ಹಾವೇರಿ: ಯಾಲಕ್ಕಿ ಕಂಪಿನ ನಾಡು ಖ್ಯಾತಿಯ ಹಾವೇರಿ ಜಿಲ್ಲೆಯಲ್ಲಿ ಇದೀಗ ಮದ್ಯ ಅಕ್ರಮ ಮಾರಾಟ ಜೋರಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಹಗಲು– ರಾತ್ರಿ ಎನ್ನದೇ ಮದ್ಯ ಕುಡಿಯುವ ಗಂಡಂದಿರ ಜಗಳದಿಂದಾಗಿ ಮಹಿಳೆಯರ ಗೋಳು ಹೇಳತೀರದ್ದಾಗಿದೆ.

ಜಿಲ್ಲೆಯ ಹಲವು ಕಿರಾಣಿ– ಬೀಡಿ ಅಂಗಡಿಗಳು, ಹೋಟೆಲ್ಗಳು, ಪಾನ್ಶಾಪ್ಗಳು, ಎಗ್ರೈಸ್ ಅಂಗಡಿಗಳು ಹಾಗೂ ಇತರೆ ಕಡೆಗಳಲ್ಲಿ ರಾಜಾರೋಷವಾಗಿ ಮದ್ಯವನ್ನು ಅಕ್ರಮವಾಗಿ ಮಾರಲಾಗುತ್ತಿದೆ. ಇದು ಗೊತ್ತಿದ್ದರೂ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ. ಆಗಾಗ ಜನರಿಂದ ವಿರೋಧ ವ್ಯಕ್ತವಾದ ಸಂದರ್ಭದಲ್ಲಿ ಮಾತ್ರ, ಕಾಟಾಚಾರಕ್ಕೆ ಕಾರ್ಯಾಚರಣೆ ಮಾಡಿ ಮೌನವಾಗುತ್ತಿದ್ದಾರೆ.

ಬಾರ್, ಎಂಆರ್ಪಿ ಮಳಿಗೆ ಸೇರಿದಂತೆ ನಿಗದಿತ ಸ್ಥಳಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಅನುಮತಿ ನೀಡಿದೆ. ಜೊತೆಗೆ, ಕ್ರಮಬದ್ಧವಾದ ಮಾರಾಟವನ್ನು ಪರಿಶೀಲಿಸಲು ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಆದರೆ, ಅಧಿಕಾರಿಗಳು ‘ಮಾಮೂಲಿ’ ಆಸೆಗಾಗಿ ಮದ್ಯ ಅಕ್ರಮ ಮಾರಾಟದ ಮೇಲೆ ನಿಗಾ ವಹಿಸುತ್ತಿಲ್ಲ. ಕೆಲ ಅಧಿಕಾರಿಗಳು, ತಮ್ಮ ಕರ್ತವ್ಯವನ್ನು ಮರೆತು ಕಚೇರಿಯಲ್ಲಿಯೇ ಕುಳಿತು ದಿನದೂಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಾತ್ರ ಮದ್ಯ ಅಕ್ರಮ ಮಾರಾಟದಿಂದ ಹಲವು ಕುಟುಂಬಗಳು ಬೀದಿಗೆ ಬೀಳುತ್ತಿವೆ.

ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಹಾನಗಲ್, ಶಿಗ್ಗಾವಿ, ಹಿರೇಕೆರೂರು, ರಟ್ಟೀಹಳ್ಳಿ, ಸವಣೂರು ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದೆ. ಮನೆ, ಜಮೀನುಗಳ ಪಕ್ಕದಲ್ಲಿಯೇ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಜನರಿಗೆ ಸುಲಭವಾಗಿ ಮದ್ಯ ಸಿಗುತ್ತಿದ್ದು, ಹಲವರು ದಿನದ 24 ಗಂಟೆಯೂ ನಶೆಯಲ್ಲಿ ತೇಲುತ್ತಿದ್ದಾರೆ. ಅಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟದ ವಿರುದ್ಧ ಧ್ವನಿ ಎತ್ತಿರುವ ಹಲವರು, ವಿಡಿಯೊ ಹಾಗೂ ಫೋಟೊ ಸಮೇತ ಅಬಕಾರಿ ಹಾಗೂ ಪೊಲೀಸರಿಗೆ ದೂರು ನೀಡುತ್ತಿದ್ದಾರೆ. ಆದರೆ, ಅಧಿಕಾರಿಗಳು ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿದ್ದಾರೆ. ವಿಡಿಯೊ–ಫೋಟೊ ಇಟ್ಟುಕೊಂಡು ವಸೂಲಿಗೆ ಇಳಿಯುತ್ತಿರುವ ಆರೋಪವೂ ಇದೆ.

‘ನಮ್ಮ ಗ್ರಾಮದ ಹಲವು ಅಂಗಡಿಗಳನ್ನು ಮದ್ಯ ಅಕ್ರಮವಾಗಿ ಮಾರಲಾಗುತ್ತಿದೆ. ಸುಲಭವಾಗಿ ಮದ್ಯ ಸಿಗುತ್ತಿರುವುದರಿಂದ ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಸಣ್ಣ ವಯಸ್ಸಿನಲ್ಲಿಯೇ ಯುವಕರು ಮದ್ಯ ಕುಡಿಯುತ್ತಿದ್ದಾರೆ. ಇದರಿಂದ ಅವರ ಭವಿಷ್ಯ ಹಾಳಾಗುತ್ತಿದೆ. ಮದ್ಯದ ಅಮಲಿನಲ್ಲಿ ಯುವಜನತೆ ದಾರಿ ತಪ್ಪುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ಮುಂದಿನ ದಿನಗಳು ಅಪಾಯಕಾರಿಯಾಗಿರಲಿವೆ’ ಎಂದು ಹಾನಗಲ್ ತಾಲ್ಲೂಕಿನ ಬ್ಯಾಗವಾದಿ ನಿವಾಸಿಗಳು ಹೇಳಿದರು.

‘ಹಣದಾಸೆಗಾಗಿ ಕೆಲವರು, ಮದ್ಯವನ್ನು ಅಕ್ರಮವಾಗಿ ಮಾರುತ್ತಿದ್ದಾರೆ. ಹಗಲು–ರಾತ್ರಿ ಎನ್ನದೇ ಜನರು ಕುಡಿಯುತ್ತಿದ್ದಾರೆ. ದುಡಿಮೆಗೂ ಹೋಗುತ್ತಿಲ್ಲ. ರಸ್ತೆಯಲ್ಲಿ ಮಲಗುತ್ತಿದ್ದಾರೆ. ಗಂಡಂದಿರನ್ನು ನಂಬಿಕೊಂಡಿರುವ ಮಹಿಳೆಯರು ನಿತ್ಯವೂ ಯಾತನೆ ಅನುಭವಿಸುತ್ತಿದ್ದಾರೆ’ ಎಂದು ಗೋಳು ಹೇಳಿಕೊಂಡರು.

ಗ್ರಾಮೀಣ ಪ್ರದೇಶದಲ್ಲಿ ಅಶಾಂತಿ: ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲೂ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿರುವುದು ಜಗಜ್ಜಾಹೀರವಾಗಿದೆ. ಕೆಲ ವಿದ್ಯಾರ್ಥಿಗಳು, ರೈತರು, ಕೃಷಿ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಸೇರಿದಂತೆ ಬಹುತೇಕರು ಅಂಗಡಿಗಳನ್ನು ಮದ್ಯ ಅಕ್ರಮವಾಗಿ ಖರೀದಿಸಿ ಕುಡಿಯುತ್ತಿದ್ದಾರೆ. ಕ್ರಮೇಣ ಮದ್ಯದ ದಾಸರಾಗುತ್ತಿದ್ದಾರೆ. ಇದರಿಂದಾಗಿ ಇಡೀ ಗ್ರಾಮದಲ್ಲಿ ಗಲಾಟೆ– ಜಗಳಗಳು ನಡೆಯುತ್ತಿದ್ದು, ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ.

ದಂಪತಿ ನಡುವೆ ವಿಚ್ಛೇದನ ಆಗುತ್ತಿದೆ. ಕುಟುಂಬಗಳು ಇಬ್ಭಾಗವಾಗುತ್ತಿದೆ. ತಂದೆ–ತಾಯಿ ಇದ್ದರೂ ಮಕ್ಕಳು ಅನಾಥರಾಗುತ್ತಿದ್ದಾರೆ. ಗ್ರಾಮದ ಹಲವು ಸ್ಥಳಗಳಲ್ಲಿ ಮದ್ಯದ ಖಾಲಿ ಪೊಟ್ಟಣಗಳನ್ನು ಎಸೆದು, ರಾಶಿ ಹಾಕುತ್ತಿರುವ ದೃಶ್ಯಗಳೂ ಕಂಡುಬರುತ್ತಿವೆ. ಕೆಲವರು, ಶೆಡ್ ನಿರ್ಮಿಸಿಕೊಂಡು ಮದ್ಯ ಮಾರುತ್ತಿದ್ದಾರೆ.

‘ಕೆಲ ವರ್ಷಗಳ ಹಿಂದೆಯಷ್ಟೇ ಹಿರಿಯರು ಮಾತ್ರ ಮದ್ಯವ್ಯಸನಿಗಳಾಗಿದ್ದರು. ಈಗ ಎಲ್ಲೆಂದರಲ್ಲಿ ಮದ್ಯ ಸಿಗುತ್ತಿದೆ. ಇದರಿಂದಾಗಿ ಯುವಕರು, ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಮದ್ಯದ ಅಮಲಿನಲ್ಲಿ ಊರೂರು ಅಲೆಯುತ್ತಿದ್ದು, ಸಣ್ಣ–ಪುಟ್ಟ ವಿಚಾರಕ್ಕೂ ಗಲಾಟೆಗಳು ಆಗುತ್ತಿವೆ. ಹಲ್ಲೆ, ಕೊಲೆ ಯತ್ನ, ಅಪಘಾತ... ಹೀಗೆ ಹಲವು ಅಪರಾಧ ಪ್ರಕರಣಗಳಲ್ಲಿ ಮದ್ಯವ್ಯಸನಿಗಳು ಭಾಗಿಯಾಗುತ್ತಿದ್ದಾರೆ. ಮದ್ಯ ಖರೀದಿಸಲು ಹಣ ಹೊಂದಿಸುವುದಕ್ಕಾಗಿ ಹಲವರು ಕಳ್ಳತನಕ್ಕೆ ಇಳಿಯುತ್ತಿದ್ದಾರೆ’ ಎಂದು ಶಿಗ್ಗಾವಿ ತಾಲ್ಲೂಕಿನ ಅಂದಲಗಿ ಗ್ರಾಮದ ಮಂಜಮ್ಮ ದೂರಿದರು.

‘ಮದ್ಯದ ಅಮಲಿನಲ್ಲಿ ಮನೆ ಮುಂದೆ ಬಂದು ಯುವಕರು ಗಲಾಟೆ ಮಾಡುತ್ತಿದ್ದಾರೆ. ಅದನ್ನು ಪ್ರಶ್ನಿಸಿದರೆ, ನಮ್ಮ ಮೇಲೆಯೇ ಹಲ್ಲೆ ಮಾಡುತ್ತಾರೆ. ಇದು ನಮ್ಮ ಮನೆಯ ಸಮಸ್ಯೆಯಲ್ಲ. ಇಡೀ ಊರಿನಲ್ಲಿ ಇಂಥ ಸಮಸ್ಯೆಯಿದೆ. ಗ್ರಾಮದ ಪ್ರತಿಯೊಂದು ಅಂಗಡಿಗಳಲ್ಲಿ ಮದ್ಯ ಸಿಗುತ್ತಿದ್ದು, ಇದರಿಂದ ಗ್ರಾಮದ ವಾತಾವರಣ ಹಾಳಾಗಿದೆ. ಜಾತ್ರೆ, ಕಾರ್ಯಕ್ರಮಗಳಲ್ಲಿಯೂ ಗಲಾಟೆಗಳು ಆಗುತ್ತಿವೆ’ ಎಂದು ಶಿಗ್ಗಾವಿ ತಾಲ್ಲೂಕಿನ ಹೊಸೂರು ಗ್ರಾಮಸ್ಥರು ಹೇಳಿದರು.

ಬಾರ್ ಮಾಲೀಕರ ಮೇಲಿಲ್ಲ ಕ್ರಮ: ಕಿರಾಣಿ ಹಾಗೂ ಬೀಡಿ ಅಂಗಡಿಗಳ ಮೇಲೆ ದಾಳಿ ಮಾಡುತ್ತಿರುವ ಪೊಲೀಸರು, ಮದ್ಯ ಅಕ್ರಮ ಮಾರಾಟ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಅಂಗಡಿಗಳ ಮಾಲೀಕರ ಮೇಲಷ್ಟೇ ಕ್ರಮ ಜರುಗಿಸುತ್ತಿದ್ದಾರೆ. ಆದರೆ, ಮದ್ಯದ ಪೊಟ್ಟಣದ ಮೇಲಿರುವ ಸಂಖ್ಯೆ ಆಧರಿಸಿ, ಬಾರ್ ಮಾಲೀಕರ ವಿರುದ್ಧ ಮಾತ್ರ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ.

‘ಬಾರ್ ಮಾಲೀಕರೇ ತಮ್ಮ ಕೆಲಸಗಾರರ ಮೂಲಕ ಹಳ್ಳಿ ಹಳ್ಳಿಗಳಿಗೆ ಅಕ್ರಮವಾಗಿ ಮದ್ಯ ಪೂರೈಸುತ್ತಿದ್ದಾರೆ. ಇದರಿಂದ ತಮ್ಮ ಆದಾಯ ವೃದ್ಧಿಸಿಕೊಳ್ಳುತ್ತಿದ್ದಾರೆ. ಆದರೆ, ಪೊಲೀಸರು ದಾಳಿ ಮಾಡಿದಾಗ ಮಾತ್ರ ಕಿರಾಣಿ ಅಂಗಡಿಯವರನ್ನು ಮಾತ್ರ ಆರೋಪಿಯನ್ನಾಗಿ ಮಾಡಲಾಗುತ್ತಿದೆ. ಮಾಲೀಕರು ಬಚಾವಾಗುತ್ತಿದ್ದು, ತಮ್ಮ ಹಳೇ ಚಾಳಿಯನ್ನೇ ಮುಂದುವರಿಸುತ್ತಿದ್ದಾರೆ’ ಎಂದು ಬ್ಯಾಡಗಿಯ ನಿವಾಸಿ ಶಂಕರಪ್ಪ ಮೇಗಣ್ಣನವರ ದೂರಿದರು.

‘ಬಾರ್ ಮಾಲೀಕರು, ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ತಿಂಗಳ ಮಾಮೂಲಿ ಪಡೆದುಕೊಂಡು, ಮದ್ಯ ಅಕ್ರಮ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಇವರ ನಿರ್ಲಕ್ಷ್ಯದಿಂದಲೇ ಇಂದು ಗ್ರಾಮಗಳಲ್ಲಿ ಮದ್ಯ ಅಕ್ರಮವಾಗಿ ಮಾರಾಟವಾಗುತ್ತಿದೆ. ಗ್ರಾಮಗಳ ನೆಮ್ಮದಿಯೇ ಹಾಳಾಗುತ್ತಿದೆ’ ಎಂದು ಆರೋಪಿಸಿದರು.

ಆಸ್ಪತ್ರೆ ಸೇರುತ್ತಿರುವ ಯುವಕರು: ಸಣ್ಣ ವಯಸ್ಸಿನಲ್ಲಿಯೇ ಹಲವು ಯುವಕರು ಮದ್ಯದ ಚಟಕ್ಕೆ ಅಂಟಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಅವರ ಆರೋಗ್ಯ ಹದಗೆಡುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಕಿಡ್ನಿ ಹಾಗೂ ಲೀವರ್ ಸಮಸ್ಯೆಯಿಂದಾಗಿ ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ.

ಮನೆಗೆ ಆಧಾರವಾಗಲೆಂದು ಪೋಷಕರು ಮಗನನ್ನು ಬೆಳೆಸುತ್ತಿದ್ದಾರೆ. ಆದರೆ, ಅದೇ ಮಗ ಮದ್ಯವ್ಯಸನಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾನೆ. ಪೋಷಕರ ಕಣ್ಣೆದುರೇ ಮಗ ಹಾಸಿಗೆ ಹಿಡಿದ ಪ್ರಸಂಗಗಳೂ ನಡೆಯುತ್ತಿವೆ.

ಪ್ರತಿ ಸಭೆಯಲ್ಲೂ ಪ್ರಸ್ತಾಪ: ಜಿಲ್ಲಾ ಉಸ್ತುವಾರಿ ಸಚಿವ, ಸಂಸದ, ಶಾಸಕರು ನಡೆಸುವ ಪ್ರತಿ ಸಭೆಯಲ್ಲೂ ಮದ್ಯ ಅಕ್ರಮ ಮಾರಾಟದ ಬಗ್ಗೆ ಪ್ರಸ್ತಾಪವಾಗುತ್ತಿದೆ. ಮದ್ಯ ಅಕ್ರಮ ತಡೆಯುವಂತೆ ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೂ ಸೂಚನೆ ನೀಡಲಾಗುತ್ತಿದೆ. ಆದರೆ, ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳದೇ ಮೌನವಾಗುತ್ತಿದ್ದಾರೆ.

‘ಮದ್ಯ ಅಕ್ರಮ ಮಾರಾಟ ತಡೆಯುವಂತೆ ಹೇಳಿ ಹೇಳಿ ಸಾಕಾಗಿದೆ. ನಮಗೇ ನಾಚಿಕೆ ಬರುತ್ತಿದೆ. ದಪ್ಪ ಚರ್ಮ ಅಧಿಕಾರಿಗಳಿಗೆ ನಾವು ಹೇಳುವುದು ತಾಗುತ್ತಿಲ್ಲ’ ಎಂದು ಶಾಸಕರು ಇತ್ತೀಚೆಗೆ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಅಳಲು ತೋಡಿಕೊಂಡಿದ್ದರು. ಮದ್ಯ ಅಕ್ರಮ ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚನೆ ನೀಡಿದ್ದರು. ಮೇಲಿಂದ ಮೇಲೆ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು, ನಂತರ ಮೌನವಾಗಿದ್ದಾರೆ.

ಮದ್ಯದ ವಿರುದ್ಧ ಹೋರಾಟ: ಶಿಗ್ಗಾವಿ ತಾಲ್ಲೂಕಿನ ಹೋತನಹಳ್ಳಿ, ಹಾನಗಲ್ ತಾಲ್ಲೂಕಿನ ಆರೇಗೊಪ್ಪದ ಮಹಿಳೆಯರು ಇತ್ತೀಚೆಗೆ ಮದ್ಯ ಅಕ್ರಮ ಮಾರಾಟದ ವಿರುದ್ಧ ಹೋರಾಟ ನಡೆಸಿದ್ದರು. ಇದೇ ರೀತಿಯಲ್ಲಿಯೇ ಇತರೆ ಗ್ರಾಮಗಳಲ್ಲಿಯೂ ಹೋರಾಟದ ಅಗತ್ಯವಿದೆ.

‘ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿಯೂ ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಮಾರು ವೇಷದಲ್ಲಿ ಕಾರ್ಯಾಚರಣೆ ನಡೆಸಬೇಕು. ಅಕ್ರಮವಾಗಿ ಮದ್ಯ ಮಾರುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು’ ಎಂದು ಜನರು ಆಗ್ರಹಿಸುತ್ತಿದ್ದಾರೆ.

ಮದ್ಯ ಹಂಚಲು ಆಟೊ– ವಾಹನ

ಕೆಲ ಬಾರ್ಗಳ ಮಾಲೀಕರು ಆಟೊ–ವಾಹನಗಳಲ್ಲಿ ಹಳ್ಳಿ ಹಳ್ಳಿಗೂ ಮದ್ಯ ಸರಬರಾಜು ಮಾಡುತ್ತಿದ್ದಾರೆ. ಅದೇ ಆಟೊ–ವಾಹನ ಚಾಲಕರು ಮದ್ಯವನ್ನು ಕೊಟ್ಟು ಹಣ ಪಡೆದುಕೊಳ್ಳುತ್ತಿದ್ದಾರೆ. ಆಟೊ–ವಾಹನಗಳ ಮೂಲಕ ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.

ದೇವರಗುಡ್ಡದಲ್ಲೂ ಮದ್ಯ ಅಕ್ರಮ ಹಾವಳಿ

ಮಾಲತೇಶ ದೇವರು ನೆಲೆಸಿರುವ ದೇವರಗುಡ್ಡದ ಸುಕ್ಷೇತ್ರದಲ್ಲೂ ಮದ್ಯ ಅಕ್ರಮ ಮಾರಾಟದ ಹಾವಳಿ ಹೆಚ್ಚಾಗಿದೆ. 30ಕ್ಕೂ ಹೆಚ್ಚು ಅಂಗಡಿಗಳಲ್ಲಿ ಮದ್ಯ ಮಾರುತ್ತಿರುವ ಬಗ್ಗೆ ಉಪ ಲೋಕಾಯುಕ್ತರಿಗೆ ಇತ್ತೀಚೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಇದಾದ ನಂತರವೂ ದೇವರಗುಡ್ಡದಲ್ಲಿ ಮದ್ಯ ಮಾರಾಟ ಮುಂದುವರಿದಿದೆ.

‘ದೇವರಗುಡ್ಡಕ್ಕೆ ನಿತ್ಯವೂ ಸಾವಿರಾರೂ ಸಂಖ್ಯೆಯಲ್ಲಿ ಭಕ್ತರು ಬಂದು ಹೋಗುತ್ತಿದ್ದಾರೆ. ಇಂಥ ಸ್ಥಳದಲ್ಲಿಯೇ ಮದ್ಯವನ್ನು ಅಕ್ರಮವಾಗಿ ಮಾರಲಾಗುತ್ತಿದೆ. ಇದರಿಂದ ಕ್ಷೇತ್ರದಲ್ಲಿ ಮದ್ಯವ್ಯಸನಿಗಳು ಹೆಚ್ಚಾಗಿ ಜಗಳಗಳು ನಡೆಯುತ್ತಿವೆ. ಸುಕ್ಷೇತ್ರದ ವಾತಾವರಣವೂ ಹಾಳಾಗುತ್ತಿದೆ’ ಎಂದು ಗ್ರಾಮಸ್ಥರು ದೂರಿದರು.

‘ಆಟೊದಲ್ಲಿ ಮದ್ಯವನ್ನು ಅಂಗಡಿಗಳಿಗೆ ಹಂಚಲಾಗುತ್ತಿದೆ. ಈ ಬಗ್ಗೆ ವಿಡಿಯೊ–ಫೋಟೊ ಸಮೇತ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

ಶಾಸಕರ ಹೆಸರಿನಲ್ಲಿ ಧಮ್ಕಿ

ಅಬಕಾರಿ ಹಾಗೂ ಪೊಲೀಸರ ಇಲಾಖೆಯ ಕೆಲ ಅಧಿಕಾರಿಗಳು ಮದ್ಯ ಅಕ್ರಮ ಮಾರಾಟಗಾರರನ್ನು ಬಂಧಿಸಲು ಹೋಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೆಲವರು ಶಾಸಕರ ಹೆಸರಿನಲ್ಲಿ ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ.

‘ಮದ್ಯ ಮಾರಾಟ ಮಾಡುವವನು ನಮ್ಮ ಪಕ್ಷದವನು. ಅವನನ್ನು ಬಿಟ್ಟುಬಿಡಿ. ಇಲ್ಲದಿದ್ದರೆ ಶಾಸಕರಿಗೆ ಹೇಳಿ ನಿಮ್ಮನ್ನು ಅಮಾನತು ಮಾಡಿಸುತ್ತೇವೆ’ ಎಂದು ಹೆದರಿಸುತ್ತಿದ್ದಾರೆ. ಈ ಕಾರಣಕ್ಕೂ ಅಧಿಕಾರಿಗಳು ಮದ್ಯ ಅಕ್ರಮ ತಡೆಯಲು ಹಿಂದೇಟು ಹಾಕುತ್ತಿದ್ದಾರೆ.

ನಮ್ಮೂರಿನ ಯುವಕರು ಓದಿನಲ್ಲಿ ಮುಂದಿದ್ದರು. ಎಲ್ಲೆಂದರಲ್ಲಿ ಮದ್ಯ ಸಿಗುತ್ತಿರುವುದರಿಂದ ಕುಡಿತದ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ
ಪ್ರಕಾಶ, ಶಿಗ್ಗಾವಿ ತಾಲ್ಲೂಕಿನ ಗ್ರಾಮವೊಂದರ ಶಿಕ್ಷಕ

ಪಟ್ಟಣದ ಬಾರ್ನಲ್ಲಿ ಮದ್ಯ ಸಿಗುತ್ತಿದ್ದರಿಂದ ನನ್ನ ಗಂಡ ವಾರಕ್ಕೊಮ್ಮೆ ಕುಡಿಯುತ್ತಿದ್ದ. ಈಗ ನಮ್ಮೂರಿನ ಕಿರಾಣಿ ಅಂಗಡಿಯಲ್ಲೇ ಮದ್ಯ ಸಿಗುತ್ತಿದ್ದು 24 ಗಂಟೆಯೂ ಕುಡಿಯುತ್ತಿದ್ದಾನೆ.
ಲಕ್ಷಮ್ಮ , ಸೋಮಸಾಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.