ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಡಿ ಪ್ರಕರಣ ಶೀಘ್ರ ವಿಲೇವಾರಿಗೊಳಿಸಿ:ಸಚಿವ ಕೃಷ್ಣ ಬೈರೇಗೌಡ ತಾಕೀತು

ಕರ್ತವ್ಯ ಲೋಪ, ವಿಳಂಬ ಧೋರಣೆ ತೋರಿದರೆ ನಿರ್ದಾಕ್ಷಿಣ್ಯ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ
Published 3 ನವೆಂಬರ್ 2023, 6:27 IST
Last Updated 3 ನವೆಂಬರ್ 2023, 6:27 IST
ಅಕ್ಷರ ಗಾತ್ರ

ಹಾವೇರಿ: ‘ಪೋಡಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಆಂದೋಲನದ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇತ್ಯರ್ಥಪಡಿಸಬೇಕು. ಏಕವ್ಯಕ್ತಿ ಪೋಡಿ ಪ್ರಕರಣದಲ್ಲಿ ಅವರು ವ್ಯಕ್ತಿಗತವಾಗಿ ಅರ್ಜಿ ಸಲ್ಲಿಸಬೇಕು ಎಂಬ ಮನೋಧೋರಣೆಯಿಂದ ಎಲ್ಲ ತಹಶೀಲ್ದಾರ್‌ಗಳು ಹೊರಬರಬೇಕು. ಸಾರ್ವಜನಿಕರಿಗೆ ತ್ವರಿತವಾಗಿ ಸ್ಪಂದಿಸಬೇಕು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಾಕೀತು ಮಾಡಿದರು. 

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕಂದಾಯ ಇಲಾಖೆಯಲ್ಲಿ ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿ ಜನರಿಗೆ ಸೇವೆಗಳು ಲಭ್ಯವಾಗಬೇಕು ಎಂಬ ದೃಷ್ಟಿಯಿಂದ ‘ಇ–ಆಫೀಸ್‌’, ಕಂದಾಯ ಕಡತಗಳ ಗಣಕೀಕರಣ ಮುಂತಾದ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸಬಾರದು. ನಿಗದಿತ ವೇಳೆಯಲ್ಲಿ ಸೇವೆ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಬಗರಹುಕುಂ ಜಮೀನುಗಳಿಗೆ ಸಾಗುವಳಿ ಚೀಟಿ ನೀಡುವ ಕುರಿತಂತೆ ತ್ವರಿತವಾಗಿ ಬಗರಹುಕುಂ ಸಮಿತಿಗಳನ್ನು ರಚಿಸಬೇಕಾಗಿದೆ. ಎಲ್ಲ ಜನಪ್ರತಿನಿಧಿಗಳು ಸಮಿತಿ ಸದಸ್ಯರ ವಿವರಗಳನ್ನು ಸಲ್ಲಿಸಬೇಕು. ಫಾರಂ 57ರಡಿ ಅರ್ಜಿ ಸಲ್ಲಿಸಿದ ಸಾಗುವಳಿದಾರರಿಗೆ ಸರ್ಕಾರದ ಮಾರ್ಗಸೂಚಿಯಂತೆ ಜಮೀನಿನ ಹಕ್ಕುಪತ್ರ ನೀಡುವ ಕಾರ್ಯ ಆರು ತಿಂಗಳೊಳಗಾಗಿ ಪೂರ್ಣಗೊಳ್ಳಬೇಕು ಎಂದು ಸಿಎಂ ಆರಂಭದಲ್ಲೇ ಸೂಚನೆ ನೀಡಿದ್ದರು. ಈಗಾಗಲೇ ಐದು ತಿಂಗಳು ಪೂರ್ಣಗೊಂಡಿದೆ. ಈ ತಿಂಗಳಾಂತ್ಯಕ್ಕೆ ಈ ಕಾರ್ಯ ಪೂರ್ಣಗೊಳ್ಳಬೇಕು. ಅರ್ಹರಿಗೆ ‘ಡಿಜಿಟಿಲ್ ಸಾಗುವಳಿ ಪತ್ರ’ ನೀಡಬೇಕು ಹಾಗೂ ಹಂಚಿಕೆಯಾದ ಜಮೀನಿನ ಮಾಲೀಕತ್ವ ನೋಂದಣಿ ಮಾಡಿಸಿಕೊಡಬೇಕು. ಈ ನಿಟ್ಟಿನಲ್ಲಿ ಎಲ್ಲ ತಹಶೀಲ್ದಾರ್‌ಗಳು ಕ್ರಮವಹಿಸುವಂತೆ ಸೂಚನೆ ನೀಡಿದರು.

ಕಂದಾಯ ಗ್ರಾಮ ರಚನೆ: 

ತಾಂಡಾ ಉಪ ಗ್ರಾಮ ಹಾಗೂ ಕಂದಾಯ ಗ್ರಾಮಗಳ ರಚನೆಯ ಬಗ್ಗೆ ತಹಶೀಲ್ದಾರ್‌ಗಳು ನೀಡಿದ ಮಾಹಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಂದಾಯ ಸಚಿವರು, ಸರ್ಕಾರದ ಮಾರ್ಗಸೂಚಿಯಂತೆ ಕಂದಾಯ ಗ್ರಾಮಗಳು ರಚನೆಯಾಗಬೇಕು. ಈ ನಿಟ್ಟಿನಲ್ಲಿ ಸರಿಯಾಗಿ ನೋಟಿಫಿಕೇಷನ್ ಹೊರಡಿಸಲು ಪುನರ್ ಪರಿಶೀಲನೆ ಮಾಡಿ. ಯಾರಿಗೂ ತೊಂದರೆಯಾಗಬಾರದು.  ಗ್ರಾಮಗಳ ವಿಸ್ತರಿಸಿ ಉಪಗ್ರಾಮಗಳ ರಚನೆ, ಖಾಸಗಿ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಂಡವರಿಗೆ ಹಕ್ಕುಪತ್ರ ನೀಡಿಕೆ ಕುರಿತಾಗಿ ಸರ್ಕಾರದ ಮಾರ್ಗಸೂಚಿಯಂತೆ ಪರಿಶೀಲಿಸಿ ಕ್ರಮವಹಿಸುವಂತೆ ಸೂಚನೆ ನೀಡಿದರು.

ಬಿ ಕರಾಬು ಜಮೀನಿನ ಮಂಜೂರಾತಿ ಕುರಿತಂತೆ ಸರ್ಕಾರದ ಆದೇಶಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿ. ಯಾವ ಯಾವ ತಾಲೂಕಿನಲ್ಲಿ ಎಷ್ಟು ಬಿ ಕರಾಬ್ ಜಮೀನುಗಳು ಇವೆ ಎಂಬುದರ ಬಗ್ಗೆ ಮಾಹಿತಿ ಸಲ್ಲಿಸಲು ಸೂಚನೆ ನೀಡಿದರು.

ಜಮೀನಿಗೆ ದಾರಿ: 

ಜಮೀನುಗಳಲ್ಲಿ ದಾರಿ ಸಮಸ್ಯೆ, ಗ್ರಾಮ ನಕಾಶೆಗಳಲ್ಲಿ ಇಲ್ಲದಿದ್ದರೂ ಹೊಲಗಳಿಗೆ ಹೋಗಲು ಪಾರಂಪರಿಕ ಕಾಲುದಾರಿ ಹಾಗೂ ಬಂಡಿ ದಾರಿಗಳಲ್ಲಿ ಸಾಗಲು ಅಡ್ಡಿಪಡಿಸುವ ಪ್ರಕರಣಗಳನ್ನು ಸಿಆರ್‌ಪಿಸಿ ಅಡಿಯಲ್ಲಿ ತಹಶೀಲ್ದಾರ್‌ಗಳು ಖುದ್ದಾಗಿ ಸಮಸ್ಯೆಗಳನ್ನು ಪರಿಹರಿಸಬೇಕು. ಹಿಸ್ಸಾ ಹಾಗೂ ಪೋಡಿ ಪ್ರಕರಣಗಳಲ್ಲಿ ಜಮೀನು ವಿಭಾಗ ಮಾಡಿಕೊಂಡು ನೋಂದಣಿ ಮಾಡಿಸಿಕೊಳ್ಳುವ ಪೂರ್ವದಲ್ಲಿ ಓಡಾಡಲು ದಾರಿಗೆ ಅವಕಾಶ ಮಾಡಿಕೊಡಬೇಕು. ಹಾಗೂ ಬಗರಹುಕುಂ ಜಮೀನು ಮಂಜೂರು ಮಾಡುವಾಗ ಜಮೀನಿಗೆ ತೆರಳಲು ದಾರಿಯನ್ನು ಕಳೆದು ಹಕ್ಕುಪತ್ರ ನೀಡಲು ಕ್ರಮವಹಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌ಗಳು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮಾಹಿತಿ ನೀಡಿದರು 
ಸಭೆಯಲ್ಲಿ ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌ಗಳು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮಾಹಿತಿ ನೀಡಿದರು 

ಸಭೆಯಲ್ಲಿ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ.ಬಣಕಾರ, ಶ್ರೀನಿವಾಸ ಮಾನೆ, ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲ್‍ಕುಮಾರ, ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣನವರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ ಹಾಗೂ ಇಲಾಖೆಯ ಅಧಿಕಾರಿಗಳು ಇದ್ದರು. 

ಸಾರ್ವಜನಿಕರು ಜಮೀನ ಅಳತೆಗಾಗಿ 12 ತಿಂಗಳು ಕಾಯಬೇಕಿತ್ತು. ನಮ್ಮ ಸರ್ಕಾರ ಬಂದ ನಂತರ 2 ತಿಂಗಳೊಳಗೆ ಅಳತೆ ಮಾಡಿಕೊಡಲು ಕ್ರಮವಹಿಸಲಾಗಿದೆ. 1 ತಿಂಗಳೊಳಗೆ ಸೇವೆ ಒದಗಿಸುವ ಗುರಿಯಿದೆ.
– ಕೃಷ್ಣ ಬೈರೇಗೌಡ ಕಂದಾಯ ಸಚಿವ
ನೀರಿನ ಸಮಸ್ಯೆ ಪರಿಹರಿಸಿ: ‘ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ ಮಾಲೀಕರೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳಿ. ಸರ್ಕಾರದ ಹಂತದಲ್ಲಿ ಈ ವರ್ಷ ಖಾಸಗಿ ಕೊಳವೆಬಾವಿಗಳ ಮಾಸಿಕ ಬಾಡಿಗೆ ದರವನ್ನು ಹೆಚ್ಚಳ ಮಾಡಲು ಕ್ರಮವಹಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.  ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಮಾತನಾಡಿ ಹಾವೇರಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಕಂದಾಯ ಸಚಿವರ ನೇತೃತ್ವದಲ್ಲಿ ಸಭೆ ಕರೆಯಬೇಕು. ನಾವೆಲ್ಲ ಭಾಗವಹಿಸುತ್ತೇವೆ. ಶಾಶ್ವತ ಪರಿಹಾರ ಕಂಡುಕೊಳ್ಳಲು ಮನವಿ ಮಾಡಿಕೊಂಡರು. ಮೇ ಜೂನ್ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಬಹುದು. ಈ ನಿಟ್ಟಿನಲ್ಲಿ ಸರಿಯಾಗಿ ಕ್ರಮವಹಿಸಿ. ಜನರ ಸಮಸ್ಯೆಗಳಿಗೆ ಅಧಿಕಾರಿಗಳ ಹಂತದಲ್ಲೇ ಪರಿಹಾರ ಒದಗಿಸಬೇಕು. ಜನಪ್ರತಿನಿಧಿಗಳ ಬಳಿ ಜನರನ್ನು ಕಳುಹಿಸುವ ಮನೋಭಾವ ಅಧಿಕಾರಿಗಳು ಕೈ ಬಿಡಬೇಕು ಎಂದು ಸೂಚನೆ ನೀಡಿದರು. ಹಾವೇರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ನಿವಾರಣೆಗೆ ಬೆಂಗಳೂರು ಹಂತದಲ್ಲಿ ಪ್ರತ್ಯೇಕ ಸಭೆ ಕರೆಯುವಂತೆ ಕಂದಾಯ ಸಚಿವರಿಗೆ ಮನವಿ ಮಾಡಿಕೊಂಡರು.
‘ಬೆಳೆ ಸಮೀಕ್ಷೆಯಲ್ಲಿ ಲೋಪವಾಗದಿರಲಿ’ ಬೆಳೆಹಾನಿ ಸಮೀಕ್ಷೆಯಲ್ಲಿ ಯಾವುದೇ ಲೋಪವಾಗಬಾರದು. ಸಮೀಕ್ಷೆ ಕಾರ್ಯ ಪೂರ್ಣಗೊಂಡು ಪರಿಹಾರ ನೀಡುವ ಸಂದರ್ಭದಲ್ಲಿ ಕೆಲ ರೈತರು ಕೈಬಿಟ್ಟು ಹೋಗಿದೆ ಸೇರಿಸಿ ಎಂಬ ಮನವಿಯನ್ನು ಸ್ವೀಕರಿಸುವುದಿಲ್ಲ. ಸೇರ್ಪಡೆಗೆ ಅವಕಾಶವಿಲ್ಲ. ಬೆಳೆ ಸರ್ವೇ ವಿವರ ರೈತನ ಸರ್ವೆ ವಿವರ ಬೆಳೆಹಾನಿ ವಿಸ್ತೀರ್ಣವನ್ನು ಫ್ರೂಟ್ ಐ.ಡಿ.ಯಲ್ಲಿ ಸೆರೆಹಿಡಿದು ಅಪ್‍ಲೋಡ್ ಮಾಡಬೇಕು. ಬೆಳೆ ವಿವರ ತಪ್ಪಾಗಿ ದಾಖಲಾಗಿದ್ದರೆ ಸರಿಪಡಿಸಬೇಕು. ಆರ್.ಟಿ.ಸಿ.ಗಳಿಗೆ ಆಧಾರ್ ಲಿಂಕ್ ಆಗಬೇಕು. ತಕ್ಷಣ ಎಲ್ಲವನ್ನೂ ಸರಿಪಡಿಸಿ ನಿಖರವಾದ ರೈತರ ಬೆಳೆ ಮಾಹಿತಿ ವಿಸ್ತೀರ್ಣವನ್ನು ಕ್ರಾಸ್ ಸರ್ವೇಮಾಡಿ ಅಪ್‍ಡೇಟ್ ಮಾಡಲು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಕಂದಾಯ ಸಚಿವರು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT