ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನದ ಕನಸು ಬಡವರಿಗೆ ಗಗನಕುಸುಮ!

ಅಕ್ರಮ ಬಡಾವಣೆಗಳಿಂದ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಭಾರಿ ನಷ್ಟ: ಸೈಟು ಖರೀದಿಸಿದವರಿಗೂ ಸಂಕಷ್ಟ
Last Updated 9 ನವೆಂಬರ್ 2020, 6:36 IST
ಅಕ್ಷರ ಗಾತ್ರ
ADVERTISEMENT
""
""
""

ಹಾವೇರಿ: ಸ್ವಂತ ಸೂರು ಹೊಂದಬೇಕು ಎಂಬುದು ಪ್ರತಿಯೊಂದು ಕುಟುಂಬದ ಕನಸು. ಆದರೆ, ಗಗನಕ್ಕೆ ಏರಿರುವ ಖಾಸಗಿ ನಿವೇಶನಗಳ ದರ, ಮರಳಿನ ಅಭಾವ ಮತ್ತು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಟ್ಟಡ ಸಾಮಗ್ರಿಗಳ ದರ ಮುಂತಾದ ಕಾರಣಗಳಿಂದ ಎಷ್ಟೋ ಬಡಕುಟುಂಬಗಳ ಕನಸು ಗಗನಕುಸುಮವಾಗಿದೆ.

1998ರಲ್ಲಿ ಅಸ್ತಿತ್ವಕ್ಕೆ ಬಂದ ‘ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರ’ ಬರೋಬ್ಬರಿ 22 ವರ್ಷಗಳ ನಂತರ ಹೊಸ ವಸತಿ ಬಡಾವಣೆ ನಿರ್ಮಿಸಲು ಮುಂದಾಗಿದೆ. ನಗರದ ಹಳೇ ಪಿ.ಬಿ.ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.77ರಲ್ಲಿ ಒಟ್ಟು 10 ಎಕರೆ ಜಾಗ ಗುರುತಿಸಿದೆ. ಪ್ರಾಧಿಕಾರ ಮತ್ತು ಭೂಮಾಲೀಕರು ಶೇ 50:50ರ ಅನುಪಾತದಲ್ಲಿ ವಸತಿ ಯೋಜನೆ ಕೈಗೊಳ್ಳಲು ಕಾರ್ಯೋನ್ಮುಖವಾಗಿದೆ.

200 ನಿವೇಶನಗಳ ರಚನೆ: ‘ಜಮೀನ್ದಾರರನ್ನು ಕರೆಸಿ ಸೆಪ್ಟೆಂಬರ್‌ನಲ್ಲಿ ಸಭೆ ನಡೆಸಿದ್ದೇವೆ. ಕೆಲವರು ಕಾಲಾವಕಾಶ ಕೇಳುತ್ತಿದ್ದಾರೆ. ಪ್ರಾಧಿಕಾರ ತೆಗೆದುಕೊಳ್ಳುವ ನಿವೇಶನಗಳ ಮಾದರಿ ಮತ್ತು ಸೌಲಭ್ಯಗಳನ್ನು ಯಥಾವತ್ತಾಗಿ ಶೇ 50ರಷ್ಟು ಪಾಲನ್ನು ನಮಗೂ ಕೊಡಬೇಕು ಎಂಬ ಬೇಡಿಕೆಯನ್ನು ಭೂ ಮಾಲೀಕರು ಇಟ್ಟಿದ್ದಾರೆ. ಸುಮಾರು 200 ನಿವೇಶನಗಳನ್ನು ರಚನೆ ಮಾಡಿ, ಬಡ ಮತ್ತು ಮಧ್ಯಮ ವರ್ಗದವರಿಗೆ ನಿವೇಶನ ನೀಡಲು ಒತ್ತು ನೀಡುತ್ತೇವೆ’ ಎನ್ನುತ್ತಾರೆ ಪ್ರಾಧಿಕಾರದ ಆಯುಕ್ತ ವಾಸಣ್ಣ ಆರ್‌.

ಬಡವರಿಗೆ ಜಿ+1 ಮನೆಗಳು

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಹಾಗೂ ವಾಜಪೇಯಿ ನಗರ ವಸತಿ ಯೋಜನೆಯಡಿ ಶಿಗ್ಗಾವಿ ಪಟ್ಟಣದಲ್ಲಿ ವಾಸಿಸಲು ಸ್ವಂತ ನಿವೇಶನ, ಮನೆಗಳಿಲ್ಲದ ಫಲಾನುಭವಿಗಳಿಗೆ ಜಿ+1 ಮನೆಗಳ ನಿರ್ಮಾಣ ಮಾಡುವ ಕಾಮಗಾರಿ ಕಾರ್ಯ ಶಿಗ್ಗಾವಿ ಮತ್ತು ಬಂಕಾಪುರ ಪಟ್ಟಣದಲ್ಲಿ ಜಾರಿಯಲ್ಲಿದೆ.

ಪಟ್ಟಣದಲ್ಲಿ ಈ ಯೋಜನೆಯಡಿ ಸುಮಾರು 190 ಮನೆಗಳು ಮಂಜೂರಾಗಿದ್ದು, ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ₹10.79 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಬಂಕಾಪುರ ಪಟ್ಟಣದಲ್ಲಿ ಸುಮಾರು 604 ಮನೆಗಳು ಈ ಯೋಜನೆಯಡಿ ಮಂಜೂರಾಗಿದ್ದು, ಅದಕ್ಕಾಗಿ ₹43.74 ಕೋಟಿ ಅನುದಾನ ಬಿಡುಗಡೆಯಾಗಿದೆ.

ಹಿರೇಕೆರೂರಿನ ಬಿ.ಜಿ.ಬಣಕಾರ ಬಡಾವಣೆಗೆ ಹೊಂದಿಕೊಂಡಿರುವ ಸುಣ್ಣದ ಕಾಲುವೆ ಪಕ್ಕದ ತಗ್ಗಿನಲ್ಲಿ ಅನಧಿಕೃತವಾಗಿ ವಾಸವಾಗಿರುವ ಕುಟುಂಬಗಳು

200 ಫಲಾನುಭವಿಗಳು ಆಯ್ಕೆ

ಹಾನಗಲ್‌–ಬೈಚವಳ್ಳಿ ರಸ್ತೆಯ ವಿದ್ಯುತ್‌ ವಿತರಣಾ ಕೇಂದ್ರ ಪಕ್ಕದ 5 ಎಕರೆ ಸರ್ಕಾರಿ ಜಾಗ ಪುರಸಭೆಗೆ ಹಸ್ತಾಂತರಗೊಂಡಿದ್ದು, ನಿವೇಶನ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. 200 ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯೂ ಪೂರ್ಣಗೊಂಡಿದೆ.

‘ಹಾನಗಲ್‌–ಪಾಳಾ ರಸ್ತೆಯಲ್ಲಿ ಈಗಾಗಲೇ 62 ನಿವೇಶನಗಳನ್ನು ಪುರಸಭೆ ಸಿದ್ಧಗೊಳಿಸಿದೆ. ಅರ್ಹ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ತಾಂತ್ರಿಕ ದೋಷದಿಂದ ರಾಜೀವ್‌ ಗಾಂಧಿ ವಸತಿ ನಿಗಮದಲ್ಲಿ ವಿಳಂಬವಾಗುತ್ತಿದೆ. ಶೀಘ್ರದಲ್ಲೇ ನಿವೇಶನ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್‌.ಎನ್.ಬಜಕ್ಕನವರ ತಿಳಿಸಿದ್ದಾರೆ.

ಮೂಲಸೌಕರ್ಯ ಕೊರತೆ

ಬ್ಯಾಡಗಿ ಪಟ್ಟಣದಲ್ಲಿ ನಿವೇಶನ ರಹಿತರಿಗೆ ಪುರಸಭೆಯಿಂದ ಮನೆ ನಿರ್ಮಿಸಿ ಹಂಚುವ ಉದ್ದೇಶದಿಂದ ₹2 ಕೋಟಿ ವೆಚ್ಚದಲ್ಲಿ 10 ಎಕರೆ ಭೂಮಿಯನ್ನು ಮಲ್ಲೂರು ರಸ್ತೆಯಲ್ಲಿ ಖರೀದಿಸಲಾಗಿದೆ. ಅಲ್ಲಿ ಕಚ್ಚಾ ರಸ್ತೆ ಮಾತ್ರ ನಿರ್ಮಿಸಿದ್ದು, ಇನ್ನಿತರ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ.

ಒಟ್ಟು 814 ಮನೆಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. 613 ಜನರ ಆಧಾರ್‌ ಸಂಖ್ಯೆ ಮಾತ್ರ ಲಿಂಕ್ ಆಗಿವೆ. ಇನ್ನುಳಿದ 180 ಜನರ ಮಾಹಿತಿ ಲಭ್ಯವಿಲ್ಲ ಎನ್ನಲಾಗಿದೆ. ಮಾಹಿತಿ ಲಭ್ಯವಿಲ್ಲದವರನ್ನು ಪಟ್ಟಿಯಿಂದ ಕೈಬಿಡಲು ಆಶ್ರಯ ಸಮಿತಿಗೆ ಸಾಧ್ಯವಾಗದಿರುವ ಕಾರಣ ಮನೆ ನಿರ್ಮಾಣಕ್ಕೆ ನನೆಗುದಿಗೆ ಬಿದ್ದಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಸೂರಿಗಾಗಿ ಅಲೆದಾಟ

ಸವಣೂರ ಪಟ್ಟಣದ ಹೊರವಲಯದಲ್ಲಿ ಜಿ+1 ಮಾದರಿಯ 1384 ವಸತಿ ನಿಲಯಗಳ ಸಂಕೀರ್ಣ ನಿರ್ಮಾಣ ಹಾಗೂ ಹಂಚಿಕೆ ಕಾಮಗಾರಿ 2012ರಲ್ಲಿ ಆರಂಭಗೊಂಡಿದ್ದರೂ ಇದುವರೆಗೂ ಮುಕ್ತಾಯ ಭಾಗ್ಯ ಕಂಡಿಲ್ಲ. 2012ರಲ್ಲಿ ಪ್ರಥಮ ಹಂತದಲ್ಲಿ 1020 ಅರ್ಜಿಗಳು ಸಲ್ಲಿಕೆಯಾಗಿ, 531 ಫಲಾನುಭವಿಗಳು ವಂತಿಗೆ ಕಟ್ಟುವ ಮೂಲಕ ಆಯ್ಕೆಗೊಂಡಿದ್ದರು.

ಪ್ರತಿ ಮನೆ ನಿರ್ಮಾಣ ವೆಚ್ಚ ಹೆಚ್ಚಿದ ಹಿನ್ನೆಲೆಯಲ್ಲಿ ತಾಂತ್ರಿಕ ದೋಷ ಕಾರಣ ನೀಡಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಯಿತು. ನಂತರ, 2014ರಲ್ಲಿ ಮತ್ತೆ ಮನೆ ನಿರ್ಮಾಣಕ್ಕೆ ನೂತನ ಕ್ರಿಯಾಯೋಜನೆ ಸಿದ್ಧಪಡಿಸಿ ಆರಂಭಗೊಂಡ ಕಾಮಗಾರಿಗೆ ಪ್ರತಿ ಮನೆಗೆ ₹2.15 ಲಕ್ಷ ನಿಗದಿಪಡಿಸಲಾಯಿತು. ಆದರೆ,ಫಲಾನುಭವಿಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲವನ್ನು ನೀಡಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಯೋಜನೆ ನನೆಗುದಿಗೆ ಬಿದ್ದಿದೆ.

ಸವಣೂರ ಪಟ್ಟಣದಲ್ಲಿ 2012ರಲ್ಲಿ ಪ್ರಾರಂಭಗೊಂಡ ಜಿ+1 ಮನೆಗಳ ಕಾಮಗಾರಿ ಸ್ಥಗಿತಗೊಂಡಿರುವುದು (ಎಡಚಿತ್ರ) ಹಾನಗಲ್‌ ವ್ಯಾಪ್ತಿಯ ಬೈಚವಳ್ಳಿ ರಸ್ತೆ ಭಾಗದ ಸರ್ಕಾರಿ ಜಾಗವನ್ನು ಸಮತಟ್ಟು ಮಾಡಿ ನಿವೇಶನ ಹಂಚಿಕೆಗೆ ಪುರಸಭೆ ಸಿದ್ಧತೆ ನಡೆಸಿರುವುದು

14 ವರ್ಷವಾದರೂ ಸಿಗದ ನಿವೇಶನ

ಕರ್ನಾಟಕ ಗೃಹ ಮಂಡಳಿ ವತಿಯಿಂದ ರಟ್ಟೀಹಳ್ಳಿ ಪಟ್ಟಣದಲ್ಲಿ 2006ನೇ ಸಾಲಿನಲ್ಲಿ ನಿವೇಶನಗಳನ್ನು ಸಿದ್ಧಪಡಿಸುವ ಕುರಿತು ಸಾರ್ವಜನಿಕರಿಂದ ನೋಂದಣಿ ಶುಲ್ಕ ಸಂಗ್ರಹಿಸಿದರು.

ಈಗಿರುವ ತಹಶೀಲ್ದಾರ್‌ ಕಾರ್ಯಾಲಯದ ಎದುರಿನಲ್ಲಿರುವ ಜಮೀನನ್ನು ಗುರುತಿಸಲಾಗಿತ್ತು. ಆದರೆ ಅಲ್ಲಿನ ರೈತರು ಜಮೀನು ನೀಡಲು ವಿರೋಧ ವ್ಯಕ್ತಪಡಿಸಿ, ಕೋರ್ಟನಿಂದ ತಡೆಯಾಜ್ಞೆ ತಂದರು. ಇದರಿಂದಾಗಿ ಇದುವರೆಗೂ ಕರ್ನಾಟಕ ಗೃಹ ಮಂಡಳಿಯವರು ನಿವೇಶನ ಹಂಚಿಕ ಮಾಡಿಲ್ಲ.

ಅಕ್ರಮ ಬಡಾವಣೆಗಳು: ಪ್ರಾಧಿಕಾರದಿಂದ ನೋಟಿಸ್‌

‘ಹಾವೇರಿ ನಗರದ ಸುತ್ತಮುತ್ತ ಸುಮಾರು 60 ಅಕ್ರಮ ಬಡಾವಣೆಗಳು ತಲೆ ಎತ್ತಿವೆ. ಇಂಥವರಿಗೆ ಈಗಾಗಲೇ ನೋಟಿಸ್‌ ಕೊಟ್ಟಿದ್ದೇವೆ. ಜತೆಗೆ ಈ ಬಡಾವಣೆಗಳ ನಿವೇಶನಗಳನ್ನು ಮಾರಾಟ ಮಾಡದಂತೆ ತಡೆಗಟ್ಟಲು ಉತಾರ ನೀಡಬಾರದು ಎಂದು ನಗರಸಭೆಗೆ ಹಾಗೂ ನೋಂದಣಿ ಮಾಡದಂತೆ ಉಪನೋಂದಣಾಧಿಕಾರಿಗೂ ನೋಟಿಸ್‌ ಕೊಟ್ಟಿದ್ದೇವೆ’ ಎನ್ನುತ್ತಾರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ.

ಅಕ್ರಮ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದ ಜನರು ಸಮಸ್ಯೆಗೆ ಸಿಲುಕುತ್ತಾರೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿತ್ತು. ಅವರು ಸಕ್ರಮೀಕರಣ (ಅಕ್ರಮ–ಸಕ್ರಮ) ಯೋಜನೆಯಡಿ ಪರಿಶೀಲಿಸಲು ತಿಳಿಸಿದ್ದಾರೆ ಎಂದರು.

‘ಅಕ್ರಮ–ಸಕ್ರಮದಿಂದ ಪ್ರಾಧಿಕಾರಕ್ಕೆ ಯಾವುದೇ ಆದಾಯ ಬರುವುದಿಲ್ಲ. ಈಗಾಗಲೇ ಅಕ್ರಮ ಬಡಾವಣೆಗಳ ನಿರ್ಮಾಣದಿಂದ ಸುಮಾರು ₹5ರಿಂದ 6 ಕೋಟಿ ನಷ್ಟ ಉಂಟಾಗಿದೆ. ಹಾಗಾಗಿ ನಿಯಮಾನುಸಾರ ಶುಲ್ಕ ಪಡೆದು, ಅನುಮತಿ ನೀಡಲು ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಿದ್ದೇವೆ’ ಎಂದರು ಮಾಹಿತಿ ನೀಡಿದರು.

ಭೂ ಸಂಗ್ರಹಣೆಗೆ ಒತ್ತು

‘ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಶೇ 50:50 ಅನುಪಾತದಡಿ ವಸತಿ ಯೋಜನೆ ಕೈಗೊಳ್ಳಲು ಕನಿಷ್ಠ 50 ಎಕರೆ ಹಾಗೂ ಶಿಗ್ಗಾವಿ, ಸವಣೂರು, ಹಾನಗಲ್‌, ಹಿರೇಕೆರೂರು, ರಾಣೆಬೆನ್ನೂರು, ಬ್ಯಾಡಗಿ, ರಟ್ಟೀಹಳ್ಳಿ ಮತ್ತು ಬಂಕಾಪುರಗಳಲ್ಲಿ ಕನಿಷ್ಠ 25 ಎಕರೆ ಜಮೀನು ಅಗತ್ಯವಿದೆ. ಭೂ ಮಾಲೀಕರು ಇಚ್ಛಿಸಿ ಮಂಡಳಿಗೆ ನೀಡಿದಲ್ಲಿ ಶೀಘ್ರವಾಗಿ ವಸತಿ ಯೋಜನೆ ಕೈಗೊಳ್ಳುತ್ತೇವೆ’ ಎನ್ನುತ್ತಾರೆ ಕರ್ನಾಟಕ ಗೃಹ ಮಂಡಳಿ ಎಇಇ ಸೈಯದ್‌ ಮೆಹಬೂಬ್‌.

ಹಾವೇರಿ ತಾಲ್ಲೂಕಿನ ದೇವಗಿರಿ ಯಲ್ಲಾಪುರ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ 99 ಎಕರೆ 7 ಗುಂಟೆ ಜಮೀನಿನಲ್ಲಿ ಮೂಲಸೌಕರ್ಯಗಳೊಂದಿಗೆ ವಸತಿ ಬಡಾವಣೆಯನ್ನು ಸುಮಾರು ₹25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸದರಿ ಯೋಜನೆಗೆ 2017ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ 1041 ಅರ್ಜಿದಾರರಿಗೆ ಲಾಟರಿ ಮೂಲಕ ಶೀಘ್ರದಲ್ಲೇ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಹಾನಗಲ್‌ ವ್ಯಾಪ್ತಿಯ ಬೈಚವಳ್ಳಿ ರಸ್ತೆ ಭಾಗದ ಸರ್ಕಾರಿ ಜಾಗವನ್ನು ಸಮತಟ್ಟು ಮಾಡಿ ನಿವೇಶನ ಹಂಚಿಕೆಗೆ ಪುರಸಭೆ ಸಿದ್ಧತೆ ನಡೆಸಿದೆ

ಕೊಳಚೆ ಪ್ರದೇಶದಲ್ಲೇ ಜೀವನ

ಹಿರೇಕೆರೂರು ಪಟ್ಟಣದ ಬಿ.ಜಿ.ಬಣಕಾರ ಬಡಾವಣೆಗೆ ಹೊಂದಿಕೊಂಡಿರುವ ಸುಣ್ಣದ ಕಾಲುವೆ ಪಕ್ಕದ ತಗ್ಗಿನಲ್ಲಿ ಅನೇಕ ಕುಟುಂಬಗಳು ಹಲವು ದಶಕಗಳಿಂದ ಅನಧಿಕೃತವಾಗಿ ವಾಸವಾಗಿದ್ದಾರೆ.

1985ರಲ್ಲಿ ಅಸ್ತಿತ್ವಕ್ಕೆ ಬಂದ ಬಿ.ಜಿ.ಬಣಕಾರ ಬಡಾವಣೆ ನೂರಾರು ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಿತು. ನಂತರ ಚನ್ನಳ್ಳಿ ರಸ್ತೆಯಲ್ಲಿ 2004ರಲ್ಲಿ ಬಿ.ಎಚ್.ಬನ್ನಿಕೋಡ ಬಡಾವಣೆ ಅಸ್ತಿತ್ವಕ್ಕೆ ಬಂದಿತು.

ಇಲ್ಲಿನ 467 ನಿವೇಶಗಳನ್ನು ಹಂಚಿಕೆಯಾದವು. ಅದರಲ್ಲಿ ಸುಮಾರು 200 ಮನೆಗಳನ್ನು ನಿರ್ಮಿತಿ ಕೇಂದ್ರದಿಂದ ನಿರ್ಮಿಸಿ ವಸತಿ ರಹಿತರಿಗೆ ಹಂಚಲಾಯಿತು. ಇಲ್ಲಿ ₹ 5 ಸಾವಿರ ತುಂಬಲು ಆಗದವರು ಕೊಳಚೆಯಲ್ಲಿಯೇ ಜೀವನ ಸಾಗಿಸುವಂತಾಯಿತು.

ಆಂಜನೇಯ ಬಡಾವಣೆ: ಜೂಜಾಟದ ತಾಣ

ರಾಣೆಬೆನ್ನೂರಿನ ಅಡವಿ ಆಂಜನೇಯ ಬಡಾವಣೆಯಲ್ಲಿಕಾಂಕ್ರೀಟ್ ರಸ್ತೆ‌, ಚರಂಡಿ, ನದಿ ನೀರಿನ ಕೊರತೆ ಎದ್ದು ಕಾಣುತ್ತಿವೆ.ಸಿ ಬ್ಲಾಕ್‌ನಲ್ಲಿ ಇನ್ನೂ ಮನೆಗಳ ಹಂಚಿಕೆ ಪೂರ್ಣವಾಗಿಲ್ಲ. ಯಾರಿಗೆ ಮನೆ ಹಂಚಿಕೆಯಾಗಿದೆಯೋ ಅವರು ಅಲ್ಲಿ ವಾಸಿಸುತ್ತಿಲ್ಲ. ಇನ್ನು ಕೆಲವರು ಬಾಡಿಗೆ ಕೊಟ್ಟಿದ್ದಾರೆ. ಕೆಲ ಮನೆಗಳು ವಾಸವಿಲ್ಲದೇ ಜೂಜಾಟದ ತಾಣವಾಗಿವೆ. ನಿಜವಾದ ಬಡವರು ಗುಡಿಸಲು, ಜೋಪಡಿಯಲ್ಲಿ ವಾಸವಾಗಿದ್ದಾರೆ ಎಂಬ ಆರೋಪ ಅಲ್ಲಿನ ನಿವಾಸಿಗಳದ್ದು.

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಮುಕ್ತೇಶ ಪಿ.ಕೂರಗುಂದಮಠ, ಎಂ.ವಿ.ಗಾಡದ, ಎಚ್.ವಿ. ನಾಯ್ಕ, ಪ್ರಮೀಳಾ ಹುನಗುಂದ, ಮಾರುತಿ ಪೇಟಕರ, ಗಣೇಶಗೌಡ ಎಂ. ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT