ಬುಧವಾರ, ಮೇ 18, 2022
24 °C
ಕ್ವಿಂಟಲ್‍ಗೆ ₹3377 ಬೆಂಬಲ ಬೆಲೆ: ದಲ್ಲಾಳಿಗಳು ರಾಗಿ ತಂದರೆ ಕ್ರಮದ ಎಚ್ಚರಿಕೆ

ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಮುಂಗಾರು ಋತುವಿನಲ್ಲಿ 2021–22ನೇ ಸಾಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ರಾಗಿ ಖರೀದಿ ಕೇಂದ್ರ ಆರಂಭಿಸಲಾಯಿತು.

ಶಾಸಕ ನೆಹರು ಓಲೇಕಾರ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ನಂತರ ಮಾತನಾಡಿ, ‘ಜಿಲ್ಲೆಯ ರೈತರ ಬಹುದಿನದ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರವನ್ನು ಪ್ರಾರಂಭಿಸಿದೆ. ರೈತರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು. 

ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ರಾಗಿ ₹2100ರಂತೆ  ಖರೀದಿಯಾಗುತ್ತಿದೆ. ರಾಗಿ ಬೆಳೆಗಾರರಿಗೆ ನೆರವು ನೀಡಲು ಸರ್ಕಾರ ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಲ್‍ಗೆ ₹3,377 ರಂತೆ ಖರೀದಿ ಮಾಡುತ್ತದೆ. ಪ್ರತಿ ರೈತನಿಂದ ಗರಿಷ್ಠ 20 ಕ್ವಿಂಟಲ್ ರಾಗಿ ಖರೀದಿಸಲು ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ಕಳೆದ ಸಾಲಿನಲ್ಲಿ ಅಂದಾಜು 2.10 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ರೈತರಿಂದ ನೇರವಾಗಿ ಖರೀದಿಸಲು ಸರ್ಕಾರ ಅನುಮತಿ ನೀಡಿತ್ತು. ಈ ವರ್ಷ 3.14 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಉದ್ದೇಶಿಸಿದೆ ಎಂದರು.

ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ದೊರೆತಲ್ಲಿ, ರೈತರು ಸುಗಮವಾಗಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಕಾಡುಪ್ರಾಣಿ ಹಾವಳಿ, ಕೀಟಬಾಧೆ ಹಾಗೂ ಕೂಲಿಕಾರರ ಸಮಸ್ಯೆಯಿಂದಾಗಿ ರಾಗಿ ಉತ್ಪಾದನೆ ಕುಂಠಿತವಾಗಿದೆ ಎಂದರು.
ವ್ಯಾಪಾರಸ್ಥರು ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಇದನ್ನು ತಪ್ಪಿಸಲು ಸರ್ಕಾರ ರಾಗಿಗೆ ಬೆಂಬಲ ಬೆಲೆ ನಿಗದಿಪಡಿಸಿದೆ ಎಂದರು. 

‘ಫ್ರೂಟ್ಸ್‌ ಐಡಿ ತರುವುದು ಅಗತ್ಯ’

ಎ.ಪಿ.ಎಂ.ಸಿ ಸಹಾಯಕ ನಿರ್ದೇಶಕ ಜಿ.ಬಿ.ಕಬ್ಬೇರಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಪ್ರತಿ ಕ್ವಿಂಟಲ್ ರಾಗಿಗೆ ₹3377ರ ಬೆಂಬಲ ಬೆಲೆಯಡಿ ತಲಾ ರೈತರಿಂದ ಗರಿಷ್ಠ 20 ಕ್ವಿಂಟಲ್ ರಾಗಿಯನ್ನು ಖರೀದಿ ಮಾಡಲಾಗುತ್ತಿದೆ. ರೈತರಿಗೆ ಕೃಷಿ ಇಲಾಖೆ ನೀಡಿರುವ ‘ಫ್ರೂಟ್ ಐಡಿ’ಯನ್ನು (ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ಖರೀದಿ ಕೇಂದ್ರಕ್ಕೆ ತಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ರೈತರಿಂದ ಖರೀದಿಸುವ ರಾಗಿ ಸರಕಿನ ಮೌಲ್ಯವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಡಿ.ಬಿ.ಟಿ ಮೂಲಕ ಪಾವತಿಸಲಾಗುವುದು ಎಂದರು.

ರೈತರು ಉತ್ತಮ ಗುಣಮಟ್ಟದ (ಎಫ್‌ಎಕ್ಯೂ) ರಾಗಿಯನ್ನು ತಮ್ಮ ಸ್ವಂತ ಖರ್ಚಿನಲ್ಲೇ ಖರೀದಿ ಕೇಂದ್ರಕ್ಕೆ ಗೊತ್ತುಪಡಿಸಿದ ದಿನಾಂಕದಂದು ತರಬೇಕು. ರೈತರ ಸಮ್ಮುಖದಲ್ಲಿ ತೂಕ ಮಾಡಿ, ಚೀಲ ಮಾಡಲಾಗುವುದು. ರೈತರ ಹೊರತಾಗಿ ಮಧ್ಯವರ್ತಿಗಳು ಅಥವಾ ಏಜೆಂಟರುಗಳು ನೋಂದಣಿ ಕೇಂದ್ರಕ್ಕೆ ರಾಗಿಯನ್ನು ತಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಶ್ರೀಕಾಂತ ಪೂಜಾರ, ಯಲವಿಗಿ ಗಾ.ಪಂ. ಸದಸ್ಯ ನಾಗರಾಜ ಮತ್ತೂರ, ತಹಶೀಲ್ದಾರ್ ಎನ್.ಬಿ. ಗೆಜ್ಜಿ, ಎ.ಪಿ.ಎಂ.ಸಿ ಪ್ರಭಾರ ಕಾರ್ಯದರ್ಶಿ ಪರಮೇಶ್ವರಪ್ಪ ನಾಯಕ, ರಾಗಿ ಖರೀದಿ ಕೇಂದ್ರದ ಅಧಿಕಾರಿ ಈಶ್ವರಗೌಡ ಪಾಟೀಲ, ಕರ್ನಾಟಕ ಆಹಾರ ನಿಗಮದ ನಾಗರಾಜ ಲಮಾಣಿ ಇದ್ದರು.

**

ಜಿಲ್ಲೆಯಲ್ಲಿ 312 ರೈತರಿಂದ 12,270 ಕ್ವಿಂಟಲ್‌ ಜೋಳ, 3648 ರೈತರಿಂದ 1,29,333 ಕ್ವಿಂಟಲ್‌ ಭತ್ತವನ್ನು ಬೆಂಬಲ ಬೆಲೆಯಡಿ ಖರೀದಿಸಲಾಗಿದೆ
– ಜಿ.ಬಿ.ಕಬ್ಬೇರಹಳ್ಳಿ, ಸಹಾಯಕ ನಿರ್ದೇಶಕ, ಹಾವೇರಿ ಎಪಿಎಂಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.