ಬುಧವಾರ, ಏಪ್ರಿಲ್ 1, 2020
19 °C
ಕೊರೊನಾ ಸೊಂಕಿನ ಭೀತಿ ಪೊಲೀಸ್‌ ಇಲಾಖೆ ಕ್ರಮ, ತರಕಾರಿ ಬೆಲೆ ಏರಿಕೆ

ಹಾವೇರಿ: ತಳ್ಳುಗಾಡಿಯಲ್ಲಿ ತರಕಾರಿ ಮಾರಾಟಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೊರೊನಾ ವೈರಸ್ ಸೋಂಕು ಹರಡುವುದು ತಡೆಗಟ್ಟಲು ಪೊಲೀಸ್‌ ಇಲಾಖೆ ವತಿಯಿಂದ ಮಾರುಕಟ್ಟೆಯಲ್ಲಿ ಗುಂಪು ಗುಂಪಾಗಿ ತರಕಾರಿ, ಹಣ್ಣು ಮಾರಾಟ ನಿರ್ಬಂಧಿಸಿದ್ದು, ತಳ್ಳು ಗಾಡಿಯಲ್ಲಿ ಮಾರಾಟ ಮಾಡುವಂತೆ ವ್ಯಾಪಾರಿಗಳಿಗೆ ಮನವಿ ಮಾಡಿದ್ದಾರೆ.

ನಗರದ ನಾಗರಿಕರು ಅನಾವಶ್ಯಕವಾಗಿ ಮನೆಯಿಂದ ಹೊರಗೆ ತಿರುಗಬಾರದು, ಜೀವನಾವಶ್ಯಕ ವಸ್ತುಗಳನ್ನು ಸಮೀಪದ ನಿಗದಿತ ಸ್ಥಳದಲ್ಲಿಯೇ ಖರೀದಿಸಬೇಕು. ಖರೀದಿಗೆ ಬಂದ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ನಗರದ ಲಾಲ್‌ಬಹದ್ದೂರ ಶಾಸ್ತ್ರಿ ಮಾರುಕಟ್ಟೆಯಲ್ಲಿ ಗುರುವಾರ ವಾರದ ಸಂತೆಯಲ್ಲಿ ಸಾರ್ವಜನಿಕರು ತರಕಾರಿ ಖರೀದಿಗೆ ಮುಗಿಬಿದ್ದರು. ಜನ ಸೇರುತ್ತಿದ್ದಂತೆ ಪೊಲೀಸರು ಅಂಗಡಿಗಳನ್ನು ತೆರವುಗೊಳಿಸಲು ಮುಂದಾದರೂ.

ಎಲ್ಲೆಲ್ಲೂ ಸಾಮಾಜಿಕ ಅಂತರ

ನಗರದಲ್ಲಿರುವ ವಿವಿಧ ದಿನಸಿ, ಹಾಲು ಹಾಗೂ ಔಷಧಿ ಅಂಗಡಿಗಳ ಮುಂದೆ ಮೂರರಿಂದ ನಾಲ್ಕು ಅಡಿ ಅಂತರದಲ್ಲಿ ನಿಲ್ಲುವಂತೆ ಗೆರೆಗಳನ್ನು ಎಳೆದು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಸಾರ್ವಜನಿಕರು ಅದರಲ್ಲಿ ನಿಂತು ಸಾಮಾಗ್ರಿಗಳನ್ನು ಖರೀದಿಸುತ್ತಿರುವುದು ಕಂಡು ಬಂದಿತು.

ತರಕಾರಿ ಬೆಲೆ ಏರಿಕೆ

ಕೊರೊನಾ ವೈರಸ್‌ನಿಂದಾಗಿ ಬೇರೆ ಜಿಲ್ಲೆಗಳ ತರಕಾರಿ ಪೂರೈಕೆ ಕಡಿಮೆಯಾಗಿದೆ. ಸ್ಥಳೀಯವಾಗಿ ರೈತರು ಬೆಳೆದ ತರಕಾರಿ ಮಾರುಕಟ್ಟೆಗೆ ಆವಕವಾಗುತ್ತಿರುವುದರಿಂದ  ಬೆಲೆ ಏರಿಕೆಯಾಗಿದೆ. ಬೇಡಿಕೆಗೆ ತಕ್ಕಂತೆ ತರಕಾರಿ ಪೂರೈಕೆಯಾಗುತ್ತಿದೆ ಎಂದು ವ್ಯಾಪಾರಿ ತೌಸಿಫ್‌ ಕೋಣನತಂಬಗಿ ತಿಳಿಸಿದರು.

ಹಿಂದಿನ ವಾರ ₹10ರಂತೆ ಮಾರಾಟವಾಗುತ್ತಿದ್ದ ಟೊಮೆಟೊ ಈ ವಾರ ₹15 ರಂತೆ ಮಾರಾಟವಾಗುತ್ತಿದೆ. ಈರುಳ್ಳಿ ₹40 ರಂತೆ ಹಾಗೂ ಹೀರೇಕಾಯಿ, ಚವಳಿಕಾಯಿ, ಹಾಗಲಕಾಯಿ, ಬೀನ್ಸ್ ₹60 ರಂತೆ ಮಾರಾಟವಾಗುತ್ತಿದೆ. ಕ್ಯಾಬೇಜ್‌, ನುಗ್ಗೆಕಾಯಿ, ಬದನೆಕಾಯಿ ಹೆಚ್ಚಾಗಿ ಆವಕವಾಗುತ್ತಿದೆ. ಮೆಣಸು, ಸೌತೆಕಾಯಿ, ಡೊಣ್ಣ ಮೆಣಸು ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿದೆ ಎಂದು ಅವರು ವಿವರಿಸಿದರು.

ಫೀಲ್ಡ್‌ಗೆ ಇಳಿದ ಎಸ್ಪಿ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಅವರು ತಮ್ಮ ಸಿಬ್ಬಂದಿಯೊಂದಿಗೆ ಬೆಳಿಗ್ಗೆ ಲಾಲ್‌ಬಹದ್ಧೂರಶಾಸ್ತ್ರಿ ಮಾರುಕಟ್ಟೆಗೆ ಇಳಿದು ತರಕಾರಿ ವ್ಯಾಪಾರಿಗಳೊಂದಿಗೆ ಚರ್ಚಿಸಿದರು. ತರಕಾರಿ ಖರೀದಿಗೆ ಬರುವವರಲ್ಲಿ ಅಂತರ ಕಾಯ್ದುಕೊಳ್ಳಬೇಕು. ಇಲ್ಲವೇ, ತಳ್ಳುಗಾಡಿಯಲ್ಲಿ ವಾರ್ಡ್‌ಗಳಿಗೆ ಹೋಗಿ ತರಕಾರಿ ಮಾರಾಟ ಮಾಡಬೇಕು ಎಂದು ಸಲಹೆ ನೀಡಿದರು.

ಬಿಕೋ ಎನ್ನುತ್ತಿರುವ ಮಾರುಕಟ್ಟೆ

ಗುರುವಾರ ಬಂದರೆ ನಗರದ ಎಂ.ಜಿ.ರಸ್ತೆ, ತರಕಾರಿ ಮಾರುಕಟ್ಟೆ, ಹೂವಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರು ಸೇರುತ್ತಿದ್ದರು. ಕೊರೊನಾ ವೈರಸ್‌ ಸೋಂಕು ತಡೆಗೆ ಲಾಕ್‌ಡೌನ್‌ ರಾಜ್ಯವೇ ಆಗಿರುವುದರಿಂದ ವ್ಯಾಪಾರಿಗಳು ಹಾಗೂ ರೈತರು ಇಲ್ಲದೆ ಬಿಕೋ ಎನ್ನುತ್ತಿತ್ತು.

ವ್ಯಾಪಾರಕ್ಕೆ ಸಮಯ ನಿಗದಿ

ಕೊರೊನಾ ವೈರಸ್‌ ಸೋಂಕು ಹರಡುವಿಕೆಯನ್ನು ತಡೆಯುವುದಕ್ಕಾಗಿ ಎಲ್ಲೆಡೆ ಲಾಕ್‌ಡೌನ್‌ ಮಾಡಲಾಗಿದೆ. ಆದರೂ ಸಹ ಸಾರ್ವಜನಿಕರು ನೆಪ ಮಾಡಿಕೊಂಡು ರಸ್ತೆಯ ಮೇಲೆ ಓಡಾಡುತ್ತಿದ್ದಾರೆ. ಅದನ್ನು ತಪ್ಪಿಸುವುದಕ್ಕಾಗಿ ಹಣ್ಣು, ತರಕಾರಿ, ಹಾಲು ಖರೀದಿಗೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಪೊಲೀಸರು ಸಮಯ ನಿಗದಿ ಪಡಿಸಿದ್ದಾರೆ ಎಂದು ವ್ಯಾಪಾರಿ ತೌಸಿಫ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು