ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿಆಲೂರ | ಮೂಲಸೌಕರ್ಯ ಕಾಣದ ಬಡಾವಣೆಯಲ್ಲಿ ನಿವಾಸಿಗಳ ಬವಣೆ

Published 15 ಜನವರಿ 2024, 4:21 IST
Last Updated 15 ಜನವರಿ 2024, 4:21 IST
ಅಕ್ಷರ ಗಾತ್ರ

ಅಕ್ಕಿಆಲೂರ: ನೂತನ ಅಕ್ಕಿಆಲೂರಿನ ಪಿತಾಮಹ ಎಂದು ಕರೆಯಲ್ಪಡುವ ಸ್ಥಳೀಯ ವಿರಕ್ತಮಠದ ಲಿಂ.ಚನ್ನವೀರ ಸ್ವಾಮೀಜಿ ಹೆಸರಿನಲ್ಲಿ 90ರ ದಶಕದಲ್ಲಿ ರಚನೆಯಾದ ಇಲ್ಲಿನ ಹೊರವಲಯದ ಚನ್ನವೀರೇಶ್ವರ ನಗರ ಇಂದಿಗೂ ಮೂಲಸೌಲಭ್ಯಗಳನ್ನೇ ಕಂಡಿಲ್ಲ. ನೆಮ್ಮದಿಯ ಜೀವನಕ್ಕೆ ಅವಶ್ಯ ಸೌಲಭ್ಯಗಳನ್ನು ಕಲ್ಪಿಸಿ ಎಂದು ನಿವಾಸಿಗಳು ಅಂಗಲಾಚುತ್ತಿದ್ದಾರೆ. 

ಚನ್ನವೀರೇಶ್ವರ ನಗರದಲ್ಲಿ ಮೂಲಸೌಲಭ್ಯಗಳು ಇಲ್ಲದೇ ಹತ್ತಾರು ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳು ಇಂದಿಗೂ ಸಹ ನೆಮ್ಮದಿ ಕಂಡಿಲ್ಲ. ಈ ಕುರಿತಾಗಿ ನಿವಾಸಿಗಳು ಸ್ಥಳೀಯ ಆಡಳಿತಕ್ಕೆ ಮನವಿ ಮಾಡುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ.

1994ರಲ್ಲಿ ಒಟ್ಟು 12 ಎಕರೆ ಪ್ರದೇಶದಲ್ಲಿ ಲಿಂ.ಚನ್ನವೀರ ಸ್ವಾಮೀಜಿ ಹೆಸರಿನಲ್ಲಿ ವಸತಿ ಬಡಾವಣೆ ರಚಿಸಿ, ಸ್ಥಳೀಯ ಗ್ರಾಮ ಪಂಚಾಯಿತಿ ಸುಮಾರು 120ಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನ ಹಂಚಿ ಕೈ ತೊಳೆದುಕೊಂಡಿದೆ. ಬಡಾವಣೆ ರಚಿಸಿ 3 ದಶಕಗಳು ಉರುಳಿದರೂ ಕೂಡ ರಸ್ತೆ, ಚರಂಡಿ ಸೇರಿದಂತೆ ಇತರ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರಿದೆ. ಇಲ್ಲಿನ ನಿವಾಸಿಗಳು ನಿತ್ಯವೂ ಗ್ರಾಮ ಪಂಚಾಯಿತಿಗೆ ಎಡತಾಕಿ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಿದರೂ ಗಮನ ಹರಿಸುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ. 

ಸಂಪರ್ಕ ರಸ್ತೆಗಳೇ ಇಲ್ಲ

‘ಚನ್ನವೀರೇಶ್ವರ ನಗರದಲ್ಲಿ 30-35 ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿವೆ. ಸೌಲಭ್ಯಗಳಿಲ್ಲದ ಕಾರಣ ಉಳಿದವರು ಈ ಬಡಾವಣೆಯಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಂದೆ ಬಂದಿಲ್ಲ. ಇಂದಿರಾ ನಗರ, ಕೆಳಗಿನ ಓಣಿ ಸೇರಿದಂತೆ ಊರಿನ ಇತರ ಭಾಗಗಳಿಂದ ಚನ್ನವೀರೇಶ್ವರ ನಗರಕ್ಕೆ ಸಂಪರ್ಕ ಕಲ್ಪಿಸಲು ಉತ್ತಮ ರಸ್ತೆಗಳಿಲ್ಲ. ಇನ್ನು ಚನ್ನವೀರೇಶ್ವರ ನಗರದಲ್ಲಂತೂ ರಸ್ತೆಗಳನ್ನೇ ನಿರ್ಮಿಸಿಲ್ಲ. ಕಚ್ಚಾ ರಸ್ತೆಗಳಲ್ಲೇ ಸರ್ಕಸ್ ಮಾಡುವುದು ಇಲ್ಲಿನ ನಿವಾಸಿಗಳಿಗೆ ತಪ್ಪಿಲ್ಲ’ ಎನ್ನುತ್ತಾರೆ ನಿವಾಸಿ ಸಿದ್ದಲಿಂಗಪ್ಪ ಅಪ್ಪಾಜಿ. 

ಸಂಚಾರದ ಸಂಕಷ್ಟ

‘ಬೇಸಿಗೆ ಮತ್ತು ಚಳಿಗಾಲದಲ್ಲಿ ಹೇಗೋ ಕಾಲ ದೂಡುವ ನಿವಾಸಿಗಳು ಮಳೆಗಾಲದಲ್ಲಿ ನರಕಯಾತನೆ ಅನುಭವಿಸುವುದು ಸಾಮಾನ್ಯವಾಗಿದೆ. ಅಕ್ಷರಶಃ ಕೆಸರು ಗದ್ದೆಯಂತಾಗುವ ರಸ್ತೆಗಳಲ್ಲಿ ಕೈಯಲ್ಲಿ ಜೀವ ಹಿಡಿದು ಸಂಚರಿಸುವ ಅನಿವಾರ್ಯತೆ ಇದೆ. ಮಹಿಳೆಯರು, ಮಕ್ಕಳು, ವೃದ್ಧರ ಪಾಡಂತೂ ದೇವರಿಗೆ ಪ್ರಿಯ. ರಸ್ತೆಯಲ್ಲಿ ಎದ್ದು, ಬಿದ್ದು ಮನೆ ಸೇರಲು ಹರಸಾಹಸ ನಡೆಸುತ್ತಿದ್ದರೂ ಉತ್ತಮ ರಸ್ತೆ ನಿರ್ಮಿಸುವ ಔದಾರ್ಯವನ್ನು ಸ್ಥಳೀಯ ಆಡಳಿತ ತೋರುತ್ತಿಲ್ಲ’ ಎಂದು ನಿವಾಸಿ ನಿಂಗಪ್ಪ ಹಾನಗಲ್‌ ದೂರಿದರು. 

ಮನೆ ನಿರ್ಮಿಸದೇ ಸಾಕಷ್ಟು ನಿವೇಶನಗಳನ್ನು ಇಲ್ಲಿ ಖಾಲಿ ಬಿಟ್ಟಿರುವುದರಿಂದ ಅವೆಲ್ಲವೂ ಕಸದ ತೊಟ್ಟಿಗಳಾಗಿವೆ. ಹುಳ, ಹುಪ್ಪಡಿಗಳ ಕಾಟವೂ ವಿಪರೀತವಾಗಿದೆ. ಬೀದಿದೀಪದ ನಿರ್ವಹಣೆ, ಕುಡಿಯುವ ನೀರಿನ ಪೂರೈಕೆಯೂ ಅಷ್ಟಕಷ್ಟೇ. ಸಮಗ್ರ ಅಭಿವೃದ್ಧಿ ಒಂದೆಡೆ ಇರಲಿ, ಕನಿಷ್ಠ ಮೂಲಸೌಲಭ್ಯ ಕಲ್ಪಿಸಬೇಕು ಎನ್ನುವುದು ನಿವಾಸಿಗಳ ಒತ್ತಾಯವಾಗಿದೆ.

ಮನೆಗಳಿಗೆ ನುಗ್ಗುವ ಮಳೆ ನೀರು

‘ಚನ್ನವೀರೇಶ್ವರ ನಗರದಲ್ಲಿ ಪಕ್ಕಾ ಚರಂಡಿ ನಿರ್ಮಿಸದ ಕಾರಣ ಗಲೀಜು ನೀರು ಮಳೆ ನೀರು ಎಲ್ಲೆಂದರಲ್ಲಿ ಹರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೂ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ಮಳೆ ಸುರಿದಾಗಲೆಲ್ಲಾ ಈ ಸಮಸ್ಯೆ ಸೃಷ್ಟಿಯಾಗುತ್ತಿದ್ದರೂ ಸ್ಥಳೀಯ ಅಧಿಕಾರಿಗಳು ಮಾತ್ರ ಕಣ್ತೆರೆಯುತ್ತಿಲ್ಲ. ಕೊಳಚೆ ನೀರಿನಿಂದ ದುರ್ವಾಸನೆ ಮಾಮೂಲಾಗಿದ್ದು ನಿವಾಸಿಗಳ ಆರೋಗ್ಯದ ಮೇಲೆ ಸಹ ದುಷ್ಪರಿಣಾಮ ಉಂಟಾಗುತ್ತಿದೆ. ಸ್ವಚ್ಛ ಭಾರತದ ಪರಿಕಲ್ಪನೆ ಚನ್ನವೀರೇಶ್ವರ ನಗರದಲ್ಲಿ ಮಾತ್ರ ಪರಿಕಲ್ಪನೆಯಾಗಿಯೇ ಉಳಿದಿದೆ’ ಎಂದು ನಿವಾಸಿ ಸತ್ತಾರ್‌ಸಾಬ್‌ ಸಮಸ್ಯೆ ತೋಡಿಕೊಂಡರು.

25-30 ವರ್ಷಗಳಿಂದ ಚನ್ನವೀರೇಶ್ವರ ನಗರ ಸೌಲಭ್ಯಗಳನ್ನು ಕಂಡಿಲ್ಲ. ಕನಿಷ್ಟ ಉತ್ತಮ ರಸ್ತೆ ಪಕ್ಕಾ ಗಟಾರ ನಿರ್ಮಿಸಿದರೂ ಸಾಕು. ನಿವಾಸಿಗಳು ನೆಮ್ಮದಿಯಿಂದ ಜೀವನ ಮಾಡಬಹುದು.
ಕಮಲೇಶ ಪೋರವಾಲ್, ನಿವಾಸಿ ಚನ್ನವೀರೇಶ್ವರ ನಗರ ಅಕ್ಕಿಆಲೂರ
ಬೀದಿದೀಪ ನಿರ್ವಹಣೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಕಾಳಜಿ ವಹಿಸಲಾಗುವುದು. ಉಳಿದಂತೆ ರಸ್ತೆ ಮತ್ತು ಪಕ್ಕಾ ಗಟಾರ ನಿರ್ಮಾಣಕ್ಕೆ ಅನುದಾನ ಲಭ್ಯತೆ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ.
ಕುಮಾರ ಮಕರವಳ್ಳಿ, ಪಿಡಿಒ, ಅಕ್ಕಿಆಲೂರು
ಮೂಲಸೌಕರ್ಯ ವಂಚಿತ ಅಕ್ಕಿಆಲೂರಿನ ಚನ್ನವೀರೇಶ್ವರ ನಗರ
ಮೂಲಸೌಕರ್ಯ ವಂಚಿತ ಅಕ್ಕಿಆಲೂರಿನ ಚನ್ನವೀರೇಶ್ವರ ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT