ಶುಕ್ರವಾರ, ಏಪ್ರಿಲ್ 10, 2020
19 °C
ಹಾಲಿ–ಮಾಜಿ ಶಾಸಕರ ಪ್ರತಿಷ್ಠೆಯ ಪಣವಾದ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ

ಹಾವೇರಿ ನಗರಸಭೆ: ಜುಲೈ 11ಕ್ಕೆ ‘ಅವಿಶ್ವಾಸ’

ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

ನೆಹರು ಓಲೇಕಾರ

ಹಾವೇರಿ:  ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮಂಡನೆಯ ಸಭೆ ಇಂದು (ಜು.11) ನಡೆಯಲಿದ್ದು, ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ನಗರಸಭೆಯಲ್ಲಿ ಬಿಜೆಪಿ 18 ಹಾಗೂ ಕಾಂಗ್ರೆಸ್ 13 ಸೇರಿದಂತೆ ಒಟ್ಟು 31 ಸದಸ್ಯರಿದ್ದಾರೆ. ಸಂಸದ ಶಿವಕುಮಾರ್ ಉದಾಸಿ ಹಾಗೂ ಶಾಸಕ ನೆಹರು ಓಲೇಕಾರ ಅವರಿಗೆ ಮತ ಚಲಾವಣೆ ಹಕ್ಕಿದೆ. ಒಟ್ಟು ಮತಗಳು 33 ಆಗಲಿದ್ದು, ಬಿಜೆಪಿ ಬಲವು 20ಕ್ಕೇರಲಿದೆ.  ಆದರೆ, ಅವಿಶ್ವಾಸ ಗೊತ್ತುವಳಿ ಅಂಗೀಕೃತಗೊಳ್ಳಲು ಒಟ್ಟು ಸದಸ್ಯರ ಮೂರನೇ ಎರಡು ಬಹುಮತ ಬೇಕು. ಈ ನಿಟ್ಟಿನಲ್ಲಿ ಬಿಜೆಪಿಗೆ ಇನ್ನೂ ಕನಿಷ್ಠ ಎರಡು ಸದಸ್ಯರ ಬೆಂಬಲದ ಅವಶ್ಯಕತೆ ಇದೆ.

ನಗರಸಭೆಯ ಅವಧಿಯು ಸೆಪ್ಟೆಂಬರ್ 13ಕ್ಕೆ ಕೊನೆಗೊಳ್ಳಲಿದೆ. ಇದಕ್ಕೂ ಮೊದಲು ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ, ಯೋಜನೆ, ನೇಮಕಾತಿ, ಕಾಮಗಾರಿ, ಮಂಜೂರಾತಿ ಮತ್ತಿತರ ವಿಚಾರಗಳಲ್ಲಿ ಮೇಲುಗೈ ಸಾಧಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಟೊಂಕ ಕಟ್ಟಿ ನಿಂತಿವೆ. ಇದು ಕ್ಷೇತ್ರದ ಶಾಸಕ ನೆಹರು ಓಲೇಕಾರ ಹಾಗೂ ಮಾಜಿ ಶಾಸಕ ರುದ್ರಪ್ಪ ಲಮಾಣಿ ಮಧ್ಯದ ಪ್ರತಿಷ್ಠೆ ಹಾಗೂ ವಾಕ್ಸಮರಕ್ಕೆ ವೇದಿಕೆಯಾಗಿದೆ.

ಅವಿಶ್ವಾಸ:  ಬಿಜೆಪಿಯು ಎರಡು ತಂಡಗಳಲ್ಲಿ ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿಕೊಟ್ಟಿದೆ. ಇತ್ತ ಕಾಂಗ್ರೆಸ್‌ ಸದಸ್ಯರು ಒಗ್ಗಟ್ಟು ಕಾಯ್ದುಕೊಳ್ಳಲು ಒಂದೆಡೆ ಸೇರಿದ್ದಾರೆ. ‘ನಗರಸಭೆ ಅವಧಿ ತಿಂಗಳಲ್ಲಿ ಕೊನೆಗೊಳ್ಳಲಿದ್ದು, ಗೊಂದಲ ಮಾಡಿಕೊಳ್ಳಲು ಯಾರೂ ಇಚ್ಛಿಸುವುದಿಲ್ಲ. ನಮ್ಮೆಲ್ಲ ಸದಸ್ಯರು ಒಗ್ಗಟ್ಟಿನಿಂದ ಇದ್ದಾರೆ’ ಎಂದು ಅಧ್ಯಕ್ಷೆ ಹಲಗಣ್ಣನವರ ವಿಶ್ವಾಸ ವ್ಯಕ್ತಪಡಿಸಿದರು. ‘ಪಕ್ಷಾಂತರದ ಯಾವುದೇ ಲಕ್ಷಣಗಳಿಲ್ಲ. ಹೊಸ ಅಧ್ಯಕ್ಷರ ಆಯ್ಕೆ ಕುರಿತು ಬಿಜೆಪಿಯೊಳಗೆ ಭಿನ್ನಮತವಿದೆ. ಅವಿಶ್ವಾಸದ ಅಂಗೀಕಾರದ ಗೋಜಿಗೇ ಅವರೇ ಹೋಗುವುದಿಲ್ಲ’ ಎಂದು ಕಾಂಗ್ರೆಸ್ ಸದಸ್ಯ ರಮೇಶ ಕಡಕೋಳ ಅಭಿಪ್ರಾಯ ಪಟ್ಟರು.  ‘ಕಾಂಗ್ರೆಸ್‌ನ ಕೆಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಕಾರಣ ಬಿಜೆಪಿಯು ಅವಿಶ್ವಾಸ ನಿರ್ಣಯವನ್ನು ಮಂಡಿಸಿದೆ. ಹೀಗಾಗಿ, ಕಾಂಗ್ರೆಸ್‌ನ ಇಬ್ಬರು ಸದಸ್ಯರು ಕೊನೆ ಕ್ಷಣದಲ್ಲಿ ‘ಕೈ’ ಕೊಡಲಿದ್ದಾರೆ’ ಎಂದು ಬಿಜೆಪಿಯ ಪ್ರಮುಖರೊಬ್ಬರು ತಿಳಿಸಿದರು.

ತಂತ್ರಗಾರಿಕೆ:  ಬಿಜೆಪಿಯು ಕಾಂಗ್ರೆಸ್‌ನ ಇಬ್ಬರು ಸದಸ್ಯರಿಗೆ ಆಮಿಷವೊಡ್ಡಿ ಎಳೆದುಕೊಳ್ಳುವ ಪ್ರಯತ್ನದಲ್ಲಿ ನಿರತವಾಗಿದೆ. ಇತ್ತ ಕಾಂಗ್ರೆಸ್, ಎಲ್ಲ ಸದಸ್ಯರೂ ಒಗ್ಗಟ್ಟಿನಿಂದ ಇರುವಂತೆ ಮಾಡುತ್ತಿದೆ. ಅಲ್ಲದೇ, ಸಭೆಯ ‘ಕೋರಂ’ ಹಾಗೂ ಕೆಲವು ಸದಸ್ಯರ ಗೈರು ಕುರಿತ ತಂತ್ರಗಾರಿಕೆಯೂ ಮುಖ್ಯವಾಗಿದೆ ಎಂದು ಮೂಲಗಳು ದೃಢಪಡಿಸಿವೆ.

ಅತೃಪ್ತ ಕಾಂಗ್ರೆಸಿಗರು
ಅಧ್ಯಕ್ಷರ ದುರಾಡಳಿತದಿಂದ ಬೇಸತ್ತ ಕೆಲವು ಕಾಂಗ್ರೆಸ್‌ ಸದಸ್ಯರ ಸಲಹೆ ಮೇರೆಗೆ ನಮ್ಮ (ಬಿಜೆಪಿ) ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ. ಅತೃಪ್ತ ಕಾಂಗ್ರೆಸ್‌ ಸದಸ್ಯರೇ ಗೊತ್ತುವಳಿ ಅಂಗೀಕಾರ ಮಾಡಲಿದ್ದಾರೆ ಎಂದು ಶಾಸಕ ನೆಹರು ಓಲೇಕಾರ ಭರವಸೆ ವ್ಯಕ್ತಪಡಿಸಿದರು.

ಜನತೆಯೂ ಕ್ಷಮಿಸಲ್ಲ
ತಮ್ಮ ತಪ್ಪುಗಳನ್ನು ಮುಚ್ಚಿ ಹಾಕುವ ಹಾಗೂ ಇತರ ಅವ್ಯವಹಾರಗಳ ಉದ್ದೇಶಗಳಿಗಾಗಿ ಬಿಜೆಪಿ ಅವಿಶ್ವಾಸ ಗೊತ್ತುವಳಿ ಮಂಡಿಸಿದೆ. ಇದನ್ನು ಜನತೆಯೂ ಕ್ಷಮಿಸುವುದಿಲ್ಲ. ನಮ್ಮ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಇದ್ದಾರೆ ಎಂದು ಕಾಂಗ್ರೆಸ್ ಮುಖಂಡರ ರುದ್ರಪ್ಪ ಲಮಾಣಿ ತಿಳಿಸಿದರು.

ಅಭಿವೃದ್ಧಿಯ ‘ಶ್ವಾಸ’ವೇ ಇಲ್ಲ
ನಗರಸಭೆ ಅವಧಿಯ ಕೊನೆಯಲ್ಲಿ ‘ಅವಿಶ್ವಾಸ’ ಬೇಡವಾಗಿತ್ತು. ಆದರೆ, ನಗರದ ಅಭಿವೃದ್ಧಿ ಬಗ್ಗೆ ಕಿಂಚಿತ್‌ ಕಾಳಜಿ ಇಲ್ಲದ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರು ವೈಯಕ್ತಿಕ ಹಿತಾಸಕ್ತಿಗಾಗಿ ಡೊಂಬರಾಟ ಮಾಡುತ್ತಿದ್ದಾರೆ. ಇಬ್ಬರೂ ಅಭಿವೃದ್ಧಿಯ ‘ಶ್ವಾಸ’ವನ್ನೇ ಹಿಂಡಿದ್ದಾರೆ ಎಂದು ಜೆಡಿಎಸ್ ಮುಖಂಡ ಡಾ.ಸಂಜಯ ಡಾಂಗೆ ದೂರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು