ಹಿರೇಕೆರೂರು: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದ್ದು ಅಧ್ಯಕ್ಷರಾಗಿ ಸುಧಾ ಚಿಂದಿ, ಉಪಾಧ್ಯಕ್ಷರಾಗಿ ರಾಜು ಕರಡಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ,ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿಯಾಗಿತ್ತು. ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಗುರುವಾರ ಜರುಗಿದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆಯಾಗಿದ್ದವು. 20 ಸದಸ್ಯರ ಪೈಕಿ ಒಬ್ಬ ಸದಸ್ಯರು ಗೈರಾಗಿದ್ದು ಸ್ಥಳೀಯ ಶಾಸಕರು ಸೇರಿ 20 ಸದಸ್ಯರು ಮತ ಚಲಾಯಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಸುಧಾ ಚಿಂದಿ ಬಿಜೆಪಿಯಿಂದ ಕುಸುಮಾ ಬಣಕಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ರಾಜು ಕರಡಿ ಬಿಜೆಪಿಯಿಂದ ಹರೀಶ ಕಲಾಲ ನಾಮಪತ್ರ ಸಲ್ಲಿಸಿದ್ದರು. ಸಭೆಯಲ್ಲಿ ಸದಸ್ಯರ ಕೈಯೆತ್ತುವ ಮೂಲಕ ಮತಕ್ಕೆ ಹಾಕಲಾಗಿ ಅಧ್ಯಕ್ಷ ಸ್ಥಾನದ ಸುಧಾ ಚಿಂದಿ ಹಾಗೂ ಉಪಾಧ್ಯಕ್ಷ ಸ್ಥಾನದ ರಾಜು ಕರಡಿ ಅವರಿಗೆ ತಲಾ 11 ಮತಗಳು ಲಭಿಸಿದ ಹಿನ್ನಲೆಯಲ್ಲಿ ಹೆಚ್ಚು ಮತ ಪಡೆದ ಸದಸ್ಯರ ಹೆಸರನ್ನು ಚುನಾವಣಾ ಅಧಿಕಾರಿ ಘೋಷಣೆ ಮಾಡಿದರು.
ಅಧ್ಯಕ್ಷರಾಗಿ ಸುಧಾ ಚಿಂದಿ ಉಪಾಧ್ಯಕ್ಷರಾಗಿ ರಾಜು ಕರಡಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಎಚ್.ಪ್ರಭಾಕರಗೌಡ ಕಾರ್ಯನಿರ್ವಹಿಸಿದರು.
ಅಭಿನಂದನಾ ಸಮಾರಂಭ: ನಂತರ ಪಪಂ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಯು.ಬಿ.ಬಣಕಾರ ಅವರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿದರು.
ಆನಂತರ ಮಾತನಾಡಿ, ‘ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ಪಟ್ಟಣವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಬೇಕು. ನಾನು ಸಹ ಪಟ್ಟಣದ ಅಭಿವೃದ್ಧಿಗೆ ನಿಮ್ಮ ಜತೆ ಇರುತ್ತೇನೆ. ಪರಸ್ಪರ ಸಹಕಾರದೊಂದಿಗೆ ಒಳ್ಳೆಯ ಕೆಲಸ ಕಾರ್ಯಗಳನ್ನು ಕೈಗೊಳ್ಳಬೇಕು. ನಿಮ್ಮೆಲ್ಲರ ಉದ್ದೇಶ ಪಟ್ಟಣದ ಅಭಿವೃದ್ಧಿಯ ಗುರಿಯಾಗಿರಬೇಕು. ಪಟ್ಟಣದ ಜನತೆಗೆ ಉತ್ತಮ ಆಡಳಿತ ನೀಡಿ ಅಧಿಕಾರ ಎಷ್ಟು ದಿನ ಇರುತ್ತದೆ ಎಂಬುದು ಮುಖ್ಯವಲ್ಲ. ಅಧಿಕಾರ ದೊರೆತಾಗ ಅಭಿವೃದ್ಧಿ ಪರವಾದ ಉತ್ತಮ ಆಡಳಿತ ನೀಡಬೇಕು’ ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷೆ ಸುಧಾ ಚಿಂದಿ ಹಾಗೂ ಉಪಾಧ್ಯಕ್ಷ ರಾಜು ಕರಡಿ ಮಾತನಾಡಿ, ಶಾಸಕ ಯು.ಬಿ.ಬಣಕಾರ ಹಾಗೂ ಸರ್ವ ಸದಸ್ಯರ ಮಾರ್ಗದರ್ಶನ ಪಡೆದು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಮಹೇಂದ್ರ ಬಡಳ್ಳಿ, ಗುರುಶಾಂತ ಎತ್ತಿನಹಳ್ಳಿ, ಕವಿತಾ ಹರ‍್ನಳ್ಳಿ, ಕಂಠಾಧರ ಅಂಗಡಿ, ದಿಲ್‌ಶಾದ್ ಬಳಿಗಾರ, ಬಸವರಾಜ ಕಟ್ಟಿಮನಿ, ರಮೇಶ ತೋರಣಗಟ್ಟಿ, ಸನಾವುಲ್ಲಾ ಮಕಾನ್ದಾರ್, ಚಂದ್ರಕಲಾ ಕೋರಿಗೌಡ್ರ, ಶಂಶದಾ ಕುಪ್ಪೇಲೂರು, ರಮೇಶ ಕೋಡಿಹಳ್ಳಿ, ಹರೀಶ ಕಲಾಲ್, ಹನುಮಂತಪ್ಪ ಕುರುಬರ, ಪೂಜಾ ತಂಬಾಕದ, ಅಲ್ತಾಫ್‌ಖಾನ ಪಠಾಣ ,ರಜಿಯಾ ಅಸದಿ, ಕುಸುಮಾ ಬಣಕಾರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಮೇಶ ಮಡಿವಾಳರ, ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರಿದ್ದರು.
ಸಂಭ್ರಮಾಚರಣೆ
ಅಧ್ಯಕ್ಷ, ಉಪಾಧ್ಯಕ್ಷರ ಹೆಸರು ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿದರು.
ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಶಾಸಕ ಯು.ಬಿ.ಬಣಕಾರ, ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ಅವರಿಗೆ ಜೈಕಾರ ಕೂಗುವ ಮೂಲಕ ಸಂಭ್ರಮ ಆಚರಿಸಿದರು.
ಆನಂತರ ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ ಸರ್ವಜ್ಞ ವೃತ್ತದವರೆಗೆ ನೂತನ ಅಧ್ಯಕ್ಷೆ , ಉಪಾಧ್ಯಕ್ಷ ಹಾಗೂ ಶಾಸಕ ಯು.ಬಿ.ಬಣಕಾರ ಮತ್ತು ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ಅವರನ್ನು ತರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.