ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ: ಬೊಮ್ಮಾಯಿ ಚುನಾವಣಾ ಪ್ರಚಾರಕ್ಕೆ ರಂಗು ತಂದ ಕಿಚ್ಚ ಸುದೀಪ್‌

ರೋಡ್‌ ಶೋಗೆ ಹರಿದುಬಂದ ಜನಸಾಗರ
Last Updated 19 ಏಪ್ರಿಲ್ 2023, 14:50 IST
ಅಕ್ಷರ ಗಾತ್ರ

ಶಿಗ್ಗಾವಿ (ಹಾವೇರಿ): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಅಂಗವಾಗಿ ಬುಧವಾರ ಏರ್ಪಡಿಸಿದ್ದ ‘ರೋಡ್‌ ಶೋ’ಗೆ ಚಿತ್ರನಟ ಸುದೀಪ್‌ ರಂಗು ತಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ಶಿಗ್ಗಾವಿಗೆ ಬಂದಿಳಿದ ಕಿಚ್ಚ ಸುದೀಪ್‌ ಅವರು ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಗೆ ಭೇಟಿ ನೀಡಿ, ಕೆಲಕಾಲ ಔಪಚಾರಿಕ ಮಾತುಕತೆ ನಡೆಸಿದರು.

ನಂತರ ಕಿತ್ತೂರು ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ರೋಡ್‌ ಶೋ ಆರಂಭಿಸಿದರು. ರೋಡ್‌ ಶೋನಲ್ಲಿ ಜೆ.ಪಿ.ನಡ್ಡಾ, ಸಚಿವರಾದ ಬಿ.ಸಿ.ಪಾಟೀಲ್‌, ಮುರುಗೇಶ ನಿರಾಣಿ, ಗೋವಿಂದ ಕಾರಜೋಳ ಜತೆಯಾದರು.

ಸುದೀಪ್‌ ಅವರನ್ನು ಕಂಡ ಸಾವಿರಾರು ಅಭಿಮಾನಿಗಳು ‘ಕಿಚ್ಚ– ಕಿಚ್ಚ’ ಎಂದು ಹರ್ಷೋದ್ಗಾರ ಮಾಡಿ, ಫೋಟೊ ತೆಗೆದುಕೊಳ್ಳುವುದಕ್ಕೆ ಮುಗಿಬಿದ್ದರು. ರಸ್ತೆಯುದ್ದಕ್ಕೂ ನೆರೆದಿದ್ದ ಜನರತ್ತ ಸುದೀಪ್‌ ಕೈಬೀಸಿ ಮುಗುಳ್ನಕ್ಕರು. ಸಂತೆ ಮೈದಾನದಿಂದ ತಾಲ್ಲೂಕು ಕ್ರೀಡಾಂಗಣದವರೆಗೆ ರೋಡ್‌ ಶೋ ನಡೆಯಿತು.

ಅಭಿವೃದ್ಧಿಗೆ ಗರಿಷ್ಠ ಕೊಡುಗೆ: ತಾಲ್ಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಬಹಿರಂಗ ಸಮಾವೇಶದಲ್ಲಿ ಜೆ.ಪಿ.ನಡ್ಡಾ ಮಾತನಾಡಿ, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿವೃದ್ಧಿಗೆ ಗರಿಷ್ಠ ಕೊಡುಗೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ವಿಕಾಸದ ಗಂಗಾನದಿ ಹರಿಯುವಂತಾಗಲು ಕಮಲದ ಚಿಹ್ನೆಗೆ ಮತ ಕೊಡಿ. ಮೋದಿಜಿ ಅವರ ಆಶೀರ್ವಾದ ಮುಂದುವರಿಯಲು ಮತ್ತು ಅಭಿವೃದ್ಧಿಯನ್ನು ಮುಂದುವರಿಸಲು ಬಿಜೆಪಿಯನ್ನೇ ಗೆಲ್ಲಿಸಿ’ ಎಂದು ವಿನಂತಿಸಿದರು.

ಕಾಂಗ್ರೆಸ್ ಎಂದರೆ ಕಮಿಷನ್, ಭ್ರಷ್ಟಾಚಾರ. ಸಿದ್ದರಾಮಯ್ಯನವರ ಕಾಲದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಕಾಂಗ್ರೆಸ್ ಮುಖಂಡರು ನೇತಾರರಾಗಿ ಉಳಿದಿಲ್ಲ. ಅವರು ಎಟಿಎಂ ಚಲಾಯಿಸುವ ವ್ಯಕ್ತಿಗಳಾಗಿದ್ದಾರೆ ಎಂದು ಟೀಕಿಸಿದರು. ಮೋದಿ ಅವರು ರಾಜ್ಯದ ಅಭಿವೃದ್ಧಿಗಾಗಿ ಕಳುಹಿಸಿದ ಹಣವನ್ನು ದೆಹಲಿಯ ಕಾಂಗ್ರೆಸ್‍ ಕಚೇರಿಗೆ ವರ್ಗಾಯಿಸುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬೇಕೇ ಎಂದು ಪ್ರಶ್ನಿಸಿದರು.

‘ಮತ್ತೆ ಕನ್ನಡಮಾತೆ ಸೇವೆಗೆ ಅವಕಾಶ ಕೊಡಿ’
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ರಾಜ್ಯದಲ್ಲಿ ಬಿಜೆಪಿ 125ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ಮತ್ತೆ ಕನ್ನಡಮಾತೆಯ ಸೇವೆ ಮಾಡಲಿದೆ’ ಎಂದರು.

ಕಾಂಗ್ರೆಸ್ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿತ್ತು. ಮೂಲಸೌಕರ್ಯದ ಕೊರತೆ, ನೀರಿನ ಸಮಸ್ಯೆ ವ್ಯಾಪಕವಾಗಿತ್ತು ಎಂದು ಟೀಕಿಸಿದರು. ಎರಡು ಏತ ನೀರಾವರಿ ಯೋಜನೆಗಳ ಅನುಷ್ಠಾನದ ಮೂಲಕ ಶಿಗ್ಗಾವಿ–ಸವಣೂರು ತಾಲ್ಲೂಕಿನ 100ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಿದ್ದಾಗಿ ವಿವರಿಸಿದರು. ಗ್ರಾಮೀಣ, ಜಿಲ್ಲಾ ರಸ್ತೆ, ರಾಜ್ಯ, ರಾಷ್ಟ್ರೀಯ ಹೆದ್ದಾರಿ ಸೇರಿ 2 ಸಾವಿರ ಕಿ.ಮೀ ರಸ್ತೆಗಳ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಓಡಿ ಹೋಗುವ ಮುಖ್ಯಮಂತ್ರಿ ನಾನಲ್ಲ ಜೀವನದ ಕೊನೆ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ. ಕ್ಷೇತ್ರ ಬದಲಿಸುವ, ಓಡಿ ಹೋಗುವ ಮುಖ್ಯಮಂತ್ರಿ ನಾನಲ್ಲ. ಬಂಕಾಪುರವು ಮುಂದಿನ ದಿನಗಳಲ್ಲಿ ತಾಲ್ಲೂಕಾಗಲಿದೆ. ನನ್ನ ಸಾವಾದರೆ ಶಿಗ್ಗಾವಿ ಮಣ್ಣಿನಲ್ಲೇ ಅಂತ್ಯಸಂಸ್ಕಾರ ಮಾಡಿ ಎಂದು ಭಾವುಕರಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT