ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಹಂಕಾರದಿಂದ ಸಿಎಂ ಸ್ಥಾನ ಕಳೆದುಕೊಂಡ ಎಚ್‌ಡಿಕೆ: ಕೃಷಿ ಸಚಿವ ಬಿ.ಸಿ.ಪಾಟೀಲ

Last Updated 24 ಆಗಸ್ಟ್ 2021, 10:57 IST
ಅಕ್ಷರ ಗಾತ್ರ

ಹಾವೇರಿ: ‘ಎಚ್‌.ಡಿ.ಕುಮಾರಸ್ವಾಮಿ ತಮ್ಮ ದುರಹಂಕಾರ ಮತ್ತು ಸ್ವೇಚ್ಛಾಚಾರದಿಂದ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆಯೇ ಹೊರತು ಬೇರೆ ಯಾರೂ ಕಳೆದಿಲ್ಲ. ಸಿ.ಎಂ ಸ್ಥಾನ ಕಳೆದುಕೊಂಡ ನಂತರ ನೀರಿನಿಂದ ಹೊರಬಿದ್ದ ಮೀನಿನಂತಾಗಿದ್ದಾರೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿರುಗೇಟು ನೀಡಿದರು.

ರಟ್ಟೀಹಳ್ಳಿ ತಾಲ್ಲೂಕಿನ ಮದಗ ಮಾಸೂರು ಕೆರೆಗೆ ಮಂಗಳವಾರ ಬಾಗಿನ ಅರ್ಪಿಸಿದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಸ್ವಾರ್ಥ ಭಾವನೆಯಿಂದ ಎರಡು ಮೂರು ಜಿಲ್ಲೆಗಳಿಗೆ ಸೀಮಿತವಾದ ಆಡಳಿತ ನೀಡಿ, ಇಡೀ ಕರ್ನಾಟಕಕ್ಕೆ ಅನ್ಯಾಯ ಮಾಡಿದರು. ಹೀಗಾಗಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದೇವೆ. ಹಿರೇಕೆರೂರು ಅಭಿವೃದ್ಧಿ ಬಗ್ಗೆ ಅವರ ಸರ್ಟಿಫಿಕೇಟ್‌ ಬೇಕಿಲ್ಲ. ಈ ಕ್ಷೇತ್ರದ ಜನತೆ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ ಎಂದು ಹೇಳಿದರು.

ಅವರಪ್ಪ ಕೊಟ್ಟ ಅನುದಾನ: ನಾನು ಕೊಟ್ಟ ಅನುದಾನದಲ್ಲೇ ಅಭಿವೃದ್ಧಿ ಕೆಲಸವಾಗುತ್ತಿದೆ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಕುಮಾರಸ್ವಾಮಿ ಕೊಟ್ಟ ಅನುದಾನವಲ್ಲ, ಅವರ ಅಪ್ಪ ದೇವೇಗೌಡ ಕೊಟ್ಟ ಅನುದಾನದಲ್ಲೇ ಇಂದಿಗೂ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ’ ಎಂದು ಬಿ.ಸಿ. ಪಾಟೀಲ ವ್ಯಂಗ್ಯವಾಡಿದರು.

ಸತ್ಯಹರಿಶ್ಚಂದ್ರನ ಕುಡಿ: ‘ಕುಮಾರಸ್ವಾಮಿ ಮಹಾನ್‌ ಪ್ರಾಮಾಣಿಕ, ಸತ್ಯ ಹರಿಶ್ಚಂದ್ರನ ಎರಡನೇ ಕುಡಿ. ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ ಮೇಲೆ ಅವರು ಕ್ಷೇತ್ರಕ್ಕೆ ಹೋಗುವುದೇ ಇಲ್ಲ. ನಯಾಪೈಸೆ ಖರ್ಚು ಮಾಡದೆ ಗೆಲ್ಲುತ್ತಾರೆ. ಅವರಂಥ ಪ್ರಾಮಾಣಿಕರನ್ನು ನಾನು ಜೀವನದಲ್ಲಿ ಮತ್ತೊಬ್ಬರನ್ನು ನೋಡಿಲ್ಲ’ ಎಂದು ಜರಿದರು.

‘ಹಿರೇಕೆರೂರಿಗೆ ಬಂದಿದ್ದ ಕುಮಾರಸ್ವಾಮಿಗೆ ಹೂವಿನ ಹಾರ ಹಾಕಿ, ಮನೆಗೆ ಕರೆದೊಯ್ದು ಟೀ ಕುಡಿಸಿ ಕಳುಹಿಸುತ್ತಿದ್ದೆ. ಮಾಧ್ಯಮದವರು ಬೇರೆ ಅರ್ಥ ಕಲ್ಪಿಸುತ್ತಾರೆ ಎಂದು ಸುಮ್ಮನಾದೆ’ ಎಂದು ಚಟಾಕಿ ಹಾರಿಸಿದರು.

ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ನಟರನ್ನು ಜನರು ದೇವರಂತೆ ನೋಡುತ್ತಾರೆ. ನಡೆ–ನುಡಿಯನ್ನು ಅನುಕರಣೆ ಮಾಡುತ್ತಾರೆ. ಹೀಗಾಗಿ ನಾವು ಸರಿ ದಾರಿಯಲ್ಲಿ ನಡೆಯಬೇಕು. ನಾವು ಗಾಜಿನ ಮನೆಯಲ್ಲಿದ್ದೇವೆ ಎಂಬ ಪ್ರಜ್ಞೆ ಇರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT