ಬುಧವಾರ, ಸೆಪ್ಟೆಂಬರ್ 22, 2021
23 °C
23,304 ವಿದ್ಯಾರ್ಥಿಗಳು ಹಾಜರು, 62 ಮಕ್ಕಳು ಗೈರು

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ: ಮೊದಲ ದಿನ ಸುಗಮ, ಸುರಕ್ಷಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯ 155 ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್‌ ಮಾರ್ಗಸೂಚಿಯೊಂದಿಗೆ ಮೊದಲ ದಿನವಾದ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಸುಗಮವಾಗಿ ಮತ್ತು ಸುರಕ್ಷಿತವಾಗಿ ನಡೆಯಿತು. 23,304 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೆ, 62 ಮಕ್ಕಳು ಗೈರು ಹಾಜರಾಗಿದ್ದರು.

ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡುವ ಮೂಲಕ ವಿದ್ಯಾರ್ಥಿಗಳ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಿತ್ತು. ಪರೀಕ್ಷಾ ಕೇಂದ್ರಗಳಿಗೆ ಬಂದ ವಿದ್ಯಾರ್ಥಿಗಳಿಗೆ, ಬಾಗಿಲಿನಲ್ಲಿ ನಿಂತ ವೈದ್ಯಕೀಯ ಸಿಬ್ಬಂದಿ ಥರ್ಮಲ್‌ ಸ್ಕ್ಯಾನರ್‌ ಮೂಲಕ ದೇಹದ ಉಷ್ಣಾಂಶ ಪರೀಕ್ಷೆ ಮಾಡಿ, ಸ್ಯಾನಿಟೈಸರ್‌ ಹಾಕಿ, ಒಳಕ್ಕೆ ಕಳುಹಿಸಿದರು.

ವಿದ್ಯಾರ್ಥಿಗಳು ಬೆಳಿಗ್ಗೆ 8.30ರಿಂದಲೇ ಪರೀಕ್ಷಾ ಕೇಂದ್ರಗಳತ್ತ ಧಾವಿಸಿ, ತಮ್ಮ ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿದೆ ಎಂಬುದನ್ನು ಸೂಚನಾ ಫಲಕ ನೋಡಿ ಖಚಿತಪಡಿಸಿಕೊಂಡರು. ಮಾಸ್ಕ್‌ ಧರಿಸಿ ಬಂದಿದ್ದ ವಿದ್ಯಾರ್ಥಿಗಳು ಸರದಿಯಲ್ಲಿ ನಿಂತು ಅಂತರ ಕಾಯ್ದುಕೊಂಡು ಒಬ್ಬೊಬ್ಬರಾಗಿ ಪರೀಕ್ಞಾ ಕೇಂದ್ರದೊಳಗಡೆ ಹೋದರು.

ಪ್ರತಿ ಡೆಸ್ಕ್‌ನಲ್ಲಿ ಒಬ್ಬರಂತೆ, ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಅಂಧ ವಿದ್ಯಾರ್ಥಿಗಳು ಸಹಾಯಕರ ನೆರವಿನಿಂದ ಪರೀಕ್ಷೆ ಬರೆದರು. ಅಂಗವಿಕಲ ವಿದ್ಯಾರ್ಥಿಗಳು ವಾಹನದ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಧಾವಿಸಿದರು.

ನೂತನ ಪರೀಕ್ಷಾ ವಿಧಾನದ ಪ್ರಕಾರ ಮೊದಲ ದಿನ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳನ್ನೊಳಗೊಂಡ ಪರೀಕ್ಷೆ ನಡೆಯಿತು. ತಲಾ ವಿಷಯವು 40 ಅಂಕಗಳನ್ನು ಹೊಂದಿದ್ದು, ಮೂರು ವಿಷಯಗಳು ಸೇರಿ ಒಟ್ಟು 120 ಅಂಕಗಳಿಗೆ ವಿದ್ಯಾರ್ಥಿಗಳು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಮೂರು ಗಂಟೆ ಅವಧಿಯಲ್ಲಿ ಪರೀಕ್ಷೆ ಬರೆದರು.

ಈ ಬಾರಿ ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ವಾಕ್ಯಗಳ ರೂಪದಲ್ಲಿ ಉತ್ತರಿಸಲಿಲ್ಲ. ಬದಲಾಗಿ, ಬಹುಆಯ್ಕೆ ಪ್ರಶ್ನೆಗಳಿಗೆ ಒಎಂಆರ್‌ ಶೀಟ್‌ನಲ್ಲಿ ಸರಿಯಾದ ಉತ್ತರದ ಮುಂದೆ ಗುರುತು (ಶೇಡ್‌) ಹಾಕಿದರು. ಗಣಿತ ಪರೀಕ್ಷೆಗೆ ‘ಪಿಂಕ್‌’, ವಿಜ್ಞಾನ ಪರೀಕ್ಷೆಗೆ ‘ಆರೆಂಜ್‌’ ಹಾಗೂ ಸಮಾಜ ವಿಜ್ಞಾನ ಪರೀಕ್ಷೆಗೆ ‘ಹಸಿರು’ ಬಣ್ಣದ ಒಎಂಆರ್‌ ಶೀಟ್‌ ನೀಡಲಾಗಿತ್ತು.

ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆರಂಭವಾಗುವುದಕ್ಕೂ ಮುನ್ನ ಧ್ವನಿ ವರ್ಧಕದ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿ ಮತ್ತು ಸೂಚನೆ ನೀಡಲಾಯಿತು. ಪರೀಕ್ಷೆ ಬರೆದ ನಂತರ ವಿದ್ಯಾರ್ಥಿಗಳು ಜಿಟಿಜಿಟಿ ಮಳೆಯಲ್ಲೇ ಹೆಜ್ಜೆ ಹಾಕುತ್ತಾ ಮನೆ ಕಡೆ ಸಾಗಿದರು. ನೂತನ ಪರೀಕ್ಷಾ ವಿಧಾನದ ಬಗ್ಗೆ ವಿದ್ಯಾರ್ಥಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಶಾಸಕ ಭೇಟಿ: ಶಾಸಕ ನೆಹರು ಓಲೇಕಾರ ಅವರು ಹಾವೇರಿ ನಗರದ ಮುನ್ಸಿಪಲ್‌ ಹೈಸ್ಕೂಲ್‌ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಹಸ್ತಲಾಘವ ಮಾಡಿ, ಪರೀಕ್ಷೆಗೆ ಶುಭ ಕೋರಿದರು. ಬಿಇಒ ಎಂ.ಎಚ್‌.ಪಾಟೀಲ, ನಾಗರಾಜ ಇಚ್ಚಂಗಿ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಇದ್ದರು.

ಯಶಸ್ವಿ ಕಾರ್ಯಾಚರಣೆ: ಡಿಡಿಪಿಐ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ನೆರವಿನಿಂದ ಮೊದಲ ದಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆವು ಎಂದು ಡಿಡಿಪಿಐ ಅಂದಾನಪ್ಪ ವಡಗೇರಿ ತಿಳಿಸಿದರು.

ಜಿಲ್ಲೆಯಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬರಲಿಲ್ಲ. ಹೀಗಾಗಿ ಪ್ರತ್ಯೇಕವಾಗಿ ಪರೀಕ್ಷೆ ಬರೆಸುವ ಅನಿವಾರ್ಯತೆ ಬರಲಿಲ್ಲ. ಗೈರಾದ 62 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಅನಾರೋಗ್ಯ (ಕೋವಿಡೇತರ) ಕಾರಣದಿಂದ ಈಚೆಗೆ ನಿಧನರಾಗಿದ್ದಾರೆ.

ಜುಲೈ 22ರಂದು ನಡೆಯುವ ಪರೀಕ್ಷೆಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಎಲ್ಲ ಬಿಇಒಗಳಿಗೆ ಅಳತೆಗೋಲು ಸಿಕ್ಕಿದೆ. ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ಪರೀಕ್ಷೆ ನಡೆಸುತ್ತೇವೆ ಎಂಬ ಆಶಾಭಾವ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು