ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರಿ ಮಳೆಗೆ ಹಾವೇರಿ ಜಿಲ್ಲೆಯಲ್ಲಿ 11,678 ಹೆಕ್ಟೇರ್ ಬೆಳೆ ನೀರು ಪಾಲು!

ನಿರಂತರ ಮಳೆಯಿಂದ ಹಾನಿ: ಅಧಿಕಾರಿಗಳ ಜಂಟಿ ಸಮೀಕ್ಷೆ ವರದಿ ಸಿದ್ಧ –23,928 ರೈತರಿಗೆ ₹ 11.54 ಕೋಟಿ ಪರಿಹಾರ
Published : 17 ಸೆಪ್ಟೆಂಬರ್ 2024, 7:00 IST
Last Updated : 17 ಸೆಪ್ಟೆಂಬರ್ 2024, 7:00 IST
ಫಾಲೋ ಮಾಡಿ
Comments

ಹಾವೇರಿ: ಮುಂಗಾರು ಆರಂಭದಲ್ಲಿ ಸುರಿದಿದ್ದ ನಿರಂತರ ಮಳೆ ಹಾಗೂ ವರದಾ–ತುಂಗಭದ್ರಾ ನದಿಗಳು ತುಂಬಿ ಹರಿದಿದ್ದರಿಂದ, ಜಿಲ್ಲೆಯ 11,678 ಹೆಕ್ಟೇರ್ ಪ್ರದೇಶದ ಬೆಳೆ ನೀರು ಪಾಲಾಗಿದೆ.

ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ 23,928 ರೈತರು ಆರ್ಥಿಕವಾಗಿ ಕಂಗಾಲಾಗಿದ್ದು, ಅರ್ಹರಿಗೆ ₹11.54 ಕೋಟಿ ಪರಿಹಾರ ವಿತರಿಸಲು ಜಿಲ್ಲಾಡಳಿತ ಪಟ್ಟಿ ಸಿದ್ಧಪಡಿಸಿದೆ.

ನಿರಂತರ ಮಳೆಯಿಂದಾಗಿ ವರದಾ ಹಾಗೂ ತುಂಗಭದ್ರಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿತ್ತು. ನದಿಯ ಅಚ್ಚುಕಟ್ಟು ಪ್ರದೇಶದಲ್ಲಿದ್ದ ಕೃಷಿ ಜಮೀನುಗಳಿಗೆ ನೀರು ನುಗ್ಗಿತ್ತು. ಗೋವಿನ ಜೋಳ, ಹತ್ತಿ, ಸೋಯಾಬೀನ್, ಭತ್ತ, ಶೇಂಗಾ, ಅವರೆ, ಹುರುಳಿ, ಹೆಸರು, ಮೆಣಸಿನಕಾಯಿ, ಕ್ಯಾಬೀಜ್, ಟೊಮೆಟೊ, ಬಾಳೆ, ಚೆಂಡು ಹೂವು, ವೀಳ್ಯೆದೆಲೆ, ಶುಂಠಿ, ಹಾಗಲಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಪಪ್ಪಾಯ, ಅಡಿಕೆ ಹಾಗೂ ಇತರೆ ಬೆಳೆಗಳು ಜಲಾವೃತಗೊಂಡಿದ್ದವು.

ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರ ಮಳೆ ಇದ್ದಿದ್ದರಿಂದ, ವರದಾ–ತುಂಗಭದ್ರಾ ನದಿಯಲ್ಲಿ ಹಲವು ದಿನಗಳವರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿತ್ತು.

ಹಾನಿ ಪರಿಶೀಲನೆಗೆಂದು ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಮೀಕ್ಷೆ ತಂಡ ರಚಿಸಲಾಗಿತ್ತು. ಬೆಳೆ ಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿದ್ದ ಅಧಿಕಾರಿಗಳು, ಪರಿಶೀಲನೆ ನಡೆಸಿ ಸಮೀಕ್ಷೆ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿ ಅವರಿಗೆ ಹಸ್ತಾಂತರಿಸಿದ್ದಾರೆ.

‘ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸೇರಿದಂತೆ ಜಿಲ್ಲೆಯ 11,678 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿಯಾಗಿರುವುದು ಜಂಟಿ ಸಮೀಕ್ಷೆಯಲ್ಲಿ ಗೊತ್ತಾಗಿದೆ. 23,928 ರೈತರು ಹಾನಿ ಅನುಭವಿಸಿದ್ದು, ಅವರಿಗೆ ₹ 11.54 ಕೋಟಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

10,567.92 ಹೆಕ್ಟೇರ್ ಕೃಷಿ ಬೆಳೆ ಹಾನಿ: ‘ಜಿಲ್ಲೆಯ 12,592.61 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ ಆಗಿರುವುದಾಗಿ ಆರಂಭದಲ್ಲಿ ವರದಿಯಾಗಿತ್ತು. ಜಂಟಿ ಸಮೀಕ್ಷೆ ನಡೆಸಿದಾಗ, 10,567.92 ಹೆಕ್ಟೇರ್ ಪ್ರದೇಶದಲ್ಲಿದ್ದ ಕೃಷಿ ಬೆಳೆ ಹಾನಿಯಾಗಿರುವುದು ಕಂಡುಬಂದಿದೆ’ ಎಂದು ವಿಜಯ ಮಹಾಂತೇಶ ಹೇಳಿದರು.

‘ಗೋವಿನ ಜೋಳ, ಹತ್ತಿ, ಸೋಯಾಬೀನ್, ಭತ್ತ, ಶೇಂಗಾ, ಅವರೆ, ಹುರುಳಿ, ಹೆಸರು ಬೆಳೆ ಜಲಾವೃತಗೊಂಡು 21,308 ರೈತರು ನಷ್ಟ ಅನುಭವಿಸಿದ್ದಾರೆ. ಇವರಿಗೆ ₹ 9.59 ಕೋಟಿ ಪರಿಹಾರ ವಿತರಿಸಲು ನಿರ್ಧರಿಸಲಾಗಿದೆ’ ಎಂದರು.

1,110.17 ಹೆಕ್ಟೇರ್ ತೋಟಗಾರಿಕೆ ಬೆಳೆ: ‘ಜಿಲ್ಲೆಯಲ್ಲಿ 1190.84 ಹೆಕ್ಟೇರ್ ತೋಟಗಾರಿಕೆ ಬೆಳೆ (ಮೆಣಸಿನಕಾಯಿ, ಕ್ಯಾಬೀಜ್, ಟೊಮೆಟೊ, ಬಾಳೆ, ಚೆಂಡು ಹೂವು, ವೀಳ್ಯೆದೆಲೆ, ಶುಂಠಿ, ಹಾಗಲಕಾಯಿ, ಈರುಳ್ಳಿ, ಬೆಳ್ಳೂಳ್ಳಿ, ಪಪ್ಪಾಯ, ಅಡಿಕೆ) ಹಾನಿಯಾದ ಬಗ್ಗೆ ವರದಿಯಾಗಿತ್ತು. ಜಂಟಿ ಸಮೀಕ್ಷೆ ಪ್ರಕಾರ, 1,110.17 ಹೆಕ್ಟೇರ್ ಬೆಳೆ ಹಾನಿ ಆಗಿರುವುದು ಗೊತ್ತಾಗಿದೆ. ನಷ್ಟ ಅನುಭವಿಸಿರುವ 2,620 ರೈತರಿಗೆ ₹ 1.95 ಕೋಟಿ ಪರಿಹಾರ ನೀಡಲು ತೀರ್ಮಾನಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸವಣೂರು ತಾಲ್ಲೂಕಿನ ಮಾದಾಪುರದಲ್ಲಿ ಮಳೆಯಿಂದಾಗಿ ಹರಕುಣಿ ಕುಟುಂಬದವರ ಮನೆಯ ಚಾವಣಿ ಕುಸಿದು ಬಿದ್ದಿತ್ತು
ಸವಣೂರು ತಾಲ್ಲೂಕಿನ ಮಾದಾಪುರದಲ್ಲಿ ಮಳೆಯಿಂದಾಗಿ ಹರಕುಣಿ ಕುಟುಂಬದವರ ಮನೆಯ ಚಾವಣಿ ಕುಸಿದು ಬಿದ್ದಿತ್ತು

ಮಳೆ ಹಾನಿ ಬಗ್ಗೆ ವರದಿ ಸಿದ್ಧಪಡಿಸಲಾಗಿದೆ. ಎನ್‌ಡಿಆರ್‌ಎಫ್‌ ಅಡಿ ₹ 18.42 ಕೋಟಿ ಲಭ್ಯವಿದ್ದು ಜಿಲ್ಲಾಡಳಿತದಿಂದ ಅರ್ಹರಿಗೆ ಪರಿಹಾರ ವಿತರಿಸಲಾಗುವುದು

ಡಾ. ವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ

ಮೂಲ ಸೌಕರ್ಯ: ₹43.86 ಕೋಟಿ ಹಾನಿ ‘ಜಿಲ್ಲೆಯಲ್ಲಿ ಮಳೆಯಿಂದಾಗಿ ರಸ್ತೆ ವಿದ್ಯುತ್ ಶಾಲಾ ಕೊಠಡಿಗಳು ಸೇರಿದಂತೆ ₹ 43.86 ಕೋಟಿಯಷ್ಟು ಹಾನಿಯಾಗಿದೆ’ ಎಂದು ಸಮೀಕ್ಷೆ ವರದಿಯಲ್ಲಿ ನಮೂದಿಸಲಾಗಿದೆ. ‘1.90 ಕಿ.ಮೀ ರಾಜ್ಯ ಹೆದ್ದಾರಿ 7.05 ಕಿ.ಮೀ ಮುಖ್ಯ ಜಿಲ್ಲಾ ರಸ್ತೆ 226.48 ಕಿ.ಮೀ ಗ್ರಾಮೀಣ ರಸ್ತೆ 12 ಸಣ್ಣ ಸೇತುವೆಗಳು 5 ಕೆರೆ 1635 ವಿದ್ಯುತ್ ಕಂಬಗಳು 40 ಟ್ರಾನ್ಸ್‌ಫಾರ್ಮರ್ 2.27 ಕಿ.ಮೀ. ವಿದ್ಯುತ್ ತಂತಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. ಇದಕ್ಕೆ ಪರಿಹಾರವಾಗಿ ಎನ್‌ಡಿಆರ್‌ಎಫ್‌ ಕಡೆಯಿಂದ ₹ 25.51 ಕೋಟಿ ನಿಗದಿಪಡಿಸಲಾಗಿದೆ’ ಎಂದು ಉಲ್ಲೇಖಿಸಲಾಗಿದೆ.

1970 ತಿರಸ್ಕೃತ: 664 ಮನೆಗಳಿಗೆ ಮಾತ್ರ ಪರಿಹಾರ

ಮನೆಗಳಿಗೆ ಆದ ಹಾನಿಗೆ ಸಂಬಂಧಪಟ್ಟಂತೆ ಸಲ್ಲಿಕೆಯಾಗಿದ್ದ 2634 ಪ್ರಸ್ತಾವಗಳ ಪೈಕಿ 1970 ಪ್ರಸ್ತಾವಗಳನ್ನು ತಿರಸ್ಕರಿಸಲಾಗಿದೆ. 664 ಮನೆಗಳಿಗೆ ಮಾತ್ರ ₹ 2.72 ಕೋಟಿ ಪರಿಹಾರ ನೀಡಲು ಜಿಲ್ಲಾಡಳಿತ ತೀರ್ಮಾನಿಸಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿತ್ತು. ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದ ಜಿಲ್ಲೆಯ ಎಲ್ಲ ತಾಲ್ಲೂಕುಗಳ ತಹಶೀಲ್ದಾರ್‌ಗಳು ಒಟ್ಟು 2634 ಮನೆಗಳಿಗೆ ಹಾನಿಯಾಗಿರುವುದಾಗಿ ವರದಿ ಮಾಡಿದ್ದರು. ಮರು ಪರಿಶೀಲನೆ ನಡೆಸಿದ್ದ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳು 664 ಮನೆಗಳಿಗೆ ಹಾನಿಯಾಗಿರುವುದಾಗಿ ಪರಿಷ್ಕೃತ ವರದಿ ನೀಡಿದ್ದಾರೆ. ‘81 ಮನೆಗಳಿಗೆ ಸಂಪೂರ್ಣ ಹಾಗೂ 583 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಜಿಲ್ಲೆಯಲ್ಲಿ 33 ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ’ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಆರು ಮಂದಿ ಸಾವು: ₹ 30 ಲಕ್ಷ ಪರಿಹಾರ

ಸವಣೂರು ತಾಲ್ಲೂಕಿನ ಮಾದಾಪುರದಲ್ಲಿ ಜುಲೈ 19ರಂದು ಮನೆ ಚಾವಣಿ ಕುಸಿದು ಚನ್ನಮ್ಮ ಹರಕುಣಿ (38) ಯಲ್ಲವ್ವ (60) ಒಂದೂವರೆ ವರ್ಷದ ಮಕ್ಕಳಾದ ಅಮೂಲ್ಯ ಅನುಶ್ರೀ ಮೃತಪಟ್ಟಿದ್ದರು. ಹಿರೇಕೆರೂರಿನಲ್ಲಿ ಜುಲೈ 22ರಂದು ಮೈ ಮೇಲೆ ಮರ ಬಿದ್ದು ಹೆಸ್ಕಾಂ ಉದ್ಯೋಗಿಗಳಾದ ಮಂಜಪ್ಪ ಪುಟ್ಟಲಿಂಗಣ್ಣನವರ (35) ಹನುಮಂತಪ್ಪ ನಾಮದೇವ (25) ಅಸುನೀಗಿದ್ದರು. ಇವರಿಗೆ ಪರಿಹಾರವಾಗಿ ಜಿಲ್ಲಾಡಳಿತದಿಂದ ತಲಾ ₹ 5 ಲಕ್ಷದಂತೆ ₹ 30 ಲಕ್ಷ ವಿತರಿಸಲಾಗಿದೆ. ಮಾದಾಪುರ ಅವಘಡದಲ್ಲಿ ಗಾಯಗೊಂಡಿದ್ದ ಮುತ್ತಣ್ಣ ಹರಕುಣಿ ಸುನೀತಾ ಹಾಗೂ ಭರಡಿ ಗ್ರಾಮದಲ್ಲಿ ಗೋಡೆ ಕುಸಿದು ಗಾಯಗೊಂಡಿದ್ದ ಹೊನ್ನವ್ವ ತಳವಾರ ಅವರಿಗೆ ಚಿಕಿತ್ಸೆಗಾಗಿ ಜಿಲ್ಲಾಡಳಿತದಿಂದ ₹ 26800 ಪಾವತಿಸಲಾಗಿದೆ. ಮಳೆಯಿಂದಾಗಿ 2 ಆಕಳು ಹಾಗೂ 1 ಎಮ್ಮೆ ಕರು ಮೃತಪಟ್ಟಿತ್ತು. ಇದಕ್ಕೆ ಪರಿಹಾರವಾಗಿ ₹ 95 ಸಾವಿರ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT