ರಾಣೆಬೆನ್ನೂರು: ವಿದ್ಯಾರ್ಥಿಗಳು ಕೇವಲ ಪದವಿ ಪಡೆದುಕೊಂಡರೆ ಸಾಕಾಗುವುದಿಲ್ಲ. ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರಗಳಲ್ಲಿ ಅವಶ್ಯಕವಾಗಿರುವ ಸ್ಪೋಕನ್ ಇಂಗ್ಲಿಷ್, ಜಿಎಸ್‌ಟಿ, ಕಂಪ್ಯೂಟರ್ ಕೋರ್ಸ್ ಮುಂತಾದ ಕೌಶಲ ಅಭಿವೃದ್ಧಿ ತರಬೇತಿ ಪಡೆದುಕೊಳ್ಳುವುದು ಅತೀ ಅವಶ್ಯಕವಾಗಿದೆ ಎಂದು ಅಭಿವೃದ್ಧಿ ಸಮಿತಿ ಅದ್ಯಕ್ಷ ಹಾಗೂ ಶಾಸಕ ಪ್ರಕಾಶ ಕೆ.ಕೋಳಿವಾಡ ಹೇಳಿದರು.
ಇಲ್ಲಿನ ಹುಣಸೀಕಟ್ಟಿ ರಸ್ತೆಯ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಪ್ರಸ್ತುತ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್ ಸೇರಿದಂತೆ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಬಿಸಿಎ ಕೋರ್ಸ್ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಇನ್ನು ಮುಂದೆ ಪ್ರತಿ ವರ್ಷ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿ, ನಿರುದ್ಯೋಗ ಮುಕ್ತ ರಾಣೆಬೆನ್ನೂರು ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಇದಕ್ಕೆ ಪೂರಕವಾಗಿ ಕಾಲೇಜಿನಲ್ಲಿ ಬಿಸಿಎ ಕೋರ್ಸ್ ಆರಂಭಿಸಲಾಗಿದೆ. ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಡಾ.ವಿಜಯಲಕ್ಷ್ಮಿ ತೀರ್ಲಾಪುರ ಮಾತನಾಡಿ, ಉನ್ನತ ಶಿಕ್ಷಣ ಪಡೆದದ್ದು ತಮ್ಮ ವ್ಯಕ್ತಿತ್ವದಿಂದ ಪ್ರದರ್ಶನಗೊಳ್ಳಬೇಕು. ಇಂದು ಪದವಿ, ಅಧಿಕಾರದ ಜೊತೆಗೆ ವಯೋವೃದ್ಧ ತಂದೆ-ತಾಯಿಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಒಳ್ಳೆಯ ಮ್ಯಾನರಿಜಂ ಇಂದಿನ ಅವಶ್ಯಕತೆಯಾಗಿದೆ. ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾದರೆ ಸ್ಪೋಕನ್ ಇಂಗ್ಲೀಷ್ ಬೇಕು ಎಂದರು.
ಪ್ರಾಚಾರ್ಯ ಡಾ.ಎಸ್.ಕೆ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನಂದಿಹಳ್ಳಿ ಪಿಜಿ ಸೆಂಟರ್‌ನ ನಿರ್ದೇಶಕ ಡಾ.ಬಿ.ರವಿ ಅವರು ಮಾತನಾಡಿದರು. ಡಾ.ಕೆ.ರಾಘವೇಂದ್ರ ಕ್ರೀಡಾ ವರದಿ ಓದಿದರು. ಇದೇ ಸಂದರ್ಭದಲ್ಲಿ ಬಸವರಾಜ ಹುಗ್ಗಿ ಹಾಗೂ ಎಸ್.ಎಂ.ಸೀತಾಳದ ಹಾಗೂ ಸಾಧನೆ ಮಾಡಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್‌ನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಡಾ. ಅರುಣಕುಮಾರ ಚಂದನ್ ಎನ್‌ಎಸ್‌ಎಸ್, ಡಾ. ವಿಜಯಲಕ್ಷ್ಮಿ ಆರ್, ಡಾ.ಗಂಗಮ್ಮ.ಎಂ.ಮರಡಿಬಣಕಾರ, ಗೋವಿಂದಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.