ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಣ ಪ್ರಕರಣ: ನ್ಯಾಯಾಧೀಶರ ಮುಂದೆ ಯುವತಿಯ ಹೇಳಿಕೆ

‘ಸ್ವಇಚ್ಛೆಯಿಂದ ಮದುವೆಯಾಗಿದ್ದೇವೆ, ಪಾಲಕರೊಂದಿಗೆ ತೆರಳುವುದಿಲ್ಲ’
Published 18 ಜನವರಿ 2024, 18:16 IST
Last Updated 18 ಜನವರಿ 2024, 18:16 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಹಾನಗಲ್‌ ಪಟ್ಟಣದಲ್ಲಿ ಜ.11ರಂದು ನಡೆದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ಯುವತಿಯನ್ನು ಗುರುವಾರ ಹಾನಗಲ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಯುವತಿ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರ ಎದುರು ‘ನಾವಿಬ್ಬರೂ ಸ್ವ–ಇಚ್ಛೆಯಿಂದ ಮದುವೆಯಾಗಿದ್ದೇವೆ. ಪಾಲಕರೊಂದಿಗೆ ತೆರಳುವುದಿಲ್ಲ’ ಎಂದು ಹೇಳಿಕೆ ನೀಡಿದ್ದಾಳೆ.

‘ಕೋಟಿಗೇರಿ ಓಣಿಯ ಅಫ್ತಾಬ್ ಖತೀಬ್ ಎಂಬ ಯುವಕ ನನ್ನ ಮಗಳನ್ನು ಅಪಹರಿಸಿದ್ದಾನೆ’ ಎಂದು ಯುವತಿಯ ತಂದೆ ಮೇಘರಾಜ ಬಾಬಣ್ಣ ಕಲಾಲ ಹಾನಗಲ್ಲ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪಿಎಸ್‌ಐ ಯಲ್ಲಪ್ಪ ಹಿರಗಪ್ಪನವರ ನೇತೃತ್ವದ ಪೊಲೀಸರ ತಂಡ ಜ.16ರಂದು ಗೋವಾದ ಮಡಗಾಂವದಿಂದ ಯುವಕ-ಯುವತಿಯನ್ನು ಕರೆತಂದಿದ್ದರು.

ನಂತರ ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹಾವೇರಿಯ ಸಾಂತ್ವನ ಕೇಂದ್ರಕ್ಕೆ ಕಳಿಸಲಾಗಿತ್ತು. ಜ.18ರಂದು ಮತ್ತೊಮ್ಮೆ ಯುವತಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ನ್ಯಾಯಾಧೀಶರ ಮುಂದೆ ಯುವತಿ ಸಿಆರ್‌ಪಿಸಿ ಸೆಕ್ಷನ್‌ ‘164’ ಹೇಳಿಕೆಯನ್ನು ನೀಡಿದ್ದಾಳೆ.

‘ತಾವಿಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಮಡಗಾಂವ ದರ್ಗಾದಲ್ಲಿ ಮದುವೆಯಾಗಿದ್ದೇವೆ. ನಾನು ಪ್ರೀತಿಸಿದ ಯುವಕನೊಂದಿಗೆ ಸ್ವಪ್ರೇರಣೆಯಿಂದ ತೆರಳಿದ್ದು, ಯಾರೂ ನನ್ನನ್ನು ಅಪಹರಿಸಿಲ್ಲ’ ಎಂದು ಯುವತಿ ಹೇಳಿಕೆ ನೀಡಿದ್ದಾಳೆ. ಯುವತಿಯ ಪಾಲಕರು ಎಷ್ಟೇ ತಿಳಿವಳಿಕೆ ನೀಡಿದರೂ ಅದಕ್ಕೊಪ್ಪದ ಯುವತಿ, ತಾನು ವಯಸ್ಕಳಾಗಿರುವುದರಿಂದ ಪ್ರಜ್ಞಾಪೂರ್ವಕವಾಗಿ ಹೇಳಿಕೆ ನೀಡುತ್ತಿರುವುದಾಗಿ ಹೇಳಿದ್ದಾಳೆ’ ಎಂದು ಪಿಎಸ್‌ಐ ಯಲ್ಲಪ್ಪ ಹಿರಗಪ್ಪನವರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT