ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ರೈತರ ಸಮಸ್ಯೆ ಇತ್ಯರ್ಥಕ್ಕೆ ಆದ್ಯತೆ: ಹಾವೇರಿ ನೂತನ DC ವಿಜಯ ಮಹಾಂತೇಶ

Published : 7 ಜುಲೈ 2024, 5:34 IST
Last Updated : 7 ಜುಲೈ 2024, 5:34 IST
ಫಾಲೋ ಮಾಡಿ
Comments
ಹಾವೇರಿ  ಜಿಲ್ಲೆಯ 25ನೇ ಜಿಲ್ಲಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಿರುವ ವಿಜಯಮಹಾಂತೇಶ ದಾನಮ್ಮನವರ, ಪಶು ವೈದ್ಯಕೀಯ ಪದವೀಧರರು. ಹಾವೇರಿ ಜಿಲ್ಲೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದಿರುವ ಇವರು, ಬಾಲ್ಯ ಕಳೆದ ಜಿಲ್ಲೆಯಲ್ಲಿಯೇ ಜಿಲ್ಲಾಧಿಕಾರಿಯಾಗಿರುವುದು ವಿಶೇಷ. ಜಿಲ್ಲೆಯ ಬಗ್ಗೆ ಹಾಗೂ ತಮ್ಮ ಮುಂದಿನ ಕೆಲಸದ ವೈಖರಿ ಬಗ್ಗೆ ವಿಜಯಮಹಾಂತೇಶ ’ಪ್ರಜಾವಾಣಿ‘ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಅದರ ವಿವರ ಇಲ್ಲಿದೆ.
ಪ್ರ

ನಿಮ್ಮ ಕುಟುಂಬದ ಹಿನ್ನೆಲೆ ಹಾಗೂ ಬಾಲ್ಯದ ದಿನಗಳು ಹೇಗಿದ್ದವು ?

ವಿಜಯ ಮಹಾಂತೇಶ: ನನ್ನ ತಂದೆ, ರೈತ. ನಮ್ಮದು ರೈತಾಪಿ ಕುಟುಂಬ. ತಂದೆ ಊರು, ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿ ಬಳಿಯ ರಣತ್ತೂರು. ತಾಯಿಯ ಊರು, ಹಾವೇರಿ ಬಳಿಯ ಕಿತ್ತೂರು. ತಾಯಿ ಊರಿನಲ್ಲಿ ಹುಟ್ಟಿದ್ದ ನಾನು, ಅಲ್ಲಿಯೇ 1ನೇ ತರಗತಿಯಿಂದ 5ನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ ಪಡೆದುಕೊಂಡೆ.

ಪ್ರ

ನೀವು ವಿಜಯಪುರದ ಸೈನಿಕ ಶಾಲೆ ವಿದ್ಯಾರ್ಥಿ. ಅಂದು ಪ್ರವೇಶ ಪರೀಕ್ಷೆ ಬರೆದು ಶಾಲೆಗೆ ಸೇರಿದ್ದು ಹೇಗೆ ?

–5ನೇ ತರಗತಿ ಕಲಿಯುವಾಗ ಓದಿನಲ್ಲಿ ಜಾಣನಾಗಿದ್ದೆ. ಹೀಗಾಗಿ, ಶಿಕ್ಷಕರು ಹಾಗೂ ಪೋಷಕರ ಸಹಕಾರದಿಂದ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆ ಬರೆದಿದ್ದೆ. ಉತ್ತಮ ಅಂಕಗಳೊಂದಿಗೆ ಆಯ್ಕೆಯಾದೆ. ನಂತರ, ವಿಜಯಪುರದ ಸೈನಿಕ ಶಾಲೆಯಲ್ಲಿ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ವ್ಯಾಸಂಗ ಮಾಡಿದೆ. ಬಳಿಕ, ಬೀದರ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಸಮೇತ ಪದವಿ ಪಡೆದುಕೊಂಡೆ

ಪ್ರ

ನಾಗರಿಕ ಸೇವೆಗೆ ಬಂದಿದ್ದು ಹೇಗೆ?

–ನಾಗರಿಕ ಸೇವೆ ಸೇರಬೇಕೆಂಬ ಆಸೆ ಮೊದಲಿನಿಂದಲೂ ಇತ್ತು.  ಹೀಗಾಗಿ, 2004ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದೆ. 445ನೇ ರ‍್ಯಾಂಕ್ ಸಿಕ್ಕಿತ್ತು. ಭಾರತೀಯ ಮಾಹಿತಿ ಸೇವೆಯಲ್ಲಿ ಕೆಲ ವರ್ಷ ಕೆಲಸ ಮಾಡಿದೆ. 2004ರಲ್ಲಿ ಕೆಎಎಸ್ ಪರೀಕ್ಷೆ ಸಹ ಬರೆದಿದ್ದೆ. ಅದರ ಫಲಿತಾಂಶದಲ್ಲೂ ಉತ್ತಮ ರ‍್ಯಾಂಕ್ ಸಿಕ್ಕಿತ್ತು. ನಂತರ, ಅಫಜಲಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆಗುವ ಮೂಲಕ ಕರ್ನಾಟಕ ಆಡಳಿತ ಸೇವೆ ಆರಂಭಿಸಿದೆ.

ಪ್ರ

ಎಲ್ಲೆಲ್ಲಿ ಕೆಲಸ ಮಾಡಿದ್ದೀರಾ?

–ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯ ಉಪ ವಿಭಾಗಾಧಿಕಾರಿಯಾಗಿ ಹಾಗೂ ಹೆಸ್ಕಾಂ ಜನರಲ್ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯೂ ಆಗಿದ್ದೆ. ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ವಿಜಯಪುರ ಜಿಲ್ಲಾಧಿಕಾರಿ ಆಗಿಯೂ ಕೆಲಸ ಮಾಡಿದ್ದೇನೆ. ಈಗ ತಾಯಿ ಊರಿನ ಸೇವೆ ಮಾಡುವ ಅವಕಾಶ ಸಿಕ್ಕಿದೆ.

ಪ್ರ

ಹಾವೇರಿ ಜಿಲ್ಲೆಯಲ್ಲಿ ನಿಮ್ಮ ಕಾರ್ಯವೈಖರಿ ಹೇಗಿರುತ್ತದೆ? ಇಲ್ಲಿಯ ಪ್ರಮುಖ ಸಮಸ್ಯೆಗಳ ಇತ್ಯರ್ಥಕ್ಕೆ ನಿಮ್ಮ ಪರಿಹಾರಗಳೇನು? 

–ಹಾವೇರಿ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ. ಇಲ್ಲಿ ಬಹುತೇಕರು, ರೈತರು. ಇಲ್ಲಿಯ ರೈತರ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ಬೆಳೆ ವಿಮೆ, ಬೆಳೆ ಪರಿಹಾರ, ಬೀಜ–ಗೊಬ್ಬರ ಹಾಗೂ ಇತರೆ ಎಲ್ಲ ಸಮಸ್ಯೆಗಳ ಅರಿವು ನನಗಿದೆ. ಎಲ್ಲ ಪ್ರಕಾರದ ಸಮಸ್ಯೆಗಳನ್ನು ನನ್ನ ವ್ಯಾಪ್ತಿಯಲ್ಲಿ ಇತ್ಯರ್ಥಪಡಿಸಲು ಪ್ರಯತ್ನಿಸುವೆ.

ಪ್ರ

ಹಲವು ವರ್ಷವಾದರೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ನಿಮ್ಮ ಅವಧಿಯಲ್ಲಿ ಶಾಶ್ವತ ಪರಿಹಾರದ ನಿರೀಕ್ಷೆ ಮಾಡಬಹುದೇ?

ಹಾವೇರಿ ನಗರ ಹಾಗೂ ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿರುವುದು ಗಮನದಲ್ಲಿದೆ. ಮಳೆಯ ಅಭಾವದಿಂದ ಕೆಲವೆಡೆ ಖಾಸಗಿಯವರ ಕೊಳವೆಬಾವಿ ಬಾಡಿಗೆ ಪಡೆದು ಜನರಿಗೆ ನೀರು ಕೊಡುತ್ತಿರುವ ಮಾಹಿತಿ ಇದೆ. ಲಭ್ಯವಿರುವ ಅನುದಾನ ಬಳಸಿಕೊಂಡು ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ.

ಪ್ರ

ಜಿಲ್ಲೆಯಲ್ಲಿ ನೀವು ಕೈಗೊಳ್ಳಲು ಇಚ್ಛಿಸಿರುವ ಪ್ರಮುಖ ಕೆಲಸಗಳು ಯಾವುವು

–ಜಿಲ್ಲೆಯಲ್ಲಿ ನನ್ನ ವ್ಯಾಪ್ತಿಗೆ ಬರುವ ಎಲ್ಲ ಕೆಲಸವೂ ಪ್ರಮುಖವಾದದ್ದು. ಕೇವಲ ಸಮಸ್ಯೆಗಳ ಬಗ್ಗೆ ಮಾತನಾಡುವ ಬದಲು ಅವುಗಳಿಗೆ ಪರಿಹಾರ ಸಮೇತ ಮಾತನಾಡಬೇಕು. ಸಮಸ್ಯೆಗಳು ಆಗಾಗ ಬರುತ್ತಿರುತ್ತವೆ. ಅವುಗಳನ್ನು ಯಶಸ್ವಿಯಾಗಿ ಎದುರಿಸಬೇಕು. ಜಿಲ್ಲೆಯ ಮಕ್ಕಳು ಮತ್ತು ಮಹಿಳೆಯರ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಹಾಗೂ ಇತರೆ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಸೇರಿ ಕೆಲಸ ಮಾಡುತ್ತೇನೆ.

ಪ್ರ

ಸಮಸ್ಯೆ ಹೇಳಿಕೊಳ್ಳುವ ಸಾಮಾನ್ಯ ಜನರಿಗೆ ಜಿಲ್ಲಾಧಿಕಾರಿ ಸಿಗುವರೇ?

–ಜಿಲ್ಲೆಯ ಜನರು ತಮ್ಮ ಯಾವುದೇ ಸಮಸ್ಯೆಗಳು ಇದ್ದರೆ, ಕಚೇರಿಗೆ ಬಂದು ಭೇಟಿ ಮಾಡಬಹುದು. ಮನವಿ ಪತ್ರವನ್ನೂ ಕಳುಹಿಸಬಹುದು. ಜೊತೆಗೆ, ನಾನು ಸಹ ಜನರ ಬಳಿಗೆ ಹೋಗಿ ಸಮಸ್ಯೆ ಆಲಿಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT