ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ತರುವಲ್ಲಿ ಓಲೇಕಾರ ವಿಫಲ, ಏ.17ರಂದು ನಾಮಪತ್ರ ಸಲ್ಲಿಕೆ: ರುದ್ರಪ್ಪ ಲಮಾಣಿ

Last Updated 13 ಏಪ್ರಿಲ್ 2023, 13:31 IST
ಅಕ್ಷರ ಗಾತ್ರ

ಹಾವೇರಿ: ಶಾಸಕ ನೆಹರು ಓಲೇಕಾರ ಕ್ಷೇತ್ರದ ಪರವಾಗಿ ಒಂದು ದಿನವೂ ವಿಧಾನಸೌಧದಲ್ಲಿ ಧ್ವನಿ ಎತ್ತಲಿಲ್ಲ. ನಾನು ತಂದಿದ್ದ ಅನುದಾನದಲ್ಲೇ ಅವರ ಮನೆ ಎದುರು 4 ಕೋಟಿ ವೆಚ್ಚ ಮಾಡಿ ರಸ್ತೆ ಮಾಡಿಸಿಕೊಂಡಿದ್ದಾರೆ. ನಗರದ ಅಭಿವೃದ್ಧಿಗಾಗಿ ಅನುದಾನ ತರಲಿಲ್ಲ. ಕೆಲಸ ಮಾಡಲು ನಗರಸಭೆ ಅಧ್ಯಕ್ಷರಿಗೂ ಸಹಕಾರ ನೀಡಲಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಅಭ್ಯರ್ಥಿ ರುದ್ರಪ್ಪ ಲಮಾಣಿ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯ್ಲಲಿ ಅವರು ಮಾತನಾಡಿ, ಬಿಜೆಪಿಯಿಂದ ಮೂರು ಬಾರಿ ಶಾಸಕರಾಗಿ, ಎರಡು ಬಾರಿ ಎಸ್‌ಸಿ–ಎಸ್‌ಟಿ ಆಯೋಗದ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿ, ಈಗ ಟಿಕೆಟ್ ತಪ್ಪಿದ ಕಾರಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಪಮಾನ ಆಗುವ ರೀತಿಯಲ್ಲಿ ಮಾತನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಕಾಯಂ ಬೋಧಕರೇ ಇಲ್ಲ: ಜಿಲ್ಲೆಯವರೇ ಸಿಎಂ ಇದ್ದರೂ ಕ್ಷೇತ್ರಕ್ಕೆ ಅನುದಾನ ತರುವಲ್ಲಿ ಓಲೇಕಾರ ವಿಫಲರಾಗಿದ್ದಾರೆ. ಓಲೇಕಾರ ತಾಲ್ಲೂಕಿನ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿ ಅವರೂ ಸರಿಯಾಗಿ ಕೆಲಸ ಮಾಡಲು ಆಗದಂತಹ ವಾತಾವರಣ ಸೃಷ್ಟಿಸಿದರು. ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಗೊಂಡು ನಾಲ್ಕೈದು ತಿಂಗಳು ಕಳೆದರೂ ಕಾಯಂ ಸಿಬ್ಬಂದಿಯನ್ನು ಪೂರ್ಣ ಪ್ರಮಾಣದಲ್ಲಿ ನೇಮಕ ಮಾಡಿಲ್ಲ, ಹೀಗಾಗಿ ಅಲ್ಲಿನ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಹರಿಹಾಯ್ದರು.

ಅನುದಾನ ನೀರುಪಾಲು: ನಗರದ ಹೊರವಲಯದ ಹೆಗ್ಗೇರಿ ಕೆರೆಯಲ್ಲಿ ‘ಗಾಜಿನ ಮನೆ’ ನಿರ್ಮಾಣಕ್ಕೆ ನನ್ನ ಕಾಲದಲ್ಲಿ ₹5 ಕೋಟಿ ಮಂಜೂರು ಮಾಡಿಸಿದ್ದೆ. ನಂತರ ಬಂದ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಕೆರೆ ಅಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯದೆ ಕೋಟ್ಯಂತರ ಹಣವನ್ನು ನೀರು ಪಾಲು ಮಾಡಿದ್ದಾರೆ. ಈಗ ಕಾಮಗಾರಿ ಸ್ಥಗಿತಗೊಂಡು, ಯೋಜನೆ ಹಳ್ಳಹಿಡಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಏ.17ರಂದು ನಾಮಪತ್ರ: ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಾಗಿದ್ದು, ಏ.17ರಂದು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ತೆರಳಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಾಗುವುದು ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಈಗ ಬಿಜೆಪಿ ಅಭ್ಯರ್ಥಿ ಆಗಿ ಆಯ್ಕೆಯಾಗಿರುವ ಗವಿಸಿದ್ದಪ್ಪ ನಿನ್ನೆವರೆಗೂ ಸರ್ಕಾರಿ ವೃತ್ತಿಯಲ್ಲಿದ್ದರು. ಈಗ ರಾಜಕೀಯಕ್ಕೆ ಜಿಗಿದು ಬಂದಿದ್ದಾರೆ. ಜನರು ಜಾಣರಿದ್ದು, ಅವರೇ ನಿರ್ಧಾರ ಮಾಡ್ತಾರೆ. ಈ ಬಗ್ಗೆ ನಾನು ಹೆಚ್ಚು ಮಾತಾಡೋದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನೀರು, ರಸ್ತೆ ಅಭಿವೃದ್ಧಿಗೆ ಆದ್ಯತೆ: ಹಾವೇರಿ ನಗರದಲ್ಲಿ 24x7 ಕುಡಿಯುವ ನೀರಿನ ಯೋಜನೆ ಮತ್ತು ಒಳಚರಂಡಿ ಕಾಮಗಾರಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಶಾಸಕ ನೆಹರು ಓಲೇಕಾರ ಅವರ ನಿರ್ಲಕ್ಷ್ಯದಿಂದ ಕುಡಿಯುವ ನೀರಿನ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಗ್ರಾಮೀಣ ರಸ್ತೆಗಳು ಹಳ್ಳಹಿಡಿದು ಜನರು ಹಿಡಿಶಾಪ ಹಾಕುತ್ತಿದ್ದಾರೆ. ನಾನು ಶಾಸಕನಾಗಿ ಆಯ್ಕೆಯಾದರೆ, ಕುಡಿಯುವ ನೀರು, ಒಳಚರಂಡಿ ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ರುದ್ರಪ್ಪ ಲಮಾಣಿ ಭರವಸೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮುಖಂಡರಾದ ಎಂ.ಎಂ. ಮೈದೂರ, ಎಸ್‍.ಎಫ್‍.ಎನ್ ಗಾಜೀಗೌಡ್ರ, ಸೋಮನಗೌಡ ಪಾಟೀಲ, ಶ್ರೀಧರ ದೊಡ್ಡಮನಿ, ಪ್ರಭು ಬಿಷ್ಟನಗೌಡ್ರ, ಬಸವರಾಜ ಬಳ್ಳಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT