ಶುಕ್ರವಾರ, ಮೇ 7, 2021
26 °C

ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದ ಯಾಲಕ್ಕಿ ಓಣಿಯ ಸಮೀಪದ ‘ಗುಡಿಸಲು ಕೇರಿ ಓಣಿಯಲ್ಲಿ’ ಮಾರ್ಚ್‌ 29ರಂದು ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ₹5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಧಾರವಾಡದ ಮಹಮ್ಮದ್‌ ಹುಸೇನ್‌ ಶೇಖ್‌ (28) ಮತ್ತು ಹುಬ್ಬಳ್ಳಿಯ ಅಮೀದ್‌ ಮಹಮ್ಮದ್‌ ಬೇಪಾರಿ (28) ಬಂಧಿತ ಆರೋಪಿಗಳು.

ಮತ್ತೊಬ್ಬ ಆರೋಪಿ ಹುಬ್ಬಳ್ಳಿಯ ಸಲೀಂ ಅಮನ್‌ ಬೇಪಾರಿ (26) ಈತನನ್ನು ಗೋವಾ ರಾಜ್ಯದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನ ಕಡೆಯಿಂದಲೂ ಕಳವಾದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳುವುದು ಬಾಕಿ ಇದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ತಿಳಿಸಿದರು. 

ಬಂಧಿತ ಆರೋಪಿಗಳಿಬ್ಬರು ಏ.11ರಂದು ಹಾನಗಲ್‌ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಸೇತುವೆ ಹತ್ತಿರ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. 

ಒಟ್ಟು ಮೂವರು ಆರೋಪಿಗಳು ಪಟ್ಟಣದಲ್ಲಿ ತಿರುಗಾಡಿ, ಗುಡಿಸಲು ಕೇರಿ ಓಣಿಯ ಮನೆ ಬಾಗಿಲಿಗೆ ಕೀಲಿ ಹಾಕಿದ್ದನ್ನು ನೋಡಿಕೊಂಡು, ಯಾರೂ ಇಲ್ಲದ ಸಮಯದಲ್ಲಿ ಕಬ್ಬಿಣದ ರಾಡಿನಿಂದ ಕೀಲಿ ಮುರಿದು ಒಳಗೆ ಹೊಕ್ಕು ₹15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಆಭರಣಗಳನ್ನು ಹಂಚಿಕೊಂಡು, ಕೆಲವನ್ನು ಆಭರಣದ ಅಂಗಡಿಗಳಲ್ಲಿ ಅಡವು ಇಟ್ಟಿದ್ದರು. ಇವರು ಕಳವು ಮಾಡಿದ್ದರಲ್ಲಿ ಕೆಲವು ಉಮಾ ಗೋಲ್ಡ್‌ ಆಭರಣಗಳು ಇದ್ದವು ಎಂದು ಎಸ್ಪಿ ದೇವರಾಜು ಹೇಳಿದರು. 

ಆರೋಪಿಗಳನ್ನು ಪತ್ತೆ ಮಾಡುವ ತನಿಖಾ ತಂಡದಲ್ಲಿ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಪ್ರಹ್ಲಾದ ಚನ್ನಗಿರಿ, ಎಸ್‌ಐ ಎಸ್‌.ಪಿ. ಹೊಸಮನಿ, ಆರ್‌.ವಿ. ಸೊಪ್ಪಿನ, ವೈ.ಎಫ್‌. ತಹಶೀಲ್ದಾರ್‌, ಸಿ.ಎಂ.ಪೂಜಾರ, ಪಿ.ಕೆ.ಕರಿಯಣ್ಣನವರ, ಎಂ.ಎಂ. ತುಂಗಳದ, ಜಿ.ಎಸ್‌. ಹಳ್ಳೂರ, ಪಿ.ಬಿ. ತಿಪ್ಪಣ್ಣನವರ, ಆರ್‌.ಎಸ್‌. ಗೊಂದೇರ, ಎಂ.ಎಂ. ಬಂಕಾಪುರ, ಎನ್‌.ಎಂ. ಪೂಜಾರ, ಮಾರುತಿ ಹಾಲಭಾವಿ, ಸತೀಶ ಮಾರಿಕಟ್ಟಿ ಇತರರು ಪಾಲ್ಗೊಂಡಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.