ಬುಧವಾರ, ಜನವರಿ 29, 2020
24 °C
ಪ್ರಗತಿ ಪರಿಶೀಲನಾ ಸಭೆ: ಅಂಕಿ ಅಂಶಗಳ ಜತೆ ಕಾಮಗಾರಿ ವಿವರವನ್ನೂ ನೀಡಿ– ಕರಿಯಣ್ಣನವರ

ಅಧಿಕಾರಿಗಳಿಗೆ ಜಿ.ಪಂ. ಅಧ್ಯಕ್ಷ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಸಭೆಯಲ್ಲಿ ಕೇವಲ ಅಂಕಿ ಅಂಶಗಳನ್ನು ಕೊಟ್ಟರೆ ಸಾಲದು, ಕಾಮಗಾರಿಗಳ ಸಂಪೂರ್ಣ ವಿವರವನ್ನು ಕೊಡಬೇಕು. ಮಾಹಿತಿ ಇಲ್ಲದೆ ಸಭೆಗೆ ಏಕೆ ಬರುತ್ತೀರಿ? ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಕೆ. ಕರಿಯಣ್ಣನವರ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೆ.ಡಿ.ಪಿ.ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದಿಂದ ಬಿಡುಗಡೆಯಾದ ಅನುದಾನ ಯಾವ ಯಾವ ಕಾಮಗಾರಿಗೆ ಎಷ್ಟೆಷ್ಟು ಖರ್ಚಾಗಿದೆ ಎಂಬುದು ನಮಗೆ ಗೊತ್ತಾಗಬೇಕು. ಜಿ.ಪಂ. ಅಧ್ಯಕ್ಷ ಮತ್ತು ಸದಸ್ಯರಿಗೆ ಅಧಿಕಾರಿಗಳು ಮಾಹಿತಿ ಕೊಡದಿರುವುದು ಸರಿಯಲ್ಲ. ತಿಂಗಳಿಗೊಮ್ಮೆ ನಡೆಯುವ ಕೆಡಿಪಿ ಸಭೆಗೂ ಕೆಲವು ಅಧಿಕಾರಿಗಳು ಗೈರಾಗುತ್ತಿರುವ ಬಗ್ಗೆ ಹರಿಹಾಯ್ದರು.  

ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್ ಯೋಜನೆಯಡಿ ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದ ರಸ್ತೆ, ಸೇತುವೆ, ಕಟ್ಟಡಗಳು ಸೇರಿದಂತೆ ಮೂಲಸೌಕರ್ಯಗಳ ದುರಸ್ತಿಗೆ ಸಾಕಷ್ಟು ಅನುದಾನ ಒದಗಿಸಲಾಗಿದೆ. ಆದರೆ ಸಮರ್ಪಕವಾಗಿ ಕಾಮಗಾರಿಗಳು ನಡೆಯುತ್ತಿಲ್ಲ. ಅನುದಾನ ದುರುಪಯೋಗವಾಗುತ್ತಿವೆ ಎಂದು ಸಾರ್ವಜನಿಕ ದೂರುಗಳಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಕೃತಿ ವಿಕೋಪದಿಂದ ಬೆಳೆಹಾನಿ ಉಂಟಾದ ರೈತರಿಗೆ ಪರಿಹಾರ ವಿತರಣೆ ಮಾಹಿತಿ ಪಡೆದ ಎಸ್.ಕೆ.ಕರಿಯಣ್ಣನವರ, ಯಾವ ರೈತರಿಗೆ ಬೆಳೆಹಾನಿ ಪರಿಹಾರ ಮಂಜೂರಾಗಿದೆ, ಎಷ್ಟು ಹಣ ಮಂಜೂರಾಗಿದೆ, ಯಾರಿಗೆ ಹಣ ಜಮೆಯಾಗಿದೆ ಎಂಬ ಮಾಹಿತಿಯನ್ನು ಪ್ರತಿ ಗ್ರಾಮ ಪಂಚಾಯಿತಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಫಲಾನುಭವಿಗಳ ಹೆಸರಿನೊಂದಿಗೆ ಪಟ್ಟಿಯನ್ನು ಪ್ರಕಟಿಸುವಂತೆ ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು. 

1.66 ಲಕ್ಷ ರೈತರಿಗೆ ಪರಿಹಾರ:

ಪ್ರಕೃತಿ ವಿಕೋಪದಡಿ ಬೆಳೆ ಪರಿಹಾರ ಪಡೆಯಲು ಜಿಲ್ಲೆಯ 1.66 ಲಕ್ಷ ರೈತರು ಅರ್ಹತೆ ಪಡೆದಿದ್ದಾರೆ. ಈ ಪೈಕಿ 1.3 ಲಕ್ಷ ರೈತರಿಗೆ ಪರಿಹಾರ ಪಾವತಿಸಲಾಗಿದೆ. ಬಾಕಿ 63 ಸಾವಿರ ರೈತರಿಗೆ ಪರಿಹಾರ ಪಾವತಿಸುವ ನಿಟ್ಟಿನಲ್ಲಿ ದಾಖಲೆಗಳ ಪರಿಶೀಲನೆ ಕಾರ್ಯ ನಡೆದಿದೆ. ಒಣ ಭೂಮಿಗೆ ₹ 16,800, ನೀರಾವರಿ  ಭೂಮಿಗೆ ₹ 23,500 ಪಾವತಿಸಲಾಗುತ್ತಿದೆ ಎಂದು ಕೃಷಿ ಜಂಟಿ ನಿರ್ದೇಶಕ ಬಿ. ಮಂಜುನಾಥ ವಿವರಿಸಿದರು.

ಲೋಕೋಪಯೋಗಿ ಸೇರಿದಂತೆ ಯಾವುದೇ ಇಲಾಖೆಯ ರಸ್ತೆ, ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳುವಾಗ ಕಡ್ಡಾಯವಾಗಿ ಇಲಾಖೆಯ ಸಹಾಯಕ ಎಂಜಿನಿಯರ್‌ಗಳು ಸ್ಥಳದಲ್ಲಿ ಹಾಜರಿದ್ದು, ಮೇಲುಸ್ತುವಾರಿ ವಹಿಸಬೇಕು. ಕೇವಲ ಗುತ್ತಿಗೆದಾರರ ಮೇಲೆ ಅವಲಂಬಿತವಾದರೆ ಕಾಮಗಾರಿಗೆ ಬಳಸುವ ಸಾಮಗ್ರಿಗಳ ಗುಣಮಟ್ಟ ಅರಿಯಲು ಸಾಧ್ಯವಿಲ್ಲ. ಇದರಿಂದ ಕಳಪೆ ಕಾಮಗಾರಿಗಳು ನಡೆಯುವ ಸಾಧ್ಯತೆಗಳಿವೆ ಎಂದು ಕರಿಯಣ್ಣವರ ಎಚ್ಚರಿಕೆ ನೀಡಿದರು. 

ಅಂಗನವಾಡಿ ಅಂದಗೊಳಿಸಿ:

ಅಂಗನವಾಡಿಗಳ ದುರಸ್ತಿಯ ಸಂದರ್ಭದಲ್ಲಿ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿಶೇಷ ಚಿತ್ರಗಳ ಮೂಲಕ ಗೋಡೆ ಬರಹಗಳನ್ನು ಬರೆಸುವಂತೆ ಇಲಾಖಾ ಅಧಿಕಾರಿಗಳಿಗೆ ಹಾಗೂ ಅಂಗನವಾಡಿ ಕಟ್ಟಡಗಳ ದುರಸ್ತಿ ಕೈಗೊಳ್ಳುವ ಏಜೆನ್ಸಿಗಳಿಗೆ ಸೂಚನೆ ನೀಡಿದರು.

ಸೋಲಾರ್ ಅಳವಡಿಕೆ:

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸೌರ ದೀಪ ಅಳವಡಿಕೆ ಕುರಿತಂತೆ ಯೋಜಿಸಲಾಗುತ್ತದೆ. ಮೊದಲ ಹಂತದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ, ಎರಡನೇ ಹಂತದಲ್ಲಿ ಎಲ್ಲ ಗ್ರಾಮಗಳಲ್ಲಿ ಸೌರ ದೀಪ ಅಳವಡಿಸುವ ಮೂಲಕ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸುವ ಚಿಂತನೆ ನಡೆದಿದೆ ಎಂದು ಸಿಇಒ ರಮೇಶ ದೇಸಾಯಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ವಸತಿ ನಿರ್ಮಾಣ, ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ, ರಸ್ತೆ ನಿರ್ಮಾಣ, ಏತ ನೀರಾವರಿ ಯೋಜನೆಗಳು, ಕೆರೆ ತುಂಬಿಸುವ ಯೋಜನೆ, ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.

ಉಪಾಧ್ಯಕ್ಷರಾದ ಶ್ರೀಮತಿ ಗಿರಿಜವ್ವ ಬ್ಯಾಲದಹಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ ದುಗ್ಗತ್ತಿ ಹಾಗೂ ನೀಲವ್ವ ನಾಗಪ್ಪ ಚವ್ಹಾಣ, ಮುಖ್ಯ ಯೋಜನಾಧಿಕಾರಿ ಮಣ್ಣವಡ್ಡರ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು