ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣ ಸಂಸ್ಕೃತಿ ಉತ್ಸವ ನಾಳೆಯಿಂದ

Last Updated 10 ಡಿಸೆಂಬರ್ 2019, 13:11 IST
ಅಕ್ಷರ ಗಾತ್ರ

ಹಾವೇರಿ: ಜಾತ್ರೆಗಳು ಮನರಂಜನೆ ಹಾಗೂ ಆಡಂಬರಕ್ಕೆ ಸೀಮಿತವಾಗದೆ, ಶರಣರ ತತ್ವ ಸಂದೇಶಗಳನ್ನು ಜನರಿಗೆ ತಲುಪಿಸಬೇಕು. ಈ ನಿಟ್ಟಿನಲ್ಲಿ 30 ವರ್ಷಗಳಿಂದ ಶರಣ ಸಂಸ್ಕೃತಿ ಉತ್ಸವ ನಡೆಯುತ್ತಿದ್ದು, ಈ ಬಾರಿ ಡಿ. 12ರಿಂದ 15ರ ವರೆಗೆ ನಗರದ ಹೊಸಮಠ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಶರಣ ಸಂಸ್ಕೃತಿಯಲ್ಲಿ ಹಿಂದಿನ ಪರಂಪರೆಯಂತೆ ವಚನ ಕಂಠಪಾಠ, ಸಹಜ ಶಿವಯೋಗವು ಮಠದ ಆವರಣದಲ್ಲಿ ನಡೆಸಿಕೊಂಡು ಬಂದಿದ್ದೇವೆ’ ಎಂದರು.

ಶರಣ ಸಂಸ್ಕೃತಿ ಉತ್ಸವದ ಮೊದಲ ದಿನ ಸಂಜೆ 6.30ಕ್ಕೆ ಜಮುರಾ ನಾಟಕೋತ್ಸವದಲ್ಲಿ ನಡೆಯುವ ‘ಸಾಯೋ ಆಟ’ ನಾಟಕಕ್ಕೆ ಚಿತ್ರದುರ್ಗ– ಬಾಗಲಕೋಟೆ ಭೋವಿ ಗುರುಪೀಠದ ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿ, ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಡಿ.13ರಂದು ನಾಟಕೋತ್ಸವದ ಸಮಾರಂಭಕ್ಕೆ ಶಿಗ್ಗಾವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಶಿರಸಿ ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಹೊಸಮಠದ ಆವರಣದಲ್ಲಿ ಡಿ.14ರಂದು ಬೆಳಿಗ್ಗೆ 7.30ಕ್ಕೆ ನಡೆಯುವ ಸಹಜ ಶಿವಯೋಗವನ್ನು ಚಿತ್ರದುರ್ಗ ಮುರುಘಾಮಠದ ಶೂನ್ಯ ಪೀಠಾಧ್ಯಕ್ಷಡಾ.ಶಿವಮೂರ್ತಿ ಮುರುಘಾಶರಣ ಸ್ವಾಮೀಜಿ ಪ್ರಾತ್ಯಕ್ಷಿಕೆ ನೀಡುವರು. 10ಗಂಟೆಗೆ ಸೈಕಲ್‌ ಜಾಥಾ ನಡೆಯಲಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಚಾಲನೆ ನೀಡಲಿದ್ದಾರೆ. ಬಳಿಕ 10.30ಕ್ಕೆ ಮುರುಗೀಸ್ವಾಮಿ ಮಠದಲ್ಲಿ ‘ಬಸವತತ್ವ ಧ್ವಜಾರೋಹಣ’ ಇರಲಿದೆ ಎಂದರು.

ಕರ್ನಾಟಕ ಅಚೀವರ್ಸ್‌ ಬುಕ್‌ಆಫ್‌ ರೆಕಾರ್ಡ್‌ ಸಹಯೋಗದಲ್ಲಿ ಚಿತ್ರಕಲೆ, ಹವ್ಯಾಸಿ ಛಾಯಾಗ್ರಾಹಕರು, ಕರಕುಶಲ ವಸ್ತುಗಳ ಕಲಾ ಪ್ರದರ್ಶಕರು, ಅಂಚೆ ಚೀಟಿ, ದೇಶಿಯ ಮತ್ತು ವಿದೇಶಿ ನೋಟು, ನಾಣ್ಯಗಳ ಸಂಗ್ರಹಗಳ ಪ್ರದರ್ಶನ ಇರಲಿದೆ. ಸಂಜೆ ಮುರುಘಾ ಪರಂಪರೆ ಉಂಟುಮಾಡಿರುವ ಸಮಾಜೋಧಾರ್ಮಿಕ ಪರಿವರ್ತನೆಗಳು ಎಂಬ ವಿಷಯದ ಕುರಿತು ವಿಚಾರಕೂಟ ಹಾಗೂ ಸಂಗೀತ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಡಿ.15ಕ್ಕೆ ಬೆಳಿಗ್ಗೆ 7.30ಕ್ಕೆ ಸಹಜ ಶಿವಯೋಗ, 11.30ಕ್ಕೆ ಉಚಿತ ಕಣ್ಣಿನ ತಪಾಸಣೆ ಹಾಗೂ ರಕ್ತದಾನ ಶಿಬಿರ ಸಂಜೆ 6.30ಕ್ಕೆ ‘ಜಾಗತಿಕ ಶಾಂತಿ ಮತ್ತು ಶರಣ ಸಂಸ್ಕೃತಿ’ ಕುರಿತು ವಿಚಾರಕೂಟ ಇರಲಿದೆ. ಬಳಿಕ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದರು.

ಉತ್ಸವ ಸಮಿತಿ ಅಧ್ಯಕ್ಷ ಡಾ. ಬಸವರಾಜ ವೀರಾಪುರ ಮಾತನಾಡಿ, ‘ಈ ಬಾರಿ ನೆರೆ ಬಂದು ಸಾಕಷ್ಟು ಅನಾಹುತಗಳು ಸಂಭವಿಸಿದೆ. ಇದರಿಂದಾಗಿ ಉತ್ಸವವನ್ನು ಈ ವರ್ಷ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಉಳಿದ ಹಣವನ್ನು ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ ನೀಡುವ ನಿರ್ಧಾರವನ್ನುಕೈಗೊಳ್ಳಲಾಗಿದೆ’ ಎಂದರು.

ಶರಣ ಸಂಸ್ಕೃತಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಶಾಸಕ ನೆಹರು ಓಲೇಕಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಪ್ರಕಾಶ ಶೆಟ್ಟಿ, ಚಂದ್ರಶೇಖರ ಶಿಶುವಿನಹಳ್ಳಿ, ಪರಮೇಶಪ್ಪ ಮೇಗಳಮನಿ, ನಾಗೇಂದ್ರ ಕಡಕೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT