ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ ಲೋಕಸಭಾ ಚುನಾವಣೆ: ಗೆಲುವಿನ ಮಾಲೆ ಯಾರ ಕೊರಳಿಗೆ?

ಕಣದಲ್ಲಿ 14 ಅಭ್ಯರ್ಥಿಗಳು
Published 4 ಜೂನ್ 2024, 4:14 IST
Last Updated 4 ಜೂನ್ 2024, 4:14 IST
ಅಕ್ಷರ ಗಾತ್ರ

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ 14 ಅಭ್ಯರ್ಥಿಗಳ ಹಣೆಬರಹ  ಮಂಗಳವಾರ (ಜೂನ್‌ 4) ನಿರ್ಧಾರವಾಗಲಿದೆ. ಗೆಲುವಿನ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದು ಸದ್ಯದ ಕುತೂಹಲವಾಗಿದೆ. 

ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ಚುನಾವಣಾ ಕಣದಲ್ಲಿದ್ದು, ಅನುಭವಿ ರಾಜಕಾರಣಿ ಮತ್ತು ಯುವ ರಾಜಕಾರಣಿಯ ನಡುವೆ ತೀವ್ರ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿತ್ತು. 

ಶಿಗ್ಗಾವಿ–ಸವಣೂರು ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿ, ಗೃಹ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರಸ್ತುತ ಶಾಸಕರಾಗಿದ್ದರೂ ರಾಜ್ಯ ರಾಜಕಾರಣದಿಂದ ಕೇಂದ್ರ ರಾಜಕಾರಣದತ್ತ ದಿಢೀರ್‌ ಮುಖ ಮಾಡಿರುವುದು ಕುತೂಹಲ ಮೂಡಿಸಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಮತ್ತು ಜಿಲ್ಲೆಯಲ್ಲಿ ಜಾರಿಗೊಳಿಸಿರುವ ಅಭಿವೃದ್ಧಿ ಕಾಮಗಾರಿಗಳು ಗೆಲುವಿನ ದಡ ಮುಟ್ಟಿಸಲಿವೆ ಎಂಬ ಅಚಲ ನಂಬಿಕೆ ಬೊಮ್ಮಾಯಿಯವರದ್ದು. 

ಆನಂದಸ್ವಾಮಿ ಗಡ್ಡದೇವರಮಠ ಅವರು ಶಿರಹಟ್ಟಿಯ ಮಾಜಿ ಶಾಸಕ ಜಿ.ಎಸ್‌. ಗಡ್ಡದೇವರಮಠ ಅವರ ಪುತ್ರರಾಗಿದ್ದಾರೆ. 2011ರಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. 2013ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಸ್ಪರ್ಧಿಸಿದ್ದರು. ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ಈ ಬಾರಿ ಚುನಾವಣೆಯಲ್ಲಿ ‘ಕೈ’ ಹಿಡಿಯಲಿವೆ ಎಂಬ ಅದಮ್ಯ ವಿಶ್ವಾಸ ಇವರದ್ದು. 

ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಿಂದ 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ನಂತರ 2009ರಲ್ಲಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಚುನಾವಣೆ ನಡೆಯಿತು. ಕಳೆದ ಮೂರು ಚುನಾವಣೆಗಳಲ್ಲೂ (2009, 2014, 2019) ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವಕುಮಾರ ಉದಾಸಿ ಅವರು ’ಹ್ಯಾಟ್ರಿಕ್‌ ಗೆಲುವು’ ಸಾಧಿಸಿದ್ದರು. ಈ ಬಾರಿ ಅವರು ಚುನಾವಣೆ ಘೋಷಣೆಗೂ ಮುನ್ನವೇ ವೈಯಕ್ತಿಕ ಕಾರಣ ನೀಡಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.  

ಗೆಲುವಿನ ಓಟ ಮುಂದುವರಿಸಲು ಬಿಜೆಪಿಯು ಎಂದಿನಂತೆ ಹಾವೇರಿ ಮೂಲದ ವೀರಶೈವ ಲಿಂಗಾಯತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಕಾಂಗ್ರೆಸ್‌ ಕೂಡ ವೀರಶೈವ ಲಿಂಗಾಯತ ಸಮುದಾಯದ ಹೊಸ ಮುಖಕ್ಕೆ ಮಣೆ ಹಾಕಿ, ಪ್ರಬಲ ಸ್ಪರ್ಧೆಯೊಡ್ಡಿತ್ತು. 

ಹಾವೇರಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳು ಮತ್ತು ಗದಗ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 7 ಕಾಂಗ್ರೆಸ್‌ ಶಾಸಕರು, ಒಬ್ಬರು ಬಿಜೆಪಿ ಶಾಸಕ ಇದ್ದಾರೆ. ಹೀಗಾಗಿ ಕಾಂಗ್ರೆಸ್‌ ಗೆಲುವಿಗೆ ಅನುಕೂಲಕರ ವಾತಾವರಣವಿದೆ ಎಂಬುದು ಕಾಂಗ್ರೆಸ್‌ ಮುಖಂಡರ ಲೆಕ್ಕಾಚಾರ. 

ಕಳೆದ ಮೂರು ಚುನಾವಣೆಗಳಲ್ಲೂ ಬಿಜೆಪಿ ಸತತವಾಗಿ ಜಯಭೇರಿ ಬಾರಿಸಿರುವುದರಿಂದ ಹಾವೇರಿ ಬಿಜೆಪಿ ಪಾಲಿಗೆ ಭದ್ರಕೋಟೆ ಇದ್ದಂತೆ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರ ಗೆಲುವು ನಿಶ್ಚಿತ ಎಂಬುದು ಬಿಜೆಪಿ ಮುಖಂಡರ ವಾದ. 

ಹಾವೇರಿ ಲೋಕಸಭಾ ಕ್ಷೇತ್ರದ ನೂತನ ಸಂಸದ ಯಾರಾಗಲಿದ್ದಾರೆ ಎಂಬ ಗುಟ್ಟನ್ನು ಮತದಾರರು ಇದುವರೆಗೂ ಬಿಟ್ಟುಕೊಟ್ಟಿಲ್ಲ. ಮತಯಂತ್ರಗಳಲ್ಲಿ ಅಡಗಿರುವ ಫಲಿತಾಂಶ ಮಂಗಳವಾರ ಹೊರಬಿದ್ದ ನಂತರವೇ ಗುಟ್ಟು ರಟ್ಟಾಗಲಿದೆ. 

ಆನಂದಸ್ವಾಮಿ ಗಡ್ಡದೇವರಮಠ
ಆನಂದಸ್ವಾಮಿ ಗಡ್ಡದೇವರಮಠ

Cut-off box - ಕ್ರ.ಸಂ;ಅಭ್ಯರ್ಥಿಗಳು;ಪಕ್ಷ;ಚಿಹ್ನೆ 01;ಆನಂದಸ್ವಾಮಿ ಗಡ್ಡದೇವರಮಠ;ಕಾಂಗ್ರೆಸ್;ಕೈ02;ಬಸವರಾಜ ಬೊಮ್ಮಾಯಿ;ಬಿಜೆಪಿ;ಕಮಲ03;ಖಾಜಾಮೋಹಿದ್ದೀನ್ ಗುಡಗೇರಿ;ಸೋಷಿಯಲಿಸ್ಟ್ ಪಾರ್ಟಿ(ಇಂಡಿಯಾ); ಕಬ್ಬು ರೈತ04;ಗಂಗಾಧರ ಬಡಿಗೇರ;ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್);ಗಾಜಿನ ಲೋಟ05;ತನು ಚಿಕ್ಕಣ್ಣ ಯಾದವ್;ಕರ್ನಾಟಕ ರಾಷ್ಟ್ರ ಸಮಿತಿ;ಬ್ಯಾಟರಿ ಟಾರ್ಚ್06;ಎಚ್.ಕೆ.ನರಸಿಂಹಪ್ಪ;ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ);ತೆಂಗಿನ ತೋಟ07;ರಶೀದಾ ಬೇಗಂ;ಇಂಡಿಯನ್ ಮೂವ್‍ಮೆಂಟ್ ಪಾರ್ಟಿ;ಸೀಟಿ(ವ್ಹಿಸಿಲ್)08;ವಿಶ್ವನಾಥ ಶೀರಿ;ಏಕಂ ಸನಾತನ ಭಾರತ ದಳ;ಕೊಳಲು09;ಪ್ರಜಾಕೀಯ ಸಚಿನಕುಮಾರ ಕರ್ಜೆಕಣ್ಣನವರ;ಉತ್ತಮ ಪ್ರಜಾಕೀಯ ಪಾರ್ಟಿ;ಆಟೊರಿಕ್ಷಾ10;ಡಾ.ಜಿ.ಎಚ್.ಇಮ್ರಾಪೂರ;ಪಕ್ಷೇತರ;ಸೇಬು11;ಜಗದೀಶ ಯಲ್ಲಪ್ಪ ಬಂಕಾಪೂರ;ಪಕ್ಷೇತರ;ಗ್ಯಾಸ್ ಸಿಲಿಂಡರ್12;ಬಸವರಾಜ ಬ ಹಾದಿ;ಪಕ್ಷೇತರ;ಹೂಕೋಸು13;ರುದ್ರಪ್ಪ ಬಸಪ್ಪ ಕುಂಬಾರ;ಪಕ್ಷೇತರ;ಬ್ಯಾಟ್14;ಸುನಂದಾ ಕರಿಯಪ್ಪ ಶಿರಹಟ್ಟಿ;ಪಕ್ಷೇತರ;ಟ್ರಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT