊಂದಿಗೆ ಚಟುವಟಿಕೆಯೊಂದಿಗೆ ಜಾನುವಾರು ಸಾಕಾಣಿಕೆ ಮಾಡುವುದರಿಂದ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ಹುಕ್ಕೇರಿಮಠದ ಜಾತ್ರೆ ಅಂಗವಾಗಿ ನಗರದ ಶಿವಬಸವ ಜಾನುವಾರು ಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ಜಾನುವಾರುಗಳ ಪ್ರದರ್ಶನ ಹಾಗೂ ಜಾನುವಾರುಗಳ ಆರೋಗ್ಯ ತಪಾಸಣಾ ಶಿಬಿರ, ಕೃಷಿ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನುವಾರು ಸಾಕಾಣಿಕೆಯನ್ನು ಉಪಕಸುಬಾಗಿ ಮಾಡಿಕೊಂಡ ರೈತರು ಯಶಸ್ಸು ಕಾಣುತ್ತಿದ್ದಾರೆ. ಕೃಷಿಯ ಬಗ್ಗೆ ಬೇಸರ ಪಟ್ಟವರು ನಷ್ಟ ಅನುಭವಿಸುತ್ತಿದ್ದು, ಆಸಕ್ತಿಯಿಂದ ಒಕ್ಕಲುತನ ಮಾಡುತ್ತಿರುವವರು ಯಶಸ್ಸು ಕಂಡುಕೊಂಡಿದ್ದಾರೆ ಎಂದರು.

ಹನುಮನ ಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪಿ.ಅಶೋಕ ಮಾತನಾಡಿ, ನೀರು ಮತ್ತು ಮಣ್ಣು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಅದನ್ನು ನಾವು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ಮನುಷ್ಯನ ಬಳಕೆಗೂ ನೀರು ಕಡಿಮೆ ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. ಇದು ಹೀಗೆ ಮುಂದುವರೆದರೆ ನೀರಿಗಾಗಿಯೇ ಯುದ್ಧ ನಡೆಯಬಹುದು. ಮಣ್ಣಿನ ಫಲವತ್ತತೆಯ ಬಗ್ಗೆಯೂ ಕಾಳಜಿ ವಹಿಸಬೇಕು ಎಂದರು.

ಕೃಷಿ ಇಲಾಖೆ ಜಂಟಿ ಉಪನಿರ್ದೇಶಕ ಬಿ.ಮಂಜುನಾಥ ಮಾತನಾಡಿ, ವಾತಾವರಣದಲ್ಲಿನ ಬದಲಾವಣೆಯಿಂದ ಭೂ ಮಂಡಲದಲ್ಲಿರುವ ಅನೇಕ ಜೀವ ರಾಶಿಗಳು ಕಣ್ಮರೆಯಾಗುತ್ತಿವೆ. ಜೈವಿಕ ವೈವಿಧ್ಯತೆಯನ್ನು ನಮ್ಮ ದೇಶ ಹೊಂದಿದೆ. ಆದರೆ, ಅದರ ಬಳಕೆಯಲ್ಲಿ ನಾವು ಹಿಂದೆ ಉಳಿದಿದ್ದೇವೆ ಎಂದರು.

ಸಾನ್ನಿಧ್ಯ ವಹಿಸಿದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, 49ನೇ ವರ್ಷಕ್ಕೆ ಜಾನುವಾರು ಜಾತ್ರೆ ಕಾಲಿಟ್ಟಿದೆ. ಇದು ಮುಂದಿನ ಆರು ತಿಂಗಳ ಕಾಲ ನಡೆಯಲಿದ್ದು, ದೊಡ್ಡ ಮಟ್ಟದ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ರೈತರಿಗೆ ಅನುಕೂಲವಾಗುವಂತೆ ಕೃಷಿ ಮಾಹಿತಿಯನ್ನು ಒದಗಿಸಲಾಗುತ್ತಿದೆ, ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

 ಪ್ರದರ್ಶನಕ್ಕೆ ಆಗಮಿಸಿದ ಹಸುಗಳಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಪ್ರದರ್ಶನಕ್ಕೆ ಆಗಮಿಸಿದ ಉತ್ತಮ ಜಾನುವಾರುಗಳನ್ನು ಗುರುತಿಸಿ ಬಹುಮಾನ ನೀಡಲಾಯಿತು.

ಎಚ್‌ಎಫ್‌ ತಳಿ ವಿಭಾಗದಲ್ಲಿ ವೀರನಗೌಡ ಶಿದ್ದನಗೌಡ್ರ(ಪ್ರಥಮ), ಜಯಪ್ಪ ಮುತ್ತಪ್ಪ ಚಿತ್ರದುರ್ಗ(ದ್ವಿತೀಯ), ಕರೀಂಸಾಬ್‌ ವಾಲಿಕಾರ(ತೃತೀಯ), ಜೆ.ಆರ್‌.ವಿಭಾಗದಲ್ಲಿ ನಟರಾಜ ಕುಳೆನೂರು(ಪ್ರಥಮ), ಬಸವರಾಜಪ್ಪ ನಾಗನೂರ(ದ್ವಿತೀಯ), ದುರಗಪ್ಪ ಬಸವನವರ(ತೃತೀಯ), ಎಮ್ಮೆಗಳ ವಿಭಾಗದಲ್ಲಿ ಅಶೋಕ ಮಜ್ಜಗಿ(ಪ್ರಥಮ) ಹುಸೇನಸಾಬ್‌ ವಾಲಿಕಾರ(ದ್ವಿತೀಯ) ಸುಬಾನಿ ಕಲಕೋಟಿ(ತೃತೀಯ), ಹಳ್ಳಿಕಾರ ಎತ್ತುಗಳ ವಿಭಾಗದಲ್ಲಿ ಗದಗೆಪ್ಪ ಕುಂದೂರ(ಪ್ರಥಮ), ಬಸವರಾಜ ಬಡ್ಡಿ(ದ್ವಿತೀಯ), ನಾಗಪ್ಪ ತಳವಾರ(ತೃತೀಯ) ಬಹುಮಾನ ಪಡೆದರು.

ಜೆ.ಆರ್‌ ಮೂರಾ ವಿಭಾಗದಲ್ಲಿ ಬಸವರಾಜಪ್ಪ ಕೊರಿಶೆಟ್ಟರ(ಪ್ರಥಮ) ಬಸವಣ್ಣ ಹಿರೇಮಠ(ದ್ವಿತೀಯ), ವೀರಯ್ಯ ಹಿರೇಮಠ(ತೃತೀಯ), ದೇಶಿ ತಳಿ ವಿಭಾಗದಲ್ಲಿ ಶಿದ್ದಪ್ಪ ಗೊಳ್ಳಿನ(ಪ್ರಥಮ) ಸುರೇಶಪ್ಪ ಉಪ್ಪಿನ(ದ್ವಿತೀಯ), ಸಿದ್ಲಿಂಗಪ್ಪ ಫಕ್ಕೀರಪ್ಪ ವಾರ್ತಿ(ತೃತೀಯ), ಕರುಗಳ ವಿಭಾಗದಲ್ಲಿ ನಟರಾಜ ಕುಳೆನೂರ(ಪ್ರಥಮ) ಬಸವರಾಜ ಅಗಡಿ(ದ್ವಿತೀಯ)ಮಾಲತೇಶ್ ಜೀವಣ್ಣನವರ(ತೃತೀಯ), ಖಿಲಾರಿ ಎತ್ತುಗಳ ವಿಭಾಗದಲ್ಲಿ ರಾಜಪ್ಪ ಕಿತ್ತೂರು(ಪ್ರಥಮ), ಪಿ.ಡಿ.ವಾರ್ತಿ(ದ್ವಿತೀಯ), ಶೇಖಪ್ಪ ಹೊಗೆಸೊಪ್ಪಿನವರ(ತೃತೀಯ) ಬಹುಮಾನ ಪಡೆದರು.

ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಿದ್ದರಾಜ ಕಲಕೋಟಿ, ವಿರುಪಾಕ್ಷಪ್ಪ ಕಡ್ಲಿ, ಕೊಟ್ರೇಶಪ್ಪ ಬಸೇಗಣ್ಣಿ, ಪಿ.ಡಿ.ಶಿರೂರ, ಮಲ್ಲಿಕಾರ್ಜುನ ಹಾವೇರಿ, ಪ್ರಕಾಶ ಶೆಟ್ಟಿ, ರುದ್ರೇಶ್‌ ಚಿನ್ನಣ್ಣನವರ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು