ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿಲ್ಲೆಯಾದ್ಯಂತ ನೀತಿಸಂಹಿತೆ ಜಾರಿ

ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರ ಕ್ಷೇತ್ರ ಚುನಾವಣೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
Last Updated 10 ನವೆಂಬರ್ 2021, 13:40 IST
ಅಕ್ಷರ ಗಾತ್ರ

ಹಾವೇರಿ: ಭಾರತ ಚುನಾವಣಾ ಆಯೋಗವು ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರ ಕ್ಷೇತ್ರಕ್ಕೆ ಚುನಾವಣೆ ಘೋಷಿಸಿದ್ದು, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳು ಒಳಗೊಂಡಂತೆ ಚುನಾವಣೆ ನಡೆಯಲಿದೆ. ಜಿಲ್ಲೆಯಾದ್ಯಂತ ನ.9ರಿಂದ ಡಿ.16ರವರೆಗೆ ಮಾದರಿ ನೀತಿಸಂಹಿತೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ರಾಜಕೀಯ ಪಕ್ಷಗಳ ಸಭೆ ನಡೆಸಿ ಮಾತನಾಡಿದ ಅವರು, ಈ ಅವಧಿಯಲ್ಲಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಸಾರ್ವಜನಿಕ ಸಭೆ-ಸಮಾರಂಭ ಮಾಡುವಂತಿಲ್ಲ. ಮಾದರಿ ನೀತಿಸಂಹಿತೆ ಉಲ್ಲಂಘನೆಯಾದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾದರಿ ನೀತಿಸಂಹಿತೆ ತಂಡಗಳ ರಚನೆ ಮಾಡಲಾಗಿದ್ದು, ಆಯಾ ತಾಲ್ಲೂಕು ತಹಶೀಲ್ದಾರ್‌ ಅಧ್ಯಕ್ಷರಾಗಿದ್ದು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ವೃತ್ತ ಆರಕ್ಷಕ ನಿರೀಕ್ಷಕರು, ನಗರ, ಪಟ್ಟಣದ ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿಗಳು, ತಾಲ್ಲೂಕು ಅಬಕಾರಿ ನಿರೀಕ್ಷಕರು ಸದಸ್ಯರಾಗಿದ್ದಾರೆ.

ಲೋಕಸಭೆ, ವಿಧಾನಸಭೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರು, ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದಿಂದ ನೇಮಕವಾದ ನಾಮ ನಿರ್ದೇಶಿತ ಸದಸ್ಯರು, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರು ಮತದಾರರಾಗಿದ್ದಾರೆ ಎಂದರು.

ಅನುಮೋದಿತ ಪ್ರತಿಯನ್ನು ಧಾರವಾಡ ಚುನಾವಣಾಧಿಕಾರಿಗಳ ಕಚೇರಿಯಿಂದ ಪಡೆಯಬೇಕು. ಚುನಾವಣಾ ಸಭೆ ಹಾಗೂ ವಾಹನಗಳ ಬಳಕೆಗೆ ಧಾರವಾಡ ಚುನಾವಣಾಧಿಕಾರಿಗಳು ಹಾಗೂ ಹಾವೇರಿಯ ಸಹಾಯಕ ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.

ಮತಗಟ್ಟೆ ವಿವರ:

ಆಯಾ ತಾಲ್ಲೂಕು ವ್ಯಾಪ್ತಿಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಹಾಗೂ ಎಲ್ಲ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಮತಗಟ್ಟೆ ಸ್ಥಾಪನೆ ಮಾಡಲಾಗುವುದು. ಸವಣೂರ-22, ಶಿಗ್ಗಾವಿ-30, ಹಾನಗಲ್-43, ಹಾವೇರಿ-34, ರಾಣೆಬೆನ್ನೂರು-41, ಬ್ಯಾಡಗಿ-22, ಹಿರೇಕೆರೂರು-20 ಹಾಗೂ ರಟ್ಟಿಹಳ್ಳಿ ತಾಲೂಕಿನಲ್ಲಿ 20 ಮತಗಟ್ಟೆ ಸೇರಿ 232 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೋವಿಡ್ ಮಾರ್ಗಸೂಚಿ ಪಾಲನೆ:

ಅಭ್ಯರ್ಥಿಗಳು, ಚುನಾವಣಾ ಏಜೆಂಟರು, ಪೋಲಿಂಗ್ ಏಜೆಂಟರು ಕಡ್ಡಾಯವಾಗಿ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು. ಒಂದು ವೇಳೆ ಎರಡು ಡೋಸ್ ಲಸಿಕೆ ಪಡೆಯದಿದ್ದಲ್ಲಿ ಮತದಾನ ದಿನ ಮತ್ತು ಮತ ಎಣಿಕೆ ದಿನಕ್ಕೆ ಅನ್ವಯವಾಗುವಂತೆ 48 ಗಂಟೆ ಪೂರ್ವದಲ್ಲಿ ಆರ್.ಟಿ.ಪಿ.ಸಿ.ಆರ್. ನೆಗಟಿವ್ ವರದಿ ಕಡ್ಡಾಯವಾಗಿದೆ. ಒಂದೇ ಡೋಸ್ ಲಸಿಕೆ ಪಡೆದಿದ್ದರೆ 72 ಗಂಟೆ ಪೂರ್ವದಲ್ಲಿ ಆರ್.ಟಿ.ಪಿ.ಸಿ.ಆರ್. ನೆಗಟಿವ್ ವರದಿ ಕಡ್ಡಾಯವಾಗಿದೆ. ಪ್ರಚಾರಕ್ಕೆ ಅಭ್ಯರ್ಥಿಯನ್ನು ಒಳಗೊಂಡಂತೆ ಕೇವಲ ಐದು ಜನರಿಗೆ ಮಾತ್ರ ಅವಕಾಶವಿದೆ ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿಗಳಾದ ಶಿವಾನಂದ ಉಳ್ಳಾಗಡ್ಡಿ, ಅನ್ನಪೂರ್ಣ ಮುದಕಮ್ಮನವರ, ತಹಶೀಲ್ದಾರ್‌ ಗಿರೀಶ ಸ್ವಾದಿ, ಬಿಜೆಪಿಯ ಪ್ರಭು ಹಿಟ್ನಳ್ಳಿ, ಕಾಂಗ್ರೆಸ್‍ನ ಶ್ರೀನಿವಾಸ ಹಳ್ಳಳ್ಳಿ, ಜೆ.ಡಿ.ಎಸ್.ನ ಅಮೀರಾಜನ ಬೇಪಾರಿ, ಭಾರತೀಯ ಕಮ್ಯೂನಿಸ್ಟ್ ಪಕ್ಷ ರುದ್ರಪ್ಪ ಜಾಬೀನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT