ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯ ಸಾಹಿತ್ಯ ಸಮ್ಮೇಳನ: 5 ತಿಂಗಳಾದರೂ ಬಾರದ ₹5 ಕೋಟಿ

ಹಾವೇರಿಯ ಸಾಹಿತ್ಯ ಸಮ್ಮೇಳನ: ಗುತ್ತಿಗೆದಾರರು, ಕಲಾವಿದರಿಗೆ ಸಿಗದ ಪೂರ್ಣ ಹಣ
Published 14 ಜುಲೈ 2023, 23:58 IST
Last Updated 14 ಜುಲೈ 2023, 23:58 IST
ಅಕ್ಷರ ಗಾತ್ರ

ಹಾವೇರಿ: ನಗರದಲ್ಲಿ ಜನವರಿ 6 ರಿಂದ 8ರವರೆಗೆ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದ ₹5 ಕೋಟಿ ಹೆಚ್ಚುವರಿ ಅನುದಾನ 6 ತಿಂಗಳಾದರೂ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ಬಿಡುಗಡೆ ಆಗಿಲ್ಲ. ಕಲಾವಿದರು, ಗುತ್ತಿಗೆದಾರರಿಗೆ ಸಿಗಬೇಕಾದ ಪೂರ್ಣ ಹಣ ಇನ್ನೂ ಸಿಕ್ಕಿಲ್ಲ.

ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ತವರು ಜಿಲ್ಲೆ’ಯಲ್ಲಿ ನಡೆದ ಸಮ್ಮೇಳನಕ್ಕೆ ₹20 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಇದು ಕಳೆದ 85 ಸಮ್ಮೇಳನಗಳಿಗೆ ನೀಡಿದ್ದ ಅನುದಾನದಲ್ಲೇ ಗರಿಷ್ಠ ಮೊತ್ತ. ಆದರೆ, ಈ ಮೊತ್ತ ಮೀರಿ ₹5 ಕೋಟಿ ಹೆಚ್ಚುವರಿ ಹಣ ಖರ್ಚಾಗಿತ್ತು. 

86ನೇ ನುಡಿಜಾತ್ರೆಗೆ ಬರೋಬ್ಬರಿ ₹25 ಕೋಟಿ ವೆಚ್ಚವಾಗಿತ್ತು. ಇದು ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ದಾಖಲೆಯ ವೆಚ್ಚ. ಸರ್ಕಾರ ಈ ಹಿಂದೆ, ಮೈಸೂರಿನಲ್ಲಿ ನಡೆದ 83ನೇ ಸಾಹಿತ್ಯ ಸಮ್ಮೇಳನಕ್ಕೆ ₹8 ಕೋಟಿ, ಧಾರವಾಡದಲ್ಲಿ ನಡೆದ 84ನೇ ಸಾಹಿತ್ಯ ಸಮ್ಮೇಳನಕ್ಕೆ ₹10 ಕೋಟಿ ಮತ್ತು ಕಲಬುರಗಿಯಲ್ಲಿ ನಡೆದ 85ನೇ ಸಾಹಿತ್ಯ ಸಮ್ಮೇಳನಕ್ಕೆ ₹ 14 ಕೋಟಿ ಅನುದಾನ ನೀಡಿತ್ತು. 

₹5 ಕೋಟಿಗೆ ಬೇಡಿಕೆ

‘ಸಮ್ಮೇಳನಕ್ಕೆ ಹೆಚ್ಚುವರಿಯಾಗಿ ಖರ್ಚಾದ ₹5 ಕೋಟಿ ಅನುದಾನ ಬಿಡುಗಡೆ ಮಾಡಲು ಜಿಲ್ಲಾಡಳಿತವು ಸರ್ಕಾರಕ್ಕೆ 2023ರ ಫೆಬ್ರುವರಿಯಲ್ಲಿ ಪ್ರಸ್ತಾವ ಕಳುಹಿಸಿತ್ತು. ಆದರೆ, ಇನ್ನೂ ಹಣ ಸಿಕ್ಕಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಗುತ್ತಿಗೆದಾರರಿಗೆ, ಕಲಾವಿದರಿಗೆ ಸಿಗದ ಹಣ

ಆಹಾರ ಸಮಿತಿಗೆ ₹5 ಕೋಟಿ ನಿಗದಿಯಾಗಿತ್ತು. ನಿರೀಕ್ಷೆಗಿಂತ ಹೆಚ್ಚು ಜನ ಸಮ್ಮೇಳನಕ್ಕೆ ಬಂದ ಕಾರಣ ₹3 ಕೋಟಿ ಹೆಚ್ಚುವರಿ ಖರ್ಚಾಗಿದೆ ಎಂದು ಆಹಾರ ಸಮಿತಿ ಜಿಲ್ಲಾಡಳಿತಕ್ಕೆ ಬಿಲ್‌ ಕೊಟ್ಟಿತ್ತು. ಆದರೆ, ಹೆಚ್ಚುವರಿ ಹಣವು ಆಹಾರ ತಯಾರಿಕೆ ಗುತ್ತಿಗೆದಾರರಿಗೆ ಸಂದಾಯವಾಗಿಲ್ಲ. 

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ₹75 ಲಕ್ಷ ಹೆಚ್ಚುವರಿ ಅನುದಾನ ಕೋರಿದೆ. ಸಾಂಸ್ಕೃತಿಕ ತಂಡಗಳ ಆಯ್ಕೆ ಸಮಿತಿಗೆ ಹೆಚ್ಚುವರಿಯಾಗಿ ₹20 ಲಕ್ಷ, ನೀರು ಪೂರೈಕೆಗೆ ಹೆಚ್ಚುವರಿಯಾಗಿ ₹16 ಲಕ್ಷ... ಹೀಗೆ ವಿವಿಧ ಸಮಿತಿಗಳು ಹೆಚ್ಚುವರಿ ಖರ್ಚಿನ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದವು. ಈ ಎಲ್ಲ ವೆಚ್ಚಗಳನ್ನು ಭರಿಸಲು ಅಗತ್ಯವಿರುವ ಹೆಚ್ಚುವರಿ ₹5 ಕೋಟಿ ಅನುದಾನ ಜಿಲ್ಲಾಡಳಿತಕ್ಕೆ ಬರಬೇಕಿದೆ.

₹2.55 ಕೋಟಿ ಜಿಎಸ್‌ಟಿ!

‘ವಿವಿಧ ಸಮಿತಿಗಳಿಗೆ ಹಂಚಿಕೆಯಾಗಿದ್ದ ಅನುದಾನದ ಮೇಲೆ ಶೇ 5 ರಿಂದ ಶೇ 18ರವರೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಾಕಿದ್ದ ಪರಿಣಾಮ ಬರೋಬ್ಬರಿ ₹2.55 ಕೋಟಿ ಜಿಎಸ್‌ಟಿ ಭರಿಸಲಾಗಿತ್ತು. ಮಾಧ್ಯಮ ಮತ್ತು ಜಾಹೀರಾತು (ಎಂಸಿಎ) ಸೇವಾ ಶುಲ್ಕ (ಶೇ 5ರಂತೆ) ಒಟ್ಟು ₹92 ಲಕ್ಷ ತಗುಲಿತ್ತು. ಈ ಎಲ್ಲ ಕಾರಣಗಳಿಂದ ಸಮ್ಮೇಳನಕ್ಕೆ ಬರೋಬ್ಬರಿ ₹25 ಕೋಟಿ ವೆಚ್ಚವಾಗಿತ್ತು’ ಎಂದು ಅಧಿಕಾರಿಗಳು ತಿಳಿಸಿದರು.

ಸಮ್ಮೇಳನ ಮುಗಿದು 6 ತಿಂಗಳಾದರೂ ₹4.72 ಕೋಟಿಯನ್ನು ಜಿಲ್ಲಾಡಳಿತ ನೀಡಿಲ್ಲ. ಹಾಕಿದ ಬಂಡವಾಳವೂ ಸಿಗದೆ ಕಿರಾಣಿ ಅಂಗಡಿಗಳಿಗೆ ಬಾಕಿ ಕೊಡದೆ ಸಂಕಷ್ಟಕ್ಕೆ ಸಿಲುಕಿದ್ದೇವೆ

– ರತನ್‌ ಪ್ರಜಾಪತ್‌ ಮಾಲೀಕ ಭೈರು ಕ್ಯಾಟರರ್ಸ್‌ ಹುಬ್ಬಳ್ಳಿ

₹5 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಚುನಾವಣೆ ಹಿನ್ನೆಲೆಯಲ್ಲಿ ತಡವಾಗಿದ್ದು ಶೀಘ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ

– ರಘುನಂದನ ಮೂರ್ತಿ ಹಾವೇರಿ ಜಿಲ್ಲಾಧಿಕಾರಿ

ಸ್ಮರಣ ಸಂಚಿಕೆಯೇ ಪ್ರಕಟವಾಗಿಲ್ಲ!

86ನೇ ನುಡಿಜಾತ್ರೆಯಲ್ಲಿ ಬಿಡುಗಡೆಗೊಳಿಸಿದ್ದ ‘ಏಲಕ್ಕಿ ಹಾರ’ ಸ್ಮರಣ ಸಂಚಿಕೆಯ 500 ಪ್ರತಿಗಳು ಸಮ್ಮೇಳನ ನಡೆದು ಆರು ತಿಂಗಳಾದರೂ ಇನ್ನೂ ಮುದ್ರಣವಾಗಿಲ್ಲ. ‘ಸಾವಿರ ಪ್ರತಿಗಳನ್ನು ಮುದ್ರಿಸುವ ಉದ್ದೇಶವಿತ್ತು. ಅನುದಾನದ ಕೊರತೆಯಿಂದ 500 ಪ್ರತಿಗಳಿಗೆ ಕಡಿತಗೊಳಿಸಲಾಯಿತು. ಹೆಚ್ಚುವರಿ ಅನುದಾನ ₹5 ಕೋಟಿ ಬಿಡುಗಡೆಯಾಗದ ಕಾರಣ ಸ್ಮರಣ ಸಂಚಿಕೆಗಳನ್ನು ಮುದ್ರಿಸಲು ಸಾಧ್ಯವಾಗಿಲ್ಲ’ ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT