ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಲ್ಲಿ ಹೇಳಲ್ಲ, ಬಟನ್‌ ಒತ್ತಿ ಬಿಡ್ತಾರೆ: ಹ್ಯಾಟ್ರಿಕ್ ಸಾಧನೆಯ ಶಿವಕುಮಾರ ಉದಾಸಿ

ಹಾವೇರಿ ಲೋಕಸಭಾ ಕ್ಷೇತ್ರದಿಂದ ಹ್ಯಾಟ್ರಿಕ್ ಸಾಧನೆ
Last Updated 24 ಮೇ 2019, 19:56 IST
ಅಕ್ಷರ ಗಾತ್ರ

ಹಾವೇರಿ: ‘ಅಭಿವೃದ್ಧಿಯು ರಾಜಕೀಯ ಲಾಭದ ಬದಲು, ವಿಷಯಾಧರಿತವಾಗಿರಬೇಕು. ಎಲ್ಲವನ್ನೂ ಟೀಕಿಸಿದರೆ, ಜನ ನಮ್ಮನ್ನು ‘ಹುಚ್ಚರು’ ಎನ್ನುತ್ತಾರೆ. ಜನರ ಭಾವನೆಗೆ ಸ್ಪಂದಿಸಬೇಕು. ಅವರಿಗೂ ಸುಪ್ತ ಪ್ರಜ್ಞೆ ಇದೆ. ಬಾಯಲ್ಲಿ ಹೇಳಲ್ಲ ಬಟನ್‌ನಲ್ಲಿ ಒತ್ತಿ ಬಿಡ್ತಾರೆ...

ಹೀಗೆ, ‘ಪ್ರಜಾವಾಣಿ’ ಜೊತೆ ಮಾತಿಗಿಳಿದವರು, 1,40,882 ಮತಗಳಿಂದ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿದ ಸಂಸದ ಶಿವಕುಮಾರ ಉದಾಸಿ. ಅವರ ಜೊತೆಗಿನ ಸಂದರ್ಶನದ ಸಾರ ಇಲ್ಲಿದೆ.

*ಹ್ಯಾಟ್ರಿಕ್ ಗೆಲುವು ಸಾಧಿಸಿದ್ದೀರಿ. ಚುನಾವಣಾ ಫಲಿತಾಂಶದ ಬಗ್ಗೆ?

ಮೂರು ಬಾರಿಯೂ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಜನ ಮುನ್ನಡೆ ನೀಡಿದ್ದಾರೆ. ಹೀಗಾಗಿ, ಸ್ಪಷ್ಟ ಜನಾಶೀರ್ವಾದ ಸಿಕ್ಕಿದೆ. ಪ್ರಚಾರದ ವೇಳೆಯಲ್ಲಿ ಜನರ ಸ್ಪಂದನೆ ಕಂಡು, ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸ ಬಂದಿತ್ತು. ನಮ್ಮ ನಾಯಕರು, ಕಾರ್ಯಕರ್ತರು ಸೇರಿದಂತೆ ಎಲ್ಲರೂ ಸಂಘಟನಾತ್ಮಕವಾಗಿ ಶ್ರಮಿಸಿದ್ದರು. ಮೋದಿ ಅಲೆಯೂ ಇತ್ತು.

*ಫಲಿತಾಂಶದ ಮೇಲೆ ಯಾವ ಅಂಶವು ಪರಿಣಾಮ ಬೀರಿದೆ?

ಮೋದಿ ಆಡಳಿತ, ರಾಷ್ಟ್ರೀಯ ಭದ್ರತೆ ಹಾಗೂ ನಾಯಕತ್ವಕ್ಕೆ ಜನ ಆಶೀರ್ವದಿಸಿದ್ದಾರೆ. ಈ ಸರ್ಕಾರದ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪಿವೆ. ಹಳ್ಳಿ ಹಳ್ಳಿಯಲ್ಲಿ ಕೇಂದ್ರದ ಒಂದಿಲ್ಲೊಂದು ಯೋಜನೆಯ ಫಲಾನುಭವಿಗಳಿದ್ದಾರೆ. ಉಜ್ವಲ, ಆಯುಷ್‌ಮಾನ್, ಜನಧನ್, ಕೃಷಿ ಬಿಮಾ ಸೇರಿದಂತೆ ಯೋಜನೆಗಳ ಪಟ್ಟಿಯೇ ದೊಡ್ಡದಿದೆ. ಸಾಧನೆಗಳ ಬಗ್ಗೆ ಜನರೇ ಮಾತನಾಡುತ್ತಿದ್ದರು.

*ಬಿಜೆಪಿ ಅಭ್ಯರ್ಥಿಗಳು ಮೋದಿ ಅಲೆಯಲ್ಲಿ ಗೆದ್ದರು ಎನ್ನುತ್ತಾರಲ್ಲಾ?

ಈ ಆರೋಪವನ್ನು ಕಾಂಗ್ರೆಸಿಗರು ಮಾಡಿದ್ದರು. ‘ಹೌದು. ನಾವು ಮೋದಿ ಹೆಸರಿನಲ್ಲಿ ಮತ ಕೇಳುತ್ತೇವೆ. ನಿಮಗೆ ರಾಹುಲ್ ಗಾಂಧಿ ಹೆಸರಿನಲ್ಲಿ ಮತ ಕೇಳಲು ಏಕೆ ಧೈರ್ಯವಿಲ್ಲ. ಅಥವಾ ನಿಮ್ಮಲ್ಲಿ ಹೇಳಿಕೊಳ್ಳುವ ಒಬ್ಬ ನಾಯಕ ಅಥವಾ ಅಭಿವೃದ್ಧಿ ಕಾರ್ಯಗಳೂ ಇಲ್ಲವೇ?’ ಎಂದು ಅಂದೇ ಪ್ರಶ್ನಿಸಿದ್ದೆನು. ಈಗ ದೇಶಾದ್ಯಂತ ಜನರೇ ಮೋದಿ ಪರ ಮತ ನೀಡಿ, ಉತ್ತರಿಸಿದ್ದಾರೆ.

*ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲರ ಸೋಲಿಗೆ ಕಾರಣಗಳೇನು?

‘ಅಭ್ಯರ್ಥಿ ಬದಲಾಯಿಸಿದ್ದು, ಈ ಬಾರಿ ಗೆಲ್ಲುತ್ತೇವೆ’ ಎಂದು ಕಾಂಗ್ರೆಸಿಗರು ಹೇಳುತ್ತಿದ್ದರು. ‘ಕಳೆದೆರಡು (2009, 2014) ಬಾರಿ ಕಾಂಗ್ರೆಸ್ ಸೋತಿದೆ. ಅಭ್ಯರ್ಥಿಯನ್ನು ಯಾಕೆ ದೂರುತ್ತೀರಿ? ಕಾಂಗ್ರೆಸ್‌ ಬದಲಾಗಬೇಕೇ ಹೊರತು ಅಭ್ಯರ್ಥಿ ಅಲ್ಲ’ ಎಂದಿದ್ದೆನು. ಈಗ ಫಲಿತಾಂಶವೇ ಉತ್ತರಿಸಿದೆ.

ಡಿ.ಆರ್. ಪಾಟೀಲರು ಒಬ್ಬ‘ಸಂತ’. ಅವರ ಬಗ್ಗೆ ಗೌರವವಿದೆ. ಸಂತರು ಆದರ್ಶ– ಪ್ರಾಮಾಣಿಕರಾಗಿರುತ್ತಾರೆ. ಅವರಿಗೆ ತಮ್ಮ ಸುತ್ತಲ ಭ್ರಷ್ಟಾಚಾರ– ವಂಚನೆಯೂ ತಿಳಿಯುವುದಿಲ್ಲ. ಕಾಂಗ್ರೆಸ್‌ನಲ್ಲಿ ಪಾಟೀಲರ ಪರಿಸ್ಥಿತಿಯೂ ಹೀಗಿದೆ. ಕಾಂಗ್ರೆಸ್‌ ಅನಾಚಾರದ ಬಗ್ಗೆಯೇ ಅರಿವಿಲ್ಲದಾಗಿದೆ.

*ನಿಮ್ಮ ಹಾಗೂ ಕಾಂಗ್ರೆಸ್ ನಡುವಿನ ಸ್ಪರ್ಧೆ ಹೇಗಿತ್ತು?

ಜನ ಕಾಂಗ್ರೆಸ್‌ಗೆ ಮತ ಹಾಕಲು ಯಾವುದೇ ವಿಚಾರಗಳು ಇರಲಿಲ್ಲ. ಈ ಚುನಾವಣೆಯು ‘ಪ್ರೋಗ್ರೆಸ್ ವರ್ಸಸ್‌ ಕಾಂಗ್ರೆಸ್’ ಎಂದು ನಾನು ಪ್ರಚಾರದ ವೇಳೆ ‘ಪ್ರಜಾವಾಣಿ’ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದೆನು. ಜನ ಅದೇ ರೀತಿ ಮತ ನೀಡಿದ್ದಾರೆ. ಊಳಿಗಮಾನ್ಯ ರಾಜಕಾರಣವನ್ನು ಯುವಜನತೆ ವಿರೋಧಿಸುತ್ತಿದ್ದಾರೆ ಎಂದು ಅವರಿಗೆ ಇನ್ನೂ ಅರ್ಥವಾಗಿಲ್ಲ. ಯುವಜನತೆಯ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಯೋಚನೆಗಳ ಬಗ್ಗೆಯೇ ಸ್ಪಂದಿಸಲಿಲ್ಲ. ಜನರ ಜೊತೆಯೇ ಸಂಪರ್ಕ ಕಳೆದುಕೊಂಡಿದ್ದಾರೆ. ಹೀಗಾಗಿ, ಜನ ತಿರಸ್ಕರಿಸಿದ್ದಾರೆ.

*ನಿಮ್ಮ ಪ್ರಥಮ ಆದ್ಯತೆಯ ಕೆಲಸಗಳು ಯಾವುವು?

ಪ್ರಗತಿಯಲ್ಲಿರುವ ಯೋಜನೆಯನ್ನು ಪೂರ್ಣಗೊಳಿಸುತ್ತೇನೆ. ಕೆರೆಗಳನ್ನು ತುಂಬಿಸುವ ಮತ್ತಿತರ ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡುತ್ತೇನೆ. ಉದ್ಯಮ ಸ್ಥಾಪನೆ, ಗದಗದಲ್ಲಿ ಕ್ರೀಡಾ ಸಮುಚ್ಚಯ, ರೋಣ–ರಾಣೆಬೆನ್ನೂರಿನಲ್ಲಿ ಈರುಳ್ಳಿ ಸಂಸ್ಕರಣಾ ಘಟಕ, ಬ್ಯಾಡಗಿಯಲ್ಲಿನ ಅಭಿವೃದ್ಧಿ ಕಾರ್ಯಗಳು ಹಾಗೂ ಮೂಲಸೌಕರ್ಯಗಳಿಗೆ ಆದ್ಯತೆ ನೀಡುತ್ತೇನೆ. ಆಹಾರ ಸಂಸ್ಕರಣೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತಿತರ ಯೋಜನೆಗಳಿವೆ.

*ಅಭಿವೃದ್ಧಿ ಮತ್ತು ರಾಜಕಾರಣದ ಬಗ್ಗೆ ಏನು ಹೇಳುತ್ತೀರಿ?

ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಬಾರದು. ಮಹದಾಯಿ ಕುರಿತು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವ ಪಕ್ಷಗಳ ಸಭೆ ಕರೆದಿದ್ದರು. ‘ನೀವು ಈ ಸಭೆಯ ಮಾಹಿತಿಯನ್ನು ಸರ್ವಪಕ್ಷಗಳ ಪತ್ರಿಕಾಗೋಷ್ಠಿ ಮೂಲಕ ನೀಡಬೇಕು. ಆಗ ರಾಜ್ಯಕ್ಕೆ ಉತ್ತಮ ಸಂದೇಶ ಹೋಗುತ್ತದೆ’ ಎಂದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದೆನು. ಅದೇ ರೀತಿ ಎನ್‌.ಎಚ್.ಕೋನರಡ್ಡಿ ಅವರಿಗೂ ಹೇಳಿದ್ದೆನು. ಆದರೆ, ಅವರೆಲ್ಲ ಬದಲಾಯಿಸಿಕೊಳ್ಳಲಿಲ್ಲ. ಜನ ಉತ್ತರಿಸಿದ್ದಾರೆ. ಈಗ ನಾನು ಕ್ಷೇತ್ರದ ಸಂಸದ. ಎಲ್ಲರ ಹಿತವೂ ಮುಖ್ಯ.

*ಸಚಿವ ಸ್ಥಾನದ ಬಗ್ಗೆ ಏನಂತೀರಿ?

ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕು ಎಂದು ನಾವು ಶ್ರಮಿಸಿದ್ದೇವೆ. ಸಂಸದನಾಗಿ ಸಮರ್ಥವಾಗಿ ಕೆಲಸ ಮಾಡುತ್ತೇನೆ. ಪಕ್ಷ ಹಾಗೂ ವರಿಷ್ಠರು ಮುಂದಿನ ತೀರ್ಮಾನ ಮಾಡುತ್ತಾರೆ. ಅದಕ್ಕೆ ಬದ್ಧನಾಗಿರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT