ಹಾವೇರಿ: ‘ದೇಶದ ಆರ್ಥಿಕ ಬೆಳವಣಿಗೆಗೆ ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯಗಳ ಪಾತ್ರ ಎಷ್ಟು ಮುಖ್ಯವೋ, ವಿಶ್ವಕರ್ಮಿಗಳ ಪಾತ್ರವೂ ಅಷ್ಟೇ ಮುಖ್ಯ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೌಶಲಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಆಯೋಜಿದ್ದ ‘ಪಿ.ಎಂ. ವಿಶ್ವಕರ್ಮ ಯೋಜನೆಗಳ ವಾರ್ಷಿಕೋತ್ಸವ’ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘2023ರಂದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ದೇಶದಲ್ಲಿ ಜಾರಿಗೊಳಿಸಲಾಯಿತು. ದೇಶದಲ್ಲಿರುವ 18 ಮೂಲ ಕಸಬುದಾರರು ಪಾರಂಪರಿಕವಾಗಿ ವೃತ್ತಿ ಮಾಡುತ್ತಿದ್ದಾರೆ. ಅಂತಹ ಸಮುದಾಯದವರಿಗೆ ಬೇರೆ ಉದ್ಯೋಗದಲ್ಲಿ ತೊಡಗಿಸಿ, ಆರ್ಥಿಕವಾಗಿ ಅಭಿವೃದ್ಧಿಯಾಗಲು ಯೋಜನೆ ರೂಪಿಸಲಾಗಿದೆ’ ಎಂದರು.
‘ಹಾವೇರಿ ಜಿಲ್ಲೆಯಲ್ಲಿ 25 ವಿಶ್ವಕರ್ಮ ತರಬೇತಿ ಕೇಂದ್ರಗಳಿವೆ. ಅದರಲ್ಲಿ 14 ತರಬೇತಿ ಕೇಂದ್ರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ತರಬೇತಿ ಕೋರಿ ಇದುವರೆಗೂ 84,885 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 2,846 ಮಂದಿ ತರಬೇತಿ ಪಡೆದುಕೊಂಡಿದ್ದಾರೆ’ ಎಂದು ತಿಳಿಸಿದರು.
‘ತರಬೇತಿ ಪಡೆದವರಿಗೆ ಗುರುತಿನ ಚೀಟಿ, ಪ್ರಮಾಣ ಪತ್ರ, ಆರ್ಥಿಕ ಬೆಂಬಲ, ಮಾರುಕಟ್ಟೆ ಸೌಲಭ್ಯ ಹಾಗೂ ಪ್ರೋತ್ಸಾಹಧನ ನೀಡಲಾಗುತ್ತದೆ. ಕುಶಲಕರ್ಮಿಗಳು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಮತ್ತು ಅವರು ಉತ್ಪಾದನೆ ಪ್ರಮಾಣ ಹೆಚ್ಚಿಸಲು ಸಹಾಯ ಮಾಡಲಾಗುತ್ತದೆ. ಬ್ಯಾಂಕ್‌ಗಳಿಂದ ಮೊದಲ ಹಂತದಲ್ಲಿ ಶೇ 5ರ ಬಡ್ಡಿದರದಲ್ಲಿ ₹ 1ಲಕ್ಷ ಸಾಲ ಕೊಡಿಸಲಾಗುತ್ತಿದೆ. ಈ ಸಾಲ ಮರುಪಾವತಿ ನಂತರ, ಎರಡನೇ ಹಂತದಲ್ಲಿ ₹ 2 ಲಕ್ಷ ಸಾಲ ನೀಡಲಾಗುತ್ತಿದೆ’ ಎಂದರು.
ಯೋಜನೆಯಡಿ ತರಬೇತಿ ಪಡೆದುಕೊಂಡವರಿಗೆ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು.
ಪಿ.ಎಂ. ವಿಶ್ವಕರ್ಮ ಸಂಯೋಜನಾಧಿಕಾರಿ ರೋಹಿಣಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಶೋಕ ಬ್ಯಾಡಗಿ, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಎಸ್.ಎಚ್. ತಿಮ್ಮೇಶಕುಮಾರ, ಅಂಚೆ ಕಚೇರಿ ಶಾಖಾಧಿಕಾರಿ ಶಾಮಪ್ರಸಾದ್, ಎಸ್‌ಬಿಐ ಶಾಖಾಧಿಕಾರಿ ಧನಂಜಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.