ಬುಧವಾರ, ಆಗಸ್ಟ್ 10, 2022
21 °C
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ: ಸಚಿವ ಬೊಮ್ಮಾಯಿ ಸೂಚನೆ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ‘ಸಮ್ಮೇಳನ ಗೋಷ್ಠಿಗಳ ಜಾತ್ರೆಯಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯಲ್ಲಿ ಫೆಬ್ರುವರಿ 26ರಿಂದ 28ರವರೆಗೆ ಮೂರು ದಿನ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಊಟದ ಜಾತ್ರೆಯಾಗುವ ಬದಲು, ವಿಶಿಷ್ಟ ಮತ್ತು ವೈವಿಧ್ಯಮಯ ಗೋಷ್ಠಿಗಳ ಉತ್ಸವವಾಗಬೇಕು. ನಾಡು–ನುಡಿಗಳ ಬಗ್ಗೆ, ಸಾಹಿತ್ಯ–ಸಂಸ್ಕೃತಿಯ ಬಗ್ಗೆ ಗಂಭೀರ ಚರ್ಚೆಗಳಿಗೆ ವೇದಿಕೆಯಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. 

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ‘ಆರ್ಥಿಕ ಸಂಕಷ್ಟದಲ್ಲೂ ರಾಜ್ಯ ಸರ್ಕಾರ ಸಮ್ಮೇಳನ ನಡೆಸಲು ಅನುಮತಿ ನೀಡಿದೆ. ಸಮ್ಮೇಳನಕ್ಕೆ ಬೇಕಾದ ಹಣಕಾಸು ನೆರವನ್ನು ಒದಗಿಸುತ್ತೇವೆ. ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಯಾವುದೇ ಲೋಪವಾಗದಂತೆ, ಅತ್ಯಂತ ವ್ಯವಸ್ಥಿತವಾಗಿ ಸಮ್ಮೇಳನ ನಡೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು’ ಎಂದು ಖಡಕ್‌ ಎಚ್ಚರಿಕೆ ನೀಡಿದರು. 

ಆಶಾಭಾವನೆ:

ಜನವರಿ ನಂತರ ಕೋವಿಡ್‌ ಎರಡನೇ ಅಲೆ ಬರುವ ಆತಂಕದ ನಡುವೆಯೂ ಸಮ್ಮೇಳನಕ್ಕೆ ದಿನಾಂಕ ನಿಗದಿಪಡಿಸಿದ್ದೇವೆ. ಕಾರಣ ಫೆಬ್ರುವರಿ ವೇಳೆಗೆ ಕೊರೊನಾ ಸೋಂಕು ಕಡಿಮೆಯಾಗುವ ಆಶಾಭಾವನೆ ಇದೆ. ಸೋಂಕು ಕಡಿಮೆಯಾಗದಿದ್ದರೆ ಕೋವಿಡ್‌ ಮಾರ್ಗಸೂಚಿ ಪ್ರಕಾರ ಸರಳವಾಗಿ ಆಚರಿಸಬೇಕೋ ಅಥವಾ ದಿನಾಂಕ ಮುಂದೂಡಬೇಕೋ ಎಂಬುದನ್ನು ಮುಖ್ಯಮಂತ್ರಿ ಅವರೊಂದಿಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. 

ಪೂರ್ವಸಿದ್ಧತೆ ಕೈಗೊಳ್ಳಿ:

ಸಿದ್ಧತೆಗಳಿಗೆ ಎರಡೂವರೆ ತಿಂಗಳು ಮಾತ್ರ ಕಾಲಾವಕಾಶವಿದ್ದರೂ ವ್ಯವಸ್ಥಿತವಾಗಿ ಸಮ್ಮೇಳನ ನಡೆಸಲು ಮೊದಲಿಗೆ ಖರ್ಚು–ವೆಚ್ಚವಿಲ್ಲದ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು. ಸ್ಥಳ ಆಯ್ಕೆ, ಸಮಿತಿಗಳ ರಚನೆ, ಸಾಹಿತ್ಯಗೋಷ್ಠಿ, ವಸತಿ, ಸಾರಿಗೆ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಯೋನ್ಮುಖವಾಗುವಂತೆ ಸಲಹೆ ನೀಡಿದರು.

ಅಧಿಕಾರಿಗಳ ಜಾತ್ರೆಯಾಗದಿರಲಿ:

ಈ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು ಅನುಷ್ಠಾನಗೊಳಿಸುವಂತಾಗಬೇಕು. ಸಾಹಿತ್ಯ ಚರ್ಚೆಗಳಲ್ಲಿ ಭಾಗವಹಿಸುವ ಚಿಂತಕರ ಆಯ್ಕೆ ಹಿಂದಿನ ಸಮ್ಮೇಳನಕ್ಕಿಂತ ವಿಭಿನ್ನವಾಗಿರಬೇಕು. ಕಸಾಪ ಪದಾಧಿಕಾರಿಗಳು ಅಧಿಕಾರಿಗಳ ಮೇಲೆ ಹೊಣೆಹಾಕಿ ಹಿಂಜರಿಯಬಾರದು. ಇದು ಅಧಿಕಾರಿಗಳ ಜಾತ್ರೆಯಾಗಬಾರದು. ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾವೇರಿಯಲ್ಲಿದ್ದುಕೊಂಡು ಸಮ್ಮೇಳವನ್ನು ಯಶಸ್ವಿಗೊಳಿಸಬೇಕು. ತ್ವರಿತವಾಗಿ ಸಮಿತಿಗಳನ್ನು ರಚಿಸಿಕೊಂಡು ಅಂದಾಜು ವೆಚ್ಚದ ವಿವರವನ್ನು ಸಲ್ಲಿಸುವಂತೆ ಸೂಚಿಸಿದರು.

ಸಂಸದ ಶಿವಕುಮಾರ ಉದಾಸಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಸಾಹಿತಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು